ಕೊಲ್ಕತ್ತಾ ಫೆಬ್ರುವರಿ 17: ಪಶ್ಚಿಮ ಬಂಗಾಳದ (West Bengal) ಸಿಲಿಗುರಿಯ ಸಫಾರಿ ಪಾರ್ಕ್‌ನಲ್ಲಿ (Siliguri safari park) ಅಕ್ಬರ್ ಎಂಬ ಸಿಂಹ ಮತ್ತು ಸೀತಾ (Sita)ಎಂಬ ಸಿಂಹಿಣಿಯನ್ನು ಒಂದೇ ಆವರಣದಲ್ಲಿ ಇರಿಸಲಾಗಿದೆ ಎಂದು ಅರಣ್ಯ ಇಲಾಖೆಯ ವಿರುದ್ಧ ವಿಶ್ವ ಹಿಂದೂ ಪರಿಷತ್ತಿನ (VHP) ಪಶ್ಚಿಮ ಬಂಗಾಳ ವಿಭಾಗವು ಕಲ್ಕತ್ತಾ ಹೈಕೋರ್ಟ್‌ನ ಜಲಪೈಗುರಿ ಸರ್ಕ್ಯೂಟ್ ಬೆಂಚ್‌ಗೆ ಅರ್ಜಿ ಸಲ್ಲಿಸಿದೆ ಎಂದು ಲೈವ್ ಲಾ ಶನಿವಾರ ವರದಿ ಮಾಡಿದೆ. “ಅಕ್ಬರ್” ಎಂಬುದು 1556 ರಿಂದ 1605 ರವರೆಗೆ ಆಳ್ವಿಕೆ ನಡೆಸಿದ ಮೂರನೇ ಮೊಘಲ್ ಚಕ್ರವರ್ತಿಯ ಹೆಸರು, ಆದರೆ “ಸೀತಾ” ರಾಮಾಯಣ ಮಹಾಕಾವ್ಯದಲ್ಲಿ ಭಗವಾನ್ ಶ್ರೀರಾಮನ ಪತ್ನಿ, ಜನಕ ರಾಜನ ಮಗಳು.
ಫೆಬ್ರವರಿ 13 ರಂದು ಅರಣ್ಯ ಅಧಿಕಾರಿಗಳು ಏಳು ವರ್ಷದ ಅಕ್ಬರ್ ಎಂಬ ಹೆಸರಿನ ಸಿಂಹ ಮತ್ತು ಐದು ವರ್ಷದ ಸೀತಾ ಹೆಸರಿನ ಸಿಂಹಿಣಿಯನ್ನು ತ್ರಿಪುರಾದ ಸೆಪಹಿಜಾಲಾ ಝೂಲಾಜಿಕಲ್ ಪಾರ್ಕ್‌ನಿಂದ ಸಿಲಿಗುರಿಯ ಬೆಂಗಾಲ್ ಸಫಾರಿ ಪಾರ್ಕ್‌ಗೆ ಕರೆತಂದರು ಎಂದು ದಿ ಸ್ಟೇಟ್ಸ್‌ಮನ್ ವರದಿ ಮಾಡಿದೆ.
ಇದರ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್, ಸೀತೆಯನ್ನು ಅಕ್ಬರ್ ಜೊತೆ ಇಡುವುದು ಹಿಂದೂ ಧರ್ಮಕ್ಕೆ ಮಾಡಿದ ಅವಮಾನ ಎಂದು ಹೇಳಿತ್ತು.
“ಶ್ರೀರಾಮನ ಪತ್ನಿಯಾದ ‘ಸೀತಾ’ ಹೆಸರನ್ನು ಸಿಂಹಿಣಿಗೆ ಇಡಲಾಗಿದೆ. ಪ್ರಪಂಚದಾದ್ಯಂತದ ಎಲ್ಲಾ ಹಿಂದೂಗಳಿಗೆ ಅವಳು ಪವಿತ್ರ ದೇವತೆಯಾಗಿದ್ದಾಳೆ ಎಂದು ವಿಶ್ವ ಹಿಂದೂ ಪರಿಷತ್ತು ತಮ್ಮ ಅರ್ಜಿಯಲ್ಲಿ ಹೇಳಿರುವುದಾಗಿ ಬಾರ್ ಆಂಡ್ ಬೆಂಚ್ ವರದಿ ಮಾಡಿದೆ. ಇದು ಧರ್ಮನಿಂದೆ. ಹಾಗಾಗಿ ಸಿಂಹಿಣಿಯ ಹೆಸರನ್ನು ಬದಲಾಯಿಸುವಂತೆ ವಿಹಿಂಪ ಕೋರಿದೆ.
