ಪೆಂಟಗನ್ ರಹಸ್ಯಗಳನ್ನು ಬಯಲು ಮಾಡಿದ ಆರೋಪಿ ಜ್ಯಾಕ್ ಟೀಕ್ಸೀರ ಬಂಧನ: ವಿಚಾರಣೆ ಆರಂಭಿಸಿದ ಎಫ್‌ಬಿಐ

ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಇತ್ತೀಚೆಗೆ ಅಮೆರಿಕಾದ ಮಿಲಿಟರಿ ರಹಸ್ಯಗಳ ಸೋರಿಕೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಿದೆ. ಅಟಾರ್ನಿ ಜನರಲ್ ಮೆರ್ರಿಕ್ ಗಾರ್ಲ್ಯಾಂಡ್ ಅವರು 21 ವರ್ಷ ವಯಸ್ಸಿನ, ಅಮೆರಿಕನ್ ವಾಯುಪಡೆಯ ನ್ಯಾಷನಲ್ ಗಾರ್ಡ್ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ. 

ಪೆಂಟಗನ್ ರಹಸ್ಯಗಳನ್ನು ಬಯಲು ಮಾಡಿದ ಆರೋಪಿ ಜ್ಯಾಕ್ ಟೀಕ್ಸೀರ ಬಂಧನ: ವಿಚಾರಣೆ ಆರಂಭಿಸಿದ ಎಫ್‌ಬಿಐ
ಆರೋಪಿ ಜ್ಯಾಕ್ ಟೀಕ್ಸೀರ
Follow us
ವಿವೇಕ ಬಿರಾದಾರ
|

Updated on:Apr 15, 2023 | 8:28 AM

ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಇತ್ತೀಚೆಗೆ ಅಮೆರಿಕಾದ ಮಿಲಿಟರಿ ರಹಸ್ಯಗಳ ಸೋರಿಕೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಿದೆ. ಅಟಾರ್ನಿ ಜನರಲ್ ಮೆರ್ರಿಕ್ ಗಾರ್ಲ್ಯಾಂಡ್ ಅವರು 21 ವರ್ಷ ವಯಸ್ಸಿನ, ಅಮೆರಿಕನ್ ವಾಯುಪಡೆಯ ನ್ಯಾಷನಲ್ ಗಾರ್ಡ್ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.  ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಅನುಮತಿಯಿಲ್ಲದೆ ಪಡೆದು, ತನ್ನಲ್ಲಿ ಇಟ್ಟುಕೊಂಡು, ಅದನ್ನು ಹಂಚಿದ ಆರೋಪದಡಿ ಜ್ಯಾಕ್ ಟೀಕ್ಸೀರ ಎಂಬಾತನನ್ನು ಗುರುವಾರ ಬಂಧಿಸಲಾಗಿದೆ ಎಂದು ಗಾರ್ಲ್ಯಾಂಡ್ ಹೇಳಿಕೆ ನೀಡಿದ್ದಾರೆ. ಪೆಂಟಗನ್ ಅಧಿಕಾರಿಗಳು ನಾವಿನ್ನೂ ಈ ಸೋರಿಕೆಯ ಅಗಾಧತೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದೇವೆ ಎಂದಿದ್ದು, ಆ ಸೋರಿಕೆಯಾದ ಕಡತ ಉಕ್ರೇನ್ ಯುದ್ಧ ಮತ್ತು ಅಮೆರಿಕಾದ ಸಹವರ್ತಿಗಳ ಕುರಿತಾದ ರಹಸ್ಯ ಮಾಹಿತಿಗಳನ್ನು ಬಯಲು ಮಾಡಿತ್ತು.

ಅಧಿಕಾರಿಗಳು ಈಗಾಗಲೇ ಆ ಕಡತದಲ್ಲಿದ್ದ ಮಾಹಿತಿಗಳನ್ನು ಬೇಕಾದಂತೆ ತಿರುಚಿಕೊಂಡು ಹಂಚಲಾಗಿದ್ದು, ಅದನ್ನು ಸುಳ್ಳು ಮಾಹಿತಿ ಹರಡಲು ಬಳಸುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದ್ದರು.

