ಪಶ್ಚಿಮ ಬಂಗಾಳದಲ್ಲಿ ಮತ್ತೆ ಕೊವಿಡ್ 19 ನಿಯಂತ್ರಿತ ಕಠಿಣ ನಿಯಮಗಳು ಜಾರಿ; ನಾಳೆಯಿಂದ ಏನೆಲ್ಲ ಬದಲಾವಣೆ ನೋಡಿ

| Updated By: Lakshmi Hegde

Updated on: Jan 02, 2022 | 5:17 PM

ನಿಯಮಗಳನ್ನು ಜನರು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ಯಾರೇ ಆದರೂ ಸರಿ ಕಾನೂನು ಉಲ್ಲಂಘನೆ ಮಾಡಿದರೆ, ಅಂಥವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಮತ್ತೆ ಕೊವಿಡ್ 19 ನಿಯಂತ್ರಿತ ಕಠಿಣ ನಿಯಮಗಳು ಜಾರಿ; ನಾಳೆಯಿಂದ ಏನೆಲ್ಲ ಬದಲಾವಣೆ ನೋಡಿ
ಸಾಂಕೇತಿಕ ಚಿತ್ರ
Follow us on

ದೇಶದಲ್ಲಿ ಮತ್ತೊಮ್ಮೆ ಕೊವಿಡ್​ 19 ಸೋಂಕಿನ ಪರಿಸ್ಥಿತಿ ಹೆಚ್ಚುತ್ತಿದೆ. ಒಂದೊಂದೇ ರಾಜ್ಯವಾಗಿ ಕಠಿಣ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಇದೀಗ ಪಶ್ಚಿಮ ಬಂಗಾಳ(West Bengal)ದಲ್ಲಿ ಕೂಡ ಲಾಕ್​ಡೌನ್ (Lock Down)​ ಮಾದರಿಯ ನಿರ್ಬಂಧಗಳನ್ನು ಹೇರಲಾಗಿದೆ.  ಇದು ನಾಳೆ (ಜನವರಿ 3)ಯಿಂದ ಅನ್ವಯ ಆಗಲಿದೆ. ಪಶ್ಚಿಮ ಬಂಗಾಳದಲ್ಲಿ ಜಾರಿಗೆ ಬರುತ್ತಿರುವ ಹೊಸ ಕೊವಿಡ್​ 19 ನಿಯಂತ್ರಿತ ನಿಯಮಗಳಡಿಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಶಾಲಾ-ಕಾಲೇಜುಗಳು ಬಂದ್ ಆಗಲಿವೆ. ಶಾಪಿಂಗ್​ ಮಾಲ್​ಗಳು, ಮಾರುಕಟ್ಟೆ ಸಂಕೀರ್ಣಗಳು, ರೆಸ್ಟೋರೆಂಟ್​, ಬಾರ್​ಗಳ ಮೇಲೆಯೂ ನಿರ್ಬಂಧಿತ ಕ್ರಮಗಳನ್ನು ವಿಧಿಸಲಾಗಿದೆ. ಅಂದರೆ ಅವೆಲ್ಲವರೂ ಶೇ.50ರ ಸಾಮರ್ಥ್ಯದ ನಿಯಮದ ಅನುಸಾರ ಕಾರ್ಯ ನಿರ್ವಹಿಸಬಹುದು. 

