ವಿಧವೆಯಂತೆ ಬದುಕುವುದು ಬೇಡ, ಮದುವೆಯಿಂದ ಮುಕ್ತಿ ಕೊಡುತ್ತಿದ್ದೇನೆ: ಜೈಲಿನಿಂದಲೇ ಪಾಕ್ ಪತ್ನಿ ಮುಷಾಲ್‌ಗೆ ವಿಚ್ಛೇದನ ಘೋಷಿಸಿದ ಯಾಸಿನ್ ಮಲಿಕ್

ಭಯೋತ್ಪಾದನಾ ಕೃತ್ಯಗಳಿಗೆ ಆರ್ಥಿಕ ನೆರವು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಯಾಸಿನ್ ಮಲಿಕ್, ಜೈಲಿನಿಂದಲೇ ತಮ್ಮ ಪಾಕಿಸ್ತಾನಿ ಪತ್ನಿ ಮುಷಾಲ್ ಹುಸೇನ್ ಮಲಿಕ್‌ಗೆ ವಿಚ್ಛೇದನ ಘೋಷಿಸಿದ್ದಾರೆ. ತನ್ನ ಭವಿಷ್ಯ ಅನಿಶ್ಚಿತವಾಗಿರುವುದರಿಂದ, ಪತ್ನಿ ವಿಧವೆಯಂತೆ ಬದುಕುವುದು ಬೇಡ ಎಂದು ಹೇಳಿದ್ದಾರೆ. 8 ವರ್ಷಗಳಿಂದ ಸಂಪರ್ಕವಿಲ್ಲದ ಮಲಿಕ್, ಗಲ್ಲಿಗೇರಿಸುವ ಮುನ್ನ ಪತ್ನಿಗೆ ಮುಕ್ತಿ ನೀಡಲು ಬಯಸಿದ್ದಾರೆ. ಮಗಳ ಆಘಾತಕಾರಿ ವಿಡಿಯೋ ಪ್ರತಿಕ್ರಿಯೆ ಗಮನ ಸೆಳೆದಿದೆ.

ವಿಧವೆಯಂತೆ ಬದುಕುವುದು ಬೇಡ, ಮದುವೆಯಿಂದ ಮುಕ್ತಿ ಕೊಡುತ್ತಿದ್ದೇನೆ: ಜೈಲಿನಿಂದಲೇ ಪಾಕ್ ಪತ್ನಿ ಮುಷಾಲ್‌ಗೆ ವಿಚ್ಛೇದನ ಘೋಷಿಸಿದ ಯಾಸಿನ್ ಮಲಿಕ್
ಯಾಸಿನ್

Updated on: Sep 03, 2026 | 1:00 PM

ಶ್ರೀನಗರ, ಸೆಪ್ಟೆಂಬರ್ 03: ಭಯೋತ್ಪಾದನಾ ಕೃತ್ಯಗಳಿಗೆ ಆರ್ಥಿಕ ನೆರವು ನೀಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಿಷೇಧಿತ ಜೆಕೆಎಲ್‌ಎಫ್ ಸಂಘಟನೆಯ ಮುಖ್ಯಸ್ಥ ಯಾಸಿನ್ ಮಲಿಕ್, ತನ್ನ ಪಾಕಿಸ್ತಾನಿ ಪತ್ನಿ ಮುಷಾಲ್ ಹುಸೇನ್ ಮಲಿಕ್‌ಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾನೆ. ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಈ ಸಂಬಂಧ ಜಮ್ಮುವಿನ ವಿಶೇಷ ನ್ಯಾಯಾಲಯಕ್ಕೆ 25 ಪುಟಗಳ ವಿವರವಾದ ವೈಯಕ್ತಿಕ ಅಫಿಡವಿಟ್ ಸಲ್ಲಿಸಿರುವ ಆತ, ತನ್ನ ಭವಿಷ್ಯದ ಅನಿಶ್ಚಿತತೆಯ ನೆರಳಿನಲ್ಲಿ ಪತ್ನಿ ವಿಧವೆಯಂತೆ ಜೀವನ ಸಾಗಿಸುವುದು ಇಷ್ಟವಿಲ್ಲ ಎಂದು ಉಲ್ಲೇಖಿಸಿದ್ದಾನೆ.

