ದೇಶಭಕ್ತಿಯು ಸಾರ್ವತ್ರಿಕತೆಗೆ ವಿರುದ್ಧವಾಗಿದೆಯೇ?: ಗುರುದೇವ್ ಶ್ರೀ ಶ್ರೀ ರವಿಶಂಕರ್ ಹೇಳುವುದೇನು?
ದೇಶಭಕ್ತಿ ಮತ್ತು ಇತಿಹಾಸದ ಬಗ್ಗೆ ಇರಿಸಿಕೊಳ್ಳುವ ಹೆಮ್ಮೆ ಸಾರ್ವತ್ರಿಕತೆಯ ಮೌಲ್ಯಗಳಿಗೆ ವಿರುದ್ಧವಾದುದಲ್ಲ. ಇಂದು ವಿಶ್ವವೇ ಒಂದು ಜಾಗತಿಕ ಗ್ರಾಮದಂತಾಗಿದೆ, ಅದರಲ್ಲಿ ನಾವು ವಾಸಿಸುತ್ತಿದ್ದೇವೆ. ಆದ್ದರಿಂದ ನಾವು ಜಾಗತಿಕ ನಾಗರಿಕರಾಗಿರಬೇಕು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅದರ ಅರ್ಥ ನಾವು ದೇಶಭಕ್ತಿಯನ್ನು ಹೊಂದಿರಬಾರದು ಎಂದಲ್ಲ ಎಂದು ಗುರುದೇವ್ ಶ್ರೀ ಶ್ರೀ ರವಿ ಶಂಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾವು ಒಂದು ಮರವನ್ನು ನೋಡಿದರೆ, ಅದರ ಬೇರುಗಳು ಅಗೋಚರವಾಗಿರುತ್ತವೆ. ಆದರೆ ಬೇರುಗಳನ್ನು ಪೋಷಿಸದ ಹೊರತು, ಮರವು ಉಳಿಯುವುದಿಲ್ಲ. ಮರವು ಬಲವಾದ ಬೇರುಗಳ ಮೂಲಕ ಸ್ಥಿರತೆಯನ್ನು ಪಡೆಯುತ್ತದೆ. ದೇಶದ ಇತಿಹಾಸ ಮತ್ತು ಪರಂಪರೆ ಅದರ ಬೇರುಗಳು. ನಾವು ನಮ್ಮ ಬೇರುಗಳನ್ನು ಗೌರವಿಸಬೇಕು, ವರ್ತಮಾನದಲ್ಲಿ ಬದುಕಬೇಕು ಮತ್ತು ಭವಿಷ್ಯದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರಬೇಕು.
ದೇಶಭಕ್ತಿ ಮತ್ತು ಇತಿಹಾಸದ ಬಗ್ಗೆ ಇರಿಸಿಕೊಳ್ಳುವ ಹೆಮ್ಮೆ ಸಾರ್ವತ್ರಿಕತೆಯ ಮೌಲ್ಯಗಳಿಗೆ ವಿರುದ್ಧವಾದುದಲ್ಲ. ಇಂದು ವಿಶ್ವವೇ ಒಂದು ಜಾಗತಿಕ ಗ್ರಾಮದಂತಾಗಿದೆ, ಅದರಲ್ಲಿ ನಾವು ವಾಸಿಸುತ್ತಿದ್ದೇವೆ. ಆದ್ದರಿಂದ ನಾವು ಜಾಗತಿಕ ನಾಗರಿಕರಾಗಿರಬೇಕು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅದರ ಅರ್ಥ ನಾವು ದೇಶಭಕ್ತಿಯನ್ನು ಹೊಂದಿರಬಾರದು ಎಂದಲ್ಲ.
ನಮ್ಮ ದೇಶಭಕ್ತಿಯು ನಮ್ಮನ್ನು ಬೇರೆ ಯಾವುದೇ ದೇಶವನ್ನು ವಿರೋಧಿಸುವಂತೆ ಅಥವಾ ಕೀಳಾಗಿ ಕಾಣುವಂತೆ ಮಾಡುವುದಲ್ಲ. ಕೆಲವು ದೇಶಗಳು, ಇತರ ದೇಶಗಳನ್ನು ಮುಖಭಂಗ ಮಾಡುವುದೇ ತಮ್ಮ ದೇಶದ ಮೇಲಿರುವ ದೇಶಭಕ್ತಿ ಎಂಬಂತೆ ಬಿಂಬಿಸುತ್ತವೆ. ಇದು ಒಳ್ಳೆಯದಲ್ಲ. ಪ್ರತಿಯೊಂದು ದೇಶದ ಪ್ರಜೆಗಳೂ ತಮ್ಮ ದೇಶದ ಬಗ್ಗೆ ದೇಶಭಕ್ತಿಯ ಭಾವನೆಯನ್ನು ಹೊಂದಿರಬೇಕು. ತಮ್ಮ ಭಾಷೆಯ ಬಗ್ಗೆ ಹೆಮ್ಮೆ ಪಡಬೇಕು. ಉದಾಹರಣೆಗೆ, ಕನ್ನಡವು ಕನ್ನಡಿಗರ ಮಾತೃಭಾಷೆಯಾಗಿದೆ, ಅದರ ಬಗ್ಗೆ ಅವರು ಹೆಮ್ಮೆಪಡಬೇಕು! ಅದೇ ರೀತಿ, ಫ್ರೆಂಚ್ ಅಥವಾ ರಷ್ಯನ್ನರು ತಮ್ಮ ಭಾಷೆಗಳ ಬಗ್ಗೆ ಹೆಮ್ಮೆ ಪಡಬೇಕು.
ಮತ್ತಷ್ಟು ಓದಿ: ಆಪರೇಷನ್ ಸಿಂಧೂರ್: ಭಾರತ ವಿವೇಕಯುತದಿಂದ ದಿಟ್ಟ ಹೆಜ್ಜೆ ಇಟ್ಟಿದೆ, ರವಿಶಂಕರ್ ಗುರೂಜಿ
ಭಾರತದ ಪ್ರತಿಯೊಂದು ಪ್ರಾಂತ್ಯವು ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಮತ್ತು ಗುರುತನ್ನು ಹೊಂದಿದೆ. ಪ್ರತಿ ಪ್ರಾಂತ್ಯಕ್ಕೂ ತಮ್ಮದೇ ಆದ ಆಹಾರ, ಸಂಗೀತ ಮತ್ತು ಜಾನಪದ ಸಂಸ್ಕೃತಿ ಇದೆ. ಅಲ್ಲಿನ ಪ್ರಜೆಗಳು ತಮ್ಮ ಪರಂಪರೆಯನ್ನು ಉಳಿಸಿ ಬೆಳೆಸಿಕೊಳ್ಳುವುದು ಅವಶ್ಯಕ.
ದೇಶಭಕ್ತಿ ಮತ್ತು ಸಾರ್ವತ್ರಿಕತೆ ವಿರೋಧಾಭಾಸವಲ್ಲ. ಆದಾಗ್ಯೂ, ನಾವು ದೇಶಭಕ್ತಿಯನ್ನು ಹೇಗೆ ಗೌರವಿಸುತ್ತೇವೆ ಮತ್ತು ಸಾರ್ವತ್ರಿಕತೆಗೆ ಹೇಗೆ ಕೊಡುಗೆ ನೀಡುತ್ತೇವೆ ಎಂಬುದು ಮಹತ್ವವನ್ನು ಪಡೆಯುತ್ತದೆ. ಉದಾಹರಣೆಗೆ, ಆಧ್ಯಾತ್ಮಿಕತೆ ಎಲ್ಲರಿಗೂ ಸೇರಿದೆ. ನಾವು ಸಾರ್ವತ್ರಿಕವಾಗಿ ಆಧ್ಯಾತ್ಮಿಕ ಜ್ಞಾನವನ್ನು ಹಂಚಿಕೊಳ್ಳಬಹುದು. ಅದು ಎಲ್ಲಿಂದ ಬಂದರೂ, ನಾವು ಅದನ್ನು ಪೂರ್ಣ ಹೃದಯದಿಂದ ಸ್ವಾಗತಿಸಬೇಕು.