ಅಧಿಕಾರಿಗಳು ಆರೋಪಿಯ ಕುರಿತು ಒಂದಷ್ಟು ಮಾಹಿತಿಗಳನ್ನು ಮಾತ್ರವೇ ಹಂಚಿಕೊಂಡಿದ್ದರೂ, ಆತನ ಬಂಧನದ ನಂತರ, ಟೀಕ್ಸೀರಾ ಕುರಿತ ವಿವರಗಳು ಅಮೆರಿಕಾದ ಮಾಧ್ಯಮಗಳಲ್ಲಿ ಹರಿದಾಡತೊಡಗಿವೆ.

ಮಸಾಚುಸೆಟ್ಸ್ ನಗರದಲ್ಲಿ ಆಯುಧಧಾರಿ ಅಧಿಕಾರಿಗಳು ಬೂದು ಬಣ್ಣದ ಟಿ ಶರ್ಟ್, ಕೆಂಪು ಶಾರ್ಟ್ಸ್ ದರಿಸಿದ್ದ ಯುವಕನೊಬ್ಬನನನ್ನು ಕಾಯುತ್ತಿದ್ದ ಕಾರ್ ಒಂದರೊಳಗೆ ತುಂಬುತ್ತಿದ್ದುದು ವೀಡಿಯೋದಲ್ಲಿ ಕಾಣಿಸಿತ್ತು. ಅವನು ತಲೆ ತಗ್ಗಿಸಿದ್ದು, ಸಣ್ಣದಾಗಿ ಕತ್ತರಿಸಿದ ಕೂದಲು ಹೊಂದಿದ್ದ.

ಇದನ್ನೂ ಓದಿ: ಐದು ಪಟ್ಟು ಬೆಳವಣಿಗೆ ಹೊಂದುವ ದೂರಗಾಮಿ ಯೋಜನೆ ಹಾಕಿಕೊಂಡಿದೆ ಭಾರತೀಯ ಬಾಹ್ಯಾಕಾಶ ವಲಯ

ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಟೀಕ್ಸೀರಾ ಸ್ಟೇಟ್ ನ್ಯಾಷನಲ್ ಗಾರ್ಡ್‌ನ ಗುಪ್ತಚರ ವಿಭಾಗದ ಸದಸ್ಯನಾಗಿದ್ದ. ಆ ತಂಡದ ಅಧಿಕೃತ ಫೇಸ್‌ಬುಕ್‌ ಪುಟದಲ್ಲಿ ಟೀಕ್ಸೀರಾ ಜುಲೈ 2022ರಲ್ಲಿ ಏರ್ ಮ್ಯಾನ್ ಫಸ್ಟ್ ಕ್ಲಾಸ್ ಆಗಿ ಬಡ್ತಿ ಹೊಂದಿದ್ದ ತಂಡದ ಸದಸ್ಯನಾಗಿದ್ದ.

ಅಮೆರಿಕಾದ ವಾಯುಪಡೆ ಬಳಿಕ ತನ್ನ ಹೇಳಿಕೆಯಲ್ಲಿ ಟೀಕ್ಸೀರಾ ಏರ್ ನ್ಯಾಷನಲ್ ಗಾರ್ಡ್ ಆಗಿ ಸೆಪ್ಟೆಂಬರ್ 2019ರಲ್ಲಿ ನೇಮಕಗೊಂಡಿದ್ದ ಎಂದಿತು. ಆತನ ಅಧಿಕೃತ ಹುದ್ದೆ “ಸೈಬರ್ ಟ್ರಾನ್ಸ್‌ಪೋರ್ಟ್‌ ಸಿಸ್ಟಮ್ಸ್ ಜರ್ನಿಮ್ಯಾನ್” ಎಂದಾಗಿತ್ತು.

ಆತನ ಕೆಲಸದ ಗುರಿಗಳೆಂದರೆ ವಾಯುಪಡೆಯ ವಿಶಾಲವಾದ, ಜಾಗತಿಕ ಸಂವಹನವನದ ವ್ಯವಸ್ಥೆಗಳನ್ನು ನಿರ್ವಹಿಸುವುದು.

