ಅಧಿಕಾರಿಗಳಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು (Siddaramaiah) ಚಾಟಿ ಬೀಸಿದ್ದಾರೆ. ಸುಮಾರು 19 ವರ್ಷಗಳ ಹಿಂದೆ ಅಂದರೆ 2004 ರಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿ ಮತ್ತು ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು. ಅಂದು ಡಿಸಿ ಮತ್ತು ಸಿಇಓಗಳೊಂದಿಗೆ ಮೊದಲ ಸಭೆ. ಅಧಿಕಾರಿಗಳು ಆಯಾಯ ಜಿಲ್ಲೆಗಳ ಸ್ಥಿತಿ -ಗತಿಯನ್ನು ವಿವರಿಸಿದರು.ಒಬ್ಬ ಸಿಇಓ “ನಮ್ಮ ಜಿಲ್ಲೆಯಲ್ಲಿ ಜಿಡಿಪಿ ದರ ವೃದ್ಧಿಯಾಗಿದೆ” ಎಂದು ಹೇಳುತ್ತಿದ್ದಂತೆ ಸಿದ್ದರಾಮಯ್ಯಕೋಪದಿಂದ “ನೀನು ದೊಡ್ಡ ಎಕನಾಮಿಸ್ಟ್ ರೀತಿ ಮಾತಾಡಬೇಡ; ನಿಮ್ಮ ಜಿಲ್ಲೆಯ ಮಳೆ ಬೆಳೆ ಸ್ಥಿತಿ ಗತಿ ಹೇಗಿದೆ? ರೈತರಿಗೆ ಬೀಜ ,ಗೊಬ್ಬರ ಪೂರೈಸಿದ್ದೀಯಾ? ಜನರ ಪರಿಸ್ಥಿತಿ ಯಾವ ರೀತಿ ಇದೆ? ಎಲ್ಲರಿಗೂ ಪಡಿತರ / ಕುಡಿಯುವ ನೀರು ಪೂರೈಕೆಯಾಗುತ್ತಿದೆಯಾ? ಎಲ್ಲಾ ಜನ ಕಲ್ಯಾಣ ಕಾರ್ಯಕ್ರಮಗಳು ತಲುಪುತ್ತಿವೆಯೇ ಅನ್ನೋದನ್ನ ವಿವರಿಸಿ ಹೇಳು” ಎಂದು ಗದರಿಸಿದರು. ಧರ್ಮಸಿಂಗ್ ಸಮಾಧಾನ ಸ್ವಭಾವದವರಾಗಿದ್ದರಿಂದ ಆಗಿನ ಆಡಳಿತಕ್ಕೆ ಸ್ವಲ್ಪ ಬಿಗಿ ಬಂದಿದ್ದೇ ಖಡಕ್ ವ್ಯಕ್ತಿತ್ವದ ಸಿದ್ದರಾಮಯ್ಯನವರಿಂದ.
ಮತ್ತೊಮ್ಮೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಈಗ ಅದೇ ರೀತಿ ಅಧಿಕಾರಿಗಳಿಗೆ ಚಾಟಿ ಬೀಸಲು ಆರಂಭಿಸಿದ್ದಾರೆ. ಆದರೆ ಕೇವಲ ಚಾಟಿ ಬೀಸಿದರೆ ಅಥವಾ ಎಚ್ಚರಿಕೆ ನೀಡಿದರೆ ಸಾಲದು. ಏಕೆಂದರೆ ಸರ್ಕಾರ ಬದಲಾದರೂ ಆಡಳಿತ ವೈಖರಿ ಬದಲಾಗಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾರೆ ಮತ್ತು ಡಿಕೆ ಶಿವಕುಮಾರ್ ಡಿಸಿಎಂ ಆಗಿದ್ದಾರೆ ಎಂದು ಸರ್ಕಾರೀ ಆಫೀಸುಗಳಲ್ಲಿ ಲಂಚಕ್ಕಾಗಿ ಪೀಡಿಸುವುದು ನಿಂತಿಲ್ಲ. ಸರ್ಕಾರ ಬದಲಾದರೂ ಅಧಿಕಾರಿಗಳು ಮತ್ತು ನೌಕರರ ಕಾರ್ಯವೈಖರಿಯೇನೂ ಬದಲಾಗಿಲ್ಲ.
