ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಮಂದಗತಿಗೆ ತಲುಪಿದ ಸೂಚನೆಗಳು ಕಾಣುತ್ತಿದ್ದರೂ, ಡೆಲ್ಟಾ ಪ್ಲಸ್ ರೂಪಾಂತರಿ ಹಾಗೂ ಸಂಭವನೀಯ ಮೂರನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆಯ ಮಾತುಗಳನ್ನಾಡಿರುವುದರಿಂದ ಕೊರೊನಾ ಲಸಿಕೆ ವಿತರಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಲಸಿಕೆಗಳ ಪಟ್ಟಿಗೆ ಸೇರ್ಪಡೆಯಾಗಲು ಕ್ಯಾಡಿಲಾ ಹೆಲ್ತ್ ಕೇರ್ ಸಂಸ್ಥೆ ತಯಾರಿಸಿದ ಜೈ ಕೋವ್ ಡಿ ಹೆಸರಿನ ಲಸಿಕೆ ಸಿದ್ಧವಾಗಿದ್ದು, ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಕ್ಯಾಡಿಲಾ ಹೆಲ್ತ್ ಕೇರ್ ಸಂಸ್ಥೆ ಭಾರತೀಯ ಔಷಧ ನಿಯಂತ್ರಣಾ ಪ್ರಾಧಿಕಾರಕ್ಕೆ (ಡಿಸಿಜಿಐ) ಅರ್ಜಿ ಸಲ್ಲಿಸಿದೆ.
ಗುಜರಾತ್ ರಾಜ್ಯದ ಅಹಮದಾಬಾದ್‌ನ ಕ್ಯಾಡಿಲಾ ಹೆಲ್ತ್ ಕೇರ್ ಸಂಸ್ಥೆ ತಯಾರಿಸಿರುವ ಜೈ ಕೋವ್ ಡಿ ಕೊರೊನಾ ಲಸಿಕೆ ಡೆಲ್ಟಾ ಪ್ರಭೇದದ ವಿರುದ್ಧವೂ ಪರಿಣಾಮಕಾರಿಯಾಗಿದೆ ಎನ್ನಲಾಗಿದ್ದು, 12ರಿಂದ18 ವರ್ಷದವರ ಮೇಲೂ ಲಸಿಕೆ ಪ್ರಯೋಗ ಯಶಸ್ವಿಯಾಗಿದೆ ಎಂದು ತಯಾರಿಕಾ ಸಂಸ್ಥೆ ಹೇಳಿದೆ. ಹೀಗಾಗಿ 12ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಇದನ್ನು ಬಳಸಬಹುದು. ಭಾರತದಲ್ಲಿ ಇದರ ತುರ್ತು ಬಳಕೆಗೆ ಅನುಮತಿ ನೀಡಿ ಎಂದು ತುರ್ತು ಬಳಕೆಗೆ ಅನುಮತಿ ಡಿಸಿಜಿಐ ಮೊರೆ ಹೋಗಿದೆ.
ಈಗಾಗಲೇ ಭಾರತದಲ್ಲಿ ಸದ್ಯ ಬಳಕೆಯಾಗುತ್ತಿರುವ ಮೂರು ಲಸಿಕೆಗಳೊಂದಿಗೆ ನಾಲ್ಕನೇ ಲಸಿಕೆಯಾಗಿ ಮಾಡೆರ್ನಾ ಬಳಕೆಗೆ ಅನುಮೋದನೆ ಸಿಕ್ಕಿದೆ. ಯುಎಸ್ ಮೂಲದ ಲಸಿಕೆಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಮುಂಬೈನ ಬಹುದೊಡ್ಡ ಔಷಧೀಯ ಕಂಪನಿ ಸಿಪ್ಲಾಕ್ಕೆ ಅನುಮತಿ ನೀಡಲಾಗಿದೆ. ದೇಶದಲ್ಲಿ ಈಗ ಸೀರಂ ಇನ್ಸ್ಟಿಟ್ಯೂಟ್ನ ಕೊವಿಶೀಲ್ಡ್, ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ನೀಡಲಾಗುತ್ತಿದೆ. ಸ್ಪುಟ್ನಿಕ್ ವಿ ಕೆಲವೇ ನಗರಗಳಲ್ಲಿ ಸಿಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಾನಗರಗಳಲ್ಲಿ ಲಭ್ಯವಾಗಲಿದೆ. ಅದರೊಂದಿಗೆ ಮಾಡೆರ್ನಾ ಲಸಿಕೆ ತುರ್ತು ಬಳಕೆಗೆ ಅನುಮೋದನೆ ಸಿಕ್ಕಿರುವುದು ದೇಶದ ಲಸಿಕಾ ಅಭಿಯಾನಕ್ಕೆ ಬಲ ಕೊಟ್ಟಿದೆ. ಒಂದುವೇಳೆ ಜೈಡಸ್ ಕ್ಯಾಡಿಲಾ ತಯಾರಿಸಿದ ಜೈ ಕೋವ್ ಡಿ ಲಸಿಕೆಯ ತುರ್ತು ಬಳಕೆಗೂ ಡಿಸಿಜಿಐ ಸಮ್ಮತಿಸಿದರೆ ಯುವ ಸಮುದಾಯಕ್ಕೆ ಲಸಿಕೆ ನೀಡಲು ಮತ್ತಷ್ಟು ವೇಗ ಸಿಕ್ಕಂತಾಗುತ್ತದೆ.
ಇದನ್ನೂ ಓದಿ:
ಜೈಡಸ್ ಕ್ಯಾಡಿಲಾ ಕೊವಿಡ್ 19 ಲಸಿಕೆ ಮಕ್ಕಳ ಮೇಲಿನ ಕ್ಲಿನಿಕಲ್ ಪ್ರಯೋಗ ಮುಕ್ತಾಯ, ಶೀಘ್ರದಲ್ಲೇ ಬಳಕೆಗೆ ಲಭ್ಯ
ಕೊರೊನಾ ಲಸಿಕೆ ಪಡೆಯುವ ಮುನ್ನ ಗರ್ಭಿಣಿಯರು ಗಮನಿಸಲೇಬೇಕಾದ ಅಂಶಗಳು; ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಟ
Published On - 9:21 am, Thu, 1 July 21