Shocking News: ಪಬ್ಜಿ ಆಡಬೇಡ ಎಂದ ಅಮ್ಮನನ್ನು ಕೊಂದ ಬಾಲಕ; ರೂಂ ಫ್ರೆಷನರ್ ಹಾಕಿ 2 ದಿನ ಶವ ಮುಚ್ಚಿಟ್ಟ!
PUBG: ಸೇನಾಧಿಕಾರಿಯಾಗಿರುವ ಆತನ ತಂದೆ 2 ದಿನಗಳ ಬಳಿಕ ಮನೆಗೆ ಬಂದಾಗ ಹೆಂಡತಿಯ ಕೊಲೆಯಾಗಿರುವುದು ಗೊತ್ತಾಗಿದೆ. ಅಪ್ಪನ ಬಳಿ ಸುಳ್ಳು ಕತೆ ಕಟ್ಟಿದ ಬಾಲಕ ರಿಪೇರಿ ಕೆಲಸಕ್ಕೆಂದು ಮನೆಗೆ ಬಂದಿದ್ದ ಎಲೆಕ್ಟ್ರಿಷಿಯನ್ ಅಮ್ಮನನ್ನು ಕೊಂದಿದ್ದಾನೆ ಎಂದು ಹೇಳಿದ್ದ.
ಲಕ್ನೋ: ಬಹಳ ಅಪಾಯಕಾರಿ ಮೊಬೈಲ್ ಗೇಮ್ಗಳಲ್ಲಿ ಒಂದಾದ ಪಬ್ಜಿ (PUBG) ಮತ್ತೊಂದು ಜೀವವನ್ನು ಬಲಿ ಪಡೆದಿದೆ. ಮೊಬೈಲ್ ಹಿಡಿದು ಯಾವಾಗಲೂ ಪಬ್ಜಿ ಆಡುತ್ತಿದ್ದ 16 ವರ್ಷದ ಮಗನಿಗೆ ಇನ್ನುಮುಂದೆ ಈ ಆಟ ಆಡಬಾರದು ಎಂದು ಅಮ್ಮ ಎಚ್ಚರಿಸಿದ್ದಳು. ಪಬ್ಜಿ ಆಡಬೇಡ ಎಂದ ಅಮ್ಮನ ಮೇಲೆ ಕೋಪಗೊಂಡ ಮಗ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಲಕ್ನೋದಲ್ಲಿ ನಡೆದಿದೆ.
16 ವರ್ಷದ ಈ ಬಾಲಕ ಸದಾ ಪಬ್ಜಿ ಆಡುವ ಚಟ ಹೊಂದಿದ್ದ. ಮೊಬೈಲ್ ಗೇಮ್ಗೆ ಅಡಿಕ್ಟ್ ಆಗಿದ್ದ ಆತನಿಂದ ಅಮ್ಮ ಬೇಸತ್ತಿದ್ದಳು. ಹೀಗಾಗಿ, ಆತನಿಗೆ ಆಗಾಗ ಬೈಯುತ್ತಿದ್ದಳು. ಆದರೆ, ಮಗನಿಗೆ ಬುದ್ಧಿವಾದ ಹೇಳಿದ ಆಕೆ ಮಗನಿಂದಲೇ ಕೊಲೆಯಾಗಿದ್ದಾಳೆ. ಈ ಕೊಲೆ ನಡೆದು 2 ದಿನಗಳ ಬಳಿಕ ವಿಷಯ ತಿಳಿದ ಕೂಡಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅಪ್ರಾಪ್ತ ಬಾಲಕ ತನ್ನ ತಾಯಿ PUBG ಆಟವಾಡುವುದನ್ನು ವಿರೋಧಿಸಿದ್ದಕ್ಕಾಗಿ ಅಪ್ಪನ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ತಿಳಿಸಿದ್ದಾರೆ.
