ಜಯಲಲಿತಾ ‘ಹಿಂದುತ್ವ ನಾಯಕಿ’ ಎಂದ ಅಣ್ಣಾಮಲೈ; ಶಶಿಕಲಾ ನಟರಾಜನ್ ತಿರುಗೇಟು
ಎಐಎಡಿಎಂಕೆ ಮಾಜಿ ನಾಯಕಿ ದಿ. ಜಯಲಲಿತಾ ಅವರು "ಹಿಂದುತ್ವದ ನಾಯಕಿ" ಎಂಬ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ ಶಶಿಕಲಾ (ಶಶಿಕಲಾ ನಟರಾಜನ್), ಇದು ಬಿಜೆಪಿ ನಾಯಕರ ಅಜ್ಞಾನ ಮತ್ತು ತಪ್ಪು ತಿಳುವಳಿಕೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ (Annamalai) ಅವರು ಇತ್ತೀಚೆಗೆ ಎಐಎಡಿಎಂಕೆ ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ (Jayalalithaa) ಅವರ ಬಗ್ಗೆ ಮಾತನಾಡಿದ್ದಾರೆ. “ಜಯಲಲಿತಾ ಅವರು ತಮಿಳುನಾಡಿನ ಎಲ್ಲರಿಗಿಂತಲೂ ಶ್ರೇಷ್ಠ ಹಿಂದುತ್ವವಾದಿ ನಾಯಕಿ” ಎಂದು ಹೇಳಿದ್ದಾರೆ. ಅಣ್ಣಾಮಲೈ ಅವರು ಪಿಟಿಐಗೆ ನೀಡಿದ ಇತ್ತೀಚಿನ ಸಂದರ್ಶನವೊಂದರಲ್ಲಿ ತಮಿಳುನಾಡಿನಲ್ಲಿ ಎಐಎಡಿಎಂಕೆ ಜಯಲಲಿತಾ ನಿಧನ ಹೊಂದಿದ ನಂತರ ಹಿಂದುತ್ವ ಸಿದ್ಧಾಂತ ಮರೆಯಾಗುವ ಶೂನ್ಯವನ್ನು ತುಂಬಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದರು.
“ಜಯಲಲಿತಾ ಬದುಕಿರುವವರೆಗೂ ಅವರು ತಮಿಳುನಾಡಿನ ಎಲ್ಲರಿಗಿಂತಲೂ ಶ್ರೇಷ್ಠ ಹಿಂದುತ್ವವಾದಿ ನಾಯಕಿಯಾಗಿದ್ದರು. 2014ರ ಮೊದಲು ನೀವು ಬಿಜೆಪಿ ಮತ್ತು ಜಯಲಲಿತಾ ಎಂಬ 2 ಆಯ್ಕೆಯನ್ನು ಹೊಂದಿದ್ದಾಗ ಹಿಂದೂ ಮತದಾರನ ಆಯ್ಕೆ ಜಯಲಲಿತಾ ಆಗಿರುವುದು ಸಹಜ. ಜಯಲಲಿತಾ ಅವರು ತಮ್ಮ ಹಿಂದೂ ಗುರುತನ್ನು ಬಹಿರಂಗವಾಗಿ ಪ್ರದರ್ಶಿಸಿದರು” ಎಂದು ಅಣ್ಣಾಮಲೈ ಹೇಳಿದ್ದರು.
ಇದನ್ನೂ ಓದಿ: ಗಂಧದ ನಾಡನ್ನು ಗಾಂಜಾ ನಾಡಾಗಿ ಪರಿವರ್ತಿಸುತ್ತಿರುವುದೇ ಕಾಂಗ್ರೆಸ್ನ ಕರ್ನಾಟಕ ಮಾಡೆಲ್: ಬಿಜೆಪಿ ವ್ಯಂಗ್ಯ
2002-03ರಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ನಾಯಕರನ್ನು ಹೊರತುಪಡಿಸಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತಂದ ದೇಶದ ಮೊದಲ ರಾಜಕಾರಣಿ ಜಯಲಲಿತಾ ಎಂದು ಅವರು ಹೇಳಿದ್ದಾರೆ.
