ಪಶ್ಚಿಮ ಬಂಗಾಳದಲ್ಲಿ ಕೊವಿಡ್ ಪ್ರಕರಣ ಏರಿಕೆ; ಸಾರ್ವಜನಿಕ ರ‍್ಯಾಲಿಗಳನ್ನು ರದ್ದು ಮಾಡಿದ ರಾಹುಲ್ ಗಾಂಧಿ

West Bengal Elections 2021: ಪ್ರಸ್ತುತ ಪರಿಸ್ಥಿತಿಯಲ್ಲಿ ಬೃಹತ್ ರ‍್ಯಾಲಿಗಳನ್ನು ಆಯೋಜಿಸಿದಾಗ ಉಂಟಾಗುವ ಪರಿಣಾಮದ ಬಗ್ಗೆ ಎಲ್ಲ ರಾಜಕೀಯ ನಾಯಕರು ಗಂಭೀರವಾಗಿ ಚಿಂತಿಸಬೇಕು ಎಂದು ನಾನು ಸಲಹೆ ನೀಡುತ್ತಿದ್ದೇನೆ ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟ್​ನಲ್ಲಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕೊವಿಡ್ ಪ್ರಕರಣ ಏರಿಕೆ; ಸಾರ್ವಜನಿಕ ರ‍್ಯಾಲಿಗಳನ್ನು ರದ್ದು ಮಾಡಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಕೊಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಕೊವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ಎಲ್ಲ ಸಾರ್ವಜನಿಕ ರ‍್ಯಾಲಿಗಳನ್ನು ರದ್ದು ಮಾಡುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಟ್ವೀಟ್ ಮಾಡಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಬೃಹತ್ ರ‍್ಯಾಲಿಗಳನ್ನು ಆಯೋಜಿಸಿದಾಗ ಉಂಟಾಗುವ ಪರಿಣಾಮದ ಬಗ್ಗೆ ಎಲ್ಲ ರಾಜಕೀಯ ನಾಯಕರು ಗಂಭೀರವಾಗಿ ಚಿಂತಿಸಬೇಕು ಎಂದು ನಾನು ಸಲಹೆ ನೀಡುತ್ತಿದ್ದೇನೆ ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟ್​ನಲ್ಲಿ ಹೇಳಿದ್ದಾರೆ.

8 ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ಕೊವಿಡ್ ಪ್ರಕರಣ ದಿಢೀರನೆ ಏರಿಕೆ ಕಂಡಿದೆ. ಮೊದಲ 5 ಹಂತದ ಚುನಾವಣೆ ವೇಳೆ ಬಿಜೆಪಿ, ಟಿಎಂಸಿ ಸೇರಿದಂತೆ ಎಲ್ಲ ಪಕ್ಷಗಳು ಆರೋಗ್ಯ ಸಚಿವಾಲಯದ ಆದೇಶಿಸಿದ್ದ ಕೊವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಚುನಾವಣಾ ಪ್ರಚಾರ ನಡೆಸಿವೆ. ರಾಜಕೀಯ ಪಕ್ಷಗಳು ಬೃಹತ್ ರ‍್ಯಾಲಿ ಮತ್ತು ರೋಡ್ ಶೋಗಳನ್ನು ಆಯೋಜಿಸಿ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿವೆ.

