
ಆಂಧ್ರಪ್ರದೇಶ, ಡಿಸೆಂಬರ್ 8: ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಗಜುಲರೇಗದಲ್ಲಿ ನಡೆದ ಅಮಾನವೀಯ ಘಟನೆಯ ಕುರಿತು ಪೋಕ್ಸೊ (POCSO) ವಿಶೇಷ ನ್ಯಾಯಾಲಯವು ಇಂದು ಮಹತ್ವದ ತೀರ್ಪು ನೀಡಿದೆ. ತನ್ನ ಸ್ವಂತ ಮೊಮ್ಮಗಳ ಮೇಲೆ ಕ್ರೂರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 59 ವರ್ಷದ ಆರೋಪಿ ಬೊಂಡಪಲ್ಲಿ ಸತ್ಯರಾವ್ ಅವರಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಲಾಗಿದೆ.
ಹಾಗೇ, ಆ ಬಾಲಕಿಯ ಪುನರ್ವಸತಿಗಾಗಿ 5 ಲಕ್ಷ ಪರಿಹಾರವನ್ನು ಘೋಷಿಸಿದೆ. ವಿಜಯನಗರಂ ಜಿಲ್ಲೆಯಲ್ಲಿ ನಡೆದ ಈ ಕ್ರೂರ ಘಟನೆ ಆಗಸ್ಟ್ 18, 2025ರಂದು ಬೆಳಕಿಗೆ ಬಂದಿತ್ತು. ಮನೆಯಲ್ಲಿ ತಾತ-ಮೊಮ್ಮಗಳು ಮಾತ್ರ ಇದ್ದಾಗ ಆ ಮುಗ್ಧ ಹುಡುಗಿಯ ಮೇಲೆ ಆರೋಪಿ ಕ್ರೂರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಬಳಿಕ ಆರೋಪಿ ಸತ್ಯ ರಾವ್ ಅಲ್ಲಿಂದ ಪರಾರಿಯಾಗಿದ್ದರು.
ಇದನ್ನೂ ಓದಿ: ಚಾಲಕನ ಜೊತೆ ಸ್ನೇಹ, ಗೆಳೆಯನ ಮೇಲೂ ಮೋಹ: ಅತ್ಯಾಚಾರ ಕತೆ ಹೇಳಿ ಸಿಕ್ಕಿಬಿದ್ದಳಾ ಯುವತಿ?
ಸ್ವಲ್ಪ ಸಮಯದ ನಂತರ, ಆ ಹುಡುಗಿಯ ತಾಯಿ ಮನೆಗೆ ಬಂದು ಮಗಳು ಅಳುತ್ತಿರುವುದರಿಂದ ಕಾರಣ ಕೇಳಿದರು. ಆಗ ಆಕೆ ತನ್ನ ಅಮ್ಮನ ಬಳಿ ತನ್ನ ಅಜ್ಜ ತನಗೆ ಏನು ಮಾಡಿದರು ಎಂಬುದನ್ನೆಲ್ಲ ವಿವರಿಸಿದಳು. ಇದರಿಂದ ಆಘಾತಗೊಂಡ ಆ ಮಹಿಳೆ ತನ್ನ ಮಾವನ ವಿರುದ್ಧ ಮಹಿಳಾ ಪೊಲೀಸರಿಗೆ ದೂರು ನೀಡಿದ್ದರು. ಮಹಿಳಾ ಪೊಲೀಸ್ ಠಾಣೆಯ ಎಸ್‌ಐಜಿ ಸಿರಿಷಾ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಡಿಎಸ್‌ಪಿ ಆರ್. ಗೋವಿಂದ ರಾವ್ ಅವರ ಮೇಲ್ವಿಚಾರಣೆಯಲ್ಲಿ ತನಿಖೆಯನ್ನು ಪೂರ್ಣಗೊಳಿಸಿದರು. ನಂತರ, ಆರೋಪಿಯನ್ನು ಬಂಧಿಸಿ ರಿಮಾಂಡ್‌ಗೆ ಕಳುಹಿಸಲಾಯಿತು. ಅವರಿಗೆ ಇಂದು ಶಿಕ್ಷೆ ಪ್ರಕಟವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