ನಾಪತ್ತೆಯಾಗಿದ್ದ ಛತ್ತೀಸ್‌ಗಢದ ಪತ್ರಕರ್ತನ ಶವ ಟ್ಯಾಂಕ್‌ನಲ್ಲಿ ಪತ್ತೆ; ಕಾಂಗ್ರೆಸ್ ನಾಯಕನ ಕೈವಾಡದ ಶಂಕೆ
ರಸ್ತೆ ಹಗರಣದ ಬಗ್ಗೆ ವಿಶೇಷ ವರದಿ ಮಾಡಿದ್ದ ಛತ್ತೀಸ್‌ಗಢ ಪತ್ರಕರ್ತನ ಶವ ಪತ್ತೆಯಾಗಿದೆ. ಆತನ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ. ಈಗಾಗಲೇ ಛತ್ತೀಸ್‌ಗಢ ಸರ್ಕಾರದಿಂದ ಎಸ್‌ಐಟಿ ರಚನೆ ಮಾಡಲಾಗಿದ್ದು, ಪ್ರಮುಖ ಆರೋಪಿ ಕಾಂಗ್ರೆಸ್ ಮುಖಂಡ ಪರಾರಿಯಾಗಿದ್ದಾರೆ. ಸದ್ಯಕ್ಕೆ ಮೂವರನ್ನು ಬಂಧಿಸಲಾಗಿದೆ.
ನವದೆಹಲಿ: ಹೊಸದಾಗಿ ಕಾಂಕ್ರೀಟ್‌ನಿಂದ ಮುಚ್ಚಲಾಗಿದ್ದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಛತ್ತೀಸ್‌ಗಢದ ಪತ್ರಕರ್ತ ಮುಖೇಶ್ ಎಂಬುವವರ ಶವ ಪತ್ತೆಯಾಗಿದೆ. ಅವರು ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಹೀಗಾಗಿ, ಪೊಲೀಸರು ಹುಡುಕಾಟ ನಡೆಸಿದ್ದರು. ಛತ್ತೀಸ್‌ಗಢದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಈ ಹಿಂದೆ ನಾಪತ್ತೆಯಾಗಿದ್ದ ಪತ್ರಕರ್ತನ ಶವ ಪತ್ತೆಯಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಪತ್ರಕರ್ತ ಮುಖೇಶ್ ಚಂದ್ರಕರ್ ನಿಗೂಢ ಸಾವಿನ ತನಿಖೆಗೆ ಎಸ್‌ಐಟಿ ರಚನೆ ಮಾಡುವುದಾಗಿ ಛತ್ತೀಸ್‌ಗಢ ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ ಶನಿವಾರ ಘೋಷಿಸಿದ್ದಾರೆ. ಪ್ರಮುಖ ಆರೋಪಿ ಕಾಂಗ್ರೆಸ್ ಮುಖಂಡ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ.
ಮುಖೇಶ್ ಚಂದ್ರಕರ್ ಭೋಪಾಲ್‌ನಲ್ಲಿ ಎನ್‌ಡಿಟಿವಿ ವರದಿಗಾರರಾಗಿದ್ದರು. ಜನವರಿ 1ರಿಂದ ನಾಪತ್ತೆಯಾಗಿದ್ದ 31 ವರ್ಷದ ಮುಖೇಶ್ನ ಶವ ಶುಕ್ರವಾರ ಸಂಜೆ ಛತ್ತೀಸ್‌ಗಢದ ಬಿಜಾಪುರದ ಚಟ್ಟನ್‌ಪಾರಾ ಬಸ್ತಿಯ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಪತ್ತೆಯಾಗಿದೆ. ಸೆಪ್ಟಿಕ್ ಟ್ಯಾಂಕ್‌ನಲ್ಲಿ ಪತ್ತೆಯಾದ ಅವರ ದೇಹ ಊದಿಕೊಂಡಿತ್ತು. ತಲೆ ಮತ್ತು ಬೆನ್ನಿಗೆ ಅನೇಕ ಗಾಯಗಳಾಗಿದ್ದು, ಅವರ ಬಟ್ಟೆಯಿಂದ ಶವವನ್ನು ಗುರುತಿಸಲಾಗಿದೆ. ಮುಕೇಶ್ ಕೊನೆಯದಾಗಿ ಮೊಬೈಲ್ ಬಳಸಿದ ಸ್ಥಳದ ಆಧಾರದ ಮೇಲೆ ಹುಡುಕಾಟ ನಡೆಸಿದ ಪೊಲೀಸರು ಗುತ್ತಿಗೆದಾರ ಸುರೇಶ್ ಚಂದ್ರಕರ್ ಅವರ ಅಂಗಳವನ್ನು ತಲುಪಿದರು. ಅಲ್ಲಿ ಕಾಂಕ್ರೀಟ್‌ನಿಂದ ಮುಚ್ಚಲಾಗಿದ್ದ ಟ್ಯಾಂಕ್ ಅನ್ನು ಓಪನ್ ಮಾಡಿದಾಗ ಶವ ಪತ್ತೆಯಾಗಿದೆ.