ಆಧ್ಯಾತ್ಮಿಕತೆಯು ಭಾರತದಲ್ಲಿ ಹುಟ್ಟಿದೆ, ಆದ್ದರಿಂದ ನಾನು ಅದನ್ನು ಅಭ್ಯಾಸ ಮಾಡುವುದಿಲ್ಲ, ಅಥವಾ ದೂರವಾಣಿ ಮೂಲತಃ ಅಮೇರಿಕಾದಲ್ಲಿ ತಯಾರಿಸಲ್ಪಟ್ಟಿದೆ ಆದ್ದರಿಂದ ನಾನು ಅದನ್ನು ನನ್ನ ದೇಶದಲ್ಲಿ ಅನುಮತಿಸುವುದಿಲ್ಲ, ಅಥವಾ, ಸೆಲ್ ಫೋನ್ ಫಿನ್ಲೆಂಡ್‌ನಲ್ಲಿ ಹುಟ್ಟಿಕೊಂಡಿತು, ಆದ್ದರಿಂದ ನಾನು ಸೆಲ್ ಫೋನ್ ಬಳಸುವುದಿಲ್ಲ ಎಂದು ಹೇಳಲಾಗುವುದಿಲ್ಲ. ತಂತ್ರಜ್ಞಾನದ ಈ ಯುಗದಲ್ಲಿ, ಅದು ಎಲ್ಲಿ ಆವಿಷ್ಕರಿಸಲ್ಪಟ್ಟಿತು ಎಂಬುದನ್ನು ಲೆಕ್ಕಿಸದೆ ನಾವು ತಂತ್ರಜ್ಞಾನವನ್ನು ಹಂಚಿಕೊಳ್ಳುತ್ತೇವೆ.
ಸರ್ ಐಸಾಕ್ ನ್ಯೂಟನ್ ಗುರುತ್ವಾಕರ್ಷಣೆಯ ನಿಯಮವನ್ನು ಕಂಡುಹಿಡಿದರು. ಗುರುತ್ವಾಕರ್ಷಣೆಯ ನಿಯಮವು ಅದಾಗಲೇ ಇತ್ತು, ಆದರೆ ಅದನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ನ್ಯೂಟನ್‌ಗೆ ಸಂದಿತು ಮತ್ತು ಅದನ್ನು ಜಗತ್ತು ಸಾರ್ವತ್ರಿಕವಾಗಿ ಸ್ವೀಕರಿಸಿದೆ. ಅದೇ ರೀತಿ, ಭಾರತವು ಯೋಗ ಮತ್ತು ಆಯುರ್ವೇದವನ್ನು ಜಗತ್ತಿಗೆ ಉಡುಗೊರೆಯಾಗಿ ನೀಡಿದೆ. ಎಲ್ಲಾ ದೇಶಗಳು ಇದನ್ನು ಮುಕ್ತ-ಹೃದಯದಿಂದ ಒಪ್ಪಿಕೊಳ್ಳಬೇಕು. ಪ್ರಾಚೀನ ಭಾರತದ ಋಷಿಗಳು ಯೋಗ ಮತ್ತು ಆಯುರ್ವೇದವನ್ನು ಕಂಡುಹಿಡಿದರು. ಅವರನ್ನು ಈ ಜ್ಞಾನ ಶಾಖೆಗಳ ನಿಜವಾದ ಸ್ಥಾಪಕರೆಂದು ಗುರುತಿಸಬೇಕು.
ಸಾರ್ವತ್ರಿಕವಾದವು ವೈವಿಧ್ಯತೆಯನ್ನು ನಿರಾಕರಿಸುವುದಿಲ್ಲ. ಮಕ್ಕಳಿಗೆ ತಮ್ಮ ಮಾತೃಭಾಷೆಯನ್ನು ಕಲಿಯಲು ಪ್ರೋತ್ಸಾಹಿಸಬೇಕು. ಅವರು, ವಿಶೇಷವಾಗಿ ತಮ್ಮ ಮಾತೃಭಾಷೆಯಲ್ಲಿ ಎಣಿಸಲು ಕಲಿಯಬೇಕು. ಭಾರತದ ಬಹುತೇಕ ಪ್ರತಿಯೊಂದು ಪ್ರಾಂತ್ಯದಲ್ಲಿಯೂ ಅಲ್ಲಿನ ಪ್ರಾದೇಶಿಕ ಭಾಷೆಗಳಲ್ಲಿ ಹಲವಾರು ಜಾನಪದ ಹಾಡುಗಳಿವೆ, ಅವುಗಳು ಅತ್ಯಂತ ಆಳವಾದ ತತ್ವಗಳನ್ನು ಹೊಂದಿವೆ. ನಮಗೆ ತಿಳಿದಂತೆ, ಪ್ರಪಂಚದ ಪ್ರತಿಯೊಂದು ಭಾಗದಲ್ಲೂ ಇದೇ ರೀತಿಯ ಸೊಗಡಿದೆ.
