ವಯನಾಡಿನ ಸಂತ್ರಸ್ತರಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿಯಿಂದ ತಲಾ 100 ಮನೆ ವಾಗ್ದಾನ: ಪಿಣರಾಯಿ ವಿಜಯನ್
Wayanad landslide: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಮನೆಗಳ ಭರವಸೆ ನೀಡಿದ್ದಾರೆ. ಅವರಿಗೆ ನೇರವಾಗಿ ಕರೆ ಮಾಡಿ ಧನ್ಯವಾದ ಸಲ್ಲಿಸಿರುವುದಾಗಿ ಸಿಎಂ ಕಚೇರಿ ಹೇಳಿದೆ. ಶೋಭಾ ರಿಯಾಲ್ಟಿ ಗ್ರೂಪ್ 50 ಮನೆಗಳನ್ನು ನಿರ್ಮಿಸಲಿದೆ. ಕೋಝಿಕ್ಕೋಡ್ ಮೂಲದ ಉದ್ಯಮಿಗಳ ಸಂಘವಾದ ಬಿಸಿನೆಸ್ ಕ್ಲಬ್ 50 ಮನೆಗಳನ್ನು ನಿರ್ಮಿಸಲಿದೆ
ತಿರುವನಂತಪುರ ಆಗಸ್ಟ್ 03 : ಭೂಕುಸಿತದಿಂದ ಹಾನಿಗೀಡಾದ ವಯನಾಡ್ (Wayanad landslide) ಚೂರಲ್‌ಮಲ-ಮುಂಡಕೈ ಪ್ರದೇಶದ ಪುನರ್ವಸತಿ ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಹೇಳಿದ್ದಾರೆ.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಹೆಚ್ಚು ಸುರಕ್ಷಿತ ಪ್ರದೇಶವನ್ನು ನೋಡಿ ಅಲ್ಲಿ ಟೌನ್ ಶಿಪ್ ನಿರ್ಮಿಸಲಾಗುವುದು. ಅದಕ್ಕಾಗಿ ಚರ್ಚೆ ಆರಂಭವಾಗಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ಕೋರಲು ನೀಡಿರುವ ಕ್ಯೂಆರ್ ಕೋಡ್ ದುರ್ಬಳಕೆ ಆಗಿರುವ ಸಾಧ್ಯತೆ ಗಮನಕ್ಕೆ ಬಂದಿದೆ. ಪ್ರಸ್ತುತ QR ಕೋಡ್ ಅನ್ನು ಹಿಂಪಡೆಯಲಾಗುತ್ತದೆ. ಬದಲಿಗೆ ಯುಪಿಐ ನೀವು ಐಡಿ ಮೂಲಕ ಗೂಗಲ್ ಪೇನಲ್ಲಿ ದೇಣಿಗೆ ನೀಡಬಹುದು ಎಂದು ಪಿಣರಾಯಿ ಹೇಳಿದ್ದಾರೆ.
ಹಿಂದಿನ ವಯನಾಡ್ ಕಲೆಕ್ಟರ್ ಮತ್ತು ಪ್ರಸ್ತುತ ಜಂಟಿ ಭೂ ಕಂದಾಯ ಆಯುಕ್ತರಾದ ಗೀತಾ ಐಎಎಸ್ ಅವರ ನೇತೃತ್ವದಲ್ಲಿ ವಯನಾಡ್ ಸೆಲ್ ಅನ್ನು ರಚಿಸಲಾಗುವುದು. ಇದು ಮನೆ ಮತ್ತು ಭೂಮಿ ಸೇರಿದಂತೆ ಸಹಾಯದ ಕೊಡುಗೆಗಳನ್ನು ಸಂಘಟಿಸಲು ಸಹಾಯ ಮಾಡುತ್ತದೆ. ಸಂವಹನಕ್ಕಾಗಿ ಮೀಸಲಾದ ಇ-ಮೇಲ್ ಐಡಿ ಮತ್ತು ಕಾಲ್ ಸೆಂಟರ್ ಅನ್ನು ಸ್ಥಾಪಿಸಲಾಗಿದೆ. ಮೂರು ದೂರವಾಣಿ ಸಂಖ್ಯೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಿಎಂ ಪಿಣರಾಯಿ ವಿಜಯನ್ ಸುದ್ದಿಗೋಷ್ಠಿ
ಶಿಕ್ಷಣ ಸಚಿವರು ವಯನಾಡಿಗೆ ಆಗಮಿಸಿ ವೆಳ್ಳಾರ್ಮಲ ಶಾಲೆಯಲ್ಲಿ ಅಧ್ಯಯನವನ್ನು ಪುನರಾರಂಭಿಸುವ ಕ್ರಮಗಳನ್ನು ಸಮನ್ವಯಗೊಳಿಸಲಿದ್ದಾರೆ. ಹವಾಮಾನ ಬದಲಾವಣೆಯು ಪ್ರವಾಹ, ಭೂಕುಸಿತ ಮತ್ತು ಚಂಡಮಾರುತಗಳಂತಹ ನೈಸರ್ಗಿಕ ವಿಕೋಪಗಳಿಗೆ ಮುಖ್ಯ ಕಾರಣವಾಗಿದೆ. ಭಾರೀ ಮಳೆ ಸಾಮಾನ್ಯವಾಗಿ ಮುಂಚಿತವಾಗಿ ಊಹಿಸಲಾಗುವುದಿಲ್ಲ. ಕೇಂದ್ರ ಹವಾಮಾನ ಇಲಾಖೆ, ಕೇಂದ್ರ ಜಲ ಆಯೋಗ ಮತ್ತು ಭಾರತೀಯ ಭೂವಿಜ್ಞಾನ ಇಲಾಖೆ ಈ ಎಚ್ಚರಿಕೆಯನ್ನು