
ನವದೆಹಲಿ, ಅಕ್ಟೋಬರ್ 27: ಭಾರತೀಯ ಚುನಾವಣಾ ಆಯೋಗ (ECI) 2ನೇ ಹಂತದ ಮತದಾರರ ಪಟ್ಟಿಗಳ ಪ್ಯಾನ್-ಇಂಡಿಯಾ ವಿಶೇಷ ಪರಿಷ್ಕರಣೆ (SIR) ಅನ್ನು ಇಂದು ಘೋಷಿಸಿದೆ. ಎಸ್ಐಆರ್ 2ನೇ ಹಂತವು ನಾಳೆಯಿಂದ (ಅಕ್ಟೋಬರ್ 28)ರಿಂದ 12 ರಾಜ್ಯಗಳಲ್ಲಿ ಪ್ರಾರಂಭವಾಗಲಿದೆ. ಈ 12 ರಾಜ್ಯಗಳಲ್ಲಿ ಬಹುತೇಕ ಕಡೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಆದರೆ, ಅಸ್ಸಾಂನಲ್ಲಿ ಕೂಡ ಮುಂದಿನ ವರ್ಷವೇ ಚುನಾವಣೆ (Assam Assembly Elections) ಘೋಷಣೆಯಾಗಿದೆ. ಹೀಗಿದ್ದರೂ ಚುನಾವಣಾ ಆಯೋಗ ಅಸ್ಸಾಂ ರಾಜ್ಯವನ್ನು ಈ ಹಂತದ ಎಸ್ಐಆರ್ನಲ್ಲಿ ಘೋಷಿಸಿಲ್ಲ. ಇದಕ್ಕೆ ಕಾರಣವೇನಿರಬಹುದು? ಎಂಬ ಕುತೂಹಲ ಮೂಡುವುದು ಸಹಜ. ಈ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೀಡಿರುವ ಸ್ಪಷ್ಟನೆ ಇಲ್ಲಿದೆ.
ಅಸ್ಸಾಂನಲ್ಲಿ ಪೌರತ್ವ ವಿಷಯವು ಪ್ರಸ್ತುತ ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿದೆ. ಹೀಗಾಗಿ, ಅಸ್ಸಾಂನಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆಯನ್ನು ಪ್ರತ್ಯೇಕವಾಗಿ ಘೋಷಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ. “ಪೌರತ್ವ ಕಾಯ್ದೆಯಡಿ ಅಸ್ಸಾಂಗೆ ಪ್ರತ್ಯೇಕ ನಿಬಂಧನೆಗಳಿವೆ. ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಅಲ್ಲಿನ ಪೌರತ್ವ ಪರಿಶೀಲನೆ ಪೂರ್ಣಗೊಳ್ಳಲಿದೆ. ಜೂನ್ 24ರ SIR ಆದೇಶವು ಇಡೀ ದೇಶಕ್ಕೆ ಅನ್ವಯಿಸಿತ್ತು. ಆಗ ಇದು ಅಸ್ಸಾಂಗೆ ಅನ್ವಯಿಸಿರಲಿಲ್ಲ” ಎಂದು ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: SIR in India: 12 ರಾಜ್ಯಗಳಲ್ಲಿ 2ನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆ; ಚುನಾವಣಾ ಆಯೋಗ ಘೋಷಣೆ
ಚುನಾವಣಾ ಆಯೋಗವು ಇಂದು ಎರಡನೇ ಹಂತದ ಪ್ಯಾನ್-ಇಂಡಿಯಾ ವಿಶೇಷ ತೀವ್ರ ಪರಿಷ್ಕರಣೆ (SIR) ಮತದಾರರ ಪಟ್ಟಿಗಳನ್ನು ಘೋಷಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಗೋವಾ, ಪುದುಚೇರಿ, ಛತ್ತೀಸ್‌ಗಢ, ಗುಜರಾತ್, ಕೇರಳ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಲಕ್ಷದ್ವೀಪದಲ್ಲಿ ನಾಳೆಯಿಂದಲೇ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಾರಂಭವಾಗಲಿದೆ.
VIDEO | Delhi: Addressing a press conference, Chief Election Commissioner Gyanesh Kumar says, “The 12 states and UTs where the Special Intensive Revision (SIR) will begin from tomorrow are Andaman and Nicobar Islands, Goa, Puducherry, Chhattisgarh, Gujarat, Kerala, Madhya… pic.twitter.com/UPG82ID23f
— Press Trust of India (@PTI_News) October 27, 2025
12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ SIRನ ಎರಡನೇ ಹಂತವು 51 ಕೋಟಿ ಮತದಾರರನ್ನು ಒಳಗೊಳ್ಳಲಿದ್ದು, ಎಣಿಕೆ ಪ್ರಕ್ರಿಯೆಯು ನವೆಂಬರ್ 4ರಂದು ಪ್ರಾರಂಭವಾಗುತ್ತದೆ. ಚುನಾವಣಾ ಆಯೋಗದ ಪ್ರಕಾರ, ಮುದ್ರಣ ಮತ್ತು ತರಬೇತಿ ಹಂತವು ಅಕ್ಟೋಬರ್ 28ರಿಂದ ನವೆಂಬರ್ 3ರವರೆಗೆ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