ಕಲ್ಪೆಟ್ಟಾ ಆಗಸ್ಟ್ 03: ವಯನಾಡ್ ಭೂಕುಸಿತದ (Wayanad landslide) ನಂತರ ಗುಹೆಯೊಂದರಲ್ಲಿ ಸಿಲುಕಿಕೊಂಡಿದ್ದ ಬುಡಕಟ್ಟು ಸಮುದಾಯಕ್ಕೆ ಸೇರಿದ ನಾಲ್ವರು ಬಾಲಕರು ಮತ್ತು ಅವರ ಪೋಷಕರನ್ನು ಕೇರಳ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ಕಲ್ಪೆಟ್ಟಾ ವ್ಯಾಪ್ತಿಯ ಅರಣ್ಯಾಧಿಕಾರಿ ಕೆ.ಹಶಿಸ್ ನೇತೃತ್ವದ ನಾಲ್ವರು ಸದಸ್ಯರ ತಂಡವು ಒಂದರಿಂದ ನಾಲ್ಕು ವರ್ಷದೊಳಗಿನ ನಾಲ್ಕು ಮಕ್ಕಳನ್ನು ಒಳಗೊಂಡ ಬುಡಕಟ್ಟು ಕುಟುಂಬವನ್ನು ರಕ್ಷಿಸಿದೆ. ರಕ್ಷಣಾ ಕಾರ್ಯಾಚರಣೆಗೆ ನಾಲ್ಕೂವರೆ ಗಂಟೆಗಳ ಕಾಲ ತೆಗೆದುಕೊಂಡಿತು. ಈ ಕುಟುಂಬವು ವಯನಾಡಿನ ಪನಿಯಾ ಸಮುದಾಯದ್ದಾಗಿದ್ದು, ಆಳವಾದ ಕಮರಿಯ ಮೇಲಿರುವ ಬೆಟ್ಟದ ಮೇಲಿರುವ ಗುಹೆಯೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದರು ಎಂದು ಹಶಿಸ್ ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ .
ತಾಯಿ ಮತ್ತು ನಾಲ್ಕು ವರ್ಷದ ಮಗು ಸೇರಿದಂತೆ ಇತರ ಮಕ್ಕಳು ಗುಹೆಯಲ್ಲಿ ಸಿಲುಕಿರುವ ಅವರ ತಂದೆಗೆ ಆಹಾರಕ್ಕಾಗಿ ಅಲೆದಾಡುತ್ತಿರುವುದು ನಮಗೆ ಕಂಡಿತ್ತು ಎಂದು ಹಶಿಸ್ ಹೇಳಿದ್ದಾರೆ.
ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಗಳ ಕಡಿದಾದ ದಾರಿಯಲ್ಲಿ ಸಾಗಿ 8 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಗುಹೆಯಲ್ಲಿ ಸಿಲುಕಿದವರನ್ನು ಕಾಪಾಡಿದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಶ್ಲಾಘಿಸಿದ್ದಾರೆ.
Six precious lives were saved from a remote tribal settlement after a tireless 8-hour operation by our courageous forest officials in landslide-hit Wayanad. Their heroism reminds us that Kerala’s resilience shines brightest in the darkest times. United in hope, we will rebuild… pic.twitter.com/kDXP26UBBS
— Pinarayi Vijayan (@pinarayivijayan) August 2, 2024
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಕೇರಳ ಸಿಎಂ, “ಭೂಕುಸಿತ ಪೀಡಿತ ವಯನಾಡಿನಲ್ಲಿ ನಮ್ಮ ಧೈರ್ಯಶಾಲಿ ಅರಣ್ಯ ಅಧಿಕಾರಿಗಳು ದಣಿವರಿಯದ 8 ಗಂಟೆಗಳ ಕಾರ್ಯಾಚರಣೆಯ ನಂತರ ಆರು ಅಮೂಲ್ಯ ಜೀವಗಳನ್ನು ಉಳಿಸಿದ್ದಾರೆ. ಈ ದುರಿತ ಕಾಲದಲ್ಲಿ ಅವರ ಸಾಹಸದ ಕಾರ್ಯಗಳು ಕೇರಳ ಮತ್ತೆ ಪುಟಿದೇಳಬಹುದು ಎಂಬುದನ್ನು ತೋರಿಸುತ್ತದೆ. ಒಗ್ಗಟ್ಟಾಗಿ ನಾವು ಪುನರ್ನಿರ್ಮಾಣ ಮಾಡುತ್ತೇವೆ. ಮತ್ತಷ್ಟು ಶಕ್ತಿಶಾಲಿಯಾಗಿ ಎದ್ದು ನಿಲ್ಲುತ್ತೇವೆ ಎಂಬ ಭರವಸೆ ಇದೆ ಎಂದಿದ್ದಾರೆ.