ಮಮತಾ ಬ್ಯಾನರ್ಜಿ ಸರ್ಕಾರದ ಕೊವಿಡ್ 19 ನಿಯಂತ್ರಿತ ಹೊಸ ನಿಯಮಗಳನ್ನು ಇಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಎಚ್​.ಕೆ.ದ್ವಿವೇದಿ ಘೋಷಿಸಿದ್ದು, ಅವರು ಹೀಗಿವೆ..
1. ಜನವರಿ 3ರಿಂದ ಎಲ್ಲ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸ್ಪಾ, ಸಲೂನ್​, ಬ್ಯೂಟಿ ಪಾರ್ಲರ್​, ಸ್ವಿಮ್ಮಿಂಗ್​ ಪೂಲ್​, ಪ್ರಾಣಿ ಸಂಗ್ರಹಾಲಯಗಳು, ಮನರಂಜನಾ ಪಾರ್ಕ್​ಗಳು ಮುಚ್ಚಲ್ಪಡುತ್ತವೆ.(ಮುಂದಿನ ಆದೇಶದವರೆಗೆ)
2. ಎಲ್ಲ ಸರ್ಕಾರಿ ಮತ್ತು ಖಾಸಗಿ ಕಚೇರಿಗಳೂ ಶೇ.50ರಷ್ಟು ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸುತ್ತವೆ.
3. ದೂರದ ಊರುಗಳ ರೈಲುಗಳು ಸಹಜವಾಗಿ ಓಡುತ್ತವೆ. ಆದರೆ ಸ್ಥಳೀಯ ರೈಲುಗಳು ಸಂಜೆ 7ಗಂಟೆವರೆಗೆ ಶೇ.50ರ ಸಾಮರ್ಥ್ಯದಲ್ಲಿ ಸಂಚರಿಸಬಹುದು. ಸಂಜೆ ಏಳುಗಂಟೆ ನಂತರ ಸ್ಥಳೀಯರ ರೈಲುಗಳು ಸಂಚರಿಸುವಂತೆ ಇಲ್ಲ
4. ಪಶ್ಚಿಮ ಬಂಗಾಳದ ಎಲ್ಲ ಪ್ರವಾಸಿ ಸ್ಥಳಗಳೂ ಕೂಡ ನಾಳೆಯಿಂದ ಮುಚ್ಚಿರುತ್ತವೆ. ಯಾರಿಗೂ ಅವಕಾಶ ಇರುವುದಿಲ್ಲ.
5. ದೆಹಲಿಯಿಂದ ಮುಂಬೈ, ಕೋಲ್ಕತ್ತಕ್ಕೆ ಸಂಚರಿಸುವ ರೈಲುಗಳಿಗೆ ವಾರದಲ್ಲಿ ಎರಡು ದಿನ ಮಾತ್ರ ಸಂಚಾರಕ್ಕೆ ಅನುಮತಿ (ಸೋಮವಾರ ಮತ್ತು ಶುಕ್ರವಾರ)
6. ಎಲ್ಲ ರೀತಿಯ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೂ 50 ಜನರಿಗೆ ಮಾತ್ರ ಅವಕಾಶ. ಅದಕ್ಕಿಂತ ಹೆಚ್ಚಿನ ಜನರು ಸೇರುವಂತೆ ಇಲ್ಲ.
7. ಶಾಪಿಂಗ್​ ಮಾಲ್​ಗಳು, ಮಾರುಕಟ್ಟೆ ಸಂಕೀರ್ಣಗಳು ರಾತ್ರಿ 10ರವರೆಗೆ ಕಾರ್ಯನಿರ್ವಹಿಸುತ್ತವೆ. ಆದರೆ ಶೇ.50ರ ಸಾಮರ್ಥ್ಯ ಅನ್ವಯ ಆಗುತ್ತದೆ. ಉಳಿದಂತೆ ಎಲ್ಲ ರೀತಿಯ ಕೊವಿಡ್​ 19 ನಿಯಂತ್ರಣಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
8. ಬಾರ್​, ರೆಸ್ಟೋರೆಂಟ್​, ಸಿನಿಮಾ ಹಾಲ್​ ಮತ್ತು ಥಿಯೇಟರ್​ಗಳೂ ಕೂಡ ಶೇ.50 ಸಾಮರ್ಥ್ಯದಲ್ಲಿ (ಅಂದರೆ ಅದರ ಪೂರ್ಣ ಸಾಮರ್ಥ್ಯದ ಅರ್ಧದಷ್ಟು)ಕಾರ್ಯ ನಿರ್ವಹಿಸುತ್ತವೆ.
9. ಮದುವೆ ಮತ್ತು ಇತರ ಸಮಾರಂಭಗಳಲ್ಲಿ 50 ಜನರಿಗೆ ಅವಕಾಶ.
10. ಅಂತ್ಯಕ್ರಿಯೆಯಲ್ಲಿ 20 ಜನರು ಮಾತ್ರ ಪಾಲ್ಗೊಳ್ಳಬಹುದು
11. ಕೋಲ್ಕತ್ತ ಮೆಟ್ರೋ ರೈಲು ಈಗಿರುವ ಸಮಯದಂತೆಯೇ ಓಡುತ್ತದೆ. ಆದರೆ ಶೇ.50ರಷ್ಟು ಆಸನ ಸಾಮರ್ಥ್ಯದಲ್ಲಿ ಸಂಚಾರ ಮಾಡುತ್ತದೆ.
12. ನೈಟ್ ಕರ್ಫ್ಯೂ ಜಾರಿಯಿದ್ದು, ರಾತ್ರಿ 10ರಿಂದ ಮುಂಜಾನೆ 5ರವರೆಗೆ ಸಾರ್ವಜನಿಕರು, ವಾಹನಗಳ ಓಡಾಟ ನಿರ್ಬಂಧ. ತುರ್ತು ಸಮಯದಲ್ಲಿ, ಸ್ಥಳೀಯ ಆಡಳಿತದಿಂದ ಅನುಮತಿ ಪಡೆದು ಸಂಚಾರ ಮಾಡಬಹುದು.

ಈ ನಿಯಮಗಳನ್ನು ಜನರು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ಯಾರೇ ಆದರೂ ಸರಿ ಕಾನೂನು ಉಲ್ಲಂಘನೆ ಮಾಡಿದರೆ, ಅಂಥವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ಬಂಗಾಳ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರಿಗೆ ಮೇಕಪ್: ಗುಂಡಿಮುಚ್ಚಿ, ಲೈಟ್ ಹಾಕಿ, ಕ್ಯಾಮೆರಾ ಅಳವಡಿಸಲು ರಾಜ್ಯ ಸರ್ಕಾರ ಸೂಚನೆ

Published On - 4:47 pm, Sun, 2 January 22