ಕೊಲ್ಕತ್ತಾ: ಜೀವನೋಪಾಯಕ್ಕಾಗಿ ನದಿ ಬಳಿ ತೆರಳಿ ಮೀನು ಹಿಡಿಯುವ ಕಾಯಕ ಮಾಡಿಕೊಂಡಿದ್ದ ವೃದ್ಧೆಗೆ 52 ಕೆ.ಜಿ ತೂಕದ ಬೃಹತ್ ಗಾತ್ರದ ಮೀನು ಒಂದು ಆಕಸ್ಮಿಕವಾಗಿ ಸಿಕ್ಕಿರುವ ಸ್ವಾರಸ್ಯಕರ ಪ್ರಸಂಗ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಎಂದಿನಂತೆ ಮೀನು ಹಿಡಿಯಲು ನದಿ ದಡಕ್ಕೆ ಬಂದ ವೃದ್ಧೆ ಗಾಳ ಹಾಕಿ ಮೀನು ಹಿಡಿಯಲು ಕಾದು ಕೂತಿದ್ದ ವೇಳೆ ತೀರಕ್ಕೆ ಭಾರಿ ಗಾತ್ರದ ಮೀನಿನ ಕಳೇಬರವೊಂದು ತೇಲಿಬಂದಿದೆ. ಅದು ಸಣ್ಣಪುಟ್ಟ ಮೀನು ಅಲ್ಲ, ಬರೋಬ್ಬರಿ 52 ಕೆ.ಜಿ. ತೂಕದ ಮೀನು. ನದಿಯಲ್ಲಿ ಹಾದು ಹೋಗುತಿದ್ದ ದೋಣಿಗೆ ಸಿಲುಕಿ ಮೀನು ಸಾವನ್ನಪ್ಪಿದಂತೆ ಕಂಡುಬಂದಿದೆ.
ಅಪ್ಪಾ!! ಕೊನೆಗೂ ಅದೃಷ್ಟ ಖುಲಾಯಿಸಿತು ಅಂತಾ ಸಂತಸದಲ್ಲಿದ್ದ ವೃದ್ಧೆ ಕೂಡಲೇ ಅದನ್ನು ಮಾರುಕಟ್ಟೆಗೆ ತಂದಿದ್ದಾಳೆ. ಮೀನಿನ ಗಾತ್ರ ನೋಡಿ ಒಂದು ಕ್ಷಣ ಶಾಕ್ ಆದ ವ್ಯಾಪಾರಿಯೊಬ್ಬ ಮರುಯೋಚಿಸದೆ ಅದನ್ನು ಖರೀದಿಸಿದ್ದಾನೆ.
ಅದಕ್ಕೆ ಬರೋಬ್ಬರಿ ಮೂರು ಲಕ್ಷ ರೂಪಾಯಿ ಕೊಟ್ಟು ಕೊಂಡಿದ್ದಾನೆ. ಈ ತಳಿಯ ಮೀನಿನ ಕೊಬ್ಬಿಗೆ ವಿದೇಶದಲ್ಲಿ ಸಾಕಷ್ಟು ಬೇಡಿಕೆಯಿರುವ ಹಿನ್ನೆಲೆಯಲ್ಲಿ ಇದಕ್ಕೆ ಒಳ್ಳೆ ಮೌಲ್ಯ ದೊರೆಯುತ್ತದೆ ಎಂಬ ಲೆಕ್ಕಾಚಾರವಿದೆ.