ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ: ರೈತರೊಂದಿಗೆ ಸಭೆ ನಡೆಸಿದ ನಂತರ ರಾಹುಲ್ ಗಾಂಧಿ ಭರವಸೆ

|

Updated on: Jul 24, 2024 | 4:55 PM

ಇಂದು (ಬುಧವಾರ)ರೈತ ಮುಖಂಡರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ರೈತರೊಂದಿಗೆ ಸಭೆ ನಡೆಸಿದ ಕಾಂಗ್ರೆಸ್ ನಾಯಕ, ಸಾರ್ವತ್ರಿಕ ಚುನಾವಣೆಯ ನಮ್ಮ ಪ್ರಣಾಳಿಕೆಯಲ್ಲಿ ನಾವು ಎಂಎಸ್‌ಪಿಗೆ ಕಾನೂನುಬದ್ಧ ಭರವಸೆ ನೀಡಿದ್ದೇವೆ. ನಾವು ಮೌಲ್ಯಮಾಪನವನ್ನು ಮಾಡಿದ್ದು ಅದನ್ನು ಕಾರ್ಯರೂಪಕ್ಕೆ ತರಬಹುದಾಗಿದೆ. ನಾವು ಇಂಡಿಯಾ ಬಣದ ಇತರ ನಾಯಕರೊಂದಿಗೆ ಚರ್ಚಿಸಲು ನಿರ್ಧರಿಸಿದ್ದೇವೆ. ಅದರ ಅನುಷ್ಠಾನಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಲಿದ್ದೇವೆ ಎಂದಿದ್ದಾರೆ.

ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ: ರೈತರೊಂದಿಗೆ ಸಭೆ ನಡೆಸಿದ ನಂತರ ರಾಹುಲ್ ಗಾಂಧಿ ಭರವಸೆ
ರಾಹುಲ್ ಗಾಂಧಿ
Follow us on

ದೆಹಲಿ ಜುಲೈ 24: ಕನಿಷ್ಠ ಬೆಂಬಲ ಬೆಲೆ (MSP) ಮೇಲೆ ಕಾನೂನು ಖಾತರಿಗಾಗಿ ಬಿಜೆಪಿ (BJP) ನೇತೃತ್ವದ ಎನ್‌ಡಿಎ ಸರ್ಕಾರದ ಮೇಲೆ ಇಂಡಿಯಾ ಬಣ (INDIA bloc) ಒತ್ತಡ ಹೇರಲಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul  Gandhi) ಬುಧವಾರ ಹೇಳಿದ್ದಾರೆ.  ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿದ್ದ 12 ರೈತ ಮುಖಂಡರನ್ನು ಸಂಸತ್ತಿನ ಆವರಣದಲ್ಲಿ ಭೇಟಿಯಾದ ನಂತರ ಕಾಂಗ್ರೆಸ್ ನಾಯಕ ಈ ಹೇಳಿಕೆ ನೀಡಿದ್ದಾರೆ.

ಸಾರ್ವತ್ರಿಕ ಚುನಾವಣೆಯ ನಮ್ಮ ಪ್ರಣಾಳಿಕೆಯಲ್ಲಿ ನಾವು ಎಂಎಸ್‌ಪಿಗೆ ಕಾನೂನುಬದ್ಧ ಭರವಸೆ ನೀಡಿದ್ದೇವೆ. ನಾವು ಮೌಲ್ಯಮಾಪನವನ್ನು ಮಾಡಿದ್ದು ಅದನ್ನು ಕಾರ್ಯರೂಪಕ್ಕೆ ತರಬಹುದಾಗಿದೆ. ನಾವು ಇಂಡಿಯಾ ಬಣದ ಇತರ ನಾಯಕರೊಂದಿಗೆ ಚರ್ಚಿಸಲು ನಿರ್ಧರಿಸಿದ್ದೇವೆ. ಅದರ ಅನುಷ್ಠಾನಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಲಿದ್ದೇವೆ ಎಂದಿದ್ದಾರೆ ರಾಹುಲ್.

ರಾಹುಲ್ ಮಾತು


ಸಭೆಯಲ್ಲಿ ಲೋಕಸಭೆಯ ಕಾಂಗ್ರೆಸ್ ಸಂಸದರಾದ ಕೆಸಿ ವೇಣುಗೋಪಾಲ್, ದೀಪೇಂದರ್ ಸಿಂಗ್ ಹೂಡಾ, ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಮತ್ತು ಸುಖ್ಜಿಂದರ್ ಸಿಂಗ್ ರಾಂಧವಾ ಕೂಡ ಭಾಗವಹಿಸಿದ್ದರು.  ಲೋಕಸಭೆಯಲ್ಲಿ ತಮ್ಮ ಬೇಡಿಕೆಗಳನ್ನು ಪ್ರಸ್ತಾಪಿಸಲಾಗುವುದು. ಹರ್ಯಾಣದಲ್ಲಿ ನಡೆದ ಗುಂಡಿನ ದಾಳಿಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

ಫೆಬ್ರವರಿ 21 ರಂದು, ಹಿಸಾರ್‌ನಲ್ಲಿ ಪ್ರತಿಭಟನಾ ನಿರತ ರೈತರೊಂದಿಗೆ ಘರ್ಷಣೆಯಲ್ಲಿ ಹರ್ಯಾಣ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು ಎಂದು ಆರೋಪಿಸಲಾಯಿತು.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಕಾನೂನು ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಪರಿಶೀಲಿಸಲು ಜುಲೈ 24 ರಂದು ಸಮಿತಿಯನ್ನು ರಚಿಸಲು ಸುಪ್ರೀಂಕೋರ್ಟ್ ಪ್ರಸ್ತಾಪಿಸಿದೆ.

ಫೆಬ್ರವರಿ 13 ರಿಂದ ರೈತರು ಮೊಕ್ಕಾಂ ಹೂಡಿರುವ ಅಂಬಾಲ ಬಳಿಯ ಶಂಭು ಗಡಿಯಲ್ಲಿ ಒಂದು ವಾರ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿರುವ ಸುಪ್ರೀಂಕೋರ್ಟ್, ಸಮಿತಿಯಲ್ಲಿ ಸೇರಿಸಬಹುದಾದ ವ್ಯಕ್ತಿಗಳನ್ನು ಸೂಚಿಸುವಂತೆ ಕೇಂದ್ರ ಸರ್ಕಾರ ಮತ್ತು ಹರ್ಯಾಣ ಮತ್ತು ಪಂಜಾಬ್ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಇದನ್ನೂ ಓದಿ: ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಮರಳಿದ ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವ ಕಾನೂನುಬದ್ಧ ಖಾತರಿ ನೀಡುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ರ ಕೇಂದ್ರ ಬಜೆಟ್‌ನಲ್ಲಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಿಗೆ ₹ 1.52 ಲಕ್ಷ ಕೋಟಿ ಮೀಸಲಿಡುವುದಾಗಿ ಘೋಷಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:53 pm, Wed, 24 July 24