ಹೈದರಾಬಾದ್: ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ಹಾರ್ಟಿಕಲ್ಚರಲ್ ಪ್ರೊಡ್ಯೂಸರ್ಸ್ (AIPH) ನೀಡುವ ವರ್ಲ್ಡ್ ಗ್ರೀನ್ ಸಿಟಿ ಅವಾರ್ಡ್ಸ್ 2022 ಅನ್ನು ಹೈದರಾಬಾದ್ (Hyderabad) ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಮೂಲಕ ಹೈದರಾಬಾದ್ನ ಮುಕುಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ. ಶುಕ್ರವಾರ ಬಿಡುಗಡೆಯಾದ ಅಧಿಕೃತ ಪ್ರಕಟಣೆಯ ಪ್ರಕಾರ, ಹೈದರಾಬಾದ್ ಈ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಭಾರತೀಯ ನಗರವಾಗಿದೆ. ಇದು ತೆಲಂಗಾಣ (Telangana) ಮತ್ತು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ. ಹೈದರಾಬಾದ್ ಎಲ್ಲ 6 ವಿಭಾಗಗಳಲ್ಲಿಯೂ ‘ವರ್ಲ್ಡ್ ಗ್ರೀನ್ ಅವಾರ್ಡ್ 2022’ ಗೆದ್ದುಕೊಂಡಿದೆ.
ಔಟರ್ ರಿಂಗ್ ರೋಡ್ (ORR)ನಲ್ಲಿ ಮತ್ತು ಸುತ್ತಲೂ ಹಚ್ಚ ಹಸಿರನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಹೈದರಾಬಾದ್ ಪ್ರತಿಷ್ಠಿತ AIPH ಗ್ಲೋಬಲ್ ‘ವರ್ಲ್ಡ್ ಗ್ರೀನ್ ಸಿಟಿ ಅವಾರ್ಡ್ಸ್ 2022’ ಅನ್ನು ಪಡೆದುಕೊಂಡಿದೆ. ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ. ರಾಮರಾವ್ ಅವರು ಸಂಪೂರ್ಣ ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ತಂಡ ಮತ್ತು ವಿಶೇಷ ಮುಖ್ಯ ಕಾರ್ಯದರ್ಶಿ ಅರವಿಂದ್ ಕುಮಾರ್ ಅವರನ್ನು ಈ ಸಾಧನೆಗಾಗಿ ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ ಸೇರಿ ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ: ಹಳದಿ ಅಲರ್ಟ್ ಘೋಷಣೆ
ಹೈದರಾಬಾದ್ಗೆ ಪ್ರತಿಷ್ಠಿತ “ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಹಾರ್ಟಿಕಲ್ಚರ್ ಪ್ರೊಡ್ಯೂಸರ್ಸ್” (AIPH) ಪ್ರಶಸ್ತಿ ಲಭಿಸಿರುವುದಕ್ಕೆ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಅಂತಾರಾಷ್ಟ್ರೀಯ ಪ್ರಶಸ್ತಿಗಳು ತೆಲಂಗಾಣ ಮತ್ತು ದೇಶದ ಕೀರ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಿವೆ ಎಂದಿದ್ದಾರೆ.
ಈ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಆಯ್ಕೆಯಾದ ಭಾರತದ ಏಕೈಕ ನಗರ ಹೈದರಾಬಾದ್ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಿಎಂ ಕೆಸಿಆರ್ ಹೇಳಿದ್ದಾರೆ.