ಯುರೋಪಿನ ಬೂಟಾಟಿಕೆ: ