ಹೈದರಾಬಾದ್: ಆಂಧ್ರಪ್ರದೇಶದ ಮಚಿಲಿಪಟ್ಟಣಂ ಪಟ್ಟಣದ 15 ವರ್ಷದ ಬಾಲಕನೊಬ್ಬ ಪಬ್ಜಿ (PUBG) ಮೊಬೈಲ್ ಗೇಮಿಂಗ್ನಲ್ಲಿ ಸೋತಿದ್ದಕ್ಕೆ ಗೆಳೆಯರಿಂದ ಅಪಹಾಸ್ಯಕ್ಕೆ ಒಳಗಾಗಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ಈ ಬಾಲಕ ತನ್ನ ತಂದೆ ಮತ್ತು ಕುಟುಂಬದ ಸದಸ್ಯರೊಂದಿಗೆ ಬೇಸಿಗೆ ರಜಾ ದಿನಗಳನ್ನು ಕಳೆಯುತ್ತಿದ್ದ. ಅಲ್ಲಿ ಅವನು PUBG ಆಟದ ರೌಂಡ್ನಲ್ಲಿ ಸೋತಿದ್ದಕ್ಕೆ ಆತನ ಜೊತೆಗಿದ್ದವರು ಲೇವಡಿ ಮಾಡಿದ್ದರು. ಈ ಸಾವಿನ ಬಗ್ಗೆ ಆ ಬಾಲಕನ ಮನೆಯವರು ಅನುಮಾನ ವ್ಯಕ್ತಪಡಿಸಿದ್ದು, ಸಿಆರ್‌ಪಿಸಿ (ಅಪರಾಧ ಪ್ರಕ್ರಿಯಾ ಸಂಹಿತೆ) ಸೆಕ್ಷನ್ 174ರ ಅಡಿಯಲ್ಲಿ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿದ್ದಾರೆ.
ಲಕ್ನೋದಲ್ಲಿ ಕೆಲವು ದಿನಗಳ ಹಿಂದೆ ಇದೇ ರೀತಿಯ ಪಬ್ಜಿ ಆಟಕ್ಕೋಸ್ಕರ ಬಾಲಕನೊಬ್ಬ ತಾಯಿಯನ್ನೇ ಕೊಲೆ ಮಾಡಿದ್ದ. ಅದರ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಪಬ್ಜಿ ಆಡಿದ್ದಕ್ಕೆ ಬೈದ ಅಮ್ಮನನ್ನು 16 ವರ್ಷದ ಬಾಲಕ ಗುಂಡಿಕ್ಕಿ ಕೊಂದಿದ್ದ. ಸೆಪ್ಟೆಂಬರ್ 2020ರಿಂದ ಭದ್ರತಾ ಕಾರಣಗಳಿಗಾಗಿ ಪಬ್ಜಿ ಆಟವನ್ನು ಭಾರತದಲ್ಲಿ ನಿಷೇಧಿಸಲಾಗಿದೆ.
ಜೂನ್ 11ರ ರಾತ್ರಿ 15 ವರ್ಷದ ಬಾಲಕ ಸೋದರಸಂಬಂಧಿಗಳೊಂದಿಗೆ PUBG ಆಡುತ್ತಿದ್ದ. ಆಟದಲ್ಲಿ ಸೋತಿದ್ದಕ್ಕೆ ಬೇರೆ ಹುಡುಗರು ಚುಡಾಯಿಸಿದ ನಂತರ ಆತನ ತಂದೆ ಅವರಿಗೆ ಪಬ್ಜಿ ಆಡದಂತೆ ಗದರಿದ್ದರು. ಇದರಿಂದ ಆ ಹುಡುಗ ಇನ್ನಷ್ಟು ಬೇಸರ ಮಾಡಿಕೊಂಡಿದ್ದ. ರಾತ್ರಿ ಊಟವಾದ ನಂತರ ರೂಮಿನಲ್ಲೇ ಒಬ್ಬನೇ ಮಲಗಿದ್ದಾಗ ಇದೇ ಬೇಸರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: Shocking News: ಪಬ್ಜಿ ಆಡಬೇಡ ಎಂದ ಅಮ್ಮನನ್ನು ಕೊಂದ ಬಾಲಕ; ರೂಂ ಫ್ರೆಷನರ್ ಹಾಕಿ 2 ದಿನ ಶವ ಮುಚ್ಚಿಟ್ಟ!
