ಗೋವಾದ ಪ್ರತಿ ಮನೆಯ ಒಬ್ಬ ನಿರುದ್ಯೋಗಿಗೆ ತಿಂಗಳಿಗೆ 3000 ರೂ. ಭತ್ಯೆ; ಅರವಿಂದ್ ಕೇಜ್ರಿವಾಲ್ ಭರವಸೆ
Goa Assembly Election: ಗೋವಾದ ಪ್ರತಿ ಮನೆಯಲ್ಲಿರುವ ಒಬ್ಬ ನಿರುದ್ಯೋಗಿಗೆ ತಿಂಗಳಿಗೆ 3000 ರೂ.ಭತ್ಯೆ ನೀಡಲಾಗುತ್ತದೆ. ಅವರಿಗೆ ಉದ್ಯೋಗ ಸಿಗುವವರೆಗೂ ಈ ಹಣ ನೀಡಲಾಗುತ್ತದೆ.
ಪಣಜಿ: ದೆಹಲಿ ಮುಖ್ಯಮಂತ್ರಿ, ಆಪ್ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಇದೀಗ ಗೋವಾ ವಿಧಾನಸಭಾ ಚುನಾವಣೆ (Goa Assembly Election)ಯತ್ತ ಗಮನಹರಿಸಿದ್ದಾರೆ. ಇತ್ತೀಚೆಗಷ್ಟೇ ಉತ್ತಾರಖಂಡ್ಗೆ ಭೇಟಿ ನೀಡಿದ್ದ ಅರವಿಂದ್ ಕೇಜ್ರಿವಾಲ್ ಅಲ್ಲಿ ನಿರುದ್ಯೋಗ ಸಮಸ್ಯೆ ನೀಗಿಸುವುದೇ ಮೊದಲ ಆದ್ಯತೆ ಎಂದಿದ್ದರು. ಹಾಗೇ, ಮುಂದಿನ ವರ್ಷದ ಚುನಾವಣೆಯಲ್ಲಿ ಆಪ್ ಅಧಿಕಾರಕ್ಕೆ ಬಂದರೆ 6ತಿಂಗಳಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆಯನ್ನೂ ನೀಡಿದ್ದಾರೆ. ಹಾಗೇ, ಇಂದು ಗೋವಾಕ್ಕೆ ಭೇಟಿ ನೀಡಿರುವ ಅವರು, ಅಲ್ಲಿಯೂ ಸಹ ನಿರುದ್ಯೋಗ ನೀಗಿಸುವ ಆಶ್ವಾಸನೆಯನ್ನೇ ನೀಡಿದ್ದಾರೆ.
ಗೋವಾದಲ್ಲಿ 2022ರಲ್ಲಿ ನಡೆಯಲಿರುವ ಚುನಾವಣೆ ನಿಮಿತ್ತ ಮತ ಸೆಳೆಯಲು ಅಲ್ಲಿಗೆ ಧಾವಿಸಿರುವ ಅರವಿಂದ್ ಕೇಜ್ರಿವಾಲ್ ಏಳು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಮೊದಲನೇದಾಗಿ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ. ಲಂಚವಿಲ್ಲದೆ ಸರ್ಕಾರಿ ಕೆಲಸ ಪಡೆಯಲು ಸಾಧ್ಯವಿಲ್ಲ ಎಂಬ ನಂಬಿಕೆ ಬಲವಾಗಿ ಇದೆ. ಆ ಸಂಪ್ರದಾಯವನ್ನು ನಾವು ಸಂಪೂರ್ಣವಾಗಿ ಹೋಗಲಾಡಿಸುತ್ತೇವೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಗೋವಾದ ಪ್ರತಿ ಮನೆಯಲ್ಲಿರುವ ಒಬ್ಬ ನಿರುದ್ಯೋಗಿಗೆ ತಿಂಗಳಿಗೆ 3000 ರೂ.ಭತ್ಯೆ ನೀಡಲಾಗುತ್ತದೆ. ಅವರಿಗೆ ಉದ್ಯೋಗ ಸಿಗುವವರೆಗೂ ಈ ಹಣ ನೀಡಲಾಗುತ್ತದೆ. ಕೆಲಸ ಸಿಕ್ಕ ಬಳಿಕ ಅದನ್ನು ನಿಲ್ಲಿಸಲಾಗುತ್ತದೆ. ಇನ್ನು ಶೇ.80ರಷ್ಟು ಉದ್ಯೋಗವನ್ನು ಗೋವಾದ ಜನರಿಗಾಗಿಯೇ ಅಂದರೆ ಸ್ಥಳೀಯರಿಗಾಗಿಯೇ ಮೀಸಲಿಡಲಾಗುತ್ತದೆ ಎಂದೂ ಭರವಸೆ ನೀಡಿದ್ದಾರೆ.
ಕೊವಿಡ್ 19ನಿಂದಾಗಿ ಪ್ರವಾಸೋದ್ಯಮ ಅವಲಂಬಿತ ಕುಟುಂಬಗಳು ಉದ್ಯೋಗ ಕಳೆದುಕೊಂಡಿವೆ. ಕೆಲವರ ಉದ್ಯೋಗ ಹೋಗಿಲ್ಲವಾದರೂ ಕೈಯಲ್ಲಿ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಅಂಥವರು ಮತ್ತೆ ಕೆಲಸಕ್ಕೆ ಹೋಗಿ, ಸಂಬಳ ಪಡೆಯುವಂತೆ ಆಗುವವರೆಗೂ ತಿಂಗಳಿಗೆ 5 ಸಾವಿರ ರೂ ನೀಡಲಾಗುತ್ತದೆ. ಅದೇ ರೀತಿ ಗಣಿಗಾರಿಕೆ ನಡೆಸುತ್ತಿದ್ದು, ಉದ್ಯೋಗ ಕಳೆದುಕೊಂಡವರಿಗೂ ತಿಂಗಳಿಗೆ 5000 ರೂ.ನೀಡಲಾಗುವುದು ಎಂದಿದ್ದಾರೆ. ಅಷ್ಟೇ ಅಲ್ಲ, ಗೋವಾದಲ್ಲಿ ಕೌಶಲ ವಿಶ್ವವಿದ್ಯಾಲಯ ನಿರ್ಮಿಸುವ ಮೂಲಕ ಯುವಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದೂ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ₹12 ಕೋಟಿ ಗೆದ್ದ ಆಟೋ ಚಾಲಕ; ಕೇರಳ ತಿರುವೋಣಂ ಬಂಪರ್ ಲಾಟರಿ ವಿಜೇತ ಯಾರು ಎಂಬ ಪ್ರಶ್ನೆಗೆ ಕೊನೆಗೂ ಸಿಕ್ಕಿತು ಉತ್ತರ
Karnataka High Court: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಿತು ರಾಜ್ ಅವಸ್ತಿ ನೇಮಕಕ್ಕೆ ಶಿಫಾರಸು
(Delhi Chief Minister Arvind Kejriwal announced one unemployed youth per household in Goa)
Published On - 5:10 pm, Tue, 21 September 21