ಕೊಲ್ಕತ್ತಾ: ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)- ಖರಗ್ಪುರದ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಗಳಿಗೆ ನಿಂದಿಸಿದ ಕೆಲವು ವಿಡಿಯೋಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಆನ್ಲೈನ್ ತರಗತಿ ನಡೆಯುತ್ತಿರುವಾಗ ಶಿಕ್ಷಕಿ, ವಿದ್ಯಾರ್ಥಿಗಳನ್ನು ಮಾತಿನಿಂದ ನಿಂದನೆ ಮಾಡಿದ ವರ್ತನೆ ವಿಡಿಯೋದಲ್ಲಿ ಸೆರೆಯಾಗಿದೆ. ಜತೆಗೆ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುವ ರೀತಿ ಬಹಿರಂಗವಾಗಿದೆ.
ಇನ್ನೊಂದು ವಿಡಿಯೋದಲ್ಲಿ ವಿಡಿಯೋದಲ್ಲಿ ರಾಷ್ಟ್ರಗೀತೆ ಹೇಳುತ್ತಿರುವ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಎದ್ದು ನಿಂತಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿ, ವಿದ್ಯಾರ್ಥಿಗಳನ್ನು ಮತ್ತು ಅವರ ಕುಟುಂಬವನ್ನು ನಿಂದಿಸಿದ್ದಾರೆ. ಮತ್ತು ಭಾರತ್ ಮಾತಾಕೀ ಜೈ ಎಂದು ಹೇಳಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿರುವವರು ಸಮಾಜ ವಿಜ್ಞಾನ ವಿಭಾಗದ ಶಿಕ್ಷಕಿ ಸೀಮಾ ಸಿಂಗ್ ಎಂದು ಗುರುತಿಸಲಾಗಿದೆ. ನೀವು ದೇಶಕ್ಕೆ ನೀಡಬಹುದಾದ ಗೌರವವಿದು. ರಾಷ್ಟ್ರಗೀತೆ ಹೇಳುವಾಗ ಎದ್ದು ನಿಲ್ಲಬೇಕು. ಎದ್ದು ನಿಂತರೆ ನಿಮಗೆ ಏನಾದರೂ ಅವಮಾನವಿದೆಯೇ? ಪ್ರಾಥಮಿಕ ವರ್ಗದ ನಾಚಿಕೆಯಿಲ್ಲದವರು ನೀವು ಎಂದು ಪ್ರಾಧ್ಯಾಪಕಿ ಕಿರುಚಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಜೊತೆಗೆ ತರಗತಿಯ 128 ವಿದ್ಯಾರ್ಥಿಗಳಿಗೂ ಶೂನ್ಯ ಅಂಕವನ್ನು ನೀಡುತ್ತೇನೆ ಎಂದು ಬೆದರಿಕೆ ಹಾಕಿರುವ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ.
ಅಧಿಕಾರಿಗಳು ಈ ವಿಷಯದ ಬಗ್ಗೆ ಕೂಲಂಕುಶವಾಗಿ ಗಮನಹರಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಎನ್ಡಿಟಿವಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನನ್ನ ವಿರುದ್ಧ ದೂರು ನೀಡುವವರು ನಿಡಬಹುದು. ಅಲ್ಪಸಂಖ್ಯಾತ ಸಂಬಂಧ ಸಮಿತಿ ಅಥವಾ ಶಿಕ್ಷಣ ಸಚಿವಾಲಯಕ್ಕೆ ಹೋಗಬಹುದು ಎಂದು ವಿದ್ಯಾರ್ಥಿಗಳ ವಿರುದ್ಧ ಅವರು ಕಿರುಚಾಡಿದ್ದಾರೆ.
ಎರಡು ನಿಮಿಷಗಳ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೆಲವರು ಟ್ವಿಟರ್ನಲ್ಲಿ ಪ್ರಾಧ್ಯಾಪಕರ ಮಾತನ್ನು ಖಂಡಿಸಿ ಕಮೆಂಟ್ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಮಾತುಗಳೂ ಕೇಳಿ ಬಂದಿವೆ.
ಮುಂಬೈನ ಅಂಬೇಡ್ಕರ್ ಫುಲೆ ಸ್ಟಡಿ ಸರ್ಕಲ್ (ಎಪಿಪಿಎಸ್ಸಿ)ಯ ವಿದ್ಯಾರ್ಥಿ ಸಂಘಟನೆಯು ಅಧ್ಯಾಪಕರನ್ನು ವಜಾಗೊಳಿಸಿ, ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ಅಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಕೆಲವು ಗಂಟೆಗಳ ಹಿಂದೆ, ಈ ಕುರಿತಂತೆ ನನಗೆ ಇ ಮೇಲ್ ಬಂದಿದೆ. ಐಐಟಿ ವ್ಯವಸ್ಥೆಯಲ್ಲಿ ನಾವು ಅಂತಹ ಭಾಷೆಗಳನ್ನು ಬೆಂಬಲಿಸುವುದಿಲ್ಲ. ನಾವು ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ರಿಜಿಸ್ಟ್ರಾರ್ ತಮಲ್ ನಾಥ್ ಹೇಳಿಕೆ ನೀಡಿದ್ದಾರೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ: ಐಐಟಿ ಮದ್ರಾಸ್ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು: ವಿದ್ಯಾರ್ಥಿಗಳಿಗೆ ಇನ್ನು ಕೊರೊನಾ ಪರೀಕ್ಷೆ ಕಡ್ಡಾಯ