ಹುಡುಗ ಹೆಚ್ಚಾಗಿ ಮೊಬೈಲ್ ಫೋನ್‌ನಲ್ಲಿ ಯಾವಾಗಲೂ ಆಟವಾಡುತ್ತಿದ್ದ. ಮನೆಯವರು ಗೇಲಿ ಮಾಡಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಆಟದಲ್ಲಿ ಸೋತಿದ್ದಕ್ಕೆ ಬೈದಿದ್ದ ಆತನ ತಂದೆ ಮರುದಿನ ಬೆಳಗ್ಗೆ ಮಗನ ರೂಮಿನ ಬಾಗಿಲು ಬಡಿದಾಗ ಬಾಗಿಲು ತೆರೆಯಲಿಲ್ಲ. ಕೊನೆಗೆ ಮನೆಯವರೆಲ್ಲ ಸೇರಿ ಬಾಗಿಲು ಒಡೆದು ನೋಡಿದಾಗ ಬಾಲಕ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದು ಗೊತ್ತಾಗಿದೆ.
ಲಕ್ನೋದಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು. 16 ವರ್ಷದ ಬಾಲಕ ಸದಾ ಪಬ್ಜಿ ಆಡುತ್ತಿದ್ದ. ಮೊಬೈಲ್ ಗೇಮ್ಗೆ ಅಡಿಕ್ಟ್ ಆಗಿದ್ದ ಆತನಿಂದ ಅಮ್ಮ ಬೇಸತ್ತಿದ್ದಳು. ಹೀಗಾಗಿ, ಆತನಿಗೆ ಆಗಾಗ ಬೈಯುತ್ತಿದ್ದಳು. ತನ್ನ ತಾಯಿ PUBG ಆಟವಾಡುವುದನ್ನು ವಿರೋಧಿಸಿದ್ದಕ್ಕಾಗಿ ಅಪ್ಪನ ರಿವಾಲ್ವರ್‌ನಿಂದ ಬಾಲಕ ಗುಂಡು ಹಾರಿಸಿದ್ದಾನೆ. ಅಮ್ಮನಿಗೆ ಶೂಟ್ ಮಾಡಿ ಕೊಂದ ಬಳಿಕ ಭಯಗೊಂಡ ಆ ಬಾಲಕ ಆ ಹೆಣವನ್ನು ಮನೆಯಲ್ಲೇ ಮುಚ್ಚಿಟ್ಟಿದ್ದಾನೆ. ಮರುದಿನ ಹೆಣದ ವಾಸನೆ ಮನೆಯಲ್ಲಿ ಹರಡಿದ ಬಳಿಕ ಆತ ಮನೆಗೆ ಏರ್ ಫ್ರೆಷನರ್ ಹೊಡೆದು ವಾಸನೆ ಹರಡದಂತೆ ಪ್ಲಾನ್ ಮಾಡಿದ್ದಾನೆ. 16 ವರ್ಷದ ಯುವಕ ಭಾನುವಾರ ಮುಂಜಾನೆ ತನ್ನ ತಂದೆಯ ಲೈಸೆನ್ಸ್ ಇರುವ ರಿವಾಲ್ವರ್‌ನಿಂದ ತನ್ನ ತಾಯಿಯನ್ನು ಶೂಟ್ ಮಾಡಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಗೆ ಗುಂಡು ತಗುಲಿದ ಮಹಿಳೆ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದ್ದಾರೆ.
ಆ ಮನೆಯಲ್ಲಿ ಆತನ 9 ವರ್ಷದ ತಂಗಿ ಕೂಡ ಇದ್ದಳು. ಆದರೆ, ಆಕೆಗೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನೂ ಕೊಲ್ಲುವುದಾಗಿ ಹೆದರಿಸಿ, ಅಮ್ಮನ ಹೆಣವನ್ನು ರೂಮೊಂದರಲ್ಲಿ ಇರಿಸಿ, ಮನೆಗೆ ರೂಮ್ ಫ್ರೆಷನರ್ ಸಿಂಪಡಿಸಿದ್ದಾನೆ. ಕೆಲಸದ ನಿಮಿತ್ತ ಬೇರೆ ಊರಿನಲ್ಲಿದ್ದ ಆತನ ತಂದೆ 2 ದಿನಗಳ ಬಳಿಕ ಮನೆಗೆ ಬಂದಾಗ ಈ ವಿಷಯ ಗೊತ್ತಾಗಿದೆ. ಅಪ್ಪನ ಬಳಿ ಸುಳ್ಳು ಕತೆ ಕಟ್ಟಿದ ಬಾಲಕ ರಿಪೇರಿ ಕೆಲಸಕ್ಕೆಂದು ಮನೆಗೆ ಬಂದಿದ್ದ ಎಲೆಕ್ಟ್ರಿಷಿಯನ್ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಹೇಳಿದ್ದ. ಬಳಿಕ ವಿಚಾರಣೆ ವೇಳೆ ಆತನೇ ಕೊಲೆ ಮಾಡಿರುವ ವಿಚಾರ ಗೊತ್ತಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:11 pm, Mon, 13 June 22