ಅಣ್ಣಾಮಲೈ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಯಲಲಿತಾ ಅವರ ಆಪ್ತ ಸಹಾಯಕಿ ವಿ.ಕೆ ಶಶಿಕಲಾ, ಅಣ್ಣಾಮಲೈ ಅವರ ಈ ಮಾತುಗಳು ಜಯಲಲಿತಾ ಅವರ ಕುರಿತಾಗಿ ಅವರಿಗಿರುವ ಅಜ್ಞಾನ ಮತ್ತು ತಪ್ಪು ತಿಳುವಳಿಕೆಯನ್ನು ತೋರಿಸುತ್ತವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Lok Sabha Elections 2024: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ಇವಿಎಂ ಟ್ಯಾಂಪರಿಂಗ್; ಟಿಎಂಸಿ ಆರೋಪ
ಜಯಲಲಿತಾ ಅವರಂತಹ ಜನನಾಯಕರನ್ನು ಯಾವುದೇ ರೀತಿಯ ಸಂಕುಚಿತ ವಲಯದಲ್ಲಿ ಯಾರೂ ಬಂಧಿಸಲು ಸಾಧ್ಯವಿಲ್ಲ ಎಂದು ಶಶಿಕಲಾ ಹೇಳಿದ್ದಾರೆ. ಜಯಲಲಿತಾ ಅವರು ತಮ್ಮ ಕೊನೆಯ ಉಸಿರು ಇರುವವರೆಗೂ ಅಣ್ಣಾ, ಎಂಜಿಆರ್ ತೋರಿಸಿದ ಹಾದಿಯಲ್ಲಿ ನಿಜವಾದ ದ್ರಾವಿಡ ನಾಯಕಿಯಾಗಿ ಬದುಕಿದವರು. ಹಿಂದೂ, ಕ್ರೈಸ್ತ, ಮುಸ್ಲಿಂ ಹೀಗೆ ಎಲ್ಲ ಸಮುದಾಯದವರೂ ಕೊಂಡಾಡಿದ ನಾಯಕಿಯಾಗಿದ್ದರು. ಅಮ್ಮ ಜಾತಿ, ಧರ್ಮದ ಅಡೆತಡೆಗಳನ್ನು ಮೆಟ್ಟಿ ನಿಂತ ಮಹಾನ್ ನಾಯಕಿ. ಜನರ ಜೀವನವನ್ನು ಸುಧಾರಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟವರು ಎಂದು ಅವರು ಹೇಳಿದ್ದಾರೆ.
ಜಯಲಲಿತಾ ಅವರಿಗೆ ದೇವರಲ್ಲಿ ನಂಬಿಕೆ ಇತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ ಅವರು ಯಾವುದೇ ಒಂದೇ ಧರ್ಮವನ್ನು ನಂಬಿರಲಿಲ್ಲ. ಅವರು ಎಲ್ಲರನ್ನೂ ಸಮಾನವಾಗಿ ಕಾಣುವ ಏಕೈಕ ನಾಯಕಿಯಾಗಿದ್ದರು ಎಂದು ಶಶಿಕಲಾ ಹೇಳಿದ್ದಾರೆ.
ಅಣ್ಣಾಮಲೈ ಜಯಲಲಿತಾ ಅವರನ್ನು ‘ಹಿಂದುತ್ವ ನಾಯಕಿ’ ಎಂದು ಉಲ್ಲೇಖಿಸಿದ್ದಕ್ಕೆ ಎಐಎಡಿಎಂಕೆ ಪಕ್ಷ ಕೂಡ ಆಕ್ಷೇಪ ವ್ಯಕ್ತಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