ಶಿಕ್ಷಣದ ಗುಣಮಟ್ಟ ಸುಧಾರಣೆಗೆ 100 ಹೊಸ ಸೈನಿಕ ಶಾಲೆಗಳ ಸ್ಥಾಪನೆ; ಕೇಂದ್ರ ಸಚಿವ ರಾಜನಾಥ್ ಸಿಂಗ್ ಘೋಷಣೆ

|

Updated on: Jan 22, 2025 | 10:01 PM

ಭಾರತದಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು, ದೇಶಾದ್ಯಂತ 100 ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು ಸಜ್ಜಾಗಿದೆ ಎಂದು ಕೇರಳದ ಅಲಪ್ಪುಳದಲ್ಲಿರುವ ವಿದ್ಯಾಧಿರಾಜ ವಿದ್ಯಾಪೀಠಂ ಸೈನಿಕ ಶಾಲೆಯ ವಾರ್ಷಿಕ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಣೆ ಮಾಡಿದ್ದಾರೆ. ಎಲ್ಲ ವರ್ಗದ, ಸಮುದಾಯದವರಿಗೂ ಸೈನಿಕ ಶಾಲೆ ತಲುಪುವಂತಾಗಬೇಕೆಂಬುದು ಸರ್ಕಾರದ ಆಶಯ ಎಂದಿದ್ದಾರೆ.

ಶಿಕ್ಷಣದ ಗುಣಮಟ್ಟ ಸುಧಾರಣೆಗೆ 100 ಹೊಸ ಸೈನಿಕ ಶಾಲೆಗಳ ಸ್ಥಾಪನೆ; ಕೇಂದ್ರ ಸಚಿವ ರಾಜನಾಥ್ ಸಿಂಗ್ ಘೋಷಣೆ
Rajnath Singh In Sainik School
Follow us on

ಅಲಪ್ಪುಳ: ಭಾರತದಲ್ಲಿ ಶಿಕ್ಷಣದ ಮೂಲಭೂತ ಗುಣಮಟ್ಟವನ್ನು ಸುಧಾರಿಸಲು ದೇಶಾದ್ಯಂತ 100 ಹೊಸ ಸೈನಿಕ ಶಾಲೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇರಳದ ಅಲಪ್ಪುಳದಲ್ಲಿರುವ ವಿದ್ಯಾಧಿರಾಜ ವಿದ್ಯಾಪೀಠಂ ಸೈನಿಕ ಶಾಲೆಯ ವಾರ್ಷಿಕ ದಿನಾಚರಣೆಯ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಈ ಕುರಿತು ಘೋಷಿಸಿದರು.

ಕೇರಳದ ಆಲಪ್ಪುಳದಲ್ಲಿರುವ ವಿದ್ಯಾಧಿರಾಜ ಸೈನಿಕ ಶಾಲೆಯ 47ನೇ ವಾರ್ಷಿಕ ದಿನಾಚರಣೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ರಾಜನಾಥ್ ಸಿಂಗ್, ಕೇಂದ್ರ ಸರ್ಕಾರವು ಸೈನಿಕ ಶಾಲೆಗಳಿಗೆ ಹುಡುಗಿಯರ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿದೆ. ದೇಶದ ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆ ಮತ್ತು ದೂರದ ಪ್ರದೇಶಗಳ ಸಿಬ್ಬಂದಿಯನ್ನು ಸೇರಿಸಿಕೊಳ್ಳಲು ಕೇಂದ್ರ ಸರ್ಕಾರ ಭಾರತದ ಪ್ರತಿಯೊಂದು ಪ್ರದೇಶ ಮತ್ತು ಜಿಲ್ಲೆಗೆ ಸೈನಿಕ ಶಾಲೆಗಳ ವ್ಯಾಪ್ತಿಯನ್ನು ವಿಸ್ತರಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಿಒಕೆ ಇಲ್ಲದೆ ಜಮ್ಮು ಕಾಶ್ಮೀರ ಅಪೂರ್ಣ; ಪಾಕ್​ಗೆ ಸಚಿವ ರಾಜನಾಥ್ ಸಿಂಗ್ ತಿರುಗೇಟು

ಸೈನಿಕನನ್ನು ಕೇವಲ ಯುದ್ಧದ ದೃಷ್ಟಿಕೋನದಿಂದ ಮಾತ್ರ ನೋಡಬಾರದು. ಏಕೆಂದರೆ ಪ್ರತಿಯೊಬ್ಬ ಸೈನಿಕನು ಇತರ ಹಲವು ಗುಣಗಳನ್ನು ಹೊಂದಿರುತ್ತಾನೆ. ಸೈನಿಕನು ಶಿಸ್ತುಬದ್ಧನಾಗಿರುತ್ತಾನೆ, ತನ್ನ ಗುರಿಗಳ ಮೇಲೆ ಕೇಂದ್ರೀಕರಿಸುತ್ತಾನೆ, ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾನೆ, ಸ್ವಯಂ ನಿಯಂತ್ರಣವನ್ನು ಹೊಂದಿರುತ್ತಾನೆ ಮತ್ತು ದೇಶಕ್ಕೆ ಸಮರ್ಪಿತನಾಗಿರುತ್ತಾನೆ ಎಂದು ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ.


ಸೈನಿಕನ ಈ ಗುಣಗಳು ಸ್ವಾಮಿ ವಿವೇಕಾನಂದ, ಆದಿ ಶಂಕರಾಚಾರ್ಯ ಮತ್ತು ರಾಜಾ ರವಿವರ್ಮರಂತಹ ಅನೇಕ ಮಹಾನ್ ನಾಯಕರಲ್ಲಿಯೂ ಕಂಡುಬರುತ್ತವೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