ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆ; ರೈಲ್ವೆ ಇಲಾಖೆಗೆ ವಿನೇಶ್ ಫೋಗಟ್, ಬಜರಂಗ್ ಪುನಿಯಾ ರಾಜೀನಾಮೆ

|

Updated on: Sep 06, 2024 | 3:11 PM

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಕುಸ್ತಿಪಟುಗಳಾದ ವಿನೇಶ್ ಪೋಗಟ್ ಮತ್ತು ಬಜರಂಗ್ ಪುನಿಯಾ ಭಾರತೀಯ ರೈಲ್ವೆ ಇಲಾಖೆ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆಜಿ ಚಿನ್ನದ ಪದಕದ ಪಂದ್ಯದಿಂದ ಅನರ್ಹಗೊಂಡ ನಂತರ ಕುಸ್ತಿಪಟು ವಿನೇಶ್ ಪೋಗಟ್ ಕುಸ್ತಿಯನ್ನು ತ್ಯಜಿಸಿದ್ದರು.

ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆ; ರೈಲ್ವೆ ಇಲಾಖೆಗೆ ವಿನೇಶ್ ಫೋಗಟ್, ಬಜರಂಗ್ ಪುನಿಯಾ ರಾಜೀನಾಮೆ
ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ
Follow us on

ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮುನ್ನ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಇಂದು ಭಾರತೀಯ ರೈಲ್ವೆಯಲ್ಲಿನ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ವಿನೇಶ್ ಫೋಗಟ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. “ನನ್ನ ಜೀವನದ ಈ ಹಂತದಲ್ಲಿ ನಾನು ರೈಲ್ವೆ ಸೇವೆಯಿಂದ ನನ್ನನ್ನು ಹೊರಬರಲು ನಿರ್ಧರಿಸಿದ್ದೇನೆ. ಭಾರತೀಯ ರೈಲ್ವೆಯ ಅಧಿಕಾರಿಗಳಿಗೆ ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ” ಎಂದು ಪೋಸ್ಟ್ ಮಾಡಿದ್ದಾರೆ. “ದೇಶಕ್ಕೆ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ ಭಾರತೀಯ ರೈಲ್ವೆ ಕುಟುಂಬಕ್ಕೆ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ” ಎಂದು ಅವರು ಎಕ್ಸ್​ನಲ್ಲಿ ತಿಳಿಸಿದ್ದಾರೆ.

ಹರಿಯಾಣ ಚುನಾವಣೆಗೆ ವಿನೇಶ್ ಫೋಗಟ್ ಸ್ಪರ್ಧಿಸಲಿದ್ದಾರೆ. ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಹರಿಯಾಣ ವಿಧಾನಸಭೆ ಚುನಾವಣೆಗೆ ಮುನ್ನ ಇಂದು ಕಾಂಗ್ರೆಸ್ ಸೇರಲಿದ್ದಾರೆ. 2023ರಲ್ಲಿ ಬಿಜೆಪಿಯ ಮಾಜಿ ಸಂಸದ ಮತ್ತು ನಂತರ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ಇಬ್ಬರೂ ಪ್ರತಿಭಟನೆ ಮಾಡಿದ್ದರು. ಮೂಲಗಳ ಪ್ರಕಾರ, ಬಜರಂಗ್ ಪುನಿಯಾ ಅವರು ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಹರಿಯಾಣ ವಿಧಾನಸಭೆ ಚುನಾವಣೆಗೆ ವಿನೇಶ್ ಫೋಗಟ್ ಅವರು ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: Haryana Elections: ಹರಿಯಾಣ ಚುನಾವಣೆಗೆ 67 ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಲಾಡ್ವಾದಿಂದ ಸಿಎಂ ಸೈನಿ ಸ್ಪರ್ಧೆ

ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಪೋಗಟ್ 100 ಗ್ರಾಂ ಅಧಿಕ ತೂಕ ಹೊಂದಿರುವ ಕಾರಣ 50 ಕೆಜಿ ಚಿನ್ನದ ಪದಕದ ಸ್ಪರ್ಧೆಯಿಂದ ಅನರ್ಹಗೊಂಡಿದ್ದರು. ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (ಸಿಎಎಸ್) ತನಗೆ ಬೆಳ್ಳಿ ಪದಕವನ್ನು ನೀಡಬೇಕೆಂಬ ಆಕೆಯ ಅರ್ಜಿಯನ್ನು ವಜಾಗೊಳಿಸಿತ್ತು. ತನ್ನ ಅನರ್ಹತೆಯ ಒಂದು ದಿನದ ನಂತರ ಆಗಸ್ಟ್ 8ರಂದು ಅವರು ಕುಸ್ತಿಯಿಂದ ನಿವೃತ್ತಿ ಘೋಷಿಸಿದರು.


ವಿನೇಶ್ ಪೋಗಟ್ ಮನೆಗೆ ಮರಳಿದ ನಂತರ ಅವರು ಬಿಜೆಪಿ ಶಾಸಕಿಯಾಗಿರುವ ತಮ್ಮ ಸೋದರಸಂಬಂಧಿ ಬಬಿತಾ ಅವರಂತೆ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂಬ ತೀವ್ರ ಊಹಾಪೋಹಗಳೆದ್ದಿತ್ತು. ಆ ಊಹಪೋಹಗಳಿಗೆ ತೆರೆ ಬಿದ್ದಿದ್ದು, ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