ಆಂಬುಲೆನ್ಸ್ ಸಿಗದೆ ಬಾಲಕಿಯ ಮೃತದೇಹವನ್ನು ಭುಜದ ಮೇಲೆ ಹೊತ್ತು ಸಾಗಿದ ವ್ಯಕ್ತಿ; ವಿಡಿಯೊ ವೈರಲ್

ಬಾಲಕಿಯ ಮೃತದೇಹವನ್ನು ಭುಜದ ಮೇಲೆ ಹೊತ್ತು ಆ ವ್ಯಕ್ತಿ ಆಂಬುಲೆನ್ಸ್ ಗಾಗಿ ಹುಡುಕುತ್ತಾ ಅಲೆದಿದ್ದಾರೆ. ಇತ್ತ ಸರ್ಕಾರಿ ಶವ ವಾಹನವೂ ಸಿಗದೆ ಖಾಸಗಿ ವಾಹನವೂ ಸಿಗದೆ ಆ ವ್ಯಕ್ತಿ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಬಂದು...

ಆಂಬುಲೆನ್ಸ್ ಸಿಗದೆ ಬಾಲಕಿಯ ಮೃತದೇಹವನ್ನು ಭುಜದ ಮೇಲೆ ಹೊತ್ತು ಸಾಗಿದ ವ್ಯಕ್ತಿ; ವಿಡಿಯೊ ವೈರಲ್
ಮಗುವಿನ ಮೃತದೇಹವನ್ನು ಹೊತ್ತು ಸಾಗುತ್ತಿರುವ ವ್ಯಕ್ತಿ
Edited By:

Updated on: Oct 20, 2022 | 2:28 PM

ಭೋಪಾಲ್: ಅಪಘಾತದಲ್ಲಿ ಮೃತಪಟ್ಟ ನಾಲ್ಕು ವರ್ಷದ ಸೊಸೆಯ ಮೃತದೇಹವನ್ನು ವ್ಯಕ್ತಿಯೊಬ್ಬರು ಹೊತ್ತುಕೊಂಡು ತನ್ನ ಗ್ರಾಮಕ್ಕೆ ಬಸ್ ಹತ್ತಿದ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.  ವ್ಯಕ್ತಿಯೊಬ್ಬರು ಮೃತದೇಹವನ್ನು ಹೊತ್ತು  ಜನನಿಬಿಡ ರಸ್ತೆಯಲ್ಲಿ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು  ಹೋಗುತ್ತಿರುವ  ವಿಡಿಯೊ ವೈರಲ್ ಆಗಿದೆ. ಪುಟ್ಟ ಬಾಲಕಿ ತನ್ನ ಗ್ರಾಮದಲ್ಲಿ ಸಾವನ್ನಪ್ಪಿದ್ದು, ಆಕೆಯ ದೇಹವನ್ನು ಛತ್ತರ್‌ಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಅಲ್ಲಿಂದ ಆಕೆಯ ಮೃತದೇಹವನ್ನು ಹಳ್ಳಿಗೆ ಕೊಂಡೊಯ್ಯಬೇಕಾಗಿತ್ತು. ಬಾಲಕಿಯ ಮೃತದೇಹವನ್ನು ಭುಜದ ಮೇಲೆ ಹೊತ್ತು ಆ ವ್ಯಕ್ತಿ ಆಂಬುಲೆನ್ಸ್ ಗಾಗಿ ಹುಡುಕುತ್ತಾ ಅಲೆದಿದ್ದಾರೆ. ಇತ್ತ ಸರ್ಕಾರಿ ಶವ ವಾಹನವೂ ಸಿಗದೆ ಖಾಸಗಿ ವಾಹನವೂ ಸಿಗದೆ ಆ ವ್ಯಕ್ತಿ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಬಂದು ತನ್ನ ಗ್ರಾಮಕ್ಕೆ ಬಸ್ ಹತ್ತಿದ್ದಾರೆ. ಆತನ ಬಳಿ ಬಸ್ ಟಿಕೆಟ್‌ಗೆ ಬೇಕಾದಷ್ಟು ಹಣವೂ ಇರಲಿಲ್ಲ. ಇನ್ನೊಬ್ಬ ಪ್ರಯಾಣಿಕರು ಟಿಕೆಟ್ ಖರೀದಿಸಿ ಸಹಾಯ ಮಾಡಿದ್ದಾರೆ.

ಈ ಪ್ರಕರಣದಲ್ಲಿ ವೈದ್ಯರ ಪಾತ್ರವನ್ನು ನಿರಾಕರಿಸಿದ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ ಲಖನ್ ತಿವಾರಿ, ಮೃತ ದೇಹಗಳನ್ನು ಸಾಗಿಸಲು ವ್ಯವಸ್ಥೆ ಮಾಡುವುದು ನಗರಾಭಿವೃದ್ಧಿ ಇಲಾಖೆಯ ಕೆಲಸವಾಗಿದೆ. “ಆಸ್ಪತ್ರೆ ಮತ್ತು ಅದರ ವೈದ್ಯರನ್ನು ಇದಕ್ಕೆ ಎಳೆಯಬೇಡಿ ಎಂದು ನಾನು ಜನರನ್ನು ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.
ನಾಲ್ಕು ವರ್ಷದ ಬಾಲಕಿಯ ಮೃತದೇಹವನ್ನು ಕುಟುಂಬದವರು ಹೆಗಲ ಮೇಲೆ ಹೊತ್ತು ಸಾಗುತ್ತಿರುವ ವಿಡಿಯೊ ವೈರಲ್ ಆಗಿದ್ದು ಛತ್ತರ್‌ಪುರದಲ್ಲಿ ನಡೆದಿದ್ದು, ಜಿಲ್ಲೆಯಲ್ಲಿ ತುರ್ತು ಸೌಲಭ್ಯಗಳ ಕೊರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ನಿನ್ನೆ ರಾಜ್ಯದ ಸಿಂಗ್ರೌಲಿ ಜಿಲ್ಲೆಯಲ್ಲಿ, ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ನಿರಾಕರಿಸಿದ ನಂತರ ದಂಪತಿಗಳು ತಮ್ಮ ಮಗುವಿನ ಮೃತದೇಹವನ್ನು ತಮ್ಮ ಬೈಕ್‌ನ ಸೈಡ್ ಬಾಕ್ಸ್‌ನಲ್ಲಿ ಸಾಗಿಸಿದ ಘಟನೆ ವರದಿ ಆಗಿದೆ.