ಇದನ್ನೂ ಓದಿ: ಸಕಾಲಕ್ಕೆ ಚಿಕಿತ್ಸೆ ಸಿಗದೇ ಮಗು, ಗರ್ಭಿಣಿ ಸಾವು: ಪತ್ನಿ ಸಾವಿನಿಂದ ಮನನೊಂದು ಪತಿ ಆತ್ಮಹತ್ಯೆಗೆ ಯತ್ನ
ಈಗಾಗಲೇ ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖೇಶ್ ಚಂದ್ರಕರ್ ಅವರು ಬಸ್ತಾರ್ ಜಂಕ್ಷನ್ ಎಂಬ ಯಶಸ್ವಿ ಯೂಟ್ಯೂಬ್ ಚಾನೆಲ್ ಅನ್ನು ಸಹ ನಡೆಸುತ್ತಿದ್ದರು, ಇದು 1.59 ಲಕ್ಷ ಚಂದಾದಾರರನ್ನು ಹೊಂದಿತ್ತು ಮತ್ತು ಬಸ್ತಾರ್ ಪ್ರದೇಶದ ಸಮಸ್ಯೆಗಳ ಮೇಲೆ ಅವರು ವರದಿ ಮಾಡುತ್ತಿದ್ದರು.
ನಿರ್ಭೀತ ವರದಿಗಾರಿಕೆಗೆ ಹೆಸರುವಾಸಿಯಾದ ಮುಖೇಶ್, ಏಪ್ರಿಲ್ 2021ರಲ್ಲಿ, ಮಾವೋವಾದಿಗಳಿಂದ ಅಪಹರಣಕ್ಕೊಳಗಾದ ಸಿಆರ್‌ಪಿಎಫ್ ಕೋಬ್ರಾ ಕಮಾಂಡೋ ರಾಕೇಶ್ವರ್ ಸಿಂಗ್ ಮನ್ಹಾಸ್‌ನನ್ನು ಬಿಡುಗಡೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಮುಖೇಶ್ ಜನವರಿ 1ರಂದು ಟಿ-ಶರ್ಟ್ ಮತ್ತು ಶಾರ್ಟ್ಸ್ ಧರಿಸಿ ತಮ್ಮ ಮನೆಯಿಂದ ಹೊರಟರು. ಸ್ವಲ್ಪ ಸಮಯದ ನಂತರ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಅವರು ಮನೆಗೆ ಬಾರದಿದ್ದಾಗ ಅವರ ಸಹೋದರ ಯುಕೇಶ್ ತನ್ನ ಅಣ್ಣನ ಸ್ನೇಹಿತರ ಮನೆಗಳಲ್ಲಿ ಹುಡುಕಲು ಪ್ರಾರಂಭಿಸಿದನು. ಎಲ್ಲೂ ಆತ ಪತ್ತೆಯಾಗದಿದ್ದಾಗ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಬೇರೆ ಹಾಡು ಹಾಕಲು ಹೇಳಿದ ಯುವಕನ ಕೊಲೆ
ಪತ್ರಕರ್ತ ಮುಖೇಶ್ ಶವ ಪತ್ತೆಯಾಗಿರುವುದು ಅವರ ಕುಟುಂಬ ಮತ್ತು ಸಮುದಾಯವನ್ನು ಕಂಗಾಲಾಗಿಸಿದೆ. ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಪತ್ರಕರ್ತನ ಸಾವಿಗೆ ಸಂತಾಪ ಸೂಚಿಸಿದ್ದಾರೆ ಮತ್ತು “ಅಪರಾಧಿಗಳನ್ನು ಬಿಡುವುದಿಲ್ಲ” ಎಂದು ಭರವಸೆ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