ಹೆಚ್ಚುತ್ತಿರುವ ಸೋಂಕಿನ ಪ್ರಮಾಣವನ್ನು ತಗ್ಗಿಸಲು ಐದು ಹಂತದ ಕಾರ್ಯಯೋಜನೆ: ರಾಜೇಷ್ ಭೂಷಣ್

45 ಕ್ಕಿಂತ ಹೆಚ್ಚಿನ ಪ್ರಾಯದವರೇ ಶೇಕಡಾ 90 ರಷ್ಟು ಸೋಂಕಿತರಾಗಿದ್ದು, ಬಲಿಯಾಗುತ್ತಿರುವವರು ಸಹ ಅದೇ ವಯೋಮಾನದವರಾಗಿದ್ದಾರೆ ಎಂದು ಭೂಷಣ್ ಅವರು ಸಭೆಯಲ್ಲಿ ಹೇಳಿದರು.

ಹೆಚ್ಚುತ್ತಿರುವ ಸೋಂಕಿನ ಪ್ರಮಾಣವನ್ನು ತಗ್ಗಿಸಲು ಐದು ಹಂತದ ಕಾರ್ಯಯೋಜನೆ: ರಾಜೇಷ್ ಭೂಷಣ್
ರಾಜೇಷ ಭೂಷಣ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Mar 27, 2021 | 11:30 PM

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ತೀವ್ರ ಸ್ವರೂಪದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ 12 ರಾಜ್ಯಗಳ ಅಧಿಕಾರಿಗಳೊಂದಿಗೆ ಶನಿವಾರ ಸಭೆಯೊಂದನ್ನು ನಡೆಸಿ ತೆಗೆದುಕೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಿ ಸೋಂಕನ್ನು ಹತೋಟಿಗೆ ತರಲು 5 ಹಂತದ ನಿಯಂತ್ರಣಾ ವ್ಯೂಹದ ಬಗ್ಗೆ ವಿವರಿಸಿದರು. ಕಳೆದ ಮೇ ನಂತರ ಇತ್ತೀಚಿನ ವಾರಗಳಲ್ಲಿ ಸೋಂಕಿತರು ಮತ್ತು ಮರಣಗಳ ಸಂಖ್ಯೆ ಹೆಚ್ಚುತ್ತಿದ್ದು ಈ ರಾಜ್ಯಗಳ 46 ಜಿಲ್ಲೆಗಳಲ್ಲಿ ದೇಶದ ಪ್ರಕರಣಗಳ ಪೈಕಿ ಶೇಕಡಾ 71ರಷ್ಟು ಮತ್ತು ಮರಣ ಪ್ರಮಾಣದಲ್ಲಿ ಶೇಕಡಾ 69ರಷ್ಟು ವರದಿಯಾಗುತ್ತಿವೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳಿಗೆ ತಿಳಿಸಲಾಯಿತು, ಎಂದು ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಿವರಿಸಲಾಗಿದೆ.

45 ಕ್ಕಿಂತ ಹೆಚ್ಚಿನ ಪ್ರಾಯದವರೇ ಶೇಕಡಾ 90 ರಷ್ಟು ಸೋಂಕಿತರಾಗಿದ್ದು, ಬಲಿಯಾಗುತ್ತಿರುವವರು ಸಹ ಅದೇ ವಯೋಮಾನದವರಾಗಿದ್ದಾರೆ ಎಂದು ಭೂಷಣ್ ಅವರು ಸಭೆಯಲ್ಲಿ ಹೇಳಿದರು. ಸೋಂಕಿನ ಬಗ್ಗೆ ಶೇಕಡಾ 90 ಜನರಲ್ಲಿ ಅರಿವಿದ್ದರೂ ಕೇವಲ ಶೇಕಡಾ 44ರಷ್ಟು ಜನ ಮಾತ್ರ ಮಾಸ್ಕ್​ ಬಳಸುತ್ತಿದ್ದಾರೆ ಅಂತ ಅವರು ಹೇಳಿದರು.

ಸೋಂಕಿತನೊಬ್ಬ ಕ್ವಾರಂಟೈನ್​ಗೆ ಒಳಗಾಗದಿದ್ದರೆ 30 ದಿನಗಳ ಅವಧಿಯಲ್ಲಿ ಸೋಂಕನ್ನು ಸರಾಸರಿ 406 ಜನಕ್ಕೆ ಹರಡಬಲ್ಲ. ಆದರೆ, ಅವನು ಹೊರಗಡೆ ತಿರುಗುವುದನ್ನು ನಿಲ್ಲಿಸಿದರೆ ಅವನಿಂದಾಗಬಹುದಾದ ಸೋಂಕಿನ ಪ್ರಮಾಣವನ್ನು ಶೇಕಡಾ 50 ರಷ್ಟು ಕಡಿಮೆ ಮಾಡಬಹುದೆಂದ ಆಧಿಕಾರಿಗಳಿಗೆ ಸಭೆಯಲ್ಲಿ ತಿಳಿಸಿಲಾಯಿತು.