“ಸಾರ್ವಜನಿಕ ಸೇವಕ”ರಾಗಬೇಕಿದ್ದ ಬಹುತೇಕ ಅಧಿಕಾರಿಗಳು ಜನಸೇವೆಯಿಂದ ವಿಮುಖರಾಗಿರುವುದು ಮತ್ತು ಒಂದು ರೀತಿಯ ಭಂಡತನವನ್ನು ಬೆಳೆಸಿಕೊಂಡಿರುವುದು ಜನರ ಅನುಭವಕ್ಕೆ ಬಂದು ಬಹಳ ದಿನಗಳಾದವು. “ನಿಮ್ಮನ್ನು ಒಮ್ಮೆ ಜೈಲಿಗೆ ಕಳುಹಿಸಿದರೆ ಬುದ್ದಿ ಬರುತ್ತದೆ” ಎಂದು ರಾಜ್ಯದ ಕೆಲವು ಐಎಎಸ್ ಅಧಿಕಾರಿಗಳಿಗೆ ಹೈಕೋರ್ಟ್ ಕೂಡ ಈ ಹಿಂದೆ ಛೀಮಾರಿ ಹಾಕಿದೆ. ಆದರೆ ಕೆಲವು ಅಧಿಕಾರಿಗಳು ಮಾತ್ರ ನಿರಂತರವಾಗಿ ರಾಜ್ಯದ ಸಂಪತ್ತಿನ ಲೂಟಿಯಲ್ಲಿ ತೊಡಗಿದ್ದಾರೆ. ಕೆಲವು ಐಎಎಸ್ ಅಧಿಕಾರಿಗಳು ನಿವೃತ್ತರಾಗುವ ವೇಳೆಗೆ ಕನಿಷ್ಠ 500 ಕೋಟಿ ರೂ.ಬೆಲೆ ಬಾಳುತ್ತಾರೆ ಎಂದು ಮಾಜಿ ಶಾಸಕ ಸಾರಾ ಮಹೇಶ್ ಸದನದಲ್ಲಿಯೇ ಆರೋಪಿಸಿದ್ದರು. ವರ್ಷಕ್ಕೆ ಕನಿಷ್ಠ ಆರು ಬಾರಿ ವಗಾವಣೆಯಾಗುತ್ತಿದ್ದ ಪರಿಶುದ್ಧ ಐಎಎಸ್ ಅಧಿಕಾರಿ ಎಂ.ಎನ್. ವಿಜಯಕುಮಾರ್ ಪತ್ನಿ ಜಯಶ್ರೀಯವರೂ ಅಧಿಕಾರಿಗಳ ಕುಟುಂಬಗಳು ಹೇಗೆ ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂದು ಟಿವಿ ಸಂದರ್ಶನದಲ್ಲಿ ವರ್ಣಿಸಿದ್ದರು. ಅನೇಕ ಅಧಿಕಾರಿಗಳು ಆಯಕಟ್ಟಿನ ಜಾಗಗಳಲ್ಲಿ “ಲ್ಯಾಂಡ್ ಬ್ಯಾಂಕ್”ಗಳನ್ನು ಮತ್ತು ಅಕ್ರಮ ಆಸ್ತಿಗಳನ್ನು ಸೃಷ್ಟಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇತ್ತೀಚಿಗೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾದ ರಾಜಸ್ಥಾನ ಮೂಲದ ಐಎಎಸ್ ಅಧಿಕಾರಿಯೊಬ್ಬರು ಬೆಂಗಳೂರು ಸಮೀಪದ ಅನಂತಪುರ ಜಿಲ್ಲೆಯಲ್ಲಿ ಸುಮಾರು ಐವತ್ತು ಎಕರೆ ವಿಸ್ತೀರ್ಣದಲ್ಲಿ ಖಾಸಗಿ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. “ರಾಜ್ಯದ ಮುಖ್ಯ ಕಾರ್ಯದರ್ಶಿಗಳಾಗಿ ನಿವೃತ್ತರಾಗುವ ಕೆಲವು ಹಿರಿಯ ಐಎಎಸ್ ಅಧಿಕಾರಿಗಳು ಕೂಡ ಏಳೇಳು ಜನ್ಮಕ್ಕಾಗುವಷ್ಟು ಅಕ್ರಮ ಸಂಪತ್ತನ್ನು ಭ್ರಷ್ಟಾಚಾರದ ಮೂಲಕ ಕಬಳಿಸುತ್ತಿದ್ದಾರೆ” ಎಂಬ ಆತಂಕವನ್ನು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಬಾಲಸುಬ್ರಮಣಿಯನ್ ‘fall from grace, memoirs of a rebel IAS officer’ ಎಂಬ ಕೃತಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಲೋಕಾಯುಕ್ತ ಪೊಲೀಸ್ ದಾಳಿಯಲ್ಲಿ ಬಯಲಾಗುವ ಬಂಗಾರದ ಆಭರಣಗಳು ,ನೋಟಿನ ಕಂತೆಗಳು,ಐಷಾರಾಮಿ ವಾಹನಗಳು ,ಬಂಗಲೆಗಳ ಚಿತ್ರಗಳನ್ನು ನೋಡಿದರೆ ಬೆಚ್ಚಿ ಬೀಳುವಂತಾಗುತ್ತದೆ. ಇತ್ತೀಚಿಗೆ ಒಬ್ಬ ತಹಸೀಲ್ದಾರ್ ಬಳಿ 500 ಎಕರೆ ಜಮೀನು ಪತ್ತೆಯಾಯಿತು. ಒಬ್ಬ ಭೂಗತ ದೊರೆಯ ಕುಟುಂಬದವರೊಂದಿಗೆ ಕುದುರೆ ಜೂಜಿನ ಟ್ರ್ಯಾಕ್ ನಿರ್ಮಿಸುವ ಯೋಜನೆಯನ್ನು ಆತ ಹಾಕಿಕೊಂಡಿದ್ದನಂತೆ. ಲೋಕಾಯುಕ್ತ ದಾಳಿಯ ಪರಂಪರೆಯನ್ನು ಶುರು ಮಾಡಿದವರು ನ್ಯಾಯ ಮೂರ್ತಿ ಎಂ.ಎನ್. ವೆಂಕಟಾಚಲ ಅವರು. ಅವರು ಸರ್ಕಾರೀ ಆಸ್ಪತ್ರೆಗಳಿಗೆ ಖುದ್ದಾಗಿ ತೆರಳಿ ಅಲ್ಲಿನ ಅವ್ಯವಸ್ಥೆಗಳನ್ನು ಬಯಲಿಗೆ ಎಳೆಯುತ್ತಿದ್ದರು. ಆದರೆ ಆಗಿನ ಅರೋಗ್ಯ ಸಚಿವ ಡಾ. ಮಾಲಕ ರೆಡ್ಡಿಯವರು “ಇಂತಹ ನೂರು ಲೋಕಾಯುಕ್ತರು ಬಂದರೂ ಪರಿಸ್ಥಿತಿ ಸುಧಾರಿಸುವುದಿಲ್ಲ” ಎಂದು ವಿಧಾನ ಪರಿಷತ್ತಿನಲ್ಲಿ ಮೂದಲಿಸಿದ್ದರು.ಆ ಗ ಅವರ ಹೇಳಿಕೆ ವಿವಾದವನ್ನು ಸೃಷ್ಟಿಸಿತ್ತು. ಡಾ. ಮಾಲಕ ರೆಡ್ಡಿಯವರ ಹೇಳಿಕೆಯಲ್ಲಿ ನಿಜವಾಗಿಯೂ ಹುರುಳಿತ್ತು. ಸ್ವಲ್ಪ ಅವಾಸ್ತವಿಕ ಮತ್ತು ಅಧಿಕಪ್ರಸಂಗತನ ಅನ್ನಿಸಿದರೂ ಒಂದು ಹೊಸ ಆಲೋಚನೆಯನ್ನು ಮಾಡಬಹುದು. ಹೀಗೆ ಬಿಡಿ ಬಿಡಿಯಾಗಿ ದಾಳಿ ಮಾಡುವ ಬದಲು ರಾಜ್ಯದ ಎಲ್ಲಾ ಆರೂವರೆ ಲಕ್ಷ ಅಧಿಕಾರಿಗಳು ಮತ್ತು ನೌಕರರ ಮೇಲೆ ಏಕ ಕಾಲದಲ್ಲಿ ದಾಳಿ ಮಾಡಿ ಪ್ರಾಮಾಣಿಕ ಅಧಿಕಾರಿಗಳು ಮತ್ತು ನೌಕರರ ಹೆಸರುಗಳನ್ನು ಮಾತ್ರ ಪ್ರಕಟಿಸಬೇಕು ಮತ್ತು ಈ ದಾಳಿಯಲ್ಲಿ ಪತ್ತೆಯಾಗುವ ಅಕ್ರಮ ಸಂಪತ್ತಿನಿಂದ ಸಿದ್ದರಾಮಯ್ಯನವರ ಸರ್ಕಾರ ಕನಿಷ್ಠ ಹತ್ತು ವರ್ಷಗಳ ಕಾಲ ಗ್ಯಾರಂಟಿ ಯೋಜನೆಗಳನ್ನು ನಡೆಸಬಹುದು. ಈಗ ಎಚ್ಚರಿಕೆ, ಛೀಮಾರಿ, ಚಾಟಿ ಏಟುಗಳು ನಡೆಯುವುದಿಲ್ಲ. ಈ ಹಿಂದೆಯೂ ಇಂತಹ ವಿಧಾನಗಳನ್ನು ಕೆಲವರು ಅನುಸರಿಸಿದ್ದಾರೆ. ಕೃಷಿ ಸಚಿವರಾಗಿದ್ದ ಸಿ.ಭೈರೇ ಗೌಡರು ಕೋಲಾರ ಜಿಲ್ಲಾ ಪ್ರಗತಿ ಪರಿಶೀಲನೆಯ ಸಭೆಯಲ್ಲಿ ತಮ್ಮ ವಾಕಿಂಗ್ ಸ್ಟಿಕ್ ನಿಂದ ಒಬ್ಬ ಭ್ರಷ್ಟ ಅಧಿಕಾರಿಯ ತಲೆಯ ಮೇಲೆ ಚೆನ್ನಾಗಿ ತದುಕಿದ್ದರು. ಎಚ್.ಡಿ. ದೇವೇಗೌಡರ ಸಂಪುಟದಲ್ಲಿ ವಸತಿ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ, ಹೌಸಿಂಗ್ ಬೋರ್ಡ್ ಮನೆಗಳ ಗೋಡೆಗಳನ್ನು ಒದ್ದು ಕೆಡವಿ ಕಳಪೆ ಕಾಮಗಾರಿಗಳ ವಿರುದ್ಧ ಅಧಿಕಾರಿಗಳನ್ನು ಎಚ್ಚರಿಸಿದ್ದರು. ಆದರೆ ಇವೆಲ್ಲಾ ಕೇವಲ ಸಾಂಕೇತಿಕ ಕ್ರಿಯೆಗಳಷ್ಟೇ..!
ಇದನ್ನೂ ಓದಿ: ಇಂಗ್ಲಿಷ್ನಲ್ಲಿ ‘ಭಾರತ’ ಹುಟ್ಟಿದರೆ ಯಾರಿಗೆಲ್ಲ ಸಂಕಷ್ಟ?
ಇನ್ನು, ಯಾವುದೇ ಹೊಸ ಸರ್ಕಾರ ಬಂದರೂ ಮೊದಲು ಸದ್ದು ಮಾಡುವುದೇ ವರ್ಗಾವಣೆ ದಂಧೆ. ರಾಜಕಾರಣಿಗಳಿಗೆ ಅಧಿಕಾರ ಎನ್ನುವುದು ಒಂದು ಗಗನ ಕುಸುಮವಾಗಿದೆ. ಹತ್ತೋ ಇಪ್ಪತ್ತೋ ವರ್ಷಗಳು ಕಷ್ಟ ಪಟ್ಟು ಮಂತ್ರಿಯಾಗುತ್ತಾರೆ. ಅದೂ ಕೂಡ ಎಷ್ಟು ವರ್ಷ ಎನ್ನುವ ಗ್ಯಾರಂಟಿಯಿಲ್ಲ. ಆದರೆ ಅಧಿಕಾರಿಗಳ ಹುದ್ದೆಗಳು ಪ್ರತಿ ದಿನ ನೋಟುಗಳನ್ನು ಎಣಿಸುವ ಗಲ್ಲಾ ಪೆಟ್ಟಿಗೆಗಳು ಇದ್ದಂತೆ. ಮಂತ್ರಿಗಳು ಈ ಹುದ್ದೆಗಳನ್ನು ಮುಫತ್ತಾಗಿ ಬಿಟ್ಟು ಕೊಟ್ಟರೆ ಅಧಿಕಾರಿಗಳಿಗೆ ಬಂಗಾರದ ಹುಂಡಿಗಳನ್ನು ಕೊಟ್ಟು ಇವರು ಖಾಲಿ ಚೊಂಬುಗಳನ್ನು ಬಾರಿಸುತ್ತಿರಬೇಕಾಗುತ್ತದೆ. ಆದ್ದರಿಂದ ಅವರ ಕೈಗೆ ಮೊದಲು ಸಿಗುವ ಅಸ್ತ್ರವೇ ವರ್ಗಾವಣೆ. ಇದೊಂದು ವಿಷದ ಚಕ್ರದ ಸುಳಿಯಷ್ಟೇ. ರಾಜಕಾರಣಿಗಳ ಮೇಲಿನ ಭ್ರಷ್ಟಾಚಾರದ ಆರೋಪಗಳೇ ಹೆಚ್ಚು ಸದ್ದು ಮಾಡುತ್ತವೆ. ಅಧಿಕಾರಿಗಳು ನುಣುಚಿಕೊಳ್ಳುತ್ತಾರೆ! ಆಡಳಿತದ ಪ್ರತಿ ಹಂತದಲ್ಲಿಯೂ ನಾನಾ ರೀತಿಯ ಮಾಫಿಯಾಗಳು ಸಕ್ರಿಯವಾಗಿವೆ.
