Murder: ಪಬ್​ಜಿ ಆಟದ ಬಳಿಕ ಜಗಳವಾಗಿ ಮೂವರು ಗೆಳೆಯರಿಂದ 22 ವರ್ಷದ ವ್ಯಕ್ತಿಯ ಹತ್ಯೆ

ಕಳೆದೆರಡು ದಿನಗಳಿಂದ ಪ್ರತಿದಿನ ಶಾಲೆಯ ಬಳಿ ನಾಲ್ವರು ಸ್ನೇಹಿತರು ಮದ್ಯ ಸೇವಿಸುತ್ತಿದ್ದುದನ್ನು ನೋಡಿದ್ದಾಗಿ ಸ್ಥಳೀಯರು ಹೇಳಿದ್ದಾರೆ. ಅವರೆಲ್ಲರೂ ಒಟ್ಟಾಗಿ ಆನ್‌ಲೈನ್ ಆಟಗಳನ್ನು ಆಡುತ್ತಿದ್ದರು ಮತ್ತು ಜಗಳವಾಡುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Murder: ಪಬ್​ಜಿ ಆಟದ ಬಳಿಕ ಜಗಳವಾಗಿ ಮೂವರು ಗೆಳೆಯರಿಂದ 22 ವರ್ಷದ ವ್ಯಕ್ತಿಯ ಹತ್ಯೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Mar 01, 2022 | 5:18 PM

ಥಾಣೆ: ಪಬ್​ಜಿ (PUBG) ಆಟದ ವಿಷಯಕ್ಕೆ ಜಗಳ ಉಂಟಾಗಿ, 22 ವರ್ಷದ ತಮ್ಮ ಸ್ನೇಹಿತನನ್ನು ಕೊಂದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆಯ ವರ್ತಕ್ ನಗರದ ಪೊಲೀಸರು ಇಂದು 19 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಹಾಗೇ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೀನಾ ಮೂಲದ ಅಪ್ಲಿಕೇಶನ್ ಆಗಿರುವ PUBG ಭಾರತದಲ್ಲಿ 2020ರ ಸೆಪ್ಟೆಂಬರ್​ನಿಂದ ನಿಷೇಧಿಸಲಾಗಿದೆ. ಆದರೆ, ಈ ನಾಲ್ವರು ಸ್ನೇಹಿತರು ನಿಷೇಧಿತ ಪಬ್​ಜಿ ಗೇಮ್​ನ ಯಾವ ಆವೃತ್ತಿಯನ್ನು ಆಡುತ್ತಿದ್ದರು ಎಂಬುದು ಖಚಿತವಾಗಿಲ್ಲ.

ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ವರ್ತಕ್ ನಗರದ ಲಿಟ್ಲ್ ಫ್ಲವರ್ ಸ್ಕೂಲ್ ಬಳಿ ಮೂವರು ತಮ್ಮ ಸ್ನೇಹಿತನನ್ನು ಹರಿತವಾದ ಆಯುಧದಿಂದ ಇರಿದು ಹತ್ಯೆ ಮಾಡಿದ್ದಾರೆ. ಕಳೆದೆರಡು ದಿನಗಳಿಂದ ಪ್ರತಿದಿನ ಶಾಲೆಯ ಬಳಿ ನಾಲ್ವರು ಸ್ನೇಹಿತರು ಮದ್ಯ ಸೇವಿಸುತ್ತಿದ್ದುದನ್ನು ನೋಡಿದ್ದಾಗಿ ಸ್ಥಳೀಯರು ಹೇಳಿದ್ದಾರೆ. ಅವರೆಲ್ಲರೂ ಒಟ್ಟಾಗಿ ಆನ್‌ಲೈನ್ ಆಟಗಳನ್ನು ಆಡುತ್ತಿದ್ದರು ಮತ್ತು ಜಗಳವಾಡುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ವರ್ತಕ್ ನಗರ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸದಾಶಿವ ನಿಕಮ್ ಮಾತನಾಡಿ, ಮೃತನನ್ನು ಸಯೀಲ್ ಜಾಧವ್ ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ 9.30ರಿಂದ 10 ಗಂಟೆಯ ನಡುವೆ ಕೊಲೆ ಮಾಡಲಾಗಿದೆ. ಪ್ರಮುಖ ಆರೋಪಿ ಪ್ರಣವ್ ಕೋಲಿ ಸೇರಿದಂತೆ ನಾಲ್ವರು ಸ್ನೇಹಿತರು ಆಗಾಗ್ಗೆ PUBG ಗೇಮ್ ಆಡುತ್ತಿದ್ದರು ಮತ್ತು ಆಟದ ನಂತರ ಯಾವುದೋ ವಿಷಯಕ್ಕೆ ಜಗಳವಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸೋಮವಾರ ರಾತ್ರಿ ನಾಲ್ವರು ಸ್ನೇಹಿತರು ಪಬ್​ಜಿ ಆಟ ಆಡಿದ್ದು, ಬಳಿಕ ಮದ್ಯ ಸೇವಿಸಿದ್ದಾರೆ. ಮದ್ಯ ಸೇವಿಸಿದ ನಂತರ ಅವರೆಲ್ಲರೂ ಆಟದ ವಿಷಯದಲ್ಲಿ ಜಗಳವಾಡಿದ್ದಾರೆ. ಈ ಸಮಯದಲ್ಲಿ ಇಬ್ಬರು ಅಪ್ರಾಪ್ತ ಹುಡುಗರು ಸೇರಿದಂತೆ 3 ಸ್ನೇಹಿತರು ಜಾಧವ್‌ಗೆ ಚಾಕುವಿನಿಂದ ಎದೆ, ಬೆನ್ನು, ಮೊಣಕಾಲು ಮತ್ತು ತಲೆಗೆ ಇರಿದಿದ್ದಾರೆ ಎನ್ನಲಾಗಿದೆ.

ಇದರಿಂದಾಗಿ ಸಯೀಲ್ ಜಾಧವ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮುಖ್ಯ ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 (ಕೊಲೆಗೆ ಶಿಕ್ಷೆ) ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಪಬ್​ಜಿ ಆಟದ ಬಳಿಕ ಹುಡುಗಿಯ ವಿಚಾರಕ್ಕೆ ಜಗಳ ನಡೆದು ಕೊಲೆ ನಡೆದಿದೆ ಎನ್ನಲಾಗುತ್ತಿದೆ.

ಪೊಲೀಸರಿಗೆ ಮಾಹಿತಿ ನೀಡಿರುವ ಸ್ಥಳೀಯ ನಿವಾಸಿ 33 ವರ್ಷದ ರೋಲ್ ಸಲ್ಡಾನ್ಹಾ, ನಾನು ರಸ್ತೆಯಲ್ಲಿ ಹಾದುಹೋಗುವಾಗ ನಾಲ್ವರು (ಸ್ನೇಹಿತರು) ಜಗಳವಾಡುವುದನ್ನು ನಾನು ನೋಡಿದೆ. ಅವರಲ್ಲಿ ಇಬ್ಬರು ಶಾಲೆಯಿಂದ ಹೊರಗುಳಿದಿದ್ದರು. ನಾನು ಜಗಳವಾಡುತ್ತಿರುವವರನ್ನು ಕರೆದು ಜಗಳ ನಿಲ್ಲಿಸುವಂತೆ ಹೇಳಿದೆ. ನಂತರ ನನಗೆ ಕೊಲೆಯ ವಿಷಯ ತಿಳಿದು ಆಘಾತವಾಯಿತು ಎಂದಿದ್ದಾರೆ.

ಇದನ್ನೂ ಓದಿ: Crime News: ಪಬ್​ಜಿ ಆಡಲು ಹುಟ್ಟುಹಬ್ಬಕ್ಕೆ ಹೊಸ ಮೊಬೈಲ್ ಕೊಡಿಸಲಿಲ್ಲವೆಂದು ಯುವತಿ ಆತ್ಮಹತ್ಯೆ

PUBG: ಪಬ್​ಜಿ ಪ್ರಭಾವ; ತನ್ನ ಕುಟುಂಬದ ಎಲ್ಲರನ್ನೂ ಶೂಟ್ ಮಾಡಿ ಕೊಂದ 14 ವರ್ಷದ ಬಾಲಕ

Published On - 5:17 pm, Tue, 1 March 22