ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ ಹೊಸ ಸಚಿವರಿಗೆ ಖಾತೆ ಹಂಚಿಕೆ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ರಾಜಕೀಯವಾಗಿ, ಬಸವರಾಜ ಬೊಮ್ಮಾಯಿಯವರ ಮುಂದಿನ ಎರಡು ವರ್ಷದ ಪಂಚಾಂಗ ತಯಾರಾಗಿದೆ. ಆ ಪ್ರಕಾರ, ಜಿಲ್ಲಾ ಮತ್ತು ತಾಲೂಕು ಪಂಚಾಯತ ಚುನಾವಣೆ, ನಂತರ ಬೃಹತ್ ಬೆಂಗಳೂರು ನಗರಪಾಲಿಕೆ ಚುನಾವಣೆ, ಕೊನೆಯಲ್ಲಿ 2023 ರಲ್ಲಿ ವಿಧಾನ ಸಭಾ ಚುನಾವಣೆ ಅವರಿಗಾಗಿ ಕಾದಿದೆ. ಇನ್ನು ಅಭಿವೃದ್ಧಿ ಮತ್ತು ರಾಜ್ಯದ ಬೆಳವಣಿಗೆ ದೃಷ್ಟಿಯಿಂದ ಮಂತ್ರಿಗಳ ಖಾತೆ ಹಂಚಿಕೆಯನ್ನು ನೋಡಿದಾಗ ಹೊಸದಾಗಿ ಬಂದಿರುವ ಮಂತ್ರಿಗಳು ಆಯಾ ಖಾತೆಗಳಲ್ಲಿ ಆಮೂಲಾಗ್ರ ಬದಲಾವಣೆ ತರಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಖಾತೆ ಹಂಚಿಕೆ ಹಿಂದೆ ಯಾರಿದ್ದಾರೆ?
ಖಾತೆ ಹಂಚಿಕೆ ವಿಚಾರದಲ್ಲಿ, ಬೊಮ್ಮಾಯಿ ಅವರ ನಿರ್ಧಾರದ ಹಿಂದೆ ಯಾರಿದ್ದಾರೆ ಎಂದು ಅಧಿಕೃತವಾಗಿ ಹೇಳುವುದು ಕಷ್ಟ. ಆದರೆ, ಯಡಿಯೂರಪ್ಪನವರಿಗೆ ಬೇಸರ ಆಗಬಾರದು, ಹಾಗಂತ ಸಂಘ ಪರಿವಾರದ ಮಾತನ್ನು ಕಡೆಗಣಿಸಬಾರದು ಎಂಬ ನೀತಿ ಅನುಸರಿಸಿ ಖಾತೆಗಳನ್ನು ಹಂಚಿದಂತಿದೆ. ಸಿ ಸಿ ಪಾಟೀಲರು ಯಡಿಯೂರಪ್ಪನವರ ನೆರಳಿನಂತಿರುವವರು. ಅವರಿಗೆ ಲೋಕೋಪಯೋಗಿ ಖಾತೆ ಸಿಕ್ಕಿದೆ. ಅದೇ ರೀತಿ, ಗೋವಿಂದ ಕಾರಜೋಳ ಕೂಡ ಅತ್ಯಂತ ಸಜ್ಜನ. ಅವರು ಕೂಡ ಯಡಿಯೂರಪ್ಪನವರ ಆಪ್ತ. ಅವರಿಗೆ ಬೃಹತ್ ನೀರಾವರಿಯನ್ನು ನೀಡಲಾಗಿದೆ. ಇದಕ್ಕೆ ಇನ್ನೂ ಒಂದು ಕಾರಣ ಇರಬಹುದು. ಮುಂದೊಂದು ದಿನ ರಮೇಶ್ ಜಾರಕಿಹೊಳಿ ಸಂಪುಟಕ್ಕೆ ಸೇರಿದರೆ, ಅವರಿಗೆ ಬೃಹತ್ ನೀರಾವರಿ ಖಾತೆ ಕೊಡಲೇಬೇಕಾದ ಸಂದರ್ಭ ಬಂದರೆ, ಆಗ ಕಾರಜೋಳ ಅವರನ್ನು ಒಪ್ಪಿಸಿ ಖಾತೆ ಬದಲಾವಣೆ ಮಾಡುವುದು ಕಷ್ಟ ಆಗಲಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ, ಕಾರಜೋಳ ಅವರಿಗೆ ಬೃಹತ್ ನೀರಾವರಿ ಖಾತೆ ನೀಡಿರಬಹುದು.
ಸಂಘ ಪರಿವಾರ ಮತ್ತು ಹೈ ಕಮಾಂಡಿನ ಮಾತಿಲ್ಲವೇ?
ರಾಷ್ಟ್ರೀಯ ನಾಯಕರು ಈ ವಿಚಾರಕ್ಕೆ ಕೈ ಹಾಕಿರುವ ಸಾಧ್ಯತೆ ಕಡಿಮೆ. ಆದರೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಸಂಪರ್ಕಿಸಿ ಅವರ ಟಿಪ್ಪಣಿಯನ್ನು ತೆಗೆದುಕೊಂಡಿರುವ ಸಾಧ್ಯತೆಯನ್ನು ತಳ್ಳಿ ಹಾಕಲು ಆಗದು. ಸಂಘದ ನಾಯಕರು ಎಲ್ಲ ಖಾತೆಗಳ ಬಗ್ಗೆ ತಮ್ಮದೇ ಆದ ಒಂದು ಪಟ್ಟಿ ತಯಾರಿಸಿ ಕೊಟ್ಟಿಲ್ಲದಿದ್ದರೂ ಕನ್ನಡ ಮತ್ತು ಸಂಸ್ಕೃತಿ, ಗೃಹ ಮುಂತಾದ ಕೆಲವು ಖಾತೆಗಳ ಬಗ್ಗೆ ಸೂಚ್ಯವಾಗಿ ಹೇಳಿರಬಹುದು.
ಬೊಮ್ಮಾಯಿಯವರ ಲೆಕ್ಕಾಚಾರ ಕೂಡುತ್ತಿಲ್ಲ
ಖಾತೆ ಹಂಚಿಕೆಯಲ್ಲಿ ಇನ್ನೂ ಹೆಚ್ಚಿನ ಸಲಹೆ ಪಡೆಯಬಹುದಿತ್ತಾ? ಉದಾಹರಣೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯನ್ನು ಬಿ.ಸಿ. ನಾಗೇಶ್ ಅವರಿಗೆ ನೀಡಲಾಗಿದೆ. ಅವರು ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಓದಿದವರು. ಅವರಿಗೆ ಇಂಧನ ಖಾತೆ ನೀಡಬಹುದಿತ್ತು. ಆದರೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನೀಡಲಾಗಿದೆ. ಅವರು ಆ ಖಾತೆಯನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎಂದು ಹೇಳುವುದು ಕಷ್ಟ. ಇತ್ತೀಚಿನ ದಿನಗಳಲ್ಲಿ ಒಂದು ಮಾತು ಓಡಾಡುತ್ತಿದೆ: ದಿವಂಗತ ಗೋವಿಂದೇ ಗೌಡರೇ ಅತ್ಯಂತ ಯಶಸ್ವೀ ಪ್ರಾಥಮಿಕ ಶಿಕ್ಷಣ ಸಚಿವ ಎಂದು. ಅವರು ಅತ್ಯಂತ ಸಾಚಾ ಮನುಷ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅತ್ಯಂತ ಮೃದು ಸ್ವಭಾವದ ನಾಯಕರು ಅವರಾಗಿದ್ದರು ಮತ್ತು ಅವರ ಸರಳತೆಯನ್ನು ಎಲ್ಲರೂ ಮೆಚ್ಚಿದ್ದರು.
