ಝಿಕಾ ವೈರಸ್ ಸೋಂಕು ಕೇರಳದಲ್ಲಿ ಮೊದಲ ಬಾರಿಗೆ ದೃಢಪಟ್ಟಿದೆ. ತಿರುವನಂತಪುರಂ ಜಿಲ್ಲೆಯ ಕೆಲವು ಭಾಗಗಳಿಂದ ಕಳುಹಿಸಲಾದ 19 ಮಾದರಿಗಳಲ್ಲಿ 13 ಮಾದರಿಗಳು ಝಿಕಾ ವೈರಸ್ ಪಾಸಿಟಿವ್ ಎಂದು ಶಂಕಿಸಲಾಗಿದೆ. ಆದರೆ ಎನ್ಐವಿ ಪುಣೆಯಿಂದ ಯಾವುದೇ ದೃಢೀಕರಣ ಬಂದಿಲ್ಲ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗವು ಉಲ್ಬಣಗೊಳ್ಳುತ್ತಿರುವ ಈ ಸಮಯದಲ್ಲಿ ಮತ್ತೊಂದು ವೈರಸ್ ದಾಂಗುಡಿ ಇಟ್ಟಿದೆ. ಝಿಕಾ ವೈರಸ್ ಬಗ್ಗೆ ನಾವು ಎಚ್ಚರಿಕೆಯಿಂದ ಇರುವುದು ಹೇಗೆ? ರೋಗ ಲಕ್ಷಣಗಳೇನು?ಎಂಬುದನ್ನು ಇಲ್ಲಿ ನೋಡೋಣ.
ಝಿಕಾ ವೈರಸ್ ಸೋಂಕು ಹೇಗೆ ಬರುತ್ತದೆ?
ಇದು ಮುಖ್ಯವಾಗಿ ಈಡಿಸ್ ಸೊಳ್ಳೆಗಳಿಂದ ಹರಡುವ ವೈರಸ್ ರೋಗ. ಸೊಳ್ಳೆಗಳು ಸಾಮಾನ್ಯವಾಗಿ ಬೆಳಿಗ್ಗೆ ಮತ್ತು ಸಂಜೆ ಕಚ್ಚುತ್ತವೆ. ಇದಲ್ಲದೆ ಈ ರೋಗ ಸೋಂಕಿತ ಗರ್ಭಿಣಿ ಮಹಿಳೆಯಿಂದ ಮಗುವಿಗೆ, ಲೈಂಗಿಕ ಸಂಪರ್ಕ, ರಕ್ತದಾನ ಮತ್ತು ಅಂಗಾಂಗ ಕಸಿ ಮೂಲಕ ಹರಡಬಹುದು. ರೋಗಾಣುಗಳು ದೇಹವನ್ನು ಪ್ರವೇಶಿಸಿದ ಮೂರನೇ ದಿನ, ಒಂದು ವಾರದವರೆಗೆ ಅಥವಾ 12 ದಿನಗಳವರೆಗೆ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು.
ಆದಾಗ್ಯೂ, ಅನೇಕ ಜನರಲ್ಲಿ ರೋಗ ಲಕ್ಷಣಗಳು ಕಾಣಿಸುವುದಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯವಿಲ್ಲ, ಸಾವಿನ ಅಪಾಯವಿಲ್ಲ.
ಝಿಕಾ ವೈರಸ್ ಸೋಂಕಿಗೆ ಹೆದರಬೇಕೆ?