ಆದಾಗ್ಯೂ, ದೇಶದಲ್ಲಿ ಕೊವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನುಳಿದ ಹಂತದ ಚುನಾವಣೆಗಾಗಿ ನಡೆಸುವ ಪ್ರಚಾರ ಕಾರ್ಯಕ್ರಮದ ಅವಧಿಗೆ ಚುನಾವಣಾ ಆಯೋಗ ಕತ್ತರಿ ಹಾಕಿದೆ. ಅದೇ ವೇಳೆ ಪ್ರತಿಯೊಂದು ಹಂತದ ಚುನಾವಣೆಯ ಪ್ರಚಾರ ಕಾರ್ಯಕ್ರಮಕ್ಕೆ 48 ಗಂಟೆಗಳ ಮೌನ ಅವಧಿಯನ್ನು 72 ಗಂಟೆಗಳಾಗಿ ವಿಸ್ತರಿಸಿ ಚುನಾವಣೆ ಆಯೋಗ ಆದೇಶ ನೀಡಿದೆ. ಸಂಜೆ 7ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೆ ಯಾವುದೇ ರ‍್ಯಾಲಿ, ಸಾರ್ವಜನಿಕ ಸಭೆ, ಬೀದಿ ನಾಟಕ, ಬೀದಿಸಭೆಗಳಿಗೆ ಅನುಮತಿ ಇರುವುದಿಲ್ಲ ಎಂದು ಚುನಾವಣಾ ಆಯೋಗ ಆದೇಶಿಸಿದ್ದು, ಶುಕ್ರವಾರ ಸಂಜೆ 7ಗಂಟೆಯಿಂದ ಈ ಆದೇಶ ಜಾರಿಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ನಡೆಲಿರುವ 6,7 ಮತ್ತು ಎಂಟನೇ ಹಂತದ ಚುನಾವಣೆಗಾಗಿ ನಡೆಸುವ ರ‍್ಯಾಲಿ, ಸಾರ್ವಜನಿಕ ಸಭೆ, ಬೀದಿ ನಾಟಕ, ಬೀದಿ ಸಭೆ, ಬೈಕ್ ರ‍್ಯಾಲಿ ಅಥವಾ ಚುನಾವಣಾ ಪ್ರಚಾರಕ್ಕಾಗಿ ಗುಂಪು ಸೇರುವಿಕೆಯ ಮೌನ ಅವಧಿಯನ್ನು ( Silence period) 72 ಗಂಟೆಗಳವರೆಗೆ ವಿಸ್ತರಿಸಲಾಗಿದೆ ಎಂದು ಆಯೋಗ ಹೇಳಿದೆ.

ಸ್ಟಾರ್ ಪ್ರಚಾರಕರು, ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳು ಚುನಾವಣಾ ಪ್ರಚಾರದ ಮೇಳೆ ಕೊವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಮೂಲಕ ಕೊರೊನಾ ಸೋಂಕಿನ ಅಪಾಯವನ್ನುಸ್ವಯಂ ಆಹ್ವಾನಿಸುವುದಲ್ಲದೆ ಇತರರಿಗೂ ಸೋಂಕು ಹರಡಲು ಕಾರಣವಾಗುತ್ತಿದ್ದಾರೆ ಎಂದು ಚುನಾವಣಾ ಆಯೋಗ ಗರಂ ಆಗಿದೆ.

5ನೇ ಹಂತದ ಚುನಾವಣೆಗೆ ಮುನ್ನ (ಏಪ್ರಿಲ್ 17ರಂದು 5ನೇ ಹಂತದ ಚುನಾವಣೆ ನಡೆದಿದೆ) ಪಶ್ಚಿಮ ಬಂಗಾಳದಲ್ಲಿ 6,910 ಹೊಸ ಕೊವಿಡ್ ಪ್ರಕರಣ ಮತ್ತು 26 ಸಾವು ವರದಿ ಆಗಿತ್ತು . ರಾಜ್ಯದ ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಸೋಂಕಿತರ ಸಂಖ್ಯೆ 6,43,795ಕ್ಕೇರಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 41,047ರಷ್ಟಿದೆ.

ಇದನ್ನೂ ಓದಿ: West Bengal Elections 2021: ಸುಸೂತ್ರವಾಗಿ ನಡೆಯದ 5ನೇ ಹಂತದ ಮತದಾನ; ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಕಲ್ಲುತೂರಾಟ

(West Bengal Covid Surge Rahul Gandhi decides to Suspend All Public Rallies in West Bengal Assembly Elections 2021)

Published On - 12:35 pm, Sun, 18 April 21

Click on your DTH Provider to Add TV9 Kannada