“ಭ್ರಷ್ಟಾಚಾರದ ಸಂಪೂರ್ಣ ನಿರ್ಮೂಲನೆ ಸಾಧ್ಯವಿಲ್ಲ. ಅದಕ್ಕೆ ವ್ಯವಸ್ಥೆಯೇ ಕಾರಣ” ಎಂಬ ವಾದವನ್ನು ಮೊದಲಿಂದಲೂ ಉದ್ದೇಶಪೂರ್ವಕವಾಗಿ ಪೋಷಿಸಿಕೊಂಡು ಬರಲಾಗಿದೆ. ತಕ್ಕ ಮಟ್ಟಿಗೆಯಾದರೂ ಭ್ರಷ್ಟಾಚಾರವಿಲ್ಲದಿದ್ದರೆ ಆಡಳಿತಗಾರರಿಗೆ ಅಧಿಕಾರವೇ ನಶ್ವರ ಅನ್ನಿಸುತ್ತದೆ. ಆದ್ದರಿಂದ ಅದನ್ನು ಆಡಳಿತ ಯಂತ್ರದ ಕೀಲೆಣ್ಣೆಯಾಗಿ ಬಳಸಲಾಗುತ್ತಿದೆ. ಆಡಳಿತ ವ್ಯವಸ್ಥೆ ಸ್ಪಂದಿಸುವ ಗುಣವನ್ನು ಕಳೆದುಕೊಂಡು ಕೇವಲ ಒಂದು ಪ್ರಹಸನವಾಗುತ್ತಿದೆ.
ಆಡಳಿತದ ಪ್ರತಿ ಹಂತದಲ್ಲಿಯೂ ನಾನಾ ರೀತಿಯ ಮಾಫಿಯಾಗಳು ಸಕ್ರಿಯವಾಗಿವೆ. ಇದು ಮುಖ್ಯಮಂತ್ರಿಯವರಿಗೆ ಗೊತ್ತಿಲ್ಲ ಎಂದೇನಿಲ್ಲ. ಅವರು ಆರಂಭದಲ್ಲಿಯೇ ಅದನ್ನು ಗ್ರಹಿಸಿದ್ದಾರೆ. ಆದ್ದರಿಂದಲೇ “ರಾಜ್ಯದಲ್ಲಿ ಭ್ರಷ್ಟಾಚಾರ ಸಾಂಸ್ಥಿಕರಣಗೊಂಡಿದ್ದು ಅದರ ಮೂಲೋಚ್ಛಾಟನೆಗೆ ಆಡಳಿತಾತ್ಮಕ ಮತ್ತು ಶಾಸನಾತ್ಮಕ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ” ಎಂಬ ಭರವಸೆಯನ್ನು ವಿಧಾನ ಮಂಡಲದ ಜಂಟಿ ಅಧಿವೇಶನದ ಭಾಷಣದಲ್ಲಿಯೇ ರಾಜ್ಯಪಾಲರು ನೀಡಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ತಮಗೆ ದತ್ತಕವಾಗಿರುವ ಧೀಶಕ್ತಿಯನ್ನು ಭ್ರಷ್ಟಾಚಾರದ ವಿರುದ್ಧ ಅನಾಮತ್ತಾಗಿ ಹೋರಾಡಲು ಬಳಸುವ ಲಕ್ಷಣಗಳು ಕಂಡು ಬರುತ್ತಿವೆ. ಈ ದಿಸೆಯಲ್ಲಿ ಅವರು ಅಧಿಕಾರಿಗಳಿಗೆ ಚಾಟಿ ಏಟು ನೀಡಲು ಆರಂಭಿಸಿದ್ದಾರೆ. ಇಷ್ಟಕ್ಕೇ ನಿಲ್ಲದೆ ಅವರು ಆಡಳಿತ ಯಂತ್ರದ ಆಳಕ್ಕೆ ಪಾತಾಳ ಗರಡಿಯನ್ನು ಇಳಿಸಿ ಸಂಪೂರ್ಣವಾಗಿ ಜಾಲಾಡಬೇಕಿದೆ. ಇಲ್ಲಿ ಒಂದೆರಡು ವಿಚಾರಗಳನ್ನು ಪ್ರಸ್ತಾಪಿಸುವುದು ಸೂಕ್ತ. ಇತ್ತೀಚಿಗೆ ಒಮ್ಮೆ ಅವರು ಉತ್ತರ ಕರ್ನಾಟಕದ ಪ್ರವಾಸದಲ್ಲಿದ್ದಾಗ ಜೋರು ಮಳೆಯಿಂದಾಗಿ ಹಾವೇರಿ ಸರ್ಕಾರೀ ಆಸ್ಪತ್ರೆಯ ಮಾಳಿಗೆಯಿಂದ ನೀರು ಸೋರಿಕೆಯಾಗಿ ಗರ್ಭಿಣಿಯರು, ಬಾಣಂತಿಯರು ಮತ್ತು ನವಜಾತ ಶಿಶುಗಳು ರಾತ್ರಿಯಿಡಿ ತೊಂದರೆ ಅನುಭವಿಸಿದ್ದ ವಿಷಯ ಅವರಿಗೆ ತಿಳಿಯಿತು. ಆಸ್ಪತ್ರೆಗೆ ತಕ್ಷಣ ಧಾವಿಸಿದರು. ಅಲ್ಲಿನ ದಾರುಣ ಪರಿಸ್ಥಿತಿಯನ್ನು ನೋಡಿ ಅವರಿಗೆ ಆಘಾತವಾಯಿತು. ಕೂಡಲೇ ಆಸ್ಪತ್ರೆ ಕಾಮಗಾರಿಯ ಉಸ್ತುವಾರಿ ಅಧಿಕಾರಿಯನ್ನು ಸಸ್ಪೆಂಡ್ ಮಾಡಿ ಇಲಾಖಾ ತನಿಖೆಗೆ ಆದೇಶಿಸಿದರು. ಕೆಲವೊಮ್ಮೆ ಉತ್ಸಾಹದಿಂದ ಮತ್ತು ನಿಯತ್ತಿನಿಂದ ಕೆಲಸ ಮಾಡುವ ಅಧಿಕಾರಿಗಳೂ ತಪ್ಪು ಮಾಡುತ್ತಾರೆ. ಅದಕ್ಕೆ bonafied error ಎನ್ನುತ್ತಾರೆ. ಅಂತವರಿಗೆ ವಿನಾಯ್ತಿ ನೀಡಲಾಗುತ್ತದೆ. ಆದರೆ ಅಮಾಯಕರಿಗೆ ತೀವ್ರ ತೊಂದರೆಗೆ ಮತ್ತು ಜನರ ಜೀವ ಹಾನಿಗೆ ಕಾರಣವಾಗುವ ಹಾಗೂ ಬೊಕ್ಕಸಕ್ಕೆ ನಷ್ಟ ಉಂಟು ಮಾಡುವ ಅಧಿಕಾರಿಗಳ ನಡವಳಿಕೆಗಳನ್ನು ಕ್ರಿಮಿನಲ್ ಸ್ವರೂಪದ ನಿರ್ಲಕ್ಷ್ಯ (criminal negligence) ಎಂದು ಪರಿಗಣಿಸಬೇಕಾಗುತ್ತದೆ. ಅಂತವರ ವಿರುದ್ಧ FIR ದಾಖಲಿಸುವುದೇ ಸೂಕ್ತ. ಈಗ ಕೇವಲ ಅಮಾನತ್ತನ್ನು ಯಾರೂ ಒಂದು ಶಿಕ್ಷೆಯಾಗಿ ಪರಿಗಣಿಸುವುದಿಲ್ಲ. ಇದರ ಜೊತೆಗೆ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಪ್ರಕರಣಗಳು ಮೇಲುನೋಟಕ್ಕೆ ಸಾಬೀತಾಗಿದ್ದರೂ ಅವರ ಪ್ರಾಷಿಕ್ಯೂಷನ್ನಿಗೆ ಅಪರಾಧ ನೀತಿ ಸಂಹಿತೆಯ ಬ್ರಿಟಿಷರ ಕಾಲದ 197 ನೇ ಕಲಂ ಪ್ರಕಾರ ಸರ್ಕಾರದ ಪೂರ್ವಾನುಮತಿ ಕಡ್ಡಾಯ. ಪ್ರಭಾವ ಮತ್ತು ಜಾತಿ ಬಲವನ್ನು ಬಳಸಿಕೊಂಡು ಬಚಾವ್ ಆಗಿ ಬಿಡುತ್ತಾರೆ. ಆದ್ದರಿಂದಲೇ ಲೋಕಾಯುಕ್ತ ತನಿಖೆಯ ಕಡತಗಳು ಹಾಗೆಯೇ ಕೊಳೆಯುತ್ತಿವೆ. ಆದ್ದರಿಂದ ಮುಖ್ಯಮಂತ್ರಿಯವರು ಈ ದಿಸೆಯಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಇದರ ಜೊತೆಗೆ ಅದಕ್ಷ ಮತ್ತು ಭ್ರಷ್ಟ ಅಧಿಕಾರಿಗಳನ್ನು ಪತ್ತೆ ಹಚ್ಚಿ ನಾಗರೀಕ ಸೇವಾ ನಿಯಮಗಳ ಪ್ರಕಾರ ಅವರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಬಹುದೇ ಎನ್ನುವುದನ್ನು ಪರಿಶೀಲಿಸಬಹುದು.
ಇದನ್ನೂ ಓದಿ: ಹಿಂದೂ ಮಹಾಸಾಗರದ ತಳದ ಸಂಪತ್ತನ್ನು ಭಾರತ – ಆಸ್ಟ್ರೇಲಿಯಾಗಳು ಯಾಕೆ ರಕ್ಷಿಸಬೇಕು?
ದೇಶದಲ್ಲಿ ಉದ್ಯೋಗ ಭದ್ರತೆ ಇರುವುದು ಸರ್ಕಾರೀ ಅಧಿಕಾರಿಗಳು ಮತ್ತು ನೌಕರರಿಗೆ ಮಾತ್ರ.ಸರ್ಕಾರಗಳು ಮತ್ತು ರಾಜಕೀಯ ಆಡಳಿತಗಾರರು ಬದಲಾಗುತ್ತಾರೆ.ಆದರೆ ದೇಶವನ್ನು ನಿರ್ಮಾಣ ಮಾಡಲು ಭದ್ರವಾದ ಮತ್ತು ಶಾಶ್ವತವಾದ ಅಧಿಕಾರಶಾಹಿ ಅಗತ್ಯ ಎಂದು ನಮ್ಮ ಪೂರ್ವಿಕರು ಭಾವಿಸಿದ್ದರು. ಆದರೆ ಈಗ ಅವರ ಉದ್ಯೋಗ ಭದ್ರತೆಯೇ ದೇಶಕ್ಕೆ ಒಂದು ಶಾಪವಾಗಿದೆ. “ಕೆಲಸ ಮಾಡದಿದ್ದರೂ ಪ್ರತಿ ತಿಂಗಳು ಸಂಬಳ ಬರುತ್ತದೆ” ಎಂಬ ಧೋರಣೆಯೇ ಆಡಳಿತ ವ್ಯವಸ್ಥೆಯಲ್ಲಿ ಅರಾಜಕತೆಗೆ ಕಾರಣವಾಗಿದೆ. ಅದರ ಬದಲು ಕಾರ್ಪೊರೇಟ್ ಕ್ಷೇತ್ರದಂತೆ ಸರ್ಕಾರೀ ಅಧಿಕಾರಿಗಳು ಮತ್ತು ನೌಕರರಿಗೂ ಗುತ್ತಿಗೆ ಪದ್ದತಿಯನ್ನು ತರುವುದು ಸೂಕ್ತ. ಅವರ ಕಾರ್ಯಕ್ಷಮತೆಗೆ ಅನುಗುಣವಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಅವರ ಉದ್ಯೋಗದ ಕರಾರನ್ನು ನವೀಕರಿಸಬಹುದು. ಹೊಸ ಹೊಸ ತಂತ್ರಜ್ಞಾನಗಳ ಅವಿಷ್ಕಾರದಿಂದಾಗಿ ಆಡಳಿತ ಯಂತ್ರದ ನಿರಂತರತೆಗೆ ಯಾವುದೇ ಧಕ್ಕೆಯಾಗುವುದಿಲ್ಲ. ಇದಕ್ಕೆ ಸಂವಿಧಾನದ ತಿದ್ದುಪಡಿಯ ಅಗತ್ಯವಿದೆ.