ಅಮ್ಮನಿಗೆ ಶೂಟ್ ಮಾಡಿ ಕೊಂದ ಬಳಿಕ ಭಯಗೊಂಡ ಆ ಬಾಲಕ ಆ ಹೆಣವನ್ನು ಮನೆಯಲ್ಲೇ ಮುಚ್ಚಿಟ್ಟಿದ್ದಾನೆ. ಮರುದಿನ ಹೆಣದ ವಾಸನೆ ಮನೆಯಲ್ಲಿ ಹರಡಿದ ಬಳಿಕ ಆತ ಮನೆಗೆ ಏರ್ ಫ್ರೆಷನರ್ ಹೊಡೆದು ವಾಸನೆ ಹರಡದಂತೆ ಪ್ಲಾನ್ ಮಾಡಿದ್ದಾನೆ. 16 ವರ್ಷದ ಯುವಕ ಭಾನುವಾರ ಮುಂಜಾನೆ ತನ್ನ ತಂದೆಯ ಲೇಸೆನ್ಸ್ ಇರುವ ರಿವಾಲ್ವರ್‌ನಿಂದ ತನ್ನ ತಾಯಿಯನ್ನು ಶೂಟ್ ಮಾಡಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಗೆ ಗುಂಡು ತಗುಲಿದ ಮಹಿಳೆ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿ: Shocking News: ಇಲ್ಲಿ ಮೂತ್ರದಿಂದ ತಯಾರಾಗುತ್ತೆ ಬಿಯರ್; ಚಪ್ಪರಿಸಿ ಕುಡಿಯೋರೂ ಇದಾರೆ ಸ್ವಾಮಿ!
ಆ ಮನೆಯಲ್ಲಿ ಆತನ 9 ವರ್ಷದ ತಂಗಿ ಕೂಡ ಇದ್ದಳು. ಆದರೆ, ಆಕೆಗೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನೂ ಕೊಲ್ಲುವುದಾಗಿ ಹೆದರಿಸಿ, ಅಮ್ಮನ ಹೆಣವನ್ನು ರೂಮೊಂದರಲ್ಲಿ ಇರಿಸಿ, ಮನೆಗೆ ರೂಮ್ ಫ್ರೆಷನರ್ ಸಿಂಪಡಿಸಿದ್ದಾನೆ. ಕೆಲಸದ ನಿಮಿತ್ತ ಬೇರೆ ಊರಿನಲ್ಲಿದ್ದ ಆತನ ತಂದೆ 2 ದಿನಗಳ ಬಳಿಕ ಮನೆಗೆ ಬಂದಾಗ ಈ ವಿಷಯ ಗೊತ್ತಾಗಿದೆ. ಅಪ್ಪನ ಬಳಿ ಸುಳ್ಳು ಕತೆ ಕಟ್ಟಿದ ಬಾಲಕ ರಿಪೇರಿ ಕೆಲಸಕ್ಕೆಂದು ಮನೆಗೆ ಬಂದಿದ್ದ ಎಲೆಕ್ಟ್ರಿಷಿಯನ್ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಹೇಳಿದ್ದ. ಹೀಗಾಗಿ, ಆತನ ತಂದೆ ಪೊಲೀಸರಿಗೆ ಈ ವಿಷಯವನ್ನು ತಿಳಿಸಿದ್ದರು.
ಆ ಬಾಲಕನ ತಂದೆ ಸೇನಾಧಿಕಾರಿಯಾಗಿದ್ದು, ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಷಯ ತಿಳಿದ ಕೂಡಲೆ ಆ ಮನೆಗೆ ಬಂದ ಪೊಲೀಸರಿಗೆ ಆ ಬಾಲಕ ಅದೇ ಕತೆಯನ್ನು ಹೇಳಿದ್ದ. ಆದರೆ, ಪೊಲೀರು ತನಿಖೆ ನಡೆಸಲು ಆ ಹುಡುಗನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಭಯಗೊಂಡ ಆತ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:21 am, Wed, 8 June 22