
ಕಳೆದ ಹದಿನೈದು ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಬಿಡುವಿಲ್ಲದ ವಿದೇಶ ಪ್ರವಾಸದಲ್ಲಿ ಭಾಗಿಯಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್ಗೆ ಮೂರು ದಿನಗಳ ಭೇಟಿ ನೀಡಿದ್ದ ಅವರು ನಂತರ ಬುದ್ಧ ಜಯಂತಿಯಂದು ನೇಪಾಳಕ್ಕೆ ತೆರಳಿದ್ದರು. ಮುಂದಿನ ವಾರ ಜಪಾನ್ಗೆ ತೆರಳಲಿರುವ ಪ್ರಧಾನಿ, ಈ ತಿಂಗಳಿನ ತಮ್ಮ ವಿದೇಶ ಪ್ರಯಾಣವನ್ನು ಮುಂದುವರೆಸಲಿದ್ದಾರೆ. ಅವರ ವೇಳಾಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅದರಲ್ಲಿ ಒಂದು ಮಾದರಿಯನ್ನು ಗಮನಿಸಬಹುದು. ವಿದೇಶ ಪ್ರವಾಸಕ್ಕೆ ತೆರಳುವಾಗ ಪ್ರಧಾನಿ ರಾತ್ರಿಯ ಪ್ರಯಾಣಕ್ಕೆ ಆದ್ಯತೆ ನೀಡುತ್ತಾರೆ. ಪ್ರಯಾಣದ ನಂತರ ಮರುದಿನ ನೇರವಾಗಿ ಸಭೆಗಳಿಗೆ ಹಾಜರಾಗುತ್ತಾರೆ. ಮತ್ತೆ ರಾತ್ರಿಯಲ್ಲಿ ಅವರು ಮುಂದಿನ ಗಮ್ಯಸ್ಥಾನಕ್ಕೆ ತೆರಳುತ್ತಾರೆ. ಮೋದಿಯವರು ರಾತ್ರಿ ಪ್ರಯಾಣಕ್ಕೆ ಆದ್ಯತೆ ನೀಡುವುದೇಕೆ? ಇಲ್ಲಿದೆ ನೋಡಿ.
ಪ್ರಧಾನಿಯವರ ಮುಂದಿನ ಭೇಟಿ ಜಪಾನ್ಗೆ. ಅದೂ ಕೂಡ ಈ ಹಿಂದಿನ ಪ್ರವಾಸಕ್ಕಿಂತ ಭಿನ್ನವಾಗಿಲ್ಲ. ಮೇ 22 ರ ರಾತ್ರಿ ಹೊರಡಲಿರುವ ಪ್ರಧಾನಿ, ಮೇ 23 ರಂದು ಮುಂಜಾನೆ ಟೋಕಿಯೊ ತಲುಪಲಿದ್ದಾರೆ. ಅಲ್ಲಿಂದ ನೇರವಾಗಿ ತಮ್ಮ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಉನ್ನತ ಉದ್ಯಮಿಗಳೊಂದಿಗೆ ಸಭೆಗಳನ್ನು ನಡೆಸಲಿರುವ ಪ್ರಧಾನಿ, ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮರುದಿನ ಕ್ವಾಡ್ ಸಭೆ ಹಾಗೂ ದ್ವಿಪಕ್ಷೀಯ ಮಾತುಕತೆಗಳನ್ನ ನಡೆಸಲಿದ್ದಾರೆ. ನಂತರ ಅದೇ ರಾತ್ರಿ ಭಾರತಕ್ಕೆ ಹಿಂದಿರುಗಲಿದ್ದಾರೆ.
ಪ್ರಧಾನಿ ಮೋದಿ ಅವರ ಇತ್ತೀಚಿನ ಭೇಟಿಗಳನ್ನು ಗಮನಿಸಿದರೆ, ಜರ್ಮನಿ ಮತ್ತು ಡೆನ್ಮಾರ್ಕ್ನಲ್ಲಿ ಕೇವಲ ಒಂದೊಂದು ರಾತ್ರಿಗಳನ್ನು ಕಳೆದಿದ್ದರು. ಅದೇ ರೀತಿ, ಜಪಾನ್ ಭೇಟಿಯ ಸಮಯದಲ್ಲಿ ಅವರು ಕೇವಲ ಒಂದು ರಾತ್ರಿಯನ್ನು ಕಳೆಯಲಿದ್ದಾರೆ ಮತ್ತು ರಾತ್ರಿಯಲ್ಲಿ ಸ್ವದೇಶಕ್ಕೆ ಮರಳಲಿದ್ದಾರೆ. ಅವರು ರಾತ್ರಿಯ ಪ್ರಯಾಣಕ್ಕೆ ಆದ್ಯತೆ ನೀಡಲು ಕಾರಣ ಇಲ್ಲಿದೆ.
ಪ್ರಧಾನಿ ರಾತ್ರಿಯ ವೇಳೆ ಪ್ರವಾಸ ಕೈಗೊಳ್ಳುವುದೇಕೆ?
ಈ ತಿಂಗಳಿನಲ್ಲಿ ಪ್ರಧಾನಿ ಮೋದಿ ಒಟ್ಟಿ ಐದು ದೇಶಗಳಿಗೆ ಭೇಟಿ ನೀಡಿದ್ದು, ಆ ದೇಶಗಳಲ್ಲಿ ಒಟ್ಟು ಮೂರು ರಾತ್ರಿಗಳನ್ನು ಮಾತ್ರ ಕಳೆದಿದ್ದಾರೆ. ತಮ್ಮ ಸಮಯವನ್ನು ಉಳಿಸುವ ಸಲುವಾಗಿ ಪ್ರಧಾನಿ ಮೋದಿ ರಾತ್ರಿಯ ಪ್ರಯಾಣಕ್ಕೆ ಆದ್ಯತೆ ನೀಡುತ್ತಾರೆ. ಇತ್ತೀಚಿನ ಪ್ರವಾಸದಲ್ಲಿ ವಿಮಾನ ಪ್ರಯಾಣದಲ್ಲಿಯೇ ನಾಲ್ಕು ರಾತ್ರಿಗಳನ್ನು ಪ್ರಧಾನಿ ಕಳೆದಿದ್ದಾರೆ. ‘ಸಮಯ ಮತ್ತು ಸಂಪನ್ಮೂಲ’ಗಳನ್ನು ಉಳಿಸಲು ಪ್ರಧಾನಿ ನರೇಂದ್ರ ಮೋದು ರೂಡಿಸಿಕೊಂಡಿರುವ ಅಭ್ಯಾಸಗಳಲ್ಲಿ ಇದೂ ಒಂದಾಗಿದೆ ಎಂದು ಪಿಎಂ ಆಪ್ತ ಮೂಲಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