ಇದಕ್ಕೆ ಮಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ರಾಷ್ಟ್ರೀಯ ಚರ್ಚೆಗೆ ಕರೆ ನೀಡಬೇಕಿದೆ. ರಾಜ್ಯದ ಆರೂವರೆ ಲಕ್ಷ ಅಧಿಕಾರಿಗಳು ಮತ್ತು ನೌಕರರನ್ನು ಮುಖ್ಯಮಂತ್ರಿಗಳು ಹದ್ದುಬಸ್ತಿನಲ್ಲಿ ಇಟ್ಟರೆ ಅವರನ್ನು ಆರೂವರೆ ಕೋಟಿ ಜನರು ಮೆಚ್ಚುತ್ತಾರೆ.
ಒಂದು ಸಂಗತಿ ನೆನಪಾಗುತ್ತಿದೆ. ಸೊರಬದಲ್ಲಿ ಐಬಿ ಕಟ್ಟಡ ಎತ್ತರದಲ್ಲಿತ್ತು. ಅದನ್ನು ಪ್ರತಿನಿಧಿಸುತ್ತಿದ್ದ ಎಸ್. ಬಂಗಾರಪ್ಪನವರು ಆಗಾಗ ಒಂದು ಒಡ್ಡೋಲಗದಂತಹ ಸಭೆ ಮಾಡುತ್ತಿದ್ದರು. ಎಡಭಾಗದಲ್ಲಿ ನೂರಾರು ಗ್ರಾಮಸ್ಥರು ಕುಳಿತುಕೊಳ್ಳುತ್ತಿದ್ದರು. ಬಲ ಭಾಗದಲ್ಲಿ ಅಧಿಕಾರಿಗಳು ಇರುತ್ತಿದ್ದರು. ಗ್ರಾಮಸ್ಥರು ದೂರುಗಳನ್ನು ಹೇಳುತ್ತಿದ್ದಂತೆ ಬಂಗಾರಪ್ಪನವರು ಸಂಬಂಧಿಸಿದ ಅಧಿಕಾರಿಯನ್ನು ಎದ್ದು ನಿಲ್ಲಿಸಿ ಆತನಿಗೆ ಹಿಗ್ಗಾ ಮುಗ್ಗಾ ಹೀನಾಮಾನ ಬಯ್ಯುತ್ತಿದ್ದರು. ಸಭೆಯ ನಂತರ ಜನರು “ನೋಡಿ ನಮ್ಮ ಸಾಹೇಬರು ಅವರಿಗೆ ಹೇಗೆ ಚಳಿ ಬಿಡಿಸಿದರು” ಎಂದು ಹೊಗಳುತ್ತಾ ಊರಿಗೆ ಮರಳುತ್ತಿದ್ದರು. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತ ಯಂತ್ರದ ಶುದ್ದೀಕರಣವೆಂಬ ಒಂದು ಸಂಪೂರ್ಣ ಕ್ರಾಂತಿಯ ಕಹಳೆಯನ್ನು ಮೊಳಗಿಸಲು ಇದು ಸಕಾಲ. ಈ ಮೂಲಕ ಅವರು ಮುಂದಿನ ಪೀಳಿಗೆಗೆ ಒಳ್ಳೆಯದನ್ನು ಬಿಟ್ಟು ಹೋಗಲು ಮತ್ತು ಒಬ್ಬ ನಿಜವಾದ ಮುತ್ಸದ್ದಿಯಾಗಲು ಸಾಧ್ಯ.
ಲೇಖಕರು – ಸಿ.ರುದ್ರಪ್ಪ
ಮತ್ತಷ್ಟು ವಿಶ್ಲೇಷಣೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:07 pm, Thu, 21 September 23