ವಿಎಚ್‌ಪಿ ಪ್ರಕಾರ, ಅದರ ಪ್ರತಿನಿಧಿಗಳು ರಾಜ್ಯ ಅರಣ್ಯ ಅಧಿಕಾರಿಗಳನ್ನು ಅನೇಕ ಬಾರಿ ಭೇಟಿ ಮಾಡಿದ್ದು ಹೆಸರುಗಳ ವಿರುದ್ಧ ಪ್ರತಿಭಟಿಸಿದ್ದಾರೆ. “ಸಿಂಹಿಣಿಗೆ ಸೀತೆ ಎಂದೂ ಸಿಂಹಕ್ಕೆ ಅಕ್ಬರ್ ಎಂದೂ ಹೆಸರಿಟ್ಟಿದ್ದಾರೆ. ಇದು ಹೇಗೆ ಸಾಧ್ಯ? ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲವೇ? ಅರಣ್ಯ ಇಲಾಖೆಯ ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಹೋದೆವು. ಯಾರೂ ನಮಗೆ ಕಿವಿಗೊಡಲಿಲ್ಲ, ಆದ್ದರಿಂದ ನಾವು ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದು ವಿಎಚ್‌ಪಿಯ ಜಲ್ಪೈಗುರಿ ಘಟಕದ ಮುಖ್ಯಸ್ಥ ದುಲಾಲ್ ಚಂದ್ರ ರಾಯ್ ಹೇಳಿದರು.
ಫೆಬ್ರವರಿ 16 ರಂದು ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರ ಪೀಠದ ಮುಂದೆ ಅರ್ಜಿಯನ್ನು ಸಲ್ಲಿಸಲಾಗಿದ್ದು , ಫೆಬ್ರವರಿ 20 ರಂದು ವಿಚಾರಣೆ ನಡೆಯಲಿದೆ.
ಶನಿವಾರದಂದು ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳದ ಅರಣ್ಯ ಸಚಿವ ಮತ್ತು ಟಿಎಂಸಿ ಶಾಸಕ ಬಿರ್ಬಹಾ ಹನ್ಸ್ಡಾ,” ಪ್ರಾಣಿಗಳಿಗೆ ತ್ರಿಪುರಾ ಮೃಗಾಲಯದಿಂದ ಹೆಸರುಗಳನ್ನು ನೀಡಲಾಗಿದೆ ಎಂದು ಹೇಳಿದ್ದು ವಿಎಚ್‌ಪಿ ಕೊಳಕು ರಾಜಕೀಯ ಮಾಡುತ್ತಿದೆ” ಎಂದು ಆರೋಪಿಸಿದರು.
ಇದನ್ನೂ ಓದಿ:ಪವಡಿಸು ಪರಮಾತ್ಮ; ಬಾಲ ರಾಮನಿಗೆ ಬೇಕು ವಿಶ್ರಾಂತಿ: ಇನ್ನು ಅಯೋಧ್ಯೆ ಮಂದಿರವನ್ನು 1 ಗಂಟೆ ಕಾಲ ಮುಚ್ಚಲಾಗುವುದು
“ಅವರು ಮಾಡುತ್ತಿರುವುದು ಕೊಳಕು ರಾಜಕೀಯ. ತ್ರಿಪುರಾ ಮೃಗಾಲಯದಿಂದ ಬಂದ ಪ್ರಾಣಿಗಳಿಗೆ ನಾವು ಹೆಸರಿಟ್ಟಿಲ್ಲ. ನಾವು ಹೆಸರುಗಳನ್ನು ನೀಡಿದ್ದೇವೆ ಎಂದು ಹೇಳುವುದು ತಪ್ಪು. ಪ್ರಾಣಿಗಳಿಗೆ ಔಪಚಾರಿಕವಾಗಿ ಹೆಸರು ಇಡುವವರು ನಮ್ಮ ಮುಖ್ಯಮಂತ್ರಿ. ಪ್ರಾಣಿಗಳು ತ್ರಿಪುರಾದ ಮೃಗಾಲಯದಿಂದ ಬಂದಿವೆ, ಬಹುಶಃ ಅವರು ಅಲ್ಲಿ ಕೆಲವು ಹೆಸರುಗಳನ್ನು ನೀಡಿದ್ದಾರೆ” ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