ಮಳೆಯ ಪ್ರಮಾಣ ಹೆಚ್ಚಾದಂತೆ ಅರಣ್ಯ ಇಲಾಖೆಯು ವಯನಾಡ್‌ನಲ್ಲಿರುವ ಬಹುತೇಕ ಬುಡಕಟ್ಟು ಸಮುದಾಯದವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.
ಇದನ್ನೂ ಓದಿ: ವಯನಾಡಿನ ಸಂತ್ರಸ್ತರಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿಯಿಂದ ತಲಾ 100 ಮನೆ ವಾಗ್ದಾನ: ಪಿಣರಾಯಿ ವಿಜಯನ್
ಬುಡಕಟ್ಟು ಸಮುದಾಯವು ಅರಣ್ಯ ಉತ್ಪನ್ನಗಳನ್ನೇ ನಂಬಿ ಬದುಕುತ್ತಿದ್ದು ಸಾಮಾನ್ಯವಾಗಿ ಇತರರೊಂದಿಗೆ ಸಂವಹನ ಇರಿಸಿಕೊಳ್ಳುವುದಿಲ್ಲ. ಆದಾಗ್ಯೂ, ಭೂಕುಸಿತ ಮತ್ತು ಭಾರೀ ಮಳೆಯಿಂದಾಗಿ ಅವರು ಯಾವುದೇ ಆಹಾರವನ್ನು ಸಂಗ್ರಹಿಸಲು ಸಾಧ್ಯವಾಗದಂತಿದೆ ಎಂದು ಹಶಿಸ್ ಹೇಳಿದ್ದಾರೆ.
ಬುಡಕಟ್ಟು ಜನಾಂಗದವರು ಇದ್ದ ಜಾಗಕ್ಕೆ ಹೋಗುವ ರಸ್ತೆ ಅಕ್ಷರಶಃ ಕಡಿದಾದ ಇಳಿಜಾರಿನಿಂದ ಕೂಡಿತ್ತು. ಒಂದೆಡೆ ಮಳೆ, ಜಾರುವ ಬಂಡೆಗಳು. ಅಧಿಕಾರಿಗಳು ಮರ ಮತ್ತು ಬಂಡೆಗಳಿಗೆ ಹಗ್ಗಗಳನ್ನು ಕಟ್ಟಿ ಹೆಜ್ಜೆಯಿಡುತ್ತಾ ಅಲ್ಲಿಗೆ ಹೋಗಿದ್ದರು. ಅದು ಅಪಾಯಕಾರಿಯೂ ಆಗಿತ್ತು. “ಮಕ್ಕಳು ದಣಿದಿದ್ದರು. ನಾವು ಹೊತ್ತೊಯ್ದಿದ್ದ ಆಹಾರವನ್ನು ಅವರಿಗೆ ನೀಡಿದ್ದೇವೆ. ನಂತರ, ಬಹಳ ಮನವೊಲಿಕೆಯ ನಂತರ, ಅವರ ತಂದೆ ನಮ್ಮೊಂದಿಗೆ ಬರಲು ಒಪ್ಪಿದರು. ನಾವು ಮಕ್ಕಳನ್ನು ನಮ್ಮ ದೇಹಕ್ಕೆ ಬಟ್ಟೆಯಿಂದ ಕಟ್ಟಿ ಆ ಬೆಟ್ಟ ಇಳಿದಿದ್ದೇವೆ ಎಂದಿದ್ದಾರೆ. ಮಂಗಳವಾರ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ರಸ್ತೆಗಳು, ಸೇತುವೆಗಳು ಮತ್ತು ಇತರ ಸಾರ್ವಜನಿಕ ಮೂಲಸೌಕರ್ಯಗಳು ನಾಶವಾಗಿವೆ. ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 308 ಆಗಿದೆ. 2018 ರ ಪ್ರವಾಹದ ನಂತರ ಕೇರಳ ಎದುರಿಸಿದ ಅತ್ಯಂತ ಭೀಕರ ನೈಸರ್ಗಿಕ ವಿಕೋಪವಾಗಿದೆ ಇದು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:03 pm, Sat, 3 August 24