ಅಫಿಡವಿಟ್‌ನಲ್ಲಿ ಯಾಸಿನ್ ಮಲಿಕ್ ತಿಳಿಸಿರುವ ಪ್ರಮುಖ ಅಂಶಗಳು

ಕಳೆದ ಎಂಟು ವರ್ಷಗಳಿಂದ ನಾನು ಪತ್ನಿ ಮತ್ತು ಮಗಳ ಧ್ವನಿಯನ್ನೇ ಕೇಳಿಲ್ಲ. ನನಗೆ ಫೋನ್ ಕರೆ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರೊಂದಿಗೆ ಸಂವಹನ ನಡೆಸಲು ಯಾವುದೇ ಅನುಮತಿ ಸಿಕ್ಕಿಲ್ಲ ಎಂದು ಅಫಿಡವಿಟ್‌ನಲ್ಲಿ ಮಲಿಕ್ ನೋವು ತೋಡಿಕೊಂಡಿದ್ದಾನೆ.

ವಿಧವೆಯಂತೆ ಬದುಕುವುದು ಬೇಡ: ನೀವು ನನಗಿಂತ 20 ವರ್ಷ ಚಿಕ್ಕವರು. ನನ್ನ ಪರಿಸ್ಥಿತಿಯ ಹೊರೆಯನ್ನು ಹೊತ್ತುಕೊಂಡು ಉಳಿದ ಜೀವನವನ್ನು ವಿಧವೆಯಂತೆ ಕಳೆಯುವುದು ನನಗೆ ಇಷ್ಟವಿಲ್ಲ. ಆದ್ದರಿಂದ ಧೈರ್ಯ ತಂದುಕೊಂಡು ನಿಮ್ಮ ಜೀವನದ ಹೊಸ ಅಧ್ಯಾಯವನ್ನು ಗೌರವ ಮತ್ತು ಭರವಸೆಯೊಂದಿಗೆ ಪುನರಾರಂಭಿಸಿ ಎಂದು ಮುಷಾಲ್‌ಗೆ ಮನವಿ ಮಾಡಿದ್ದಾನೆ.

ಮತ್ತಷ್ಟು ಓದಿ: ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಮೊದಲ ಪತ್ನಿ ಶಾಕ್: ತಾಳಿ ಕಟ್ಟುವ ಶುಭ ವೇಳೆ ನಡೆದಿದ್ದೇನು?

ಗಲ್ಲಿಗೇರಿಸುವ ಮುನ್ನ ಮದುವೆಯಿಂದ ಮುಕ್ತಿ: ನನ್ನ ಹಣೆಬರಹ ನನ್ನನ್ನು ಎಲ್ಲಿಗೆ ಕೊಂಡೊಯ್ಯುತ್ತದೋ ಗೊತ್ತಿಲ್ಲ. ಆದರೆ ನನ್ನನ್ನು ಗಲ್ಲಿಗೇರಿಸುವ ಮುನ್ನ, ನಮ್ಮ ನಿಕಾಹ್‌ನ ಬಂಧನದಿಂದ ನಿಮ್ಮನ್ನು ಮುಕ್ತಗೊಳಿಸುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಪ್ರಾರ್ಥನೆ ಮತ್ತು ಆಶೀರ್ವಾದ ಸದಾ ನಿಮ್ಮೊಂದಿಗಿರುತ್ತದೆ ಎಂದು ಬರೆದಿದ್ದಾನೆ.

ತಾಯಿಯ ಜತೆ ಮಾತನಾಡುವಂತೆ ಮಗಳಿಗೆ ಸಲಹೆ: ತನ್ನ 13 ವರ್ಷದ ಪುತ್ರಿ ರಜಿಯಾ ಸುಲ್ತಾನಾಗೆ ಸಂದೇಶ ರವಾನಿಸಿರುವ ಆತ, ದಿನಕ್ಕೆ ಕನಿಷ್ಠ 5 ನಿಮಿಷವಾದರೂ ಕಾಶ್ಮೀರದಲ್ಲಿರುವ ವೃದ್ಧ ಅಜ್ಜಿಯೊಂದಿಗೆ ಫೋನ್‌ನಲ್ಲಿ ಮಾತನಾಡಿ ಪ್ರೀತಿ ತೋರುವಂತೆ ತಿಳಿಸಿದ್ದಾನೆ.