ಆದರೆ, ಇಂದಿನ ಕ್ಲಿಷ್ಟ ಪರಿಸ್ಥಿತಿ ತೊಂಬತ್ತರ ದಶಕದಲ್ಲಿ ಇರಲಿಲ್ಲ. ಈಗ, ಖಾಸಗೀ ಶಾಲೆಗಳ ಲಾಬಿ ಬಹಳ ಬೆಳೆದಿದೆ. ಅದು ಎಷ್ಟು ಬೆಳೆದಿದೆ ಎಂದರೆ, ಎಲ್ಲ ರಾಜಕೀಯ ಪಕ್ಷಗಳನ್ನು ಉಪಯೋಗಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವಷ್ಟು ಈ ಲಾಬಿ ಬೆಳೆದಿದೆ. ಈಗೇನಾದರೂ ಗೋವಿಂದೇಗೌಡರಿದ್ದರೆ ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದರು ಎಂದು ಹೇಳುವುದು ಕಷ್ಟ. ತಮ್ಮ ಕಾಲದಲ್ಲಿ ಅವರು ಮಾಡಿದ ಸಾಧನೆ ಒಂದೇ: ಯಾವ ಭೃಷ್ಠಾಚಾರವಿಲ್ಲದೇ ಶಿಕ್ಷಕರ ನೇಮಕಾತಿ ಮಾಡಿದ್ದು. ಶಿಕ್ಷಕ ನೇಮಕಾತಿಗೆ ಈಗ ಸಿಇಟಿ ಕೌನ್ಸೆಲಿಂಗ್ ಬಂದಿದೆ. ಆದರೆ ಗೋವಿಂದೇ ಗೌಡರ ಕಾಲದಲ್ಲಿ ಕೂಡ ಆ ಖಾತೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲು ಆಗಲಿಲ್ಲ. ಹಾಗೇ ನೋಡಿದರೆ, ಸುರೇಶ್ ಕುಮಾರ್, ಈ ಲಾಬಿಗಳ ಒತ್ತಡವನ್ನು ಎದುರಿಸಿದವರು. ಅತ್ಯಂತ ಹೆಚ್ಚು ಉದ್ಯೋಗಿಗಳನ್ನು, ವರ್ಗಾವರ್ಗಿ ನಡೆಯುವ ಈ ಇಲಾಖೆಯ ಬಾಗಿಲನ್ನು ಸಾರ್ವಜನಿಕರಿಗೆ ತೆರೆದರು. ಭೃಷ್ಠಾಚಾರವಲ್ಲದೇ ನಡೆಸಿದರು. ಇದು ಬಹಳ ದೊಡ್ಡ ಸಾಧನೆ. ಸುಷ್ಮಾ ಸ್ವರಾಜ್ ತಮ್ಮ ವಿದೇಶಾಂಗ ಖಾತೆಯನ್ನು ಸಾಮಾಜಿಕ ಜಾಲತಾಣದ ಮೂಲಕ ವಿದೇಶದಲ್ಲಿರುವ ಭಾರತೀಯ ನಾಗರಿಕೆ ಸಮಸ್ಯೆ ಬಗೆಬಹರಿಸಲು ಪ್ರಯತ್ನಿಸಿದಂತೆ, ಸುರೇಶ್ ಕುಮಾರ್ ಸಹ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳು, ಪಾಲಕರು ಸಮಸ್ಯೆ ಕೇಳಿ ಸ್ಪಂದಿಸುತ್ತಿದ್ದರು. ಈಗ ಆ ಖಾತೆಯನ್ನು ನಿಭಾಯಿಸುವ ಜವಾಬ್ದಾರಿ ಬಿ.ಸಿ. ನಾಗೇಶ್ ಹೆಗಲ ಮೇಲಿದೆ. ಸದ್ಯ ಬಿ.ಸಿ. ನಾಗೇಶ್ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಪ್ರತಿಯೊಂದೂ ಖಾತೆಯಲ್ಲಿಯೂ ಊಹೆಗೂ ಮೀರಿದ ಸಂಕೀರ್ಣತೆಯಿದೆ, ಸಮಸ್ಯೆಗಳಿವೆ. ಎಲ್ಲವನ್ನೂ ಇಲ್ಲಿ ವಿವರಿಸಲು ಸಾಧ್ಯವಿಲ್ಲವಾದರೂ ಇಲ್ಲಿ ಬಿ.ಸಿ ನಾಗೇಶ್ ಮತ್ತು ಸುರೇಶ್ ಕುಮಾರ್ ವಿಚಾರದಲ್ಲಿ ನೀಡಿರುವುದು ಒಂದು ಉದಾಹರಣೆಯಷ್ಟೇ.
ಅರಗ ಜ್ಞಾನೇಂದ್ರ ಗೃಹ ಖಾತೆ ನಿಭಾಯಿಸಬಲ್ಲರೆ?
ಜ್ಞಾನೇಂದ್ರ ಅವರನ್ನು ಹತ್ತಿರದಿಂದ ನೋಡಿದವರು ಒಂದು ಮಾತನ್ನು ಹೇಳಬಲ್ಲರು- ಇವರೂ ಕೂಡ ಗೋವಿಂದೇ ಗೌಡರಂತೆ ಪ್ರಾಮಾಣಿಕ, ಸಾಧು ಮತ್ತು ಸಜ್ಜನ. ಇವರ ಕೈಗೆ ಗೃಹ ಖಾತೆಯನ್ನು ನಿಭಾಯಿಸಲು ಆಗುತ್ತೆ ಎಂಬ ಬಗ್ಗೆ ಬಿಜೆಪಿ ಪಕ್ಷದಲ್ಲಿಯೇ ಹಲವರಲ್ಲಿ ಸಂಶಯವಿದೆ. ಈ ಹಿಂದೆ ಸ್ವತಃ ಬಸವರಾಜ ಬೊಮ್ಮಾಯಿಯವರೇ ಗೃಹ ಇಲಾಖೆಯನ್ನು ನಿಭಾಯಿಸಿದ್ದಾರೆ. ಈ ಇಲಾಖೆ ಅರ್ಥವಾಗುವುದಿಲ್ಲ ಎಂದು ಯಾವುದಾದರೂ ನಿವೃತ್ತ ಅಧಿಕಾರಿಯನ್ನು ಸಲಹೆಗಾರರನ್ನಾಗಿ ನಿಯಮಿಸಿಕೊಂಡರೆ ಆ ಅಧಿಕಾರಿಯೇ ಮಂತ್ರಿಗಿಂತ ಬೆಳೆದು ಅವರೇ ಒಂದು ದೊಡ್ಡ ಸಮಸ್ಯೆ ಆಗಿರುವ ಇತಿಹಾಸವನ್ನು ಕರ್ನಾಟಕದಲ್ಲಿ ನೋಡಿದ್ದೇವೆ. ಆದ್ದರಿಂದ ಗೃಹ ಇಲಾಖೆ ನಡೆಸಲು ಅಧಿಕಾರಿಗಳಿಗಿಂತ ಮುಂದಿರಬೇಕು ಗೃಹ ಖಾತೆ ಮಂತ್ರಿ.
ಓರ್ವ ನಿವೃತ್ತ ಮುಖ್ಯ ಕಾರ್ಯದರ್ಶಿ ಏನು ಹೇಳಿದ್ದರು?
ಇತ್ತೀಚಿನೆ ವರ್ಷಗಳಲ್ಲಿ ಯಶಸ್ವೀ ಮುಖ್ಯಮಂತ್ರಿ ಎಂದು ಹೆಸರು ಪಡೆದವರು ಎಸ್.ಎಮ್. ಕೃಷ್ಣ. ಆದರೆ, ಅವರ ಕಾಲದಲ್ಲಿ ಕೆಲಸ ಮಾಡಿದ ಓರ್ವ ನಿವೃತ್ತ ಮುಖ್ಯ ಕಾರ್ಯದರ್ಶಿಯೊಬ್ಬರು ಕೃಷ್ಣ ಅವರ ಬಗ್ಗೆ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಒಳ್ಳೇ ಆಡಳಿತ ನೀಡದರೂ ಅವರೇಕೆ ಚುನಾವಣೆಯಲ್ಲಿ ಸೋತರು ಎಂಬ ಪ್ರಶ್ನೆಗೆ ನಿವೃತ್ತ ಮುಖ್ಯ ಕಾರ್ಯದರ್ಶಿ ಹೇಳಿದ್ದು ಹೀಗೆ- ಅಧಿಕಾರಿಗಳನ್ನು ಅತಿಯಾಗಿ ಅವಲಂಬಿತರಾಗಿದ್ದರು. ಅದೇ ಅವರಿಗೆ ಮುಳುವಾಯಿತು. ಬೊಮ್ಮಾಯಿ ಸರಕಾರದಲ್ಲಿ ಇನ್ನು ಅಧಿಕಾರಿಗಳದ್ದೇ ಆಟ ಆಗುತ್ತದೆ. ಒಂದೆಡೆ, ಯಡಿಯೂರಪ್ಪ, ಇನ್ನೊಂದೆಡೆ ಪಕ್ಷ ಮಧ್ಯೆ ಬಸವರಾಜ ಬೊಮ್ಮಾಯಿ. ಇಂತಹ ಸಂದರ್ಭದಲ್ಲಿಯೇ ಅಧಿಕಾರಿಗಳು ತಮ್ಮ ಆಟ ನಡೆಸುವುದು. ಆಗ ಆಡಳಿತ ಕುಸಿದು ರಾಜಕೀಯ ನಾಯಕರು ಅಂದರೆ ಆಯಾ ಖಾತೆ ನಡೆಸುವ ಮಂತ್ರಿಗಳಿಗೆ ಕೆಟ್ಟ ಹೆಸರು ಬರುವುದು ಗ್ಯಾರೆಂಟಿ. ಒಂದಿಬ್ಬರು ಹಿರಿಯ ಅಧಿಕಾರಿಗಳನ್ನು ಬಿಟ್ಟರೆ, ಕರ್ನಾಟಕದ ಅತೀ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳೆಂದರೆ ತುಕ್ಕು ಹಿಡಿದ ಕಬ್ಬಿಣದಂತೆ. ಇಂತಹ ಯಂತ್ರ ಇಟ್ಟು ಆಡಳಿತ ನೀಡುವುದು ಕಷ್ಟ ಸಾಧ್ಯವೇ ಸರಿ.