“ಯಾವುದಾದರೂ ನೆಟ್‌ವರ್ಕ್ ದುರಸ್ತಿಗೊಳಿಸುವುದಾಗಲಿ, ಅಥವಾ ವಿದೇಶದಲ್ಲಿ ಫೈಬರ್ ಆಪ್ಟಿಕ್ ಕೇಬಲ್ ಅಳವಡಿಸುವುದಾಗಲಿ, ಈ ತಜ್ಞರು ನಮ್ಮ ನಮ್ಮ ಸಂಪರ್ಕ ವ್ಯವಸ್ಥೆಗಳನ್ನು ಸದಾ ಕಾರ್ಯಾಚರಿಸುವಂತೆ ಮಾಡಿ, ನಮ್ಮ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ” ಎಂದು ಅಮೆರಿಕಾದ ವಾಯುಪಡೆಯ ಜಾಲತಾಣದಲ್ಲಿರುವ ಆತನ ಹುದ್ದೆಯ ವಿವರಣೆ ತಿಳಿಸುತ್ತದೆ.

ಟೈಮ್ಸ್ ಹಾಗೂ ಇತರ ಅಮೆರಿಕಾದ ಮಾಧ್ಯಮಗಳು ಡಿಸ್ಕಾರ್ಡ್ ಪ್ಲಾಟ್‌ಫಾರಂನಲ್ಲಿ ಒಂದು ಸಣ್ಣ ಆನ್‌ಲೈನ್ ಗೇಮಿಂಗ್ ಗುಂಪಿನ ನಾಯಕನಾಗಿದ್ದು, ಆ ಗುಂಪಿನಲ್ಲೇ ಸೋರಿಕೆಯಾದ ಮಾಹಿತಿಗಳು ಮೊದಲು ಪ್ರಕಟವಾಗಿದ್ದವು.

ವಾಷಿಂಗ್ಟನ್ ಪೋಸ್ಟ್ ತನ್ನ ವರದಿಯಲ್ಲಿ ಈ ಆನ್‌ಲೈನ್ ಗ್ರೂಪ್ 2020ರಲ್ಲಿ ಕೊರೊನಾವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಆರಂಭವಾಗಿತ್ತು ಎಂದಿತ್ತು.

ಈ ಚಾಟ್ ಗ್ರೂಪ್‌ನಲ್ಲಿ 12 ಯುವಕರು, ಹುಡುಗರಿದ್ದು, ಅವರು ಸಾಮಾನ್ಯವಾಗಿದ್ದ ಗನ್‌ಗಳು, ಮಿಲಿಟರಿ ಉಪಕರಣಗಳು ಹಾಗೂ ಧಾರ್ಮಿಕ ಆಸಕ್ತಿಗಳ ಕಾರಣದಿಂದ ತುಂಬಾ ಅನ್ಯೋನ್ಯತೆ ಹೊಂದಿದ್ದರು. ಆ ಗುಂಪಿಗೆ ಆಹ್ವಾನದ ಮೂಲಕ ಮಾತ್ರವೇ ಸದಸ್ಯರಾಗಲು ಅವಕಾಶವಿತ್ತು.

“ನಾವೆಲ್ಲರೂ ಒಬ್ಬರಿಗೊಬ್ಬರು ತುಂಬಾ ಹತ್ತಿರವಾಗಿದ್ದೆವು. ನಾವು ಒಂದು ರೀತಿ ಕುಟುಂಬದಂತಾಗಿದ್ದು, ಒಬ್ಬರ ಮೇಲೊಬ್ಬರು ಅವಲಂಬಿತವಾಗಿದ್ದೆವು” ಎಂದು ಆ ಗುಂಪಿನ ಸದಸ್ಯನೊಬ್ಬ ಹೇಳಿದ್ದ.