ಇದು ವೈರಲ್ ಸೋಂಕಾಗಿದ್ದು ಅದು ಸಾಮಾನ್ಯವಾಗಿ ತೀಕ್ಷ್ಣ ಸೋಂಕು ಅಲ್ಲ. ಗರ್ಭಿಣಿಯರಿಗೆ ಸೋಂಕು ತಗುಲಿದರೆ ಮಗುವನ್ನು ಇದು ಬಾಧಿಸುತ್ತದೆ. ಇವುಗಳಲ್ಲಿ ಪ್ರಮುಖವಾದುದು ಮೈಕ್ರೊಸೆಫಾಲಿ (Microcephaly). ಇದು ತಲೆಯ ಗಾತ್ರವನ್ನು ಕುಗ್ಗಿಸುವುದು ಮತ್ತು ಮೆದುಳಿನ ಬೆಳವಣಿಗೆಗೆ ಕುಂದುಂಟಾಗುವ ಅವಸ್ಥೆ ಆಗಿದೆ. ಅದೇ ವೇಳೆ ನವಜಾತ ಶಿಶುಗಳಲ್ಲಿ congenital zika syndromeಗೂ ಇದು ಕಾರಣವಾಗುತ್ತೆ. ಇದಲ್ಲದೆ, ಅಕಾಲಿಕ ಜನನ ಮತ್ತು ಗರ್ಭಪಾತದ ಅಪಾಯವಿದೆ. ಅಪರೂಪವಾಗಿ, ವಯಸ್ಕರಲ್ಲಿ ದುರ್ಬಲಗೊಳಿಸುವ ನರಸಂಬಂಧಿ ಗಿಲ್ಲನ್ ಬಾರಿ ಸಿಂಡ್ರೋಮ್ (guillain barre syndrome) ಕಂಡುಬಂದಿರುವುದು ವರದಿಯಾಗಿದೆ.
ಝಿಕಾ ವೈರಸ್ ಹೊಸತಾಗಿ ಕಂಡು ಬಂದ ಕಾಯಿಲೆಯೇ?
ಅಲ್ಲ ಈ ರೋಗವು 86 ದೇಶಗಳಲ್ಲಿ ವರದಿಯಾಗಿದೆ. ಈ ವೈರಸ್ ಅನ್ನು ಮೊದಲು 1947 ರಲ್ಲಿ ಉಗಾಂಡಾದ ಕೋತಿಗಳಲ್ಲಿ ಗುರುತಿಸಲಾಯಿತು. 1952 ರಲ್ಲಿ, ಉಗಾಂಡಾ ಮತ್ತು ಟಾಂಜಾನಿಯಾದಲ್ಲಿ ಮಾನವರಲ್ಲಿ ಝಿಕಾ ಸೋಂಕು ದೃಢಪಟ್ಟಿತು. 1954 ರಲ್ಲಿ, ನೈಜೀರಿಯಾದಲ್ಲಿ ಮಾನವರಲ್ಲಿ ರೋಗವನ್ನು ದೃಢಪಟ್ಟಿತು.ಈ ರೋಗವು 1960 ರಿಂದ 1980 ರವರೆಗೆ ಆಫ್ರಿಕಾ ಮತ್ತು ಏಷ್ಯಾದಲ್ಲಿ ಅಪರೂಪ ಪ್ರಕರಣಗಳಾಗಿ ವರದಿ ಆಗಿವೆ,
2007 ರಲ್ಲಿ IslandofYap (ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾ) ಮೊದಲ ಬಾರಿ ಝಿಕಾ ವೈರಸ್ ನ್ನು ಸಾಂಕ್ರಾಮಿಕ ರೋಗ ಎಂದು ವರದಿ ಮಾಡಿತು.
2013 ರಲ್ಲಿ ಇದು ಫ್ರೆಂಚ್ ಪಾಲಿನೇಷ್ಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ವ್ಯಾಪಿಸಿಕೊಂಡಿತು. ಆದರೆ ಇಲ್ಲಿಯವರೆಗೆ ಅತೀ ಹೆಚ್ಚು ಸೋಂಕು ವ್ಯಾಪಿಸಿದ್ದು 2015 ರಲ್ಲಿ ಬ್ರೆಜಿಲ್‌ನಲ್ಲಿ. ಈ ಸೋಂಕಿನಿಂದ ಹುಟ್ಟಲಿರುವ ಶಿಶುಗಳಿಗೆ ಹೆಚ್ಚಿನ ಅಪಾಯವಿದೆ ಎಂದು ಪತ್ತೆಯಾಗಿದ್ದು ಇಲ್ಲಿಯೇ. ಬ್ರೆಜಿಲ್ ನಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಲು ಸೈನಿಕರನ್ನು ನಿಯೋಜಿಸಲಾಗಿತ್ತು . ಆ ಸಮಯದಲ್ಲಿ, ಯು.ಎಸ್. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಗರ್ಭಿಣಿಯರಿಗೆ ಹೆಚ್ಚಿನ ಅಪಾಯದ ಪ್ರದೇಶಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಲು ಸಲಹೆ ನೀಡಿತು.
ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಲ್ಯಾಟಿನ್ ಅಮೆರಿಕನ್ / ಕೆರಿಬಿಯನ್ ದೇಶಗಳು ತಾತ್ಕಾಲಿಕವಾಗಿ (ಎರಡು ವರ್ಷಗಳವರೆಗೆ) ಮಹಿಳೆಯರಿಗೆ ಗರ್ಭಿಣಿಯಾಗುವುದನ್ನು ತಪ್ಪಿಸಲು ಸಲಹೆ ನೀಡಿದ ಪ್ರಕರಣಗಳೂ ಇವೆ.
ಪ್ರಪಂಚದಾದ್ಯಂತ ಇಂತಹ ಸೋಂಕು ಹರಡುವುದನ್ನು ತಡೆಯುವ ಕಾರ್ಯವಿಧಾನಗಳು ಬಹುತೇಕ ಫಲಿತಾಂಶಗಳನ್ನು ಕಂಡವು. ಭಾರತವನ್ನು ಒಳಗೊಂಡಂತೆ ಝಿಕಾ ವೈರಸ್ ವಿರುದ್ಧ ಲಸಿಕೆ ತಯಾರಿಸಲು ಆ ಸಮಯದಲ್ಲಿ ಪ್ರಯತ್ನಗಳು ನಡೆದವು.
ರೋಗದ ಲಕ್ಷಣಗಳು ಯಾವುವು?
ಸಾಮಾನ್ಯ ಜ್ವರ, ದೇಹದ ಮೇಲೆ ಕೆಂಪು ಕಲೆಗಳು, ಕೆಂಪು ಕಣ್ಣುಗಳು, ಸಂಧಿವಾತ, ಸ್ನಾಯು ನೋವು ಇತ್ಯಾದಿ. ಆದರೆ ಸುಮಾರು ಶೇ 80ರಷ್ಟು ರೋಗಿಗಳು ಗಮನಾರ್ಹ ಲಕ್ಷಣಗಳನ್ನು ಸಹ ಹೊಂದಿರುವುದಿಲ್ಲ. ಝಿಕಾ ವೈರಸ್ ಕಾಯಿಲೆಯ ಇನ್ ಕ್ಯುಬೇಷನ್ ಕಾಲಾವಧಿಯನ್ನು 3–14 ದಿನಗಳು ಎಂದು ಅಂದಾಜಿಸಲಾಗಿದೆ ಮತ್ತು ರೋಗಲಕ್ಷಣಗಳು ಸಾಮಾನ್ಯವಾಗಿ 2–7 ದಿನಗಳವರೆಗೆ ಇರುತ್ತದೆ. ಝಿಕಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಹೆಚ್ಚಿನ ಜನರು ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.
ಸೋಂಕು ಪತ್ತೆ ಹೇಗೆ?
ಸೋಂಕಿತ ವ್ಯಕ್ತಿಯ ಜೀವಕೋಶ, ರಕ್ತ, ವೀರ್ಯ ಮತ್ತು ಮೂತ್ರದಲ್ಲಿ ವೈರಸ್ ಇರುವುದನ್ನು ಪತ್ತೆ ಹಚ್ಚಬಹುದು. ಎನ್‌ಸಿಡಿಸಿ ಪ್ರಸ್ತುತ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ. ದೆಹಲಿ, ಎನ್.ಐ.ವಿ. ಪುಣೆ.ಲ್ಲಿ ಜಿಕಾವೈರಸ್ ದೃಢೀಕರಣ ಮಾಡುವ ಲ್ಯಾಬ್ ವ್ಯವಸ್ಥೆ ಇದೆ.. ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಸಾಮಾನ್ಯವಾಗಿ ನಡೆಸಲಾಗುತ್ತದೆ.
ಚಿಕಿತ್ಸೆ ಹೇಗೆ?
ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಅಗತ್ಯವಿಲ್ಲ ಮತ್ತು ಸಾವಿನ ಅಪಾಯವಿಲ್ಲ. ಝಿಕಾ ವೈರಸ್ ಅನ್ನು ನಾಶಮಾಡಲು ಯಾವುದೇ ಪರಿಣಾಮಕಾರಿ ಆಂಟಿವೈರಲ್ ಔಷಧಗಳು ಅಥವಾ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿಲ್ಲ.
