ನವದೆಹಲಿ: ಕಳೆದ 7 ತಿಂಗಳಿನಿಂದ ಕೋಮಾದಲ್ಲಿರುವ ಮಹಿಳೆಯೊಬ್ಬರು ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅಪರೂಪದ ಘಟನೆ ನಡೆದಿದೆ. ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗಳಾಗಿ ದೆಹಲಿಯ ಏಮ್ಸ್ ಟ್ರಾಮಾ ಸೆಂಟರ್‌ನಲ್ಲಿ 7 ತಿಂಗಳ ಕಾಲ ಕೋಮಾದಲ್ಲಿದ್ದ ಮಹಿಳೆಯೊಬ್ಬರು ಇದೀಗ ಮಗುವಿಗೆ ಜನ್ಮ ನೀಡಿದ್ದಾರೆ. 23 ವರ್ಷದ ಈ ಮಹಿಳೆಯನ್ನು ಏಪ್ರಿಲ್ 1ರಂದು ಏಮ್ಸ್‌ಗೆ ಕರೆತರಲಾಗಿತ್ತು.
ಅಪಘಾತದ ವೇಳೆ ಶಫಿಯಾ ಎಂಬ ಈ 23 ವರ್ಷದ ಮಹಿಳೆ 40 ದಿನಗಳ ಗರ್ಭಿಣಿಯಾಗಿದ್ದರು. ಬುಲಂದ್‌ಶರ್‌ನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಆಕೆಯನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ಕಳುಹಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ಸಮಯದಿಂದ ಇದುವರೆಗೂ ಅವರು 4 ನರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅಕ್ಟೋಬರ್ 22ರಂದು ಅವರಿಗೆ ನಾರ್ಮಲ್ ಡೆಲಿವರಿಯಾಗಿದ್ದು, ಮಗು ಆರೋಗ್ಯಯುತವಾಗಿದೆ. ಆದರೆ, ತಾಯಿ ಇನ್ನೂ ಕೋಮಾದಿಂದ ಹೊರಬಂದಿಲ್ಲ.
ಇದನ್ನೂ ಓದಿ: ನಿರಂತರ ಅತ್ಯಾಚಾರ, 5 ಬಾರಿ ಗರ್ಭಪಾತ: ಚಳ್ಳಕೆರೆ CPI ವಿರುದ್ಧ ರೇಪ್ ಕೇಸ್ ದಾಖಲಿಸಿ ಈಗ ಉಲ್ಟಾ ಹೊಡೆದ ಯುವತಿ
ಅವರು 18 ವಾರಗಳ ಗರ್ಭಿಣಿಯಾಗಿದ್ದಾಗ ಮಾಡಿದ ಅಲ್ಟ್ರಾಸೌಂಡ್ ಸ್ಕ್ಯಾನ್ನಲ್ಲಿ ಅವರ ಮಗು ಆರೋಗ್ಯವಾಗಿದೆ ಎಂದು ದೃಢಪಡಿಸಲಾಗಿತ್ತು. ಸದ್ಯ ಆ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ನರಶಸ್ತ್ರಚಿಕಿತ್ಸಕ ಡಾ. ದೀಪಕ್ ಗುಪ್ತಾ ಅವರ ಪ್ರಕಾರ, ಶಫಿಯಾಗೆ ಪ್ರಜ್ಞೆ ಮರಳುವ ಸಾಧ್ಯತೆ ಶೇ. 10ರಿಂದ 15ರಷ್ಟಿದೆ.
ಗರ್ಭಧಾರಣೆಯ ಮೊದಲ ಮತ್ತು ಎರಡನೇ ತ್ರೈಮಾಸಿಕದಲ್ಲಿ ನಾವು ಆಕೆಯ ಗರ್ಭಧಾರಣೆಯನ್ನು ಕೊನೆಗೊಳಿಸಬೇಕೇ ಅಥವಾ ತಾಯಿ ಇನ್ನೂ ಪ್ರಜ್ಞಾಹೀನರಾಗಿದ್ದರಿಂದ ಗರ್ಭಾವಸ್ಥೆಯನ್ನು ಮುಂದುವರಿಸಬೇಕೆ ಎಂಬುದರ ಕುರಿತು ಸಾಕಷ್ಟು ಚರ್ಚೆಗಳನ್ನು ನಡೆಸಿದೆವು. 2 ಅಲ್ಟ್ರಾಸೌಂಡ್ ಪರೀಕ್ಷೆಗಳಲ್ಲಿಯೂ ಭ್ರೂಣದಲ್ಲಿರುವ ಮಗು ಆರೋಗ್ಯವಾಗಿದೆ ಎಂಬುದು ಗೊತ್ತಾದ್ದರಿಂದ ಆ ಮಗುವನ್ನು ಅಬಾರ್ಷನ್ ಮಾಡುವುದು ಬೇಡವೆಂದು ನಿರ್ಧರಿಸಿದೆವು. ಅವರ ಕುಟುಂಬಸ್ಥರು ಕೂಡ ಮಗುವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದರು. ನನ್ನ 22 ವರ್ಷಗಳ ವೃತ್ತಿಜೀವನದಲ್ಲಿ ಈ ರೀತಿಯ ಪ್ರಕರಣವನ್ನು ನೋಡಿಲ್ಲ ಎಂದು ಡಾ. ಗುಪ್ತಾ ಹೇಳಿದ್ದಾರೆ.