ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿಜೆಪಿ ನೂತನ ಅಧ್ಯಕ್ಷ ಸುಕಾಂತ್ ಮಜುಮ್ದಾರ್ ತೃಣಮೂಲ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಪಶ್ಚಿಮಬಂಗಾಳವನ್ನು ತಾಲಿಬಾನೀಕರಣಗೊಳಿಸುವವರ ವಿರುದ್ಧ ನಾವು ಸದಾ ಹೋರಾಡುತ್ತೇವೆ ಎಂದು ಹೇಳಿದ್ದಾರೆ. ಹಾಗೇ, ಬಿಜೆಪಿಯಿಂದ ಟಿಎಂಸಿಗೆ ಪಕ್ಷಾಂತರ ಮಾಡುತ್ತಿರುವವರ ಬಗ್ಗೆ ಪ್ರತಿಕ್ರಿಯೆ ನೀಡಿ, ನಮ್ಮ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿರುವವರು ಎಂದಿಗೂ ಬೇರೆ ಪಕ್ಷಗಳಿಗೆ ಹೋಗುವುದಿಲ್ಲ ಎಂದಿದ್ದಾರೆ.
ಇಂದು ಬಿಜೆಪಿ ಪ್ರಧಾನಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಮಜುಮ್ದಾರ್, ಪಕ್ಷದ ನಾಯಕತ್ವ ಮತ್ತು ಇತರ ಮುಖಂಡರ ಸಹಕಾರದೊಂದಿಗೆ, ಪಶ್ಚಿಮ ಬಂಗಾಳ ರಾಜ್ಯ ತಾಲಿಬಾನೀಕರಣಗೊಳಿಸುವವರ ವಿರುದ್ಧ ಹೋರಾಟ ಮುಂದುವರಿಸುತ್ತೇನೆ. ಬಿಜೆಪಿ ಕಾರ್ಯಕರ್ತರೇ ನನ್ನ ಪಾಲಿಗೆ ನಿಜವಾದ ಆಸ್ತಿ. ನಾವು ಯಾವುದೇ ತಪ್ಪು ಮಾಡಿದ್ದರೂ, ಅದನ್ನು ಇನ್ನುಮುಂದೆ ಸರಿಪಡಿಸಿಕೊಳ್ಳುತ್ತೇವೆ ಎಂದು ಹೇಳಿದರು. ಯಾರಾದರೂ ಸರಿ ಪಕ್ಷವನ್ನು ತೊರೆಯುವ ಮೂಲಕ ಬಿಜೆಪಿಗೆ ಹಾನಿ ಉಂಟು ಮಾಡಬಹುದು ಎಂದು ಭಾವಿಸಿದ್ದರೆ ಅದು ಖಂಡಿತ ತಪ್ಪು ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಲ್ಲಿ ಹಲವು ಬಣಗಳು ಉಂಟಾಗಿ, ಭಿನ್ನಾಭಿಪ್ರಾಯಗಳು ಜಾಸ್ತಿಯಾಗಿದ್ದ ಹಿನ್ನೆಲೆಯಲ್ಲಿ ಸೋಮವಾರ ದಿಲೀಪ್ ಘೋಷ್ರನ್ನು ಬದಲಾವಣೆ ಮಾಡಿ, ಆ ಸ್ಥಾನಕ್ಕೆ ಸುಕಾಂತ್ರನ್ನು ನೇಮಕ ಮಾಡಲಾಗಿದೆ. ಹಾಗೇ, ದಿಲೀಪ್ ಘೋಷ್ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷನನ್ನಾಗಿ ಮಾಡಲಾಗಿದೆ. ಹೊಸದಾಗಿ ಅಧ್ಯಕ್ಷ ಸ್ಥಾನಕ್ಕೆ ಏರಿರುವ ಮಜುಮ್ದಾರ್, ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರದ ಸಂಸ್ಕೃತಿಯನ್ನು ಬಿಜೆಪಿ ಕೊನೆಗಾಣಿಸಲಿದೆ ಎಂದಿದ್ದಾರೆ. ಚುನಾವಣೋತ್ತರ ಹಿಂಸಾಚಾರದಲ್ಲಿ ಈಗಾಗಲೇ ಮೃತಪಟ್ಟವರಿಗೂ ನ್ಯಾಯ ಒದಗಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮತಾಂತರ ವಿಚಾರ: ಬೇರೆ ರಾಜ್ಯಗಳ ಕಾಯ್ದೆ ಪರಿಶೀಲನೆ ಮಾಡಿ ರಾಜ್ಯದಲ್ಲೂ ಕಾಯ್ದೆ ಜಾರಿ- ಆರಗ ಜ್ಞಾನೇಂದ್ರ
MK Stalin: ವಾಕಿಂಗ್ ವೇಳೆ ಎಂ.ಕೆ ಸ್ಟಾಲಿನ್ಗೆ ನಿಮ್ಮ ಸೌಂದರ್ಯದ ಗುಟ್ಟೇನು? ಎಂದ ಮಹಿಳೆ; ನಾಚಿ ನಿಂತ ಸಿಎಂ