ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಅಧಿಕಾರಿ ಕುಲ್ವಿಂದರ್ ಕೌರ್ ಯಾರು?

2020 ರಲ್ಲಿ ಕನಿಷ್ಠ ಬೆಂಬಲ ಬೆಲೆ ಕುರಿತು ರೈತರ ಪ್ರತಿಭಟನೆಗಳ ಬಗ್ಗೆ ಕಂಗನಾ ರಣಾವತ್ ಹೇಳಿಕೆಯಿಂದ ಮಹಿಳಾ ಅಧಿಕಾರಿ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ. ಮಹಿಳಾ ಅಧಿಕಾರಿಯನ್ನು ಕುಲ್ವಿಂದರ್ ಕೌರ್ ಎಂದು ಗುರುತಿಸಲಾಗಿದ್ದು, ಆಕೆಯ ತಾಯಿ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಅಧಿಕಾರಿ ಕುಲ್ವಿಂದರ್ ಕೌರ್ ಯಾರು?
ಕುಲ್ವಿಂದರ್ ಕೌರ್
Follow us
ರಶ್ಮಿ ಕಲ್ಲಕಟ್ಟ
|

Updated on: Jun 06, 2024 | 8:41 PM

ದೆಹಲಿ ಜೂನ್ 06: ಗುರುವಾರ ಸಂಜೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) ಮಹಿಳಾ ಅಧಿಕಾರಿಯೊಬ್ಬರು ಮಂಡಿ ಸಂಸದೆ ಕಂಗನಾ ರಣಾವತ್‌ಗೆ (Kangana Ranaut) ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷ ಮಾಡಿದ ನಂತರ ಭಾರೀ ವಿವಾದ ಭುಗಿಲೆದ್ದಿದೆ. 2020 ರಲ್ಲಿ ಕನಿಷ್ಠ ಬೆಂಬಲ ಬೆಲೆ (MSP) ಕುರಿತು ರೈತರ ಪ್ರತಿಭಟನೆಗಳ ಬಗ್ಗೆ ಕಂಗನಾ ಹೇಳಿಕೆಯಿಂದ ಮಹಿಳಾ ಅಧಿಕಾರಿ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ. ಮಹಿಳಾ ಅಧಿಕಾರಿಯನ್ನು ಕುಲ್ವಿಂದರ್ ಕೌರ್ ಎಂದು ಗುರುತಿಸಲಾಗಿದ್ದು, ಆಕೆಯ ತಾಯಿ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎಂದು ಹೇಳಿದ್ದಾರೆ.

ಕುಲ್ವಿಂದರ್ ಕೌರ್ ಯಾರು?

ಮೊಹಾಲಿಯ ನಿವಾಸಿ ಕುಲ್ವಿಂದರ್ ಕೌರ್ ಕಳೆದ ಎರಡು ವರ್ಷಗಳಿಂದ ಚಂಡೀಗಢ ವಿಮಾನ ನಿಲ್ದಾಣದಲ್ಲಿ ನೇಮಕಗೊಂಡಿದ್ದಾರೆ. ದೆಹಲಿ, ಹರಿಯಾಣ ಮತ್ತು ಪಂಜಾಬ್ ನಡುವಿನ ವಿವಿಧ ಗಡಿಗಳಲ್ಲಿ ಪ್ರತಿಭಟನಾಕಾರರಿಗೆ ತಲಾ 200 ರೂಪಾಯಿ ಲಂಚ ನೀಡಲಾಗಿದೆ ಎಂದು ಕಂಗನಾ ಹೇಳಿಕೆ ನೀಡಿದ್ದರು. ಎರಡು ಮಕ್ಕಳ ತಾಯಿ ಕುಲ್ವಿಂದರ್ ಅವರು ರೈತರ ಪ್ರತಿಭಟನೆಯಲ್ಲಿ ತಮ್ಮ ತಾಯಿ ಕೂಡ ಕುಳಿತಿದ್ದರು ಎಂದು ಹೇಳಿದ್ದು, ಅದಕ್ಕಾಗಿ ಕಂಗನಾ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು ಎನ್ನಲಾಗಿದೆ.

ಕುಲ್ವಿಂದರ್ ಅವರ ಸಹೋದರ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯಲ್ಲಿ ಸಾಂಸ್ಥಿಕ ಕಾರ್ಯದರ್ಶಿಯಾಗಿದ್ದಾರೆ. ಕುಲ್ವಿಂದರ್ ಅವರ ಪತಿ ಕೂಡ CISF ನಲ್ಲಿ ಉದ್ಯೋಗಿಯಾಗಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ ಆಕೆಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಆಕೆಯನ್ನು ಸಿಐಎಸ್‌ಎಫ್ ಕಸ್ಟಡಿಗೆ ಒಳಪಡಿಸಲಾಗಿದೆ. ಕಂಗನಾ ಅವರು ವಿಮಾನ ನಿಲ್ದಾಣದ ಫ್ರಿಸ್ಕಿಂಗ್ ಬೂತ್‌ನಲ್ಲಿದ್ದಾಗ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷ ಘಟನೆ ನಡೆದಿದೆ. ವಿವಾದಾತ್ಮಕ ಘಟನೆಯ ನಂತರ ವಿಮಾನ ನಿಲ್ದಾಣದಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ದೆಹಲಿ ತಲುಪಿದ ಕೂಡಲೇ ಕಂಗನಾ ರಣಾವತ್​ ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಾ ನಿರ್ದೇಶಕರಾದ ನೀನಾ ಸಿಂಗ್​ ಅವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಚಂಡಿಗಢ ವಿಮಾನ ನಿಲ್ದಾಣದ ನಿರ್ಬಂಧಿತ ಸ್ಥಳದಲ್ಲಿ ತಾವು ನಿಂತಿದ್ದಾಗ ಸಿಐಎಸ್​ಎಫ್​ ಮಹಿಳಾ ಕಾನ್ಸ್​ಟೇಬಲ್​ ಬಂದು ಕಪಾಳಕ್ಕೆ ಹೊಡೆದರು ಎಂದು ಕಂಗನಾ ರಣಾವತ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಸಂಸದೆ ಕಂಗನಾ ರಣಾವತ್​ಗೆ ಕಪಾಳಮೋಕ್ಷ; ದೆಹಲಿಗೆ ತೆರಳುವಾಗ ವಿಮಾನ ನಿಲ್ದಾಣದಲ್ಲಿ ಘಟನೆ

ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಕಂಗನಾ  ಈ ವರ್ಷ ಬಿಜೆಪಿ ಸೇರಿದ್ದರು. ಮೂಲತಃ ಹಿಮಾಚಲ ಪ್ರದೇಶದವರಾದ ಅವರು ಮಂಡಿ ಕ್ಷೇತ್ರದಿಂದ ಟಿಕೆಟ್​ ಪಡೆದು ಮೊದಲ ಪ್ರಯತ್ನದಲ್ಲೇ ಅವರು ಸಂಸದೆ ಆಗಿದ್ದಾರೆ. ಕಂಗನಾ ಎದುರು ಚುನಾವಣೆಗೆ ನಿಂತಿದ್ದ ಕಾಂಗ್ರೆಸ್​ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್​ ಅವರು 4,62,267 ಮತಗಳನ್ನು ಪಡೆದರೆ 5,37,022 ಮತಗಳನ್ನು ಪಡೆದು ಕಂಗನಾ ಇಲ್ಲಿ ಗೆಲುವು ಸಾಧಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