ಜನರ ಅಜಾಗೂರಕತೆ ಮತ್ತು ಉಡಾಫೆ ಧೋರಣೆಯೇ ಎರಡನೇ ಅಲೆ ಸೃಷ್ಟಿಗೆ ಕಾರಣವಾಗಿದೆಯೆಂದು ಭೂಷಣ್ ಸಭೆಯಲ್ಲಿ ಹೇಳಿದರು.

Covid Cases surge in India

ಕೊವಿಡ್​ ಸೋಂಕಿನ ಪ್ರಕರಣಗಳು ಭಾರತದಲ್ಲಿ ಹೆಚ್ಚುತ್ತಿವೆ

ಸೋಂಕಿನ ಪ್ರಮಾಣವನ್ನು ತಗ್ಗಿಸಲು 5 ಹಂತದ ಕಾರ್ಯಯೋಜನೆಯನ್ನು ಅವರು 12 ರಾಜ್ಯಗಳ ಅಧಿಕಾರಿಗಳಿಗೆ ವಿವರಿಸಿದರು. ಅವುಗಳಲ್ಲಿ ಮೊದಲನೆಯದ್ದು, ಟೆಸ್ಟಿಂಗ್ ಪ್ರಕ್ರಿಯೆಯನ್ನು ಹೆಚ್ಚಿಸುವುದು, ಎರಡನೇಯದ್ದು ಸೋಂಕಿತರನ್ನು ಸಮುದಾಯಗಳಿಂದ ಬೇರ್ಪಡಿಸುವುದು ಮತ್ತು ಅವರ ಸಂಪರ್ಕದಲ್ಲಿದ್ದವರನ್ನು ಪತ್ತೆಮಾಡುವುದು. ಸೋಂಕಿತನ ಸಂಪರ್ಕದಲ್ಲಿರಬಹುದಾದ ಕನಿಷ್ಠ 30 ಜನರನ್ನು ಪತ್ತೆ ಮಾಡಬೇಕು ಅಂತ ಭೂಷಣ್ ಹೇಳಿದರು.

ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್​-19 ಗೆ ಸಂಬಂಧಿಸಿದ ಮೂಲ ಸೌಕರ್ಯಗಳನ್ನು ಹೆಚ್ಚಿಸುವುದು ಮತ್ತು ಆರೋಗ್ಯ ಕಾರ್ಯಕರ್ತರಲ್ಲಿ ಮನೆ ಮಾಡಿರಬಹುದಾದ ಉದಾಸೀನತೆ ಮತ್ತು ದಣಿವನ್ನು ನಿವಾರಿಸಿ ಅವರನ್ನು ಅಣಿಗೊಳಿಸುವುದು. ಮರಣ ಪ್ರಮಾಣವನ್ನು ತಗ್ಗಿಸಲು ಸಭೆಯಲ್ಲಿ ಚರ್ಚಿಸಿದ ಕಾರ್ಯ ಯೋಜನೆಯನ್ನು ಅನೂಚಾನಾಗಿ ಜಾರಿಗೆ ತರುವುದು.

ನಾಲ್ಕನೆಯದಾಗಿ, ಮಾರ್ಕೆಟ್​ಗಳಂಥ ಜನನಿಬಿಡ ಪ್ರದೇಶಗಳಲ್ಲಿ ಕೊವಿಡ್​ ನಿಯಂತ್ರಣಕ್ಕೆ ಅನುಗುಣವಾದ ವರ್ತನೆಯತ್ತ ಹೆಚ್ಚಿನ ಗಮನ ನೀಡುವುದು ಮತ್ತು ಕೊನೆಯದಾಗಿ ಲಸಿಕಾ ಅಭಿಯಾನದ ಪ್ರಯೋಜನ ಟಾರ್ಗೆಟ್ ಮಾಡಲ್ಲಪಟ್ಟಿರುವ ವಯೋಮಾನದವರಿಗೆ ಸಿಗುವಂತೆ ನೋಡಿಕೊಳ್ಳಬೇಕು. ಜಾಸ್ತಿ ಪ್ರಕರಣಗಳು ವರದಿಯಾಗಿರುವ ಜಿಲ್ಲೆಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಚುರುಕುಗೊಳಿಸಬೇಕು. ಲಸಿಕೆ ಲಭ್ಯತೆಯ ಸಂಪೂರ್ಣ ಉಪಯೋಗ ಮಾಡಿಕೊಳ್ಳಬೇಕು ಮತ್ತು ಕೊರತೆ ಎದುರಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಒಂದಷ್ಟು ಸ್ಟಾಕನ್ನು ಉಳಿಸಿಕೊಂಡಿರಬೇಕು, ಎಂಬ ಐದು ಹಂತದ ಯೋಜನೆಯನ್ನು ಭೂಷಣ್ ವಿವರಿಸಿದರು.

ಇದನ್ನೂ ಓದಿ: Covid 19 Live Updates Karnataka: ಹೊರರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರಿಗೆ ಏಪ್ರಿಲ್ 1ರಿಂದ ಕೊರೊನಾ ನೆಗೆಟಿವ್ ಪತ್ರ ಕಡ್ಡಾಯ