ಬೆಂಗಳೂರು ಅಭಿವೃದ್ಧಿಗೆ ಬೇಕಿತ್ತು ಪ್ರತ್ಯೇಕ ಸಚಿವ
ಮುಖ್ಯಮಂತ್ರಿಗಳು ಈಬಾರಿಯೂ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಕಾನೂನಿನ ಪ್ರಕಾರ ಇದು ಖಂಡಿತ ತಪ್ಪಲ್ಲ. ಆದರೆ ಬೆಂಗಳೂರಿನ ಸಮಸ್ಯೆಗಳು ಮತ್ತು ಅದರ ಸಂಕೀರ್ಣತೆ, ನಗರ ಸಂಸ್ಥೆಗಳ ನಡುವೆ ಹೊಂದಾಣಿಕೆ ಕೊರತೆ, ಇದರಿಂದ ಉದ್ಭವಿಸುವ ಅನೇಕ ಸಮಸ್ಯೆಗಳನ್ನು ಎದುರಿಸಲು ಮತ್ತು ಪರಿಹರಿಸಲು ಓರ್ವ ಪೂರ್ಣಕಾಲಿಕ ಮಂತ್ರಿಯ ಅಗತ್ಯವಿತ್ತು. ಮುಖ್ಯಮಂತ್ರಿಗಳಿಗೆ ಸಂಪೂರ್ಣ ರಾಜ್ಯದ ಜವಾಬ್ದಾರಿ ಇರುವ ಕಾರಣ ಬೆಂಗಳೂರಿನ ಅಭಿವೃದ್ಧಿಗೊಂದೇ ಸಂಪೂರ್ಣ ಗಮನ ನೀಡಲು ಸಾಧ್ಯವಿಲ್ಲ. ಬೆಂಗಳೂರು ಅಭಿವೃದ್ಧಿಗೆ ಕ್ಯಾಬಿನೆಟ್ ದರ್ಜೆಯ ಸಚಿವರನ್ನೇ ನೇಮಿಸದಿದ್ದರೂ ಓರ್ವ ರಾಜ್ಯ ಖಾತೆಯ ಸಚಿವರನ್ನು ನೇಮಿಸಿಕೊಳ್ಳಬಹುದಿತ್ತು. ತಮ್ಮದೇ ಕೈಕೆಳಗೆ ಆ ಸಚಿವರು ಬೆಂಗಳೂರಿನ ಸಮಸ್ಯೆ ಪರಿಹರಿಸಲು ಸಂಪೂರ್ಣ ಗಮನಹರಿಸಬಹುದಿತ್ತು. ಅದು ಬೆಂಗಳೂರಿನ ಅಭಿವೃದ್ಧಿಗೆ ನಿಜಕ್ಕೂ ಪೂರಕವಾಗುತ್ತಿತ್ತು. ಸದ್ಯ ಬೆಂಗಳೂರು ಕಾರ್ಪೋರೇಶನ್ನಲ್ಲಿ ಸದಸ್ಯರೂ ಇರದ ಕಾರಣ ಓರ್ವ ಮಂತ್ರಿಯ ಅವಶ್ಯಕತೆ, ಅಗತ್ಯತೆ ಎಂದಿಗಿಂತಲೂ ಜಾಸ್ತಿಯಿತ್ತು. ಜತೆಗೆ ಸಿಎಂ ಬಸವರಾಜ ಬೊಮ್ಮಾಯಿ ಈ ಹೊಸ ಪ್ರಯೋಗ ಮಾಡಿದ್ದರೆ ರಾಜ್ಯದ ಆಡಳಿತ ಮತ್ತು ರಾಜಕೀಯದ ಮೇಲೆ ಗಮನಹರಿಸಲು ಹೆಚ್ಚು ಸಾಧ್ಯವಾಗುತ್ತಿತ್ತು.
ರಾಜಕೀಯದ ಆಟಕ್ಕೆ ಅಭಿವೃದ್ಧಿಯ ತೊಗಟೆ
ಇತ್ತೀಚೆಗೆ ನಡೆದ ವಿಧಾನ ಸಭಾ ಚುನಾವಣೆಯ ನಂತರ ಪಕ್ಕದ ಕೇರಳ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳು ತರುತ್ತಿರುವ ಯೋಜನೆ ಮತ್ತು ಆಡಳಿತ ಯಂತ್ರಕ್ಕೆ ಚಳಿ ಬಿಡಿಸಿ ಕೆಲಸ ಮಾಡಿಸುವ ರೀತಿ ನೋಡಿದಾಗ ಕರ್ನಾಟಕದ ಹೊಸ ಮಂತ್ರಿಮಂಡಲ ಮತ್ತು ಮುಖ್ಯಮಂತ್ರಿಯವರಿಗೆ ಆ ರೀತಿ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಕೂಡ ಮೂಡುತ್ತಿದೆ. ಕರ್ನಾಟಕದ ರಾಜಕಾರಿಣಿ (ಯಾವ ಪಕ್ಷಗಳು ಇದಕ್ಕೆ ಹೊರತಲ್ಲ) ಸ್ವಲ್ಪ ಬೇರೆ. ಅಧಿಕಾರಕ್ಕೆ ಬಂದಾಗ ಅತೀಯಾಗಿ ಅಧಿಕಾರಿಗಳನ್ನು ಅವಲಂಬಿಸುತ್ತಾರೆ. ಅದೇ ಅವರಿಗೆ ಮುಳುವಾಗುತ್ತದೆ. ತಮ್ಮ ಹೊಸ ಹೊಸ ಜನಪರ ವಿಚಾರಗಳನ್ನು ಕಾನೂನಿನ ಮೂಲಕ ಜಾರಿಗೆ ತರುವುದು ಹೇಗೆ? ಅಥವಾ ಈಗ ಇರುವ ಸಮಸ್ಯೆಗಳಿಗೆ ಪರಿಹಾರ ತರುವುದು ಹೇಗೆ? ಇದಕ್ಕೆ ಸಮಯ ಬೇಕು. ಆದರೆ ಈಗ ಸಮಯ ಇಲ್ಲ. ರಾಜಕಾರಿಣಿಗೆ ಚುನಾವಣೆಯೇ ದೊಡ್ಡ ಪರೀಕ್ಷೆ. ರಾಜಕೀಯದ ಆಟದಲ್ಲಿ ಅಭಿವೃದ್ಧಿ ಮರದ ತೊಗಟೆ ಇದ್ದ ಹಾಗೆ. ಅದೇ ಮರ ಅಲ್ಲ. ಮುಂದಿನ 20 ತಿಂಗಳಲ್ಲಿ ಸಾಲಾಗಿ ಚುನಾವಣೆ ಬರುವ ಸಾಧ್ಯತೆ ಇರುವುದರಿಂದ ಆಡಳಿತ ನಡೆಸುವುದು ಹೇಗೆ ಮತ್ತು ಯಾವಾಗ? ಮತ್ತು ಚುನಾವಣೆಯಲ್ಲಿ ತಮ್ಮ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಂಡು ಬರುವುದು ಮತ್ತು ಕೊನೆಗೆ 2023 ರಲ್ಲಿ ಪಕ್ಷವನ್ನು ಪುನಃ ಗೆಲ್ಲಿಸಿಕೊಂಡು ಬರುವ ಸವಾಲಿನ ನಡುವೆ ಜನ ಮೆಚ್ಚುವ ಆಡಳಿತ ನೀಡುವ ಸವಾಲನ್ನು, ಹೊಸ ಮಂತ್ರಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ.
ಇದನ್ನೂ ಓದಿ:
Opinion: ಬಸವರಾಜ ಬೊಮ್ಮಾಯಿ ಮೇಲೆ ರಬ್ಬರ್ ಸ್ಟಾಂಪ್ ಆರೋಪ, ಕಾಂಗ್ರೆಸ್ಗೆ ಮುಳುವಾಗಬಹುದೇ?
Opinion: ಮಾತು ಮನೆ ಕೆಡಿಸಿತ್ತು; ಸಿದ್ದು, ಕುಮಾರಸ್ವಾಮಿ ರಾಜಕೀಯ ದಡ್ಡತನ ತೋರಿಸಿದ್ದು ನಿಜ
(CM Basavaraj Cabinet Opinion on expectation challenges and hurdles before new ministers)
Published On - 8:40 pm, Sat, 7 August 21