ರೋಗ ಗುಣವಾಗಲು ವಿಶ್ರಾಂತಿ, ಸರಿಯಾದ ಆಹಾರ ಮತ್ತು ಪಾನೀಯ ಸಾಕು. ಜ್ವರ ಮತ್ತು ಅಗತ್ಯವಿದ್ದರೆ ನೋವು ಇದ್ದರೆ ಪ್ಯಾರೆಸಿಟಮಾಲ್ ನಂತಹ ಮಾತ್ರೆ ಸೇವಿಸಬಹುದು, ಇತರ ಕೆಲವು ನೋವು ನಿವಾರಕಗಳನ್ನು ಸೇವನೆ ಮಾಡುವಂತಿಲ್ಲ.
ರೋಗ ಬರದಂತೆ ಮುಂಜಾಗ್ರತಾ ಕ್ರಮ ಏನು?
ಈ ರೋಗವು ಡೆಂಗ್ಯೂ ಮತ್ತು ಚಿಕನ್ ಪೋಕ್ಸ್ ಕಾಯಿಲೆಗಳಂತೆಯೇ ಹರಡುತ್ತದೆ. ಆದ್ದರಿಂದ ನಿಯಂತ್ರಣವು ಅದೇ ರೀತಿ ಇರುತ್ತದೆ,.ಸೊಳ್ಳೆ ಕಡಿತವನ್ನು ತಡೆಗಟ್ಟುವ ಕ್ರಮಗಳು, ಸೊಳ್ಳೆಗಳನ್ನು ನಿಯಂತ್ರಿಸುವುದು ಮತ್ತು ಸೊಳ್ಳೆ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವುದು ಅತ್ಯಗತ್ಯ. ಸೊಳ್ಳೆ ಕಡಿತವನ್ನು ತಪ್ಪಿಸಿ (ವಿಶೇಷವಾಗಿ ಸಂಜೆ ಮತ್ತು ಮುಂಜಾನೆ). ಪೂರ್ಣ ಉದ್ದದ ಬಟ್ಟೆಗಳನ್ನು ಧರಿಸಿ ಅಥವಾ ನಿದ್ದೆ ಮಾಡುವಾಗ ಸೊಳ್ಳೆ ಕಚ್ಚುವುದನ್ನು ತಡೆಯಲು ಸೊಳ್ಳೆ ಪರದೆ ಬಳಸಿ. ಸೊಳ್ಳೆ ನಿವಾರಕಗಳನ್ನು ಸಹ ಬಳಸಬಹುದು. ಸೊಳ್ಳೆ ನಿರ್ನಾಮ ಮತ್ತು ಸೊಳ್ಳೆ ಸಂತಾನೋತ್ಪತ್ತಿ ನಿಯಂತ್ರಣ. ಗರ್ಭಿಣಿಯರು ಮತ್ತು ಗರ್ಭಿಣಿಯಾಗುವವರು ಜಾಗರೂಕರಾಗಿರಬೇಕು.
ಝಿಕಾ ವೈರಸ್ ಹೆಚ್ಚಾಗಿ ವರದಿಯಾದ ಪ್ರದೇಶಗಳಲ್ಲಿ ವಾಸಿಸುವ ಮತ್ತು ಪ್ರಯಾಣಿಸುವ ಜನರು ಲೈಂಗಿಕವಾಗಿ ಹರಡುವ ರೋಗದ ಸಂದರ್ಭದಲ್ಲಿ ಜಾಗರೂಕರಾಗಿರಬೇಕು. ಅಂತಹ ಪುರುಷರು ಆರು ತಿಂಗಳು ಮತ್ತು ಮಹಿಳೆಯರು ಎರಡು ತಿಂಗಳವರೆಗೆ ಸುರಕ್ಷಿತ ಲೈಂಗಿಕತೆಯನ್ನು ಹೊಂದಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶಿಫಾರಸು ಮಾಡಿದೆ.
ಇದನ್ನೂ ಓದಿ: Zika virus ಕೇರಳದಲ್ಲಿ ಮೊದಲ ಬಾರಿ ಝಿಕಾ ವೈರಸ್ ಪತ್ತೆ : ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸಲು ನಿರ್ದೇಶನ
(Zika virus Symptoms of infection How to prevent and treatment of mosquito borne disease)