ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಪಶ್ಚಿಮ ಬಂಗಾಳದ ಮತದಾರರನ್ನು ಓಲೈಸಲು ಮೋದಿ ಹೀಗೆ ಮಾಡುತ್ತಿದ್ದಾರೆ ಎಂದು ದೀದಿ ಇಂದು (ಮಾರ್ಚ್ 27) ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು ಆರಂಭವಾಗಿದೆ. ಎಂಟು ಹಂತದಲ್ಲಿ ಮತದಾನ ನಡೆಯಲಿದೆ. ಇಲ್ಲಿ ಚುನಾವಣೆ ನಡೆಯುತ್ತಿದ್ದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಾಂಗ್ಲಾದೇಶಕ್ಕೆ ತೆರಳಿ ಬಂಗಾಳದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ. ಖರಗ್ಪುರ್ನಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಬ್ಯಾನರ್ಜಿ ಈ ಹೇಳಿಕೆಯನ್ನು ನೀಡಿದ್ದಾರೆ.
2019ರ ಲೋಕಸಭಾ ಚುನಾವಣೆಯ ವೇಳೆ, ಬಾಂಗ್ಲಾದೇಶಿ ನಟ ನಮ್ಮ ಪ್ರಚಾರದಲ್ಲಿ ಪಾಲ್ಗೊಂಡಾಗ, ಬಿಜೆಪಿ ಬಾಂಗ್ಲಾ ಜೊತೆ ಮಾತನಾಡಿ ಅವರ ವೀಸಾವನ್ನೇ ರದ್ದುಗೊಳಿಸಿದ್ದರು. ಈಗ ಇಲ್ಲಿ ಚುನಾವಣೆ ನಡೆಯುವ ವೇಳೆ ಮೋದಿ ಬಾಂಗ್ಲಾದೇಶಕ್ಕೆ ತೆರಳಿ ಒಂದು ವಲಯದ ಜನರ ಮತಯಾಚನೆ ಮಾಡುತ್ತಿದ್ದಾರೆ. ಮೋದಿ ವೀಸಾ ಯಾಕೆ ರದ್ದಾಗಬಾರದು. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಮಮತಾ ಬ್ಯಾನರ್ಜಿ ಮೋದಿ ವಿರೋಧಿಸಿ ಮಾತಾಡಿದ್ದಾರೆ.
ಹಿಂದೂ ಪವಾಡಪುರುಷ ಹಾಗೂ ಮಟುವಾ ಸಮುದಾಯದ ಆಧ್ಯಾತ್ಮ ಗುರು ಹರಿಚಂದ್ ಠಾಕುರ್ ಅವರ ಜನ್ಮಸ್ಥಳವಾದ ಬಾಂಗ್ಲಾದೇಶದ ಒರಕಂಡಿ ದೇವಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮುಂಜಾನೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಘಟನೆಯನ್ನು ಉಲ್ಲೇಖಿಸಿ ಮಮತಾ ಬ್ಯಾನರ್ಜಿ ಮಾತನಾಡಿದ್ದಾರೆ. ಮಟುವಾ ಸಮುದಾಯದ ಜನರು ಪಶ್ಚಿಮ ಬಂಗಾಳದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಚುನಾವಣಾ ವಿಚಾರದಲ್ಲೂ ಅವರು ನಿರ್ಣಾಯಕ ಪಾತ್ರ ಕೈಗೊಳ್ಳುತ್ತಾರೆ. ಮೋದಿ ದೇವಾಲಯಕ್ಕೆ ಭೇಟಿ ನೀಡಿರುವುದನ್ನು ರಾಜಕೀಯ ಆಯಾಮದಲ್ಲಿ ಹಲವರು ವಿಶ್ಲೇಷಿಸಿದ್ದಾರೆ.
ಮಮತಾ ಬ್ಯಾನರ್ಜಿ ಬಾಂಗ್ಲಾದೇಶದ ಜನರನ್ನು ಇಲ್ಲಿಗೆ ಕರೆತರುತ್ತಾರೆ. ಒಳನುಸುಳುವಿಕೆ ಮಾಡುತ್ತಾರೆ ಎಂದು ಬಿಜೆಪಿಗರು ಹೇಳುತ್ತಾರೆ. ಆದರೆ ಮತ್ತೊಂದೆಡೆ, ಮೋದಿ ಅವರೇ ವೋಟ್ ಮಾರ್ಕೆಟಿಂಗ್ಗಾಗಿ ಬಾಂಗ್ಲಾದೇಶಕ್ಕೆ ಹೋಗುತ್ತಾರೆ ಎಂದು ಮಮತಾ ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು ಎಂಟು ಹಂತಗಳಲ್ಲಿ ಮತದಾನ ನಡೆಯಲಿದೆ. ಶನಿವಾರ (ಮಾರ್ಚ್ 27) ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮೇ 2ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಇದನ್ನೂ ಓದಿ: West Bengal Election 2021 Opinion Poll LIVE: ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಮುನ್ನಡೆ; ಮತದಾರರ ಮನದಾಳ
Published On - 10:35 pm, Sat, 27 March 21