ಪಶ್ಚಿಮ ಬಂಗಾಲ ಚುನಾವಣೆ: ಬಿಜೆಪಿ- ಟಿಎಂಸಿ ಕಾರ್ಯಕರ್ತರ ಹೊಡೆದಾಟ; ಒಟ್ಟು ಐವರು ಸಾವು

| Updated By: Srinivas Mata

Updated on: Apr 10, 2021 | 1:53 PM

West Bengal assembly election violence: ಪಶ್ಚಿಮ ಬಂಗಾಲದಲ್ಲಿ ನಡೆಯುತ್ತಿರುವ ನಾಲ್ಕನೇ ಹಂತದ ಮತದಾನದ ವೇಳೆ ಕೂಚ್ ಬೆಹರ್ ಜಿಲ್ಲೆಯಲ್ಲಿ ಶನಿವಾರ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟದಲ್ಲಿ 4 ಮಂದಿ ಗುಂಡಿಗೆ ಬಲಿ

ಪಶ್ಚಿಮ ಬಂಗಾಲ ಚುನಾವಣೆ: ಬಿಜೆಪಿ- ಟಿಎಂಸಿ ಕಾರ್ಯಕರ್ತರ ಹೊಡೆದಾಟ; ಒಟ್ಟು ಐವರು ಸಾವು
ಪಶ್ಚಿಮ ಬಂಗಾಳ ವಿಧಾನಸಭೆ ಮತದಾನದ ನೋಟ
Follow us on

ಕೋಲ್ಕತ್ತಾ: ಪಶ್ಚಿಮ ಬಂಗಾಲದಲ್ಲಿ ನಡೆಯುತ್ತಿರುವ ನಾಲ್ಕನೇ ಹಂತದ ಮತದಾನದ ವೇಳೆ ಒಟ್ಟು ಐವರು ಮೃತಪಟ್ಟಿದ್ದಾರೆ. ಕೂಚ್ ಬೆಹರ್ ಜಿಲ್ಲೆಯಲ್ಲಿ ಶನಿವಾರ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ನಡೆದ ಹೊಡೆದಾಟದಲ್ಲಿ ನಾಲ್ವರು ಗುಂಡಿಗೆ ಬಲಿಯಾಗಿದ್ದಾರೆ. ಇನ್ನು ಮತದಾನ ಬೂತ್ ಹೊರಗೆ ಮೊದಲ ಬಾರಿಯ ಮತದಾರ ಗುಂಡಿಗೆ ಬಲಿಯಾಗಿದ್ದಾರೆ ಎಂದು ವರದಿ ಆಗಿದೆ. ಒಟ್ಟು 44 ಕ್ಷೇತ್ರಗಳಿಗೆ ಕೋವಿಡ್- 19 ಪ್ರೊಟೊಕಾಲ್ ಪಾಲನೆಯೊಂದಿಗೆ ಮತದಾನ ನಡೆಯುತ್ತಿದ್ದು, ಅದರಲ್ಲಿ ಹೌರಾದ 9, ದಕ್ಷಿಣ ಪರಗಣದ 11, ಅಲಿಪುರ್​ದುರ್ 5, ಕೂಚ್​​ಬೆಹರ್​ನ 9 ಮತ್ತು ಹೂಗ್ಲಿಯ 10 ಸ್ಥಾನಗಳಲ್ಲಿ ಮತದಾನ ನಡೆಯುತ್ತಿದೆ.

