ಒಮಿಕ್ರಾನ್​ ವಿರುದ್ಧ ಹೋರಾಟಕ್ಕೆ ಆಫ್ರಿಕಾದ ದೇಶಗಳಿಗೆ ನೆರವು ನೀಡಲು ಸಿದ್ಧವೆಂದ ಭಾರತ; ಪ್ರಧಾನಿ ಮೋದಿಗೆ ಕೈ ಮುಗಿದ ಮಾಜಿ ಕ್ರಿಕೆಟರ್​ ಕೆವಿನ್​​ ಪೀಟರ್ಸನ್​

ಭಾರತ ಈ ಮಹತ್ವದ ಘೋಷಣೆ ಮಾಡುತ್ತಿದ್ದಂತೆ ಇಂಗ್ಲೆಂಡ್​ನ ಮಾಜಿ ಕ್ರಿಕೆಟರ್​ ಕೆವಿನ್​ ಪೀಟರ್ಸನ್​ ತಮ್ಮ ಸೋಷಿಯಲ್​ ಮೀಡಿಯಾ ಮೂಲಕ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ.

ಒಮಿಕ್ರಾನ್​ ವಿರುದ್ಧ ಹೋರಾಟಕ್ಕೆ ಆಫ್ರಿಕಾದ ದೇಶಗಳಿಗೆ ನೆರವು ನೀಡಲು ಸಿದ್ಧವೆಂದ ಭಾರತ; ಪ್ರಧಾನಿ ಮೋದಿಗೆ ಕೈ ಮುಗಿದ ಮಾಜಿ ಕ್ರಿಕೆಟರ್​ ಕೆವಿನ್​​ ಪೀಟರ್ಸನ್​
ಸಾಂಕೇತಿಕ ಚಿತ್ರ
Follow us
| Updated By: Lakshmi Hegde

Updated on:Nov 30, 2021 | 8:18 AM

ಕೊವಿಡ್ 19 ವಿರುದ್ಧ ಹೋರಾಟದಲ್ಲಿ ಭಾರತ ವಿಶ್ವದ ಹಲವು ರಾಷ್ಟ್ರಗಳಿಗೆ ಸಹಾಯ ಮಾಡಿದೆ. ಅಮೆರಿಕಕ್ಕೂ ಕೂಡ ಔಷಧದ ನೆರವು ನೀಡಿತ್ತು. ಈಗ ಕೊವಿಡ್​ 19ನ ಹೊಸ ತಳಿ ಒಮಿಕ್ರಾನ್​ ಆತಂಕ ಶುರುವಾದ ಬೆನ್ನಲ್ಲೇ  ಕೇಂದ್ರ ಸರ್ಕಾರ ನಿನ್ನೆ ಇನ್ನೊಂದು ಮಹತ್ವದ ಘೋಷಣೆ ಮಾಡಿದೆ. ಆಫ್ರಿಕಾದಲ್ಲಿ ಒಮಿಕ್ರಾನ್​ (Omicron) ಸೋಂಕಿನಿಂದ ಬಾಧಿತವಾಗಿರುವ ದೇಶಗಳು, ಅದರ ವಿರುದ್ಧ ಹೋರಾಡಲು ಅಗತ್ಯ ನೆರವು ನೀಡಲು ನಾವು ಸಿದ್ಧರಿದ್ದೇವೆ. ನಮ್ಮಲ್ಲಿ ಉತ್ಪಾದನೆಯಾಗುವ ಕೊವಿಡ್ 19 ಲಸಿಕೆಗಳನ್ನು ಪೂರೈಸುವ ಜತೆ ಇನ್ಯಾವುದೇ ರೀತಿಯ ಸಹಾಯವನ್ನೂ ಮಾಡುತ್ತೇವೆ. ಜಾಗತಿಕ ವೇದಿಕೆ ಕೊವ್ಯಾಕ್ಸ್​ ಮೂಲಕ ಆಫ್ರಿಕಾದ ದೇಶಗಳಿಗೆ ಕೊರೊನಾ ಲಸಿಕೆ ಸರಬರಾಜು ಮಾಡಲಾಗುವುದು ಎಂದು ನಿನ್ನೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 

