ಸ್ವಾತಂತ್ರ್ಯ ದಿನದಂದು ಪ್ರತಿಭಟನಾ ನಿರತ ರೈತರಿಂದ ಟ್ರ್ಯಾಕ್ಟರ್ ಪರೇಡ್​; ಈ ಬಾರಿ ಮಹಿಳೆಯರ ನೇತೃತ್ವ

| Updated By: Lakshmi Hegde

Updated on: Aug 14, 2021 | 1:10 PM

Tractor Parade: ನಾವು ಆಗಸ್ಟ್​ 15ರಂದು ಬೆಳಗ್ಗೆ 11ಗಂಟೆಗೆ ಟ್ರ್ಯಾಕ್ಟರ್ ಪರೇಡ್​ ಆರಂಭ ಮಾಡುತ್ತೇವೆ. ಉಚನಾ ಕಲನ್ ಮೂಲಕ ನಮ್ಮ ಟ್ರ್ಯಾಕ್ಟರ್​ ಪರೇಡ್​ ಹಾದುಹೋಗಲಿದೆ ಎಂದು ಜಿಂದ್​ ಜಿಲ್ಲೆಯ ಬಿಕೆಯು (Bharatiya Kisan Union) ಅಧ್ಯಕ್ಷ ಆಜಾದ್​ ಸಿಂಗ್​ ಪಲ್ವಾನ್​ ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನದಂದು ಪ್ರತಿಭಟನಾ ನಿರತ ರೈತರಿಂದ ಟ್ರ್ಯಾಕ್ಟರ್ ಪರೇಡ್​; ಈ ಬಾರಿ ಮಹಿಳೆಯರ ನೇತೃತ್ವ
ಟ್ರ್ಯಾಕ್ಟರ್ ಪರೇಡ್​ ರಿಹರ್ಸಲ್​
Follow us on

ದೆಹಲಿ: ಕೇಂದ್ರ ಸರ್ಕಾರ (Central Government)ದ ಮೂರು ಕೃಷಿ ಕಾಯ್ದೆ (Farm Laws)ಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರಿದಿದೆ. ಗಾಳಿ..ಮಳೆ, ಕೊವಿಡ್​ 19 ಮತ್ತದರ ರೂಪಾಂತರಿ ವೈರಸ್​​ಗಳ ಪ್ರಸರಣದ ನಡುವೆಯೂ ರೈತರು ಮಾತ್ರ ತಮ್ಮ ಪ್ರತಿಭಟನೆ ಹಿಂಪಡೆದಿಲ್ಲ. ಕಳೆದ ಗಣರಾಜ್ಯೋತ್ಸವದಂದು ರೈತರು ದೆಹಲಿಯ ಕೆಂಪುಕೋಟೆ ಬಳಿ, ಟ್ರ್ಯಾಕ್ಟರ್​ ಪರೇಡ್ (Tractor Parade)​ ಹೆಸರಲ್ಲಿ ಗಲಭೆ ಸೃಷ್ಟಿಸಿದ್ದರು. ಶಿಸ್ತಿನ ಪ್ರತಿಭಟನೆ ನಡೆಸುವುದಾಗಿ ರೈತರ ಮುಖಂಡರು ಹೇಳಿದ್ದರೂ, ನಂತರ ಅವರ ಕೈಮೀರಿ ಹೋಗಿ ಹಿಂಸಾಚಾರಕ್ಕೆ ತಲುಪಿತ್ತು. ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜದೊಟ್ಟಿಗೆ ಸಿಖ್​​ರ ಧ್ವಜವನ್ನು ಹಾರಿಸಿದ್ದರು. ಇದೀಗ ಸ್ವಾತಂತ್ರ್ಯ ದಿನಾಚರಣೆ(Independence Day) ನಿಮಿತ್ತ ಕೂಡ ರೈತರು ಟ್ರ್ಯಾಕ್ಟರ್​ ಪರೇಡ್​ ನಡೆಸಲು ನಿರ್ಧರಿಸಿದ್ದಾರೆ. ಆದರೆ ಈ ಬಾರಿ ಹರ್ಯಾಣದ ಜಿಂದ್​ ಜಿಲ್ಲೆಯಲ್ಲಿ ಟ್ರ್ಯಾಕ್ಟರ್​ ಪರೇಡ್​ ನಡೆಯಲಿದೆ ಮತ್ತು ಇದಕ್ಕೆ ರೈತ ಮಹಿಳೆಯರು ನೇತೃತ್ವ ವಹಿಸಲಿದ್ದಾರೆ.

