ಕೋಲ್ಕತಾ, ಏಪ್ರಿಲ್ 19: ರಾಷ್ಟ್ರಮಟ್ಟದಲ್ಲಿ ಇಂಡಿಯಾ ಮೈತ್ರಿಕೂಟ ರಚನೆ ಆಗಲು ನಾನೇ ಕಾರಣ. ಇಂಡಿಯಾ (INDIA) ಎಂದು ಮೈತ್ರಿಕೂಟಕ್ಕೆ ಹೆಸರು ಸೂಚಿಸಿದ್ದೇ ನಾನು. ಆದರೆ ಪಶ್ಚಿಮ ಬಂಗಾಳದಲ್ಲಿ ಸಿಪಿಐಎಂ ಮತ್ತು ಕಾಂಗ್ರೆಸ್ ಪಕ್ಷಗಳು ಬಿಜೆಪಿ ಪರ ಕೆಲಸ ಮಾಡುತ್ತಿವೆ. ಬಂಗಾಳದಲ್ಲಿ ಯಾರೂ ಕೂಡ ಈ ಪಕ್ಷಗಳಿಗೆ ಮತ ಹಾಕಬೇಡಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಕರೆ ನೀಡಿರುವ ಘಟನೆ ವರದಿಯಾಗಿದೆ. ಮುರ್ಷಿದಾಬಾದ್ನಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಭಾಷಣ ಮಾಡುವ ವೇಳೆ ಮಮತಾ ಬ್ಯಾನರ್ಜಿ ಅವರು ಇಂಡಿಯಾ ಮೈತ್ರಿಕೂಟದಲ್ಲಿನ ಒಡಕನ್ನು ಜಾಹೀರುಗೊಳಿಸಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ನಾನೇ ಇಂಡಿಯಾ ಮೈತ್ರಿಕೂಟ ಮಾಡಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಯಾವ ಇಂಡಿಯಾ ಕೂಟ ಇಲ್ಲ. ನೀವು ಬಿಜೆಪಿಯನ್ನು ಸೋಲಿಸಬೇಕೆಂದಿದ್ದರೆ ಕಾಂಗ್ರೆಸ್ ಮತ್ತು ಸಿಪಿಐಎಂ ಪಕ್ಷಕ್ಕೆ ಮತ ಹಾಕಬೇಡಿ. ಈ ಎರಡು ಪಕ್ಷಗಳು ಬಿಜೆಪಿ ಪರ ಕೆಲಸ ಮಾಡುತ್ತಿವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ಪರ ಹಾಡು ಬರೆದಿದಕ್ಕೆ ಮುಸ್ಲಿಂ ಯುವಕರಿಂದ ಹಲ್ಲೆ ಆರೋಪ: ದೂರು ದಾಖಲು
ಮುರ್ಶಿದಾಬಾದ್ ಜಿಲ್ಲೆಯಲ್ಲಿ ರಾಮನವಮಿ ದಿನದಂದು ಸಂಭವಿಸಿದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ ದೀದಿ, ಇದು ಪೂರ್ವಯೋಜಿತ ಕೃತ್ಯವಾಗಿದೆ. ಬಿಜೆಪಿ ಉದ್ದೇಶಪೂರ್ವಕವಾಗಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿತು ಎಂದು ಆರೋಪಿಸಿದ್ದಾರೆ.
ರಾಮನವಮಿ ಆಚರಣೆ ವೇಳೆ ಮುರ್ಶಿದಾಬಾದ್ನಲ್ಲಿ ಹಿಂದೂಗಳನ್ನು ರಕ್ಷಿಸಲು ಮುಖ್ಯಮಂತ್ರಿ ವಿಫಲರಾಗಿದ್ದಾರೆ. ಇದರ ಜವಾಬ್ದಾರಿ ಅವರು ಹೊರಬೇಕು. ಅವರದ್ದು ಹಿಂದೂ ವಿರೋಧಿ ಸರ್ಕಾರ ಎಂದು ಬಿಜೆಪಿ ಆರೋಪಿಸುತ್ತಿದೆ.
ಇದನ್ನೂ ಓದಿ: Lok Sabha Polls: ನಾಗಾಲ್ಯಾಂಡ್ನ ಆರು ಜಿಲ್ಲೆಗಳಲ್ಲಿ ಮತದಾನ ಬಹಿಷ್ಕಾರ ಬಹುತೇಕ ಯಶಸ್ವಿ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಈಗ ಟಿಎಂಸಿಗೆ ಪರ್ಯಾಯ ಶಕ್ತಿಯಾಗಿ ಬೆಳೆದಿದೆ. ಒಂದು ಕಾಲದಲ್ಲಿ ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷದ ಪೂರ್ಣ ಪ್ರಾಬಲ್ಯ ಇದ್ದ ಈ ರಾಜ್ಯ ಕಳೆದ ಎರಡು ದಶಕದಿಂದ ಟಿಎಂಸಿಮಯವಾಗಿದೆ. ಪ್ರಮುಖ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಈಗ ನಾಲ್ಕನೇ ಸ್ಥಾನಕ್ಕೆ ಸರ್ಕಸ್ ನಡೆಸುವಂತಾಗಿದೆ. ಒಂದು ಕಾಲದಲ್ಲಿ ಹೇಳಹೆಸರಿಲ್ಲದಂತಿದ್ದ ಬಿಜೆಪಿ ಪಕ್ಷ ಈಗ ಟಿಎಂಸಿಗೆ ಪರ್ಯಾಯವಾಗುವ ನಿಟ್ಟಿನಲ್ಲಿ ಬೆಳೆಯುತ್ತಿದೆ.
ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳ ವಿರುದ್ಧವೇ ಹೋರಾಡುತ್ತ ಅಧಿಕಾರಕ್ಕೆ ಬಂದಿದ್ದು ಟಿಎಂಸಿ. ಈಗ ಈ ಮೂರು ಪಕ್ಷಗಳೂ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವುದು ಕುತೂಹಲ. ಹಾಗೆಯೇ, ಕೇರಳದಲ್ಲಿ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಹಾವು ಮುಂಗೂಸಿ ಇದ್ದಂತೆ. ಆದರೂ ಇವು ಇಂಡಿಯಾ ಮೈತ್ರಿಕೂಟದ ಭಾಗವಾಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