ಭುವನೇಶ್ವರ: ಜೀವನವನ್ನೇ ಬರಡು ಮಾಡಿರೋ ಕಿಲ್ಲರ್ ಕೊರೊನಾ ಹಿಮ್ಮೆಟ್ಟಿಸಲು ನಾನಾ ದೇಶಗಳು ತಲೆ ಕೆಡಿಸಿಕೊಂಡಿವೆ. ಈ ಮದ್ದು ಆ ಮದ್ದು ಅಂತ ಪ್ರಯೋಗಗಳನ್ನು ಮಾಡುತ್ತಿವೆ. ಆದರೆ ಇಲ್ಲೊಂದು ಊರಲ್ಲಿ ಕೊರೊನಾವನ್ನು ದೂರವಿಡಲು ಶಾಲಾ ಮಕ್ಕಳಿಗೆ ಮದ್ಯ ಮದ್ದು ನೀಡಲಾಗುತ್ತಿದೆ!
ಈ ಘಟನೆ ಕಂಡುಬಂದಿರುವುದು ಒಡಿಶಾದ ಮಲ್ಕಂಗಿರಿ ಜಿಲ್ಲೆಯ ಹಳ್ಳಿಯೊಂದರಲ್ಲಿ. ಇಲ್ಲಿ 10 ರಿಂದ 12 ವರ್ಷ ವಯಸ್ಸಿನ 50 ಕ್ಕೂ ಹೆಚ್ಚು ಮಕ್ಕಳಿಗೆ ದೇಶೀಯ ಕಳ್ಳು ಮದ್ಯ (salapa) ಆಂದ್ರೆ ಲೋಕಲ್ ಸಾರಾಯಿ ಕುಡಿಸಲಾಗುತ್ತಿದೆ.
ಪಾರ್ಸನಪಾಲಿ ಗ್ರಾಮದ ಜನರ ಪ್ರಕಾರ ಕಳ್ಳು ಸೇವಿಸುವುದರಿಂದ ಮಕ್ಕಳಿಗೆ ಕೊರೊನಾ ವೈರಸ್ ತಗುಲುವುದಿಲ್ಲವಂತೆ! ಕಳ್ಳಿನಲ್ಲಿ ಮದ್ಯದ ಅಂಶಗಳಿರುತ್ತವೆ. ಅವು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ ಎಂದು ಇಲ್ಲಿನ ಜನ ನಂಬಿದ್ದಾರೆ. ಇನ್ನು ಮಕ್ಕಳು ಮದ್ಯ ಸೇವಿಸುತ್ತಿರುವ ವಿಡಿಯೋ ಫುಲ್ ವೈರಲ್ ಆಗಿದ್ದು ತೀವ್ರ ಟೀಕೆಗೆ ಗುರಿಯಾಗಿದೆ.
ಆದರೆ ವೈದ್ಯಕೀಯ ತಜ್ಞರು ಮದ್ಯ ಸೇವನೆ ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿರುವ ಮಕ್ಕಳು ಯಾರೂ ಸಾಮಾಜಿಕ ಅಂತರವಾಗಲಿ, ಮಾಸ್ಕ್ ಆಗಲಿ ಮುಂತಾದ ಯಾವುದೇ ಕೊರೊನಾ ನಿಗ್ರಹ ಮಾರ್ಗಸೂಚಿಗಳನ್ನು ಅನುಸರಿಸಿಲ್ಲ.
ಆಲ್ಕೋಹಾಲ್ ಸೇವಿಸುವುದರಿಂದ ಕೊರೊನಾವನ್ನು ಗುಣಪಡಿಸಲು ಹೋಗುವುದಿಲ್ಲ. ಏಕೆಂದರೆ ಅದು ನಿಮ್ಮ ಜಿಐ ಟ್ರಾಕ್ಟ್ ಮೂಲಕ ಹೋಗುವುದಿಲ್ಲ. ಅದು ಕಣ್ಣು, ಮೂಗು ಮತ್ತು ಬಾಯಿಯ ಮೂಲಕ ಹರಡುತ್ತದೆ. ಕೊರೊನಾ ಸೋಂಕಿಗೆ ಒಳಗಾದ ವ್ಯಕ್ತಿಯ ಉದಾಹರಣೆ ತೆಗೆದುಕೊಂಡರೆ ವೈರಸ್ ದೇಹವನ್ನು ಉಸಿರಾಟದ ಮೂಲಕ ಪ್ರವೇಶಿಸುತ್ತದೆ ಹೊರತು ಜಿಐ ಟ್ರಾಕ್ಟ್ ಮೂಲಕ ಅಲ್ಲ ಎಂದೂ ಪರಿಣತರು ಹೇಳುತ್ತಾರೆ.
ಅಲ್ಲದೆ, ಮಕ್ಕಳಿಗೆ ಮದ್ಯವನ್ನು ನೀಡುವುದು ಅಪರಾಧ. ಹೀಗಾಗಿ ಈ ಬಗ್ಗೆ ಅಬಕಾರಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
Published On - 10:33 am, Wed, 22 July 20