ಪಥನಟುಲಿಯಲ್ಲಿ ಬೂತ್ ಸಂಖ್ಯೆ 85ರ ಹೊರಗೆ ದುಷ್ಕರ್ಮಿಗಳು 18 ವರ್ಷದ ಮತದಾರ ಆನಂದ ಬರ್ಮನ್ ಎಂಬುವರನ್ನು ಗುಂಡಿಟ್ಟು ಹತ್ಯೆ ಮಾಡಿರುವುದಾಗಿ ವರದಿ ಆಗಿದೆ. ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಹೊಡೆದಾಟ ಏರ್ಪಟ್ಟ ನಂತರ ಈ ಘಟನೆ ಸಂಭವಿಸಿದೆ. ಇನ್ನು ಈ ಕೃತ್ಯಕ್ಕೆ ಯಾರು ಕಾರಣ ಎಂಬುದನ್ನು ಪತ್ತೆ ಹಚ್ಚಬೇಕಿದೆ. ದುಷ್ಕರ್ಮಿಗಳು ತಪ್ಪಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆಯಿಂದ ಸ್ಥಳದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ. ಬಾಂಬ್​ಗಳನ್ನು ಎಸೆಯಲಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರುವುದಕ್ಕೆ ಕೇಂದ್ರ ಪಡೆಗಳನ್ನು ಬಳಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತಪಟ್ಟ ಬರ್ಮನ್ ತಮ್ಮ ಪಕ್ಷಕ್ಕೆ ಸೇರಿದ ವ್ಯಕ್ತಿ ಎಂದು ಬಿಜೆಪಿ ಹಾಗೂ ಟಿಎಂಸಿ ಎರಡೂ ಹೇಳಿಕೊಂಡಿವೆ. ಆದರೆ ಆತನ ಕುಟುಂಬ ಸದಸ್ಯರು ಹೇಳುವಂತೆ, ಬರ್ಮನ್ ಕೇಸರಿ ಪಕ್ಷದ ಬೆಂಬಲಿಗ. “ಕೂಚ್​ಬೆಹರ್​ನ ಸೀತಾಲಕುಚಿಯಲ್ಲಿ ಮತದಾನದ ಬೂತ್ ಹೊರಗೆ ವ್ಯಕ್ತಿಯೊಬ್ಬರಿಗೆ ಗುಂಡಿಟ್ಟು ಕೊಲ್ಲಲಾಗಿದೆ ಎಂಬ ಮಾಹಿತಿ ನಮಗೆ ಬಂದಿದೆ. ಈ ಬಗ್ಗೆ ಮೈಕ್ರೋ ಅಬ್ಸರ್ವರ್​ರಿಂದ ವರದಿ ಕೇಳಿದ್ದೇವೆ,” ಎಂದು ಚುನಾವಣೆ ಆಯೋಗದ ಅಧಿಕಾರಿ ಹೇಳಿದ್ದಾರೆ. ಇನ್ನು ಕೂಚ್​ಬೆಹರ್​ನ ನಟಬರಿ, ಸೀತಾಲಕುಚಿ, ತೂಫಾನ್​ಗಂಜ್, ಮಾತಾಭಂಗ ಮತ್ತು ದಿನ್ಹಾತದಲ್ಲಿ ತಮ್ಮ ಪಕ್ಷದ ಏಜೆಂಟರಿಗೆ ಬೂತ್ ಪ್ರವೇಶಿಸಲು ಬಿಜೆಪಿ ಅವಕಾಶ ನೀಡುತ್ತಿಲ್ಲ ಎಂದು ಟಿಎಂಸಿ ಆರೋಪಿಸಿದೆ. ಆದರೆ ಇದನ್ನು ಬಿಜೆಪಿ ನಿರಾಕರಿಸಿದೆ.

ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿರುವ ಪ್ರಕಾರ, ಪ್ರಾಥಮಿಕ ವರದಿಯಂತೆ, ಹಳ್ಳಿಯೊಂದರಲ್ಲಿ ಸಿಐಎಸ್​ಎಫ್ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿದಾಗ ನಾಲ್ವರು ಮೃತಪಟ್ಟಿದ್ದಾರೆ. ಸ್ಥಳೀಯರು ಸಿಐಎಸ್​ಎಫ್ ಅಧಿಕಾರಿಗಳಿಗೆ ಘೇರಾವ್ ಹಾಕಿ, ರೈಫಲ್ ಕಸಿದುಕೊಳ್ಳುವುದಕ್ಕೆ ಯತ್ನಿಸಿದಾಗ ಕೇಂದ್ರ ಪಡೆಗಳು ಗಾಳಿಯಲ್ಲಿ ಗುಂಡು ಹಾರಿಸಿವೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎನ್ನಲಾಗುತ್ತಿದೆ. ಏಕೆಂದರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಇನ್ನೂ ನಾಲ್ವರ ಸ್ಥಿತಿ ಗಂಭೀರವಾಗಿದೆ. ಸುಮಾರು 400 ಜನರಿದ್ದ ಗುಂಪು ಕೇಂದ್ರ ಪಡೆಗಳ ಮೇಲೆ ದಾಳಿ ನಡೆಸಿವೆ.

ಇನ್ನು ಹೂಗ್ಲಿ ಜಿಲ್ಲೆಯಲ್ಲಿ ಸಂಸದೆ ಲಾಕೆಟ್ ಚಟರ್ಜಿ ಕಾರಿನ ಮೇಲೆ ದಾಳಿ ನಡೆದಿದ್ದು, ಕಾರಿನ ಗಾಜು ಪುಡಿಪುಡಿಯಾಗಿದೆ. ನನ್ನ ಮೇಲೆ ಹಲ್ಲೆಯಾಗಿದೆ, ಗಾಯಗೊಂಡಿದ್ದೇನೆ ಎಂದ ಲಾಕೆಟ್ ಚಟರ್ಜಿ ಹೇಳಿದ್ದಾರೆ. ಹಿಂಸಾಚಾರ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಆಯೋಗಕ್ಕೆ ಆಗ್ರಹ ಮಾಡಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ 2ನೇ ನೋಟಿಸ್ ನೀಡಿದ ಚುನಾವಣಾ ಆಯೋಗ

(During West Bengal assembly elections 4th phase 4 people shot dead after a clash broke out between BJP and TMC workers on Saturday.)

Published On - 11:41 am, Sat, 10 April 21