West Bengal Election 2021: ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ ಟಿಎಂಸಿ; ಈ ಬಾರಿ ಶೇ.30ರಷ್ಟು ಹೊಸಬರಿಗೆ ಟಿಕೆಟ್​ !

|

Updated on: Mar 02, 2021 | 1:22 PM

ಟಿಎಂಸಿ ಪಕ್ಷ ಈ ಬಾರಿ ತಳಮಟ್ಟದ ಸಮೀಕ್ಷೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ಈಗಾಗಲೇ 60 ವರ್ಷ ದಾಟಿದ ಹಲವು  ಹಾಲಿ ಶಾಸಕರನ್ನು ಕೈಬಿಡಲಾಗಿದೆ. ಅದರಲ್ಲೂ 80ವರ್ಷ ಮೇಲ್ಪಟ್ಟ ಯಾರಿಗೂ ಟಿಕೆಟ್​ ನೀಡುತ್ತಿಲ್ಲ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

West Bengal Election 2021: ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ ಟಿಎಂಸಿ; ಈ ಬಾರಿ ಶೇ.30ರಷ್ಟು ಹೊಸಬರಿಗೆ ಟಿಕೆಟ್​ !
ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ)
Follow us on

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್​ 6ರಂದು ಚುನಾವಣೆ ನಡೆಯಲಿದ್ದು, ಅಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಇನ್ನೆರಡು ಮೂರು ದಿನಗಳಲ್ಲಿ ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದ್ದು, ಈ ಸಂಬಂಧ ನಿನ್ನೆ (ಮಾ.1)ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಪಕ್ಷದ ಚುನಾವಣೆ ಸಮಿತಿ ಸಭೆ ನಡೆದಿದೆ. ಮಮತಾ ಬ್ಯಾನರ್ಜಿಯವ ದಕ್ಷಿಣ ಕೋಲ್ಕತ್ತದ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಬಲಾಢ್ಯ ಪಕ್ಷ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಿಂದ ಗಮನಾರ್ಹವಾಗಿ ತನ್ನ ವಿಸ್ತಾರವನ್ನು ಹೆಚ್ಚು ಮಾಡುತ್ತಿದೆ. ಈ ಬಾರಿ ವಿಧಾನಸಭಾ ಚುನಾವಣೆಯನ್ನು ಪ್ರತಿಷ್ಠೆಯ ಕಣವನ್ನಾಗಿಸಿಕೊಂಡಿರುವ ಬಿಜೆಪಿ ನಾಯಕರು ಪದೇಪದೆ ಅಲ್ಲಿಗೆ ಭೇಟಿ ನೀಡಿ ಪ್ರಚಾರ ಕಾರ್ಯವನ್ನೂ ಕೈಗೊಂಡಿದ್ದಾರೆ. ಇನ್ನು ಬಿಜೆಪಿ ಯುವ ರಾಜಕಾರಣಿಗಳಿಗೆ ಮಣೆ ಹಾಕುವ ಒಂದು ಪರಿಪಾಠವನ್ನು ಬೆಳೆಸಿಕೊಂಡಿದ್ದು, ಪ್ರತಿ ರಾಜ್ಯಗಳ, ಲೋಕಸಭಾ ಚುನಾವಣೆಯಲ್ಲೂ ಈ ಪ್ರಯೋಗ ಮಾಡಿಕೊಂಡೇಬಂದಿದೆ. ಇದೀಗ ಟಿಎಂಸಿ ಕೂಡ ಇದೇ ಕ್ರಮ ಅಳವಡಿಸಿಕೊಳ್ಳಲು ಮುಂದಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.

ಟಿಎಂಸಿ ಪಕ್ಷ ಈ ಬಾರಿ ತಳಮಟ್ಟದ ಸಮೀಕ್ಷೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ಈಗಾಗಲೇ 60 ವರ್ಷ ದಾಟಿದ ಹಲವು  ಹಾಲಿ ಶಾಸಕರನ್ನು ಕೈಬಿಡಲಾಗಿದೆ. ಅದರಲ್ಲೂ 80ವರ್ಷ ಮೇಲ್ಪಟ್ಟ ಯಾರಿಗೂ ಟಿಕೆಟ್​ ನೀಡುತ್ತಿಲ್ಲ. ಹೆಚ್ಚಾಗಿ ಮಹಿಳೆಯರು ಮತ್ತು ಯುವಮುಖಂಡರನ್ನೇ ಆಯ್ಕೆ ಮಾಡಿದೆ ಎನ್ನಲಾಗಿದೆ. ಬಿಜೆಪಿಗೆ ಸೇರಿದ 19 ಶಾಸಕರ ಕ್ಷೇತ್ರಗಳನ್ನೂ ಸೇರಿಸಿ, ಶೇ.30ರಷ್ಟು ಹೊಸ ಮುಖಗಳಿಗೆ ಟಿಕೆಟ್​ ನೀಡಲು ಪಕ್ಷ ನಿರ್ಧರಿಸಿದೆ ಎಂದು ಹಿರಿಯ ಟಿಎಂಸಿ ಮುಖಂಡರೊಬ್ಬರು ತಿಳಿಸಿದ್ದಾಗಿ ರಾಷ್ಟ್ರೀಯ ಮಾಧ್ಯವೊಂದು ವರದಿ ಮಾಡಿದೆ.

ಟಿಎಂಸಿಯಲ್ಲಿ 60 ವರ್ಷ ಮೇಲ್ಪಟ್ಟ ಅನೇಕ ಶಾಸಕರಿದ್ದಾರೆ. ಸದ್ಯ ಅಧಿಕಾರದಲ್ಲಿ ಇರುವ ಪ್ರತಿಯೊಬ್ಬ ಟಿಎಂಸಿ ಶಾಸಕನ 5 ವರ್ಷಗಳ ಕಾರ್ಯ, ಅವರ ಕ್ಷೇತ್ರದಲ್ಲಿ ಅವರಿಗೆ ಇರುವ ಫಾಲೋವರ್ಸ್​, ಅವರ ಬಗ್ಗೆ ಮತದಾರರಿಗೆ ಇರುವ ಅಭಿಪ್ರಾಯಗಳನ್ನೆಲ್ಲ ಸಮೀಕ್ಷೆ ಮಾಡಲಾಗಿತ್ತು. ಈ ವರದಿಯನ್ನೂ ಅನ್ವಯ ಮಾಡಿಕೊಂಡು ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ತಯಾರಿಕೆ ಮಾಡಲಾಗಿದೆ. ಆದರೆ ಇಲ್ಲಿ ಮಮತಾ ಬ್ಯಾನರ್ಜಿಯವರೇ ಟಿಎಂಸಿ ಸುಪ್ರಿಮೋ ಆಗಿದ್ದು, ಕೊನೆಗೆ ಅವರೇ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಈಗಾಗಲೇ ಟಿಎಂಸಿಯಿಂದ ಬಿಜೆಪಿಗೆ ಹಲವರು ಸೇರಿದ್ದು, ಇದೀಗ ಚುನಾವಣೆಯಲ್ಲಿ ಟಿಕೆಟ್​ ನೀಡದಿದ್ದರೆ ಏನಾಗಬಹುದು? ಮತ್ತೆಷ್ಟು ಜನ ಬಿಜೆಪಿಗೆ ಹೋಗಬಹುದು? ಎಂಬ ಪ್ರಶ್ನೆಯೂ ಎದ್ದಿದೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ಅಹಂಕಾರಕ್ಕೆ ಪಶ್ಚಿಮ ಬಂಗಾಳದ ಜನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ: ಅಬ್ಬಾಸ್ ಸಿದ್ದಿಕಿ