ಹಾಗೆಯೇ ಪ್ರಾದೇಶಿಕ ಪಾಕಪದ್ಧತಿಗಳ ವೈವಿಧ್ಯತೆಯನ್ನು ಸಹ ನಾವು ಜೀವಂತವಾಗಿಡಬೇಕು. ಉದಾಹರಣೆಗೆ, ನಾನು 70ರ ದಶಕದಲ್ಲಿ ಕಾಲೇಜಿನಲ್ಲಿದ್ದಾಗ, ಕೇರಳಕ್ಕೆ ಹೋಗಿದ್ದೆ. ಆ ಸಮಯದಲ್ಲಿ, ಅಲ್ಲಿ ಕೇವಲ ಸಾಂಪ್ರದಾಯಿಕ ಆಹಾರ ಮಾತ್ರ ಲಭ್ಯವಿತ್ತು, ಮತ್ತು ಎಲ್ಲರೂ ಆ ಆರೋಗ್ಯಕರ ಆಹಾರವನ್ನು ಸಂತೋಷದಿಂದ ತಿನ್ನುತ್ತಿದ್ದರು. ಆದರೆ ಇಂದು, ಆ ವೈವಿಧ್ಯತೆಯು ಕಾಣಲು ಸಿಗುವುದಿಲ್ಲ.
ಕಾಲಾನಂತರದಲ್ಲಿ, ನಾವು ಆಯುರ್ವೇದದ ಜ್ಞಾನವನ್ನು ಸಹ ಮರೆತಿದ್ದೇವೆ. ಈ ಸಾಂಪ್ರದಾಯಿಕ ಪದ್ಧತಿಗಳನ್ನು ಪುನರುಜ್ಜೀವನಗೊಳಿಸಬೇಕು ಮತ್ತು ಅದನ್ನು ಮತ್ತೆ ಆಚರಣೆಗೆ ತರಬೇಕು. ನಮ್ಮ ವಿಶಿಷ್ಟವಾದ ಸಾಂಸ್ಕೃತಿಕ ಪರಂಪರೆಯನ್ನು ನಾವು ಸಂರಕ್ಷಿಸಬೇಕು. ಪ್ರಜೆಗಳು ತಮ್ಮ ರಾಜ್ಯದ ಮತ್ತು ದೇಶದ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕು. ಅಷ್ಟೇ ಅಲ್ಲದೆ ನಮ್ಮ ಸಂಸ್ಕೃತಿಯ ಉತ್ತಮ ಅಭ್ಯಾಸಗಳನ್ನು ಯಾವುದೇ ದುರುದ್ದೇಶವಿಲ್ಲದೆ ಸಾರ್ವತ್ರಿಕವಾಗಿ ಹರಡಬೇಕು ಮತ್ತು ನಮಗೆ ಉತ್ತಮವೆನಿಸಿದ ಅಭ್ಯಾಸವನ್ನು ಪೂರ್ಣ ಹೃದಯದಿಂದ ಅಳವಡಿಸಿಕೊಳ್ಳಬೇಕು.
ರಾಷ್ಟ್ರದ ಬಗ್ಗೆ ಹೆಮ್ಮೆ ಮತ್ತು ಎಲ್ಲರೊಂದಿಗೆ ಸ್ನೇಹಪರತೆ, ಈ ಭಾವನೆಗಳು ವ್ಯತಿರಿಕ್ತವಲ್ಲ, ಅವು ಹೊಂದಿಕೊಂಡು ಹೋಗಬಹುದಾಗಿವೆ.
ಗುರುದೇವ್ ಶ್ರೀ ಶ್ರೀ ರವಿ ಶಂಕರ್
ಮತ್ತಷ್ಟು ಅಧ್ಯಾತ್ಮದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:28 am, Thu, 14 August 25