ಮಗಳ ಆಘಾತಕಾರಿ ವಿಡಿಯೋ ಪ್ರತಿಕ್ರಿಯೆ: ಯಾಸಿನ್ ಮಲಿಕ್‌ನ ಈ ಅಫಿಡವಿಟ್ ಹೊರಬೀಳುತ್ತಿದ್ದಂತೆ, ಪಾಕಿಸ್ತಾನದಲ್ಲಿ ನೆಲೆಸಿರುವ ಆತನ ಪುತ್ರಿ ರಜಿಯಾ ಸುಲ್ತಾನಾ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದು, ಅಪ್ಪ ಅಮ್ಮನಿಗೆ ವಿಚ್ಛೇದನ ನೀಡಿದರೆ ನಾನು ಜೀವಂತ ಉಳಿಯುವುದಿಲ್ಲ ಎಂದು ಎಚ್ಚರಿಸಿದ್ದಾಳೆ.

2009 ರ ಪ್ರೇಮ ವಿವಾಹ: ಪಾಕಿಸ್ತಾನದ ಶ್ರೀಮಂತ ಕುಟುಂಬದ ಕಲಾವಿದೆ ಹಾಗೂ ಹೋರಾಟಗಾರ್ತಿ ಮುಷಾಲ್ ಹುಸೇನ್ ಮತ್ತು ಯಾಸಿನ್ ಮಲಿಕ್ ನಡುವೆ 2005 ರಲ್ಲಿ ಇಸ್ಲಾಮಾಬಾದ್‌ನಲ್ಲಿ ಪರಿಚಯವಾಗಿ, ನಂತರ 2009ರಲ್ಲಿ ರಾವಲ್ಪಿಂಡಿಯಲ್ಲಿ ವಿವಾಹ ನಡೆದಿತ್ತು. ಮದುವೆಯ ನಂತರ ಮುಷಾಲ್ ಕೆಲ ಕಾಲ ಕಾಶ್ಮೀರದಲ್ಲಿದ್ದು, ಬಳಿಕ ಪಾಕಿಸ್ತಾನಕ್ಕೆ ಮರಳಿ ಅಲ್ಲೇ ನೆಲೆಸಿದ್ದಾರೆ. ಪಾಕಿಸ್ತಾನದ ಮಾಜಿ ಹಂಗಾಮಿ ಸರ್ಕಾರದಲ್ಲಿ ಮಾನವ ಹಕ್ಕುಗಳ ಸಲಹೆಗಾರ್ತಿಯಾಗಿಯೂ ಮುಷಾಲ್ ಕಾರ್ಯನಿರ್ವಹಿಸಿದ್ದರು.

ಕಾಶ್ಮೀರದಲ್ಲಿ ಭಯೋತ್ಪಾದನೆಗೆ ನಿಧಿ ಸಂಗ್ರಹ ಆರೋಪದಡಿ 2019 ರಲ್ಲಿ ಮಲಿಕ್‌ನನ್ನು ಬಂಧಿಸಲಾಗಿತ್ತು. 2022 ರಲ್ಲಿ ಎನ್‌ಐಎ (NIA) ವಿಶೇಷ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಈ ಶಿಕ್ಷೆಯನ್ನು ಮರಣದಂಡನೆಗೆ ಹೆಚ್ಚಿಸುವಂತೆ ಕೋರಿ ಎನ್‌ಐಎ ದೆಹಲಿ ಹೈಕೋರ್ಟ್‌ಗೆ ಈಗಾಗಲೇ ಮೇಲ್ಮನವಿ ಸಲ್ಲಿಸಿದೆ.

ಹಳೆಯ ಹತ್ಯೆ ಪ್ರಕರಣಗಳ ವಿಚಾರಣೆ: 1990 ರ ವಾಯುಪಡೆ (IAF) ಯೋಧರ ಹತ್ಯೆ ಮತ್ತು ಕಾಶ್ಮೀರಿ ಪಂಡಿತ್ ನರ್ಸ್ ಸರಳಾ ಭಟ್ ಕೊಲೆ ಪ್ರಕರಣಗಳ ವಿಚಾರಣೆಯೂ ಜಮ್ಮು ನ್ಯಾಯಾಲಯದಲ್ಲಿ ಪ್ರಸ್ತುತ ಮುಂದುವರೆದಿದೆ. ಈ ಪ್ರಕರಣಗಳ ಹಿನ್ನೆಲೆಯಲ್ಲಿ ಮಲಿಕ್ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿ ವಿಚ್ಛೇದನದ ಇಂಗಿತ ವ್ಯಕ್ತಪಡಿಸಿದ್ದಾನೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us