ಆ ಗುಂಪಿನ ನಾಯಕನಾಗಿದ್ದವನು ಒಜಿ ಎಂದು ಕರೆಯಲ್ಪಡುತ್ತಿದ್ದ ಟೀಕ್ಸೀರ. ಆತನನ್ನು ಅವನ ಧೈರ್ಯಕ್ಕಾಗಿ ತಂಡದ ಸದಸ್ಯರು ಆರಾಧಿಸುತ್ತಿದ್ದರು. ಅವನು ಬಂದೂಕಿನ ವ್ಯಾಪ್ತಿಯಲ್ಲಿ ತಾನಿರುವ ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಎಂದಿದ್ದರು. ಕೆಲವು ವೀಡಿಯೊಗಳಲ್ಲಿ ಆತ ಗುಂಡು ಹಾರಿಸುವ ಮೊದಲು ಜನಾಂಗೀಯ ಮತ್ತು ಧರ್ಮ ನಿಂದನಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದ ಎನ್ನಲಾಗಿದೆ. ಆ ಜಾಲತಾಣದಲ್ಲಿ ಕೆಟ್ಟ ಹಾಸ್ಯಗಳು ಮತ್ತು ಮೀಮ್ಸ್‌ಗಳು ಸಾಮಾನ್ಯವಾಗಿದ್ದವು.

ಕಳೆದ ವರ್ಷ ಒಂದು ಹಂತದಲ್ಲಿ ಟೀಕ್ಸೀರಾ ಯಾವುದೋ ರಹಸ್ಯ ದಾಖಲೆಗಳನ್ನು ಮರು ರಚಿಸಿದಂತೆ ಕಾಣುವ ಬರಹಗಳನ್ನು ಹಂಚಿಕೊಳ್ಳತೊಡಗಿದ್ದ. ಅವುಗಳು ತನ್ನ ಕೆಲಸದಲ್ಲಿ ದೊರಕಿದವು ಎಂದು ಹೇಳಿಕೊಳ್ಳುತ್ತಿದ್ದ. ಆ ದಾಖಲೆಗಳಲ್ಲಿ ಮಿಲಿಟರಿ ಪರಿಭಾಷೆ ಹಾಗೂ ಇತರ ಟಿಪ್ಪಣಿಗಳಿದ್ದವು.

ಅವನು ಆಗಾಗ ತನ್ನ ಗುಂಪಿಗೆ ಪ್ರಸ್ತುತ ವಿಚಾರಗಳ ಕುರಿತು ಮಾಹಿತಿ ಹೊಂದಿರುವ ಕುರಿತು ಪಾಠ ಮಾಡುತ್ತಿದ್ದ. ಅವನು ಗುಂಪಿನ ಸದಸ್ಯರಿಗೆ ಲಿಪ್ಯಂತರ ಮಾಡಿದ್ದ ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದ ಎನ್ನಲಾಗಿದೆ.

ಬಳಿಕ ಟೀಕ್ಸೀರಾ ದಾಖಲಾತಿಗಳ ಫೋಟೋಗಳನ್ನು ಹಂಚಿಕೊಳ್ಳಲು ಆರಂಭಿಸಿದ. ಆದರೆ ಅವನು ಅದು ಯಾವಾಗ ಆರಂಭಿಸಿದ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಬೆಲ್ಲಿಂಗ್ ಕ್ಯಾಟ್ ಎಂಬ ಖಾಸಗಿ ತನಿಖಾ ಸುದ್ದಿ ಜಾಲತಾಣ ಈ ದಾಖಲೆಗಳು ಡಿಸ್‌ಕಾರ್ಡ್ ನಲ್ಲಿ ಮೊದಲಿಗೆ ಮಾರ್ಚ್ ತಿಂಗಳಲ್ಲಿ ಹರಿದಾಡಲು ಆರಂಭವಾದವು ಎಂದಿದೆ. ಆದರೆ ಅವುಗಳು ಜನವರಿ ತಿಂಗಳಲ್ಲೇ ಹರಿದಾಡಲು ಆರಂಭವಾಗಿರಬಹುದು.