ಭಾರತ ಈ ಮಹತ್ವದ ಘೋಷಣೆ ಮಾಡುತ್ತಿದ್ದಂತೆ ಇಂಗ್ಲೆಂಡ್​ನ ಮಾಜಿ ಕ್ರಿಕೆಟರ್​ ಕೆವಿನ್​ ಪೀಟರ್ಸನ್​ ತಮ್ಮ ಸೋಷಿಯಲ್​ ಮೀಡಿಯಾ ಮೂಲಕ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ. ಎಎನ್​ಐ ಸುದ್ದಿ ಮಾಧ್ಯಮದ ಟ್ವೀಟ್​​ನ್ನು ರೀಟ್ವೀಟ್​ ಮಾಡಿರುವ ಪೀಟರ್ಸನ್​, ಭಾರತವು ಮತ್ತೊಮ್ಮೆ ತನ್ನ ಕಾಳಜಿಯ ಮನೋಭಾವನ್ನು ತೋರಿಸಿದೆ !, ದಯಾಮಯ ಹೃದಯದ ಅನೇಕಾನೇಕ ಜನರು ಇರುವ ಅದ್ಭುತ ದೇಶ ಅದು. ಧನ್ಯವಾದಗಳು ಎಂದು ಬರೆದು, ಪ್ರಧಾನಿ ನರೇಂದ್ರ ಮೋದಿಯವರನ್ನೂ ಟ್ಯಾಗ್​ ಮಾಡಿದ್ದಾರೆ. ಇನ್ನು ಪೀಟರ್ಸನ್​​ ಮತ್ತು ಭಾರತದ ಸಂಬಂಧ ಬಹಳ ಹಿಂದಿನದು. ಅವರು ಕ್ರಿಕೆಟ್​ ಟೀಂನಲ್ಲಿದ್ದಾಗ ಆಗಾಗ ಭಾರತಕ್ಕೆ ಬರುತ್ತಿದ್ದರು. ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲೂ ಕೂಡ ಅವರು ಕೆಲವು ವರ್ಷಗಳ ಕಾಲ ಆಟವಾಡಿದ್ದಾರೆ.

ದಕ್ಷೀನ ಆಫ್ರಿಕಾದಲ್ಲಿ ಒಮಿಕ್ರಾನ್​ ಸೋಂಕು ಕಾಣಿಸಿಕೊಂಡ ಬಳಿಕ ಅದು ಹಲವು ದೇಶಗಳಲ್ಲಿ ಪತ್ತೆಯಾಗಿದೆ. ಹೀಗಾಗಿ ಭಾರತವೂ ಕೂಡ ಅಂತಾರಾಷ್ಟ್ರೀಯ ಪ್ರಯಾಣಿಕರಗೆ ಹೊಸ ಮಾರ್ಗಸೂಚಿಯನ್ನು ಮೊನ್ನೆ ಬಿಡುಗಡೆ ಮಾಡಿದೆ. ಯುಕೆ ಸೇರಿ ಹೈ ರಿಸ್ಕ್​ ದೇಶಗಳ ಸಾಲಿಗೆ ಸೇರುವ ಒಟ್ಟು 11 ದೇಶಗಳಿಂದ ಬರುವ ಪ್ರಯಾಣಿಕರು ಭಾರತ ತಲುಪುತ್ತಿದ್ದಂತೆ ಕಡ್ಡಾಯವಾಗಿ ತಪಾಸಣೆಗೆ ಒಳಗಾಗಬೇಕು. ಒಂದೊಮ್ಮೆ ನೆಗೆಟಿವ್​ ಬಂದರೂ 7 ದಿನಗಳ ಕಾಲ ಮನೆಯಲ್ಲಿ ಕ್ವಾರಂಟೈನ್​ ಆಗಬೇಕು. ಎಂಟನೇ ದಿನಕ್ಕೆ ಇನ್ನೊಂದು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದೆ. ಅದಾದ ನಂತರ ಭಾರತ ಆಫ್ರಿಕಾ ದೇಶಗಳಿಗೆ ನೆರವು ನೀಡುವ ಘೋಷಣೆ ಮಾಡಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ವಿದೇಶಾಂಗ ಇಲಾಖೆ, ಇದೀಗ ಕೊವಿಡ್​ 19 ಹೊಸ ತಳಿ ಒಮಿಕ್ರಾನ್​ ಕಳವಳ ಮೂಡಿಸಿದೆ. ಈ ರೂಪಾಂತರ ತಳಿ ಬಾಧಿತ ದೇಶಗಳಿಗೆ ಅದರಲ್ಲೂ ಆಫ್ರಿಕಾದ ದೇಶಗಳಿಗೆ ಅಗತ್ಯ ನೆರವು ನೀಡಲು ನಾವು ಬದ್ಧರಾಗಿದ್ದೇವೆ. ಮೇಡ್​ ಇನ್​ ಇಂಡಿಯಾ ಲಸಿಕೆಗಳು, ಟೆಸ್ಟ್​ ಕಿಟ್​ಗಳು, ಪಿಪಿಇ ಕಿಟ್​ಗಳು, ಔಷಧಿಗಳು ಸೇರಿ ಏನೇನು ಅಗತ್ಯವಿದೆಯೋ ಅವುಗಳನ್ನು ಕಳಿಸಲು ಎಲ್ಲ ಸಿದ್ಧತೆಗಳೂ ನಡೆದಿವೆ ಎಂದು ಹೇಳಿದೆ.