ನಾಳೆ ಸ್ವಾತಂತ್ರ್ಯೋತ್ಸವದಂದು ನಡೆಸಲಿರುವ ಟ್ರ್ಯಾಕ್ಟರ್​ ಪರೇಡ್​ಗಾಗಿ ಇಂದು ಜಿಂದ್​ ಜಿಲ್ಲೆಯ ಉಚನಾ ಕಲನ್​​ನಲ್ಲಿ ರೈತರು ಪೂರ್ವಾಭ್ಯಾಸ ನಡೆಸಿದರು. ಈ ವೇಳೆ ಮಾತನಾಡಿದ ರೈತ ಮುಖಂಡರು, ಟ್ರ್ಯಾಕ್ಟರ್​ ಪರೇಡ್​ನಲ್ಲಿ 20 ಸಾವಿರ ರೈತರು ಪಾಲ್ಗೊಳ್ಳಲಿದ್ದು, 5000 ವಾಹನಗಳು ಇರಲಿವೆ ಎಂದು ತಿಳಿಸಿದ್ದಾರೆ. ಇನ್ನು ಪ್ರತಿಭಟನಾ ರೈತರು ಈ ಬಾರಿಯ 75ನೇ ಸ್ವಾತಂತ್ರ್ಯ ದಿನವನ್ನು ಕಿಸಾನ್​ ಮಜ್​ದೂರ್​ ಆಜಾದಿ ಸಂಗ್ರಾಮ ದಿವಸ್​ ( Kisan Mazdoor Azaadi Sangram Diwas) ಎಂದು ಆಚರಿಸುತ್ತಿದ್ದಾರೆ.

ನಾವು ಆಗಸ್ಟ್​ 15ರಂದು ಬೆಳಗ್ಗೆ 11ಗಂಟೆಗೆ ಟ್ರ್ಯಾಕ್ಟರ್ ಪರೇಡ್​ ಆರಂಭ ಮಾಡುತ್ತೇವೆ. ಉಚನಾ ಕಲನ್ ಮೂಲಕ ನಮ್ಮ ಟ್ರ್ಯಾಕ್ಟರ್​ ಪರೇಡ್​ ಹಾದುಹೋಗಲಿದೆ ಎಂದು ಜಿಂದ್​ ಜಿಲ್ಲೆಯ ಬಿಕೆಯು (Bharatiya Kisan Union) ಅಧ್ಯಕ್ಷ ಆಜಾದ್​ ಸಿಂಗ್​ ಪಲ್ವಾನ್​ ತಿಳಿಸಿದ್ದಾರೆ. ಹಾಗೇ, ಟ್ರ್ಯಾಕ್ಟರ್​ ಪರೇಡ್​​ನ್ನು ಮಹಿಳೆಯರು ಮುನ್ನಡೆಸಲಿದ್ದಾರೆ. ಅವರು ತಮ್ಮ ಸಾಂಸ್ಕೃತಿಕ ಉಡುಗೆಯನ್ನು ಧರಿಸಿ, ಟ್ರ್ಯಾಕ್ಟರ್​ ಪರೇಡ್​ನಲ್ಲಿ ಭಾಗವಹಿಸುತ್ತಾರೆ. ಈ ಮೂಲಕ ಮಹಿಳಾ ಶಕ್ತಿ ಪ್ರದರ್ಶನ ಆಗಲಿದೆ ಎಂದೂ ಆಜಾದ್​ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: Mahatma Gandhi: ಮಹಾತ್ಮ ಗಾಂಧಿಗೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಲು ನಿರ್ಣಯ ಮಂಡನೆ

New Novel : ಅಚ್ಚಿಗೂ ಮೊದಲು : ವಾರದೊಪ್ಪತ್ತಿನಲ್ಲಿ ಓದುಗರ ಕೈಗೆ ವಿವೇಕ ಶಾನಭಾಗರ ‘ಸಕೀನಾಳ ಮುತ್ತು’

Published On - 12:57 pm, Sat, 14 August 21