ಈ ರಹಸ್ಯ ದಾಖಲೆಗಳು ಕ್ರಮೇಣ ವಿವಿಧ ಜಾಲತಾಣಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭವಾಯಿತು. ಡಿಸ್‌ಕಾರ್ಡ್ ತಾನು ತನಿಖೆಗೆ ಸಹಕರಿಸುತ್ತಿರುವುದಾಗಿ ತಿಳಿಸಿತು.

ಟೀಕ್ಸೀರಾ ತಾಯಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ತನ್ನ ಮಗ ಕೇಪ್ ಕಾಡ್‌ನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ, ಅವನು ಇತ್ತೀಚೆಗೆ ತನ್ನ ದೂರವಾಣಿ ಸಂಖ್ಯೆಯನ್ನೂ ಬದಲಾಯಿಸಿದ್ದ ಎಂದಿದ್ದರು. ಆತನನ್ನು ಎಫ್‌ಬಿಐ ವಶಕ್ಕೆ ಪಡೆದುಕೊಳ್ಳುವ ಮುನ್ನ ಕೆಂಪು ಪಿಕಪ್ ಟ್ರಕ್‌ನಲ್ಲಿ ಮನೆಗೆ ಬಂದಿದ್ದ.

ಅಟಾರ್ನಿ ಜನರಲ್ ಗಾರ್ಲ್ಯಾಂಡ್ ಅವರು ಟೀಕ್ಸೀರನನ್ನು ಮಸಾಚುಸೆಟ್ಸ್ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದಿದ್ದಾರೆ. ಆದರೆ ಅವನ ವಿಚಾರಣಾ ದಿನಾಂಕ ಇನ್ನೂ ನಿರ್ಧರಿಸಲಾಗಿಲ್ಲ.

ಅಮೆರಿಕಾದ ಮಾಧ್ಯಮಗಳು ಕಳೆದ ವಾರದಿಂದ ಈ ಮಾಹಿತಿ ಸೋರಿಕೆಯ ಕುರಿತು ವ್ಯಾಪಕವಾಗಿ ವರದಿ ಮಾಡುತ್ತಿದ್ದವು. ಆ ಸೋರಿಕೆಯಾದ ಮಾಹಿತಿಗಳು ಉಕ್ರೇನಿನ ವಾಯು ರಕ್ಷಣಾ ಸಾಮರ್ಥ್ಯದ ವೈಫಲ್ಯವನ್ನು, ಅಮೆರಿಕಾ ಹಲವು ಗುಪ್ತಚರ ವಿಚಾರಗಳಿಗೆ ಸಂಬಂಧಿಸಿದಂತೆ ಮಿತ್ರರಾಷ್ಟ್ರಗಳ ಮೇಲೆ ಕಣ್ಣಿಟ್ಟಿದ್ದನ್ನು ಬಯಲು ಮಾಡಿದ್ದು, ಜೋ ಬಿಡನ್ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿತ್ತು.

ಈ ದಾಖಲೆಗಳು ಅಮೆರಿಕಾದ ಸಹವರ್ತಿಗಳ ಸುತ್ತಲೂ ಸುತ್ತುವಂತಿದ್ದವು. ಕೆಲವು ದಾಖಲೆಗಳು ಒಂದು ರಹಸ್ಯ ಒಪ್ಪಂದದ ಪ್ರಕಾರ, ಅಮೆರಿಕಾಗೆ ತಿಳಿಯದಂತೆ, ಈಜಿಪ್ಟ್ ರಷ್ಯಾಗೆ ಆಯುಧ ಪೂರೈಸಲು ಪ್ರಯತ್ನಿಸಿದೆ ಎಂದಿದ್ದವು.

ಇನ್ನೊಂದು ದಾಖಲೆಯ ಪ್ರಕಾರ, ರಷ್ಯಾದ ಅಧಿಕಾರಿಗಳು ಯುನೈಟೆಡ್ ಅರಬ್ ಎಮಿರೇಟ್ಸ್ ಜೊತೆ ಉತ್ತಮ ಸಂಬಂಧ ಬೆಳೆಸಲು ಪ್ರಯತ್ನಿಸುತ್ತಿದ್ದರು. ಇನ್ನೊಂದು ದಾಖಲೆ ದಕ್ಷಿಣ ಕೊರಿಯಾದ ನಾಯಕರು ಉಕ್ರೇನ್‌ಗೆ ಶೆಲ್‌ಗಳನ್ನು ಪೂರೈಸಲು ಹಿಂದೇಟು ಹಾಕುತ್ತಿದ್ದರು ಎಂದಿದೆ.