ಕೊವಿಡ್​ 19 ಶುರುವಾದಾಗಿನಿಂದಲೂ ಭಾರತ ಒಗ್ಗಟ್ಟಿನ ಮಂತ್ರವನ್ನು ಪಠಿಸುತ್ತಿದೆ ಮತ್ತು ಅದಕ್ಕೆ ತಕ್ಕನಾಗಿ ನಡೆದುಕೊಂಡಿದೆ. ಕೊವಿಡ್​ 19 ವಿರುದ್ಧ ಲಸಿಕೆ ಉತ್ಪಾದನೆಯಾಗಿದ್ದು ಭಾರತದಲ್ಲೇ ಮೊದಲು. ಆದರೆ ಭಾರತ ಕೇವಲ ತಮ್ಮಲ್ಲಿನ ಪ್ರಜೆಗಳಿಗೆ ಮಾತ್ರ ನೀಡದೆ ಉಳಿದ ಹಲವು ದೇಶಗಳಿಗೆ ಕೊವಿಶೀಲ್ಡ್​, ಕೊವ್ಯಾಕ್ಸಿನ್​ ಲಸಿಕೆಗಳನ್ನು ರಫ್ತು ಮಾಡಿದೆ. ಬಡ ರಾಷ್ಟ್ರಗಳ ಸಹಾಯಕ್ಕೆ ನಿಂತಿದೆ. ಆಫ್ರಿಕಾದ ಒಟ್ಟು 41 ರಾಷ್ಟ್ರಗಳಿಗೆ ಈಗಾಗಲೇ 25 ಮಿಲಿಯನ್​ ಡೋಸ್​ಗಳಷ್ಟು ಲಸಿಕೆಯನ್ನು ಭಾರತ ಪೂರೈಕೆ ಮಾಡಿದೆ. ಉಳಿದ 16 ದೇಶಗಳಿಗೆ 1 ಮಿಲಿಯನ್​ ಡೋಸ್​ ನೀಡಿದೆ. ಹಾಗೇ, ಕೊವ್ಯಾಕ್ಸ್​ ವ್ಯವಸ್ಥೆಯಡಿ 33 ದೇಶಗಳಿಗೆ 16 ಮಿಲಿಯನ್ ಡೋಸ್​ ಕೊರೊನಾ ಲಸಿಕೆ ಪೂರೈಕೆ ಮಾಡಿದೆ.  ಈಗ ಹೊಸ ತಳಿಯ ವಿರುದ್ಧವೂ ಹೋರಾಟಕ್ಕೆ ಸಹಕಾರ ನೀಡುವುದಾಗಿ ಭಾರತ ಘೋಷಿಸಿದೆ.

ಇದನ್ನೂ ಓದಿ:  Gold Price Today: ಇಂದು ಚಿನ್ನದ ದರದಲ್ಲಿ ಕೊಂಚ ಇಳಿಕೆ; ಬೆಳ್ಳಿ ಬೆಲೆ ಏರಿಕೆ

Published On - 8:04 am, Tue, 30 November 21