ನೀಡುತ್ತಿವೆ. ಈ ನಿಟ್ಟಿನಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲು ಎಲ್ಲರೂ ಸಿದ್ಧರಾಗಬೇಕು. ವಯನಾಡಿನಲ್ಲಿ ಸಂಭವಿಸಿದ ದುರಂತದ ಕಾರಣದ ಬಗ್ಗೆ ವಿವರವಾದ ತನಿಖೆ ಅಗತ್ಯವಿದೆ. ವಿಪರೀತ ಮಳೆಗೆ ಕೇರಳ ಮಾದರಿಯ ಮಾನದಂಡವನ್ನು ಸೂಚಿಸಲು ಕೋಟ್ಟಯಂನಲ್ಲಿರುವ ಹವಾಮಾನ ಕೇಂದ್ರವನ್ನು ಕೇಳಲಾಗುತ್ತದೆ. ಅದಕ್ಕೆ ಬೇಕಾದ ಸೌಲಭ್ಯಗಳನ್ನು ಈ ಕೇಂದ್ರಕ್ಕೆ ಒದಗಿಸಲಾಗುವುದು ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಯಾರೆಲ್ಲ ಮನೆ ನೀಡುವುದಾಗಿ ಭರವಸೆ ನೀಡಿದ್ದಾರೆ?
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 100 ಮನೆಗಳನ್ನು ನಿರ್ಮಿಸುವ ಭರವಸೆ ನೀಡಿದ್ದಾರೆ ಎಂದು ರಾಜ್ಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಮಾಹಿತಿ ನೀಡಿದರು. ಇದು ಸತೀಶನ್ ಅವರ ಉಸ್ತುವಾರಿಯಲ್ಲಿ 25 ಮನೆಗಳನ್ನು ಒಳಗೊಂಡಿರುತ್ತದೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಮನೆಗಳ ಭರವಸೆ ನೀಡಿದ್ದಾರೆ. ಅವರಿಗೆ ನೇರವಾಗಿ ಕರೆ ಮಾಡಿ ಧನ್ಯವಾದ ಸಲ್ಲಿಸಿರುವುದಾಗಿ ಸಿಎಂ ಕಚೇರಿ ಹೇಳಿದೆ. ಶೋಭಾ ರಿಯಾಲ್ಟಿ ಗ್ರೂಪ್ 50 ಮನೆಗಳನ್ನು ನಿರ್ಮಿಸಲಿದೆ. ಕೋಝಿಕ್ಕೋಡ್ ಮೂಲದ ಉದ್ಯಮಿಗಳ ಸಂಘವಾದ ಬಿಸಿನೆಸ್ ಕ್ಲಬ್ 50 ಮನೆಗಳನ್ನು ನಿರ್ಮಿಸಲಿದೆ. ಇದಕ್ಕಿಂತ ಹೆಚ್ಚೂ ಆಗಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ವಯನಾಡ್ ದುರಂತ: 215 ಮೃತದೇಹ ಪತ್ತೆ, 206 ಮಂದಿ ನಾಪತ್ತೆ; ಮೃತರಲ್ಲಿ 30 ಮಕ್ಕಳು
ರಾಷ್ಟ್ರೀಯ ಸೇವಾ ಯೋಜನೆಯು 150 ಮನೆಗಳನ್ನು ಅಥವಾ ಅದಕ್ಕೆ ಸಮಾನವಾದ ಮನೆಗಳನ್ನು ಒದಗಿಸುತ್ತದೆ. ವಿಶ್ವ ಮಲಯಾಳಿ ಕೌನ್ಸಿಲ್ 14 ಮನೆಗಳನ್ನು ನಿರ್ಮಿಸಲಿದೆ. ಫ್ರೂಟ್ಸ್ ವ್ಯಾಲಿ ಫೇವರ್ಸ್ ಪ್ರೊಡ್ಯೂಸರ್ ಕಂಪನಿಯು 10 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅದನ್ನು ಕೃಷಿಯೋಗ್ಯವನ್ನಾಗಿ ಮಾಡಿ 10 ರಿಂದ 15 ಕುಟುಂಬಗಳಿಗೆ ನೀಡಲಿದೆ. ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲ್ಯಾರ್ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಕೋಟ್ಟಕಲ್ ಆರ್ಯವೈದ್ಯಶಾಲೆಯು 10 ಮನೆಗಳನ್ನು ಮತ್ತು ಕೋಯಿಕ್ಕೋಡ್ ಕಾಪಾಡ್‌ನ ಯೂಸುಫ್ ಪುರಯಿಲ್ ಅವರು ಐದು ಸೆಂಟ್ಸ್ ಭೂಮಿಯನ್ನು ನೀಡಿದ್ದಾರೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:54 pm, Sat, 3 August 24