ಈ ಎಲ್ಲ ವಿಚಾರಗಳಲ್ಲಿ ಹೆಸರಿಸಲಾದ ಸರ್ಕಾರಗಳು ದಾಖಲೆಗಳಲ್ಲಿದ್ದ ಮಾಹಿತಿಗಳು ಸುಳ್ಳು ಎಂದಿದ್ದವು.

ಈ ಕುರಿತು ಮಾತನಾಡಿದ ಅಮೆರಿಕಾ ಅಧ್ಯಕ್ಷ ಜೋ ಬಿಡನ್ “ನಾನು ಈ ಮಾಹಿತಿ ಸೋರಿಕೆಯ ಕುರಿತು ತಲೆ ಕೆಡಿಸಿಕೊಂಡಿಲ್ಲ. ನನಗೆ ತಿಳಿದಿರುವಂತೆ ಇದರಿಂದ ಯಾವುದೇ ಗಂಭೀರ ಪರಿಣಾಮಗಳೂ ಉಂಟಾಗುವುದಿಲ್ಲ” ಎಂದಿದ್ದಾರೆ.

ಗುರುವಾರ ಅಮೆರಿಕಾದ ರಕ್ಷಣಾ ಇಲಾಖೆಯ ವಕ್ತಾರ ಪ್ಯಾಟ್ ರೈಡರ್ ಅವರು ತನ್ನ ಇಲಾಖೆ ಸೋರಿಕೆಯಾದ ದಾಖಲೆಗಳು ಸಾರ್ವಜನಿಕ ದಾಖಲೆಗಳಲ್ಲದ್ದರಿಂದ ಅವುಗಳಲ್ಲಿದ್ದ ಅಂಶಗಳ ಕುರಿತು ಸ್ಪಷ್ಟೀಕರಣ ನೀಡುವುದಿಲ್ಲ ಎಂದಿದ್ದರು.

“ನಾವು ಅನುಸರಿಸಿಕೊಂಡು ಬಂದ ನೀತಿಗೆ ಪೂರಕವಾಗಿ, ಯಾವುದಾದರೂ ರಹಸ್ಯ ದಾಖಲೆಗಳನ್ನು ಎಲ್ಲಿಯೋ ಹಂಚಿಕೊಳ್ಳಲಾಗಿದೆ ಎಂದ ಮಾತ್ರಕ್ಕೆ, ಆನ್‌ಲೈನ್ ನಲ್ಲಿ ಹಂಚಿಕೊಳ್ಳಲಾಗಿದೆ ಎಂದ ಮಾತ್ರಕ್ಕೆ ಅದನ್ನು ಸಾರ್ವಜನಿಕಗೊಳಿಸಲಾಗಿದೆ ಎಂದರ್ಥವಲ್ಲ. ರಹಸ್ಯ ಮಾಹಿತಿಗಳು ದೇಶದ ಭದ್ರತೆಗೆ ತೊಂದರೆ ಒಡ್ಡುವ ಸಾಧ್ಯತೆಗಳಿರುವುದರಿಂದ, ನಮ್ಮ ಸೈನಿಕರು, ಅಧಿಕಾರಿಗಳ ಸುರಕ್ಷತೆ, ನಮ್ಮ ಸ್ನೇಹಿತರು, ಸಹಭಾಗಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ನಾವು ಇಂತಹ ರಹಸ್ಯ ವಿಚಾರಗಳನ್ನು ಚರ್ಚಿಸುವುದಿಲ್ಲ” ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಗಿರೀಶ್ ಲಿಂಗಣ್ಣ

ಲೇಖನ: ಗಿರೀಶ್ ಲಿಂಗಣ್ಣಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Published On - 8:26 am, Sat, 15 April 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್