
ಅಯೋಧ್ಯೆ, ನವೆಂಬರ್ 08: ಉತ್ತರ ಪ್ರದೇಶದ ರಾಜಕೀಯದಲ್ಲಿ ಅಯೋಧ್ಯೆ ರಾಮಮಂದಿರ ಮತ್ತೆ ಚರ್ಚೆಯ ಕೇಂದ್ರವಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಡಿಸೆಂಬರ್ 12ರಂದು ರಾಮಮಂದಿರಕ್ಕೆ ಭೇಟಿ ನೀಡುವುದಾಗಿ ಘೋಷಿಸಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಖಿಲೇಶ್ ಅವರ ದೇವಸ್ಥಾನ ಭೇಟಿಗೆ ಸ್ವಾಗತವಿದೆ. ಆದರೆ, ಮೊದಲು ರಾಮಭಕ್ತರಲ್ಲಿ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. 1990ರಲ್ಲಿ ಅಯೋಧ್ಯೆಯಲ್ಲಿ ಕರಸೇವಕರ ಮೇಲೆ ನಡೆದ ಪೊಲೀಸ್ ಗೋಲಿಬಾರ್ ಘಟನೆಯನ್ನು ಪ್ರಸ್ತಾಪಿಸುವ ಮೂಲಕ ಯೋಗಿ ರಾಜಕೀಯ ವಾಗ್ದಾಳಿ ನಡೆಸಿದ್ದಾರೆ.
ಅಯೋಧ್ಯೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ, ಹಿಂದೆ ಅಯೋಧ್ಯೆಯಲ್ಲಿ ಭಕ್ತರ ಮೇಲೆ ಗುಂಡು ಹಾರಿಸಿದವರು ಈಗ ಅದೇ ಅಯೋಧ್ಯೆಯನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ರಾಮಭಕ್ತರ ಭಾವನೆಗಳಿಗೆ ನೋವುಂಟು ಮಾಡಿದವರು ಕ್ಷಮೆ ಕೇಳಬೇಕು ಎಂದೂ ಹೇಳಿದರು. ಅಖಿಲೇಶ್ ಯಾದವ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಅವರ ತಂದೆ ಮುಲಾಯಂ ಸಿಂಗ್ ಯಾದವ್ ಮುಖ್ಯಮಂತ್ರಿಯಾಗಿದ್ದ ಅವಧಿಯ ಘಟನೆಯನ್ನು ನೆನಪಿಸಿದರು.
ಇದನ್ನೂ ಓದಿ: ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
1990ರ ಕರಸೇವಕರ ಗೋಲಿಬಾರ್ ಘಟನೆ ಮತ್ತೆ ಮುನ್ನೆಲೆಗೆ
ಸಿಎಂ ಯೋಗಿ ಪ್ರಸ್ತಾಪಿಸಿರುವ ಘಟನೆ 1990ರಲ್ಲಿ ನಡೆದದ್ದು. ರಾಮಮಂದಿರ ನಿರ್ಮಾಣ ಚಳವಳಿಯ ಸಂದರ್ಭದಲ್ಲಿ ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿಯತ್ತ ತೆರಳಲು ಯತ್ನಿಸಿದ ಕರಸೇವಕರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಆಗ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿತ್ತು.
ಈ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆಯ ಬಗ್ಗೆ ಬೇರೆ ಬೇರೆ ಹೇಳಿಕೆಗಳಿವೆ. ಅಂದಿನ ಕೇಂದ್ರ ಸರ್ಕಾರದ ಅಂದಾಜಿನ ಪ್ರಕಾರ 15 ಮಂದಿ ಮೃತಪಟ್ಟಿದ್ದರು. ಆದರೆ ಬಿಜೆಪಿ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಕೆಲವು ಸಂಘಟನೆಗಳು 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿವೆ. ಈ ಘಟನೆ ಇಂದಿಗೂ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವಿನ ರಾಜಕೀಯ ವಾಗ್ವಾದದಲ್ಲಿ ಪ್ರಮುಖ ವಿಷಯವಾಗಿದೆ.
ಅಖಿಲೇಶ್ ಯಾದವ್ ತಿರುಗೇಟು ನೀಡಿದ್ದೇನು?
ಯೋಗಿ ಆದಿತ್ಯನಾಥ್ ಅವರ ಹೇಳಿಕೆಗೆ ಅಖಿಲೇಶ್ ಯಾದವ್ ಕೂಡ ಪ್ರತಿಕ್ರಿಯಿಸಿದ್ದಾರೆ. ರಾಮಮಂದಿರಕ್ಕೆ ಸಂಬಂಧಿಸಿದ ದೇಣಿಗೆ ಸಂಗ್ರಹ ಮತ್ತು ನಿರ್ವಹಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಮೊದಲು ಉತ್ತರ ನೀಡಬೇಕು ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ದೇಣಿಗೆ ಕಳ್ಳತನದ ಆರೋಪಕ್ಕೆ ಸಂಬಂಧಿಸಿದ ಪ್ರಮುಖ ವ್ಯಕ್ತಿಗಳ ವಿರುದ್ಧ ಇನ್ನೂ ಕ್ರಮ ಕೈಗೊಂಡಿಲ್ಲ ಎಂಬುದು ಅವರ ಆರೋಪವಾಗಿದೆ.
ವಿಡಿಯೋ:
ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು, ಚುನಾವಣೆ ಸಮೀಪಿಸುತ್ತಿರುವ ಕಾರಣ ಅಖಿಲೇಶ್ ಯಾದವ್ ಅಯೋಧ್ಯೆ ಭೇಟಿಯ ಮೂಲಕ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಆದರೆ ಸಮಾಜವಾದಿ ಪಕ್ಷವು ಈ ಭೇಟಿಯನ್ನು ಧಾರ್ಮಿಕ ಕಾರ್ಯಕ್ರಮವೆಂದು ಹೇಳಿದೆ.
2027ರ ಚುನಾವಣೆಗೂ ಅಯೋಧ್ಯೆಗೂ ಏನು ಸಂಬಂಧ?
ಉತ್ತರ ಪ್ರದೇಶದಲ್ಲಿ 2027ರ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ ಮತ್ತು ರಾಮಮಂದಿರ ಮತ್ತೆ ರಾಜಕೀಯ ಚರ್ಚೆಯ ಪ್ರಮುಖ ವಿಷಯಗಳಾಗಿವೆ. ಅಖಿಲೇಶ್ ಯಾದವ್ ಅವರ ದೇವಸ್ಥಾನ ಭೇಟಿಯನ್ನು ಬಿಜೆಪಿ ರಾಜಕೀಯ ದೃಷ್ಟಿಯಿಂದ ಪ್ರಶ್ನಿಸುತ್ತಿದ್ದರೆ, ಸಮಾಜವಾದಿ ಪಕ್ಷವು ಬಿಜೆಪಿ ವಿರುದ್ಧ ದೇಣಿಗೆ ನಿರ್ವಹಣೆಯ ಆರೋಪಗಳನ್ನು ಮುಂದಿಟ್ಟಿದೆ.
ಹೀಗಾಗಿ ಡಿಸೆಂಬರ್ 12ರಂದು ನಡೆಯಲಿರುವ ಅಖಿಲೇಶ್ ಯಾದವ್ ಅವರ ಅಯೋಧ್ಯೆ ಭೇಟಿ ಕೇವಲ ಧಾರ್ಮಿಕ ಕಾರ್ಯಕ್ರಮವಾಗಿಯೇ ಉಳಿಯುತ್ತದೆಯೇ ಅಥವಾ ಉತ್ತರ ಪ್ರದೇಶದ ಚುನಾವಣಾ ರಾಜಕೀಯಕ್ಕೆ ಹೊಸ ತಿರುವು ನೀಡುತ್ತದೆಯೇ ಎಂಬ ಕುತೂಹಲ ಮೂಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