45 ವರ್ಷಗಳ ನಂತರ ಇದೇ ಮೊದಲ ಬಾರಿಗೆ ತಾಜ್ ಮಹಲ್ ಆವರಣ ತಲುಪಿದ ಯಮುನೆಯ ನೀರು
ಆಗ್ರಾದಲ್ಲಿ ಪ್ರವಾಹದಂತಹ ಪರಿಸ್ಥಿತಿಯ ನಡುವೆ ಅಧಿಕಾರಿಗಳು ಪರಿಹಾರ ಸಿದ್ಧತೆಯನ್ನು ಹೆಚ್ಚಿಸಿದ್ದಾರೆ. ನದಿಯು ಉಕ್ಕಿ ಹರಿಯಲು ಪ್ರಾರಂಭಿಸಿದಾಗ, ಹತ್ತಿರದ ರಸ್ತೆಗಳು ಮತ್ತು ತಾಜ್‌ಗಂಜ್‌ನ ಸ್ಮಶಾನವನ್ನು ಮುಳುಗಿಸಿದ್ದು, ಇತ್ಮದ್-ಉದ್-ದೌಲಾ ಸ್ಮಾರಕದ ಗೋಡೆಯನ್ನು ಮುಟ್ಟಿತು.
ದೆಹಲಿ ಜುಲೈ 18: ದೆಹಲಿಯಲ್ಲಿ (Delhi) ವಿನಾಶವನ್ನು ಉಂಟುಮಾಡಿದ ನಂತರ, ಯಮುನಾ ನದಿ (Yamuna River) ನೀರಿನ ಮಟ್ಟ ಆಗ್ರಾದಲ್ಲಿ (Agra) 495.8 ಅಡಿ ಏರಿಕೆ ಆಗಿದೆ. ‘ಕಡಿಮೆ ಪ್ರವಾಹದ ಮಟ್ಟ’ದ ಹಂತವನ್ನು ದಾಟಿದ ಯಮುನೆ 45 ವರ್ಷಗಳ ನಂತರ ಇದೇ ಮೊದಲ ಬಾರಿಗೆ ತಾಜ್ ಮಹಲ್ (Taj mahal) ಆವರಣ ತಲುಪಿದೆ. ಸಾಮಾಜಿಕ ಮಾಧ್ಯಮದಲ್ಲಿನ ಹರಿದಾಡುತ್ತಿರುವ ವಿಡಿಯೊದಲ್ಲಿ ಯಮುನೆಯ ನೀರು ತಾಜ್ ಮಹಲ್ ಉದ್ಯಾನವನ್ನು ಮುಳುಗಿಸುತ್ತಿರುವುದನ್ನು ಕಾಣಬಹುದು. 1978 ರ ಪ್ರವಾಹದ ಸಮಯದಲ್ಲಿ ಯಮುನಾ ಕೊನೆಯ ಬಾರಿ ತಾಜ್ ಮಹಲ್ ಆವರಣ ತಲುಪಿತ್ತು. ನೀರಿನ ಮಟ್ಟವು ಅಂದು 495 ಅಡಿಗಳಷ್ಟು ‘ಕಡಿಮೆ-ಪ್ರವಾಹ ಮಟ್ಟವನ್ನು’ ಮೀರಿ 497.9 ಅಡಿಗಳನ್ನು ತಲುಪಿತ್ತು.
ಎಲ್ಲವನ್ನೂ ತಡೆದು ಕೊಳ್ಳುವ ತಾಜ್ನ ಈ ವಿನ್ಯಾಸದ ಬಗ್ಗೆ ಎಕನಾಮಿಕ್ ಟೈಮ್ಸ್‌ನೊಂದಿಗೆ ಮಾತನಾಡಿದ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ಸಂರಕ್ಷಣಾ ಸಹಾಯಕ ಪ್ರಿನ್ಸ್ ವಾಜಪೇಯಿ ಅವರು ಈ ಸಮಾಧಿಯನ್ನು ಪ್ರವಾಹವನ್ನು ತಡೆದುಕೊಳ್ಳಲು ರಚಿಸಲಾಗಿದೆ. ಹೆಚ್ಚಿನ ಪ್ರವಾಹದ ಸಮಯದಲ್ಲಿಯೂ ಸಹ ನೀರು ಮುಖ್ಯ ರಚನೆಯನ್ನು ಪ್ರವೇಶಿಸದಂತೆ ಖಚಿತಪಡಿಸಿಕೊಳ್ಳಲು ಸ್ಮಾರಕವನ್ನು ನಿಖರವಾಗಿ ಯೋಜಿಸಲಾಗಿದೆ ಎಂದಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಸಿಕಂದ್ರದ ಕೈಲಾಸ ದೇಗುಲದಿಂದ ತಾಜ್ ಮಹಲ್ ಬಳಿಯ ದಸರಾ ಘಾಟ್ವರೆಗೆ ನದಿ ಘಾಟ್‌ಗಳಲ್ಲಿ ಪ್ರವಾಹ ತಡೆಯಲು ಅಧಿಕಾರಿಗಳು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ.
ಆಗ್ರಾದಲ್ಲಿ ಪ್ರವಾಹದಂತಹ ಪರಿಸ್ಥಿತಿಯ ನಡುವೆ ಅಧಿಕಾರಿಗಳು ಪರಿಹಾರ ಸಿದ್ಧತೆಯನ್ನು ಹೆಚ್ಚಿಸಿದ್ದಾರೆ. ನದಿಯು ಉಕ್ಕಿ ಹರಿಯಲು ಪ್ರಾರಂಭಿಸಿದಾಗ, ಹತ್ತಿರದ ರಸ್ತೆಗಳು ಮತ್ತು ತಾಜ್‌ಗಂಜ್‌ನ ಸ್ಮಶಾನವನ್ನು ಮುಳುಗಿಸಿದ್ದು, ಇತ್ಮದ್-ಉದ್-ದೌಲಾ ಸ್ಮಾರಕದ ಗೋಡೆಯನ್ನು ಮುಟ್ಟಿತು. ತಾಜ್ ಮಹಲ್‌ಗೆ ಹೋಗುವ ಯಮುನಾ ಕಿನಾರಾ ರಸ್ತೆ ಕೂಡಾ ಜಲಾವೃತವಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: INDIA: ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ‘ಇಂಡಿಯಾ’ ನಾಮಕರಣ; ಮಲ್ಲಿಕಾರ್ಜುನ ಖರ್ಗೆ ಘೋಷಣೆ
ಭಾನುವಾರ ಸಂಜೆ 4 ಗಂಟೆಗೆ ಯಮುನಾದಲ್ಲಿ ನೀರಿನ ಮಟ್ಟ 495.8 ಅಡಿ ಇತ್ತು. ಆಗ್ರಾದಲ್ಲಿನ ಈ ನದಿಯ ಕಡಿಮೆ-ಪ್ರವಾಹ ಮಟ್ಟ 495 ಅಡಿಗಳು. ಇಲ್ಲಿ ಮಧ್ಯಮ ಪ್ರವಾಹದ ಮಟ್ಟ 499 ಅಡಿ ಮತ್ತು ಹೆಚ್ಚಿನ ಪ್ರವಾಹದ ಮಟ್ಟ 508 ಅಡಿ ಎಂದು ಯಶವರ್ಧನ್ ಶ್ರೀವಾಸ್ತವ್, ಎಡಿಎಂ (ಹಣಕಾಸು ಮತ್ತು ಕಂದಾಯ) ಪಿಟಿಐಗೆ ತಿಳಿಸಿದರು.
ಪ್ರವಾಹದಂತಹ ಪರಿಸ್ಥಿತಿ ಉದ್ಭವಿಸಿದರೆ ಅದನ್ನು ನಿಭಾಯಿಸಲು ನಾವು ಸಿದ್ಧರಿದ್ದೇವೆ. ಪೋಸ್ಟ್‌ಗಳನ್ನು ರಚಿಸಲಾಗಿದೆ. ಬೋಟ್‌ಮೆನ್‌ಗಳು ಮತ್ತು ಡೈವರ್‌ಗಳು ಜಾಗರೂಕರಾಗಿದ್ದಾರೆ. ತಗ್ಗು ಪ್ರದೇಶಗಳಲ್ಲಿರುವ ಸ್ಥಳೀಯರಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಅಧಿಕಾರಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಎರಡು ಬ್ಯಾರೇಜ್‌ಗಳಿಂದ ನೀರು ಬಿಡುಗಡೆ ಮಾಡಿದ್ದರಿಂದ ಯಮುನಾ ಮಟ್ಟ ಏರಿಕೆಯಾಗಿದೆ. ಅದೇ ವೇಳೆ ಓಖ್ಲಾ ಬ್ಯಾರೇಜ್‌ನಿಂದ 1,06,473 ಕ್ಯೂಸೆಕ್ ಮತ್ತು ಮಥುರಾದ ಗೋಕುಲ್ ಬ್ಯಾರೇಜ್‌ನಿಂದ 1,24,302 ಕ್ಯೂಸೆಕ್ ನೀರು ಹೊರಬಿಡಲಾಗಿದ್ದು, ಎಲ್ಲಾ ಏಳು ಗೇಟ್‌ಗಳನ್ನು ತೆರೆಯಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