ಫ್ರೂಟಿ, ಟ್ರೋಫಿಕಾನಾ, ಆ್ಯಪಿ ಟೆಟ್ರಾ ಪ್ಯಾಕ್​ಗೆ ಜುಲೈ 1ರಿಂದ ನಿಷೇಧ?; ಇಲ್ಲಿದೆ ಮಾಹಿತಿ

| Updated By: ಸುಷ್ಮಾ ಚಕ್ರೆ

Updated on: Jun 13, 2022 | 5:12 PM

ಫ್ರೂಟಿ ಮತ್ತು ಆ್ಯಪಿ ಕಂಪನಿಗಳ ಮಾಲೀಕತ್ವದ ಪಾನೀಯ ಕಂಪನಿ ಪಾರ್ಲೆ ಆಗ್ರೋ ಕೂಡ ಪ್ಲಾಸ್ಟಿಕ್ ಸ್ಟ್ರಾಗಳ ಮೇಲಿನ ನಿಷೇಧವನ್ನು ಜಾರಿಗೊಳಿಸಲು ಗಡುವನ್ನು ಆರು ತಿಂಗಳವರೆಗೆ ವಿಸ್ತರಿಸುವಂತೆ ಸರ್ಕಾರವನ್ನು ಒತ್ತಾಯಿಸಿತ್ತು.

ಫ್ರೂಟಿ, ಟ್ರೋಫಿಕಾನಾ, ಆ್ಯಪಿ ಟೆಟ್ರಾ ಪ್ಯಾಕ್​ಗೆ ಜುಲೈ 1ರಿಂದ ನಿಷೇಧ?; ಇಲ್ಲಿದೆ ಮಾಹಿತಿ
ಆ್ಯಪಿ, ಫ್ರೂಟಿ
Image Credit source: India.com
Follow us on

ನವದೆಹಲಿ: ಮುಂದಿನ ತಿಂಗಳಿನಿಂದ (ಜುಲೈ 1) ಏಕ-ಬಳಕೆಯ (ಸಿಂಗಲ್ ಯೂಸ್) ಪ್ಲಾಸ್ಟಿಕ್ ವಸ್ತುಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರದಿಂದಾಗಿ ಫ್ರೂಟಿ, ಆ್ಯಪಿ (Appy), ರಿಯಲ್, ಟ್ರೋಪಿಕಾನಾ ಮತ್ತು ಮಾಜಾದಂತಹ (Maaza) ತಂಪಾದ ಪಾನೀಯಗಳಿಗೆ ಸಂಕಷ್ಟ ಎದುರಾಗಿದೆ. ಈ ಹಿಂದೆ, ಫ್ರೂಟಿ ಮತ್ತು ಆ್ಯಪಿ ಕಂಪನಿಗಳ ಮಾಲೀಕತ್ವದ ಪಾನೀಯ ಕಂಪನಿ ಪಾರ್ಲೆ ಆಗ್ರೋ ಕೂಡ ಪ್ಲಾಸ್ಟಿಕ್ ಸ್ಟ್ರಾಗಳ ಮೇಲಿನ ನಿಷೇಧವನ್ನು ಜಾರಿಗೊಳಿಸಲು ಗಡುವನ್ನು ಆರು ತಿಂಗಳವರೆಗೆ ವಿಸ್ತರಿಸುವಂತೆ ಸರ್ಕಾರವನ್ನು ಒತ್ತಾಯಿಸಿತ್ತು. ಸದ್ಯಕ್ಕೆ ಪ್ಲಾಸ್ಟಿಕ್ ಸ್ಟ್ರಾ ಸೇರಿದಂತೆ ಏಕ ಬಳಕೆಯ ಪ್ಲಾಸ್ಟಿಕ್‌ಗಳ ಮೇಲಿನ ಸರ್ಕಾರದ ನಿಷೇಧವನ್ನು 2022ರ ಜುಲೈ 1ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ.

ಕೇಂದ್ರ ಸರ್ಕಾರದ ನಿರ್ಧಾರವನ್ನು ‘ತರಾತುರಿ ನಿಷೇಧ’ ಎಂದು ಕರೆದಿರುವ ಪಾರ್ಲೆ ಆಗ್ರೋ ಇದು ಎಫ್‌ಎಂಸಿಜಿ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ಒಟ್ಟಾರೆ ವ್ಯವಹಾರಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಪ್ಲಾಸ್ಟಿಕ್ ಸ್ಟ್ರಾಗಳ ಬಳಕೆಯ ಮೇಲಿನ ಕೇಂದ್ರ ಸರ್ಕಾರದ ನೇತೃತ್ವದ ನಿಷೇಧವನ್ನು ಪಾರ್ಲೆ ಆಗ್ರೋ ಅನುಮೋದಿಸಿದರೂ ತಡೆಯಾಜ್ಞೆಯ ಅನುಷ್ಠಾನವನ್ನು 6 ತಿಂಗಳವರೆಗೆ ಮುಂದೂಡಬೇಕೆಂಬುದು ನಮ್ಮ ಮನವಿಯಾಗಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Viral News: ಬಕೆಟ್​ಗೂ ಒಂದು ಕಾಲ; ಅಮೆಜಾನ್​ನಲ್ಲಿ ಸೇಲ್​ಗಿದೆ 25,999 ರೂ. ಬೆಲೆಯ ಪ್ಲಾಸ್ಟಿಕ್ ಬಕೆಟ್!

ಪ್ಲಾಸ್ಟಿಕ್ ಸ್ಟ್ರಾಗಳ ಮೇಲಿನ ನಿಷೇಧವನ್ನು ಮುಂದೂಡುವಂತೆ ಅಮುಲ್ ಸಂಸ್ಥೆ ಕೂಡ ಪರಿಸರ ಸಚಿವಾಲಯವನ್ನು ಒತ್ತಾಯಿಸಿತ್ತು. ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೇಪರ್ ಸ್ಟ್ರಾಗಳ ಸಮರ್ಪಕ ಲಭ್ಯತೆಯ ಕೊರತೆಯಿಂದಾಗಿ ಪ್ಲಾಸ್ಟಿಕ್ ಸ್ಟ್ರಾಗಳ ಮೇಲೆ ವಿಧಿಸಿರುವ ನಿಷೇಧವನ್ನು ಒಂದು ವರ್ಷಕ್ಕೆ ಮುಂದೂಡುವಂತೆ ಪ್ರಮುಖ ಡೈರಿ ಸಂಸ್ಥೆಯಾದ ಅಮುಲ್ ಪರಿಸರ ಸಚಿವಾಲಯವನ್ನು ಒತ್ತಾಯಿಸಿತ್ತು.

ಸಿಂಗಲ್ ಯೂಸ್​ನ ಪ್ಲಾಸ್ಟಿಕ್ ಸ್ಟ್ರಾಗಳ ಮೇಲಿನ ನಿಷೇಧದ ಕುರಿತು ನಾವು ಪರಿಸರ ಕಾರ್ಯದರ್ಶಿಗೆ ಪತ್ರ ಬರೆದಿದ್ದೇವೆ ಎಂದು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಎಂಡಿ ಆರ್.ಎಸ್. ಸೋಧಿ ಕಳೆದ ತಿಂಗಳು ಹೇಳಿದ್ದರು. GCMMF ತನ್ನ ಹಾಲು ಮತ್ತು ಇತರ ಡೈರಿ ಉತ್ಪನ್ನಗಳನ್ನು ಅಮುಲ್ ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತದೆ. ನಮ್ಮ ಮಜ್ಜಿಗೆ ಮತ್ತು ಲಸ್ಸಿಯಲ್ಲಿರುವ ಪ್ಲಾಸ್ಟಿಕ್ ಸ್ಟ್ರಾವನ್ನು ಟೆಟ್ರಾ ಪ್ಯಾಕ್‌ಗೆ ಜೋಡಿಸಲಾಗಿದೆ. ಇದು ಪ್ರಾಥಮಿಕ ಪ್ಯಾಕೇಜಿಂಗ್‌ನ ಭಾಗವಾಗಿದೆ. ಹಾಗಾಗಿ, ಇದನ್ನು ವಿಸ್ತೃತ ಉತ್ಪಾದಕರ ಜವಾಬ್ದಾರಿ (ಇಪಿಆರ್) ಮತ್ತು ಮರುಬಳಕೆಯ ಭಾಗವಾಗಿ ಸೇರಿಸಲು ನಾವು ಪರಿಸರ ಸಚಿವಾಲಯವನ್ನು ಒತ್ತಾಯಿಸಿದ್ದೇವೆ ಎಂದು ಸೋಧಿ ಹೇಳಿದ್ದರು.

ಇದನ್ನೂ ಓದಿ: Amul: ಪ್ಲಾಸ್ಟಿಕ್ ಸ್ಟ್ರಾ ಬ್ಯಾನ್ ಮಾಡದಂತೆ ಪ್ರಧಾನಿ ಮೋದಿಗೆ ಅಮುಲ್ ಮನವಿ; ಕಾರಣವೇನು?

ಅಮುಲ್‌ಗೆ ದಿನಕ್ಕೆ 10ರಿಂದ 12 ಲಕ್ಷ ಪ್ಲಾಸ್ಟಿಕ್ ಸ್ಟ್ರಾಗಳು ಬೇಕಾಗುತ್ತವೆ. ಇದಲ್ಲದೆ, ಪೇಪರ್ ಸ್ಟ್ರಾಗಳನ್ನು ಉತ್ಪಾದಿಸಲು ಮೀಸಲಾದ ಸೌಲಭ್ಯಗಳನ್ನು ಸ್ಥಾಪಿಸಲು ಸ್ಥಳೀಯ ಉದ್ಯಮವನ್ನು ಒದಗಿಸುವಂತೆ ಕಂಪನಿಯು ಸಚಿವಾಲಯವನ್ನು ಒತ್ತಾಯಿಸಿದೆ ಎಂದು ಸೋಧಿ ಹೇಳಿದ್ದರು. ದೇಶೀಯ ಮಾರುಕಟ್ಟೆಯಲ್ಲಿ ಪೇಪರ್ ಸ್ಟ್ರಾಗಳು ಲಭ್ಯವಿಲ್ಲ, ನಮಗೆ ಸಾಮರ್ಥ್ಯವಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮಗೆ ಪೇಪರ್ ಸ್ಟ್ರಾಗಳು ಸಿಗುತ್ತಿಲ್ಲ ಎಂದು ಅವರು ಹೇಳಿದ್ದರು.

ಭಾರತವು ವಾರ್ಷಿಕವಾಗಿ ಸಂಯೋಜಿತ ಪ್ಲಾಸ್ಟಿಕ್ ಸ್ಟ್ರಾಗಳೊಂದಿಗೆ ಸುಮಾರು 6 ಶತಕೋಟಿ ಪ್ಯಾಕ್ ಪೇಪರ್ ಆಧಾರಿತ ಪಾನೀಯದ ಬಾಕ್ಸ್​ಗಳನ್ನು ಉತ್ಪಾದಿಸುತ್ತದೆ ಮತ್ತು ಮಾರಾಟ ಮಾಡುತ್ತದೆ ಎಂದು ಪಾರ್ಲೆ ಆಗ್ರೋ ಹೇಳಿದೆ. ಆದರೆ, ಪೇಪರ್ ಸ್ಟ್ರಾಗಳಂತಹ ಪರ್ಯಾಯಗಳನ್ನು ಒದಗಿಸಲು ಲಭ್ಯವಿರುವ ಸಾಮರ್ಥ್ಯವು ದಿನಕ್ಕೆ 1.3 ಮಿಲಿಯನ್ ಯೂನಿಟ್‌ಗಳು, ಇದು ನಿಜವಾದ ಅಗತ್ಯಕ್ಕಿಂತ ಕಡಿಮೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