ತಮಿಳುನಾಡಿನ ವಿರೋಧ ಪಕ್ಷವಾದ ಎಐಎಡಿಎಂಕೆ ಲೋಕಸಭೆಯಲ್ಲಿ ಹೀನಾಯ ಸೋಲು ಕಂಡ ನಂತರ, ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ನಿಕಟವರ್ತಿ ವಿಕೆ ಶಶಿಕಲಾ(VK Sasikala) ರಾಜಕೀಯಕ್ಕೆ ಮರಳುವುದಾಗಿ ಘೋಷಿಸಿದರು. ಈ ಹಿಂದೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಾವಿ ಸ್ಥಾನವನ್ನು ಹೊಂದಿದ್ದ ಶಶಿಕಲಾ ದೀರ್ಘಾವಧಿಯ ಗೈರು ಬಳಿಕ ರಾಜಕೀಯಕ್ಕೆ ಮರುಪ್ರವೇಶಿಸುವುದಾಗಿ ತಿಳಿಸಿದರು.
ಪಕ್ಷದ ನಿಷ್ಠಾವಂತರಿಂದ ಪ್ರೀತಿಯಿಂದ ಚಿನಮ್ಮ ಎಂದು ಕರೆಯಲ್ಪಡುವ ಅವರು 2026 ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆಯನ್ನು ಮತ್ತೆ ಅಧಿಕಾರಕ್ಕೆ ತರುವ ಪ್ರತಿಜ್ಞೆ ಮಾಡಿದರು.
ನಾವು 2026 ರಲ್ಲಿ ಸರ್ಕಾರವನ್ನು ರಚಿಸುತ್ತೇವೆ, ಅದೂ ಕೂಡ ಸಂಪೂರ್ಣ ಬಹುಮತದೊಂದಿಗೆ ಎಂದು ಅವರು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಆದ ದೊಡ್ಡ ನಷ್ಟದ ಬಗ್ಗೆ ಮಾತನಾಡಿದ ಅವರು, ಸೋಲಿಗೆ ಕೆಲವು ಸ್ವಾರ್ಥಿಗಳ ಕೃತ್ಯವೇ ಕಾರಣ. ನಾನು ಇದನ್ನೆಲ್ಲಾ ತಾಳ್ಮೆಯಿಂದ ನೋಡುತ್ತಿದ್ದೇನೆ ಎಂದು ಹೇಳಿದರು.
ಮತ್ತಷ್ಟು ಓದಿ: ಜಯಲಲಿತಾ ‘ಹಿಂದುತ್ವ ನಾಯಕಿ’ ಎಂದ ಅಣ್ಣಾಮಲೈ; ಶಶಿಕಲಾ ನಟರಾಜನ್ ತಿರುಗೇಟು
ಇತ್ತೀಚಿನ ಚುನಾವಣೆಯಲ್ಲಿ ಎಐಎಡಿಎಂಕೆಯ ಕಳಪೆ ಪ್ರದರ್ಶನವನ್ನು ಒಪ್ಪಿಕೊಂಡ ಶಶಿಕಲಾ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಸಮಯ ಬಂದಿದೆ, ಚಿಂತಿಸಬೇಡಿ. ತಮಿಳುನಾಡಿನ ಜನರು ನಮ್ಮೊಂದಿಗಿದ್ದಾರೆ. ಈ ವಿಷಯದಲ್ಲಿ ನಾನು ತುಂಬಾ ಬಲಶಾಲಿಯಾಗಿದ್ದೇನೆ ಎಂದು ಅವರು ಪ್ರತಿಪಾದಿಸಿದರು. ಶಶಿಕಲಾ ಕೂಡ ಶೀಘ್ರದಲ್ಲೇ ಯಾತ್ರೆ ಕೈಗೊಳ್ಳುವ ಯೋಜನೆಯನ್ನು ಪ್ರಕಟಿಸಿದರು.
ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಕಳೆದ ನಾಲ್ಕು ವರ್ಷಗಳಿಂದ ಪರಪ್ಪಮನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ, 2021ರಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದರು. 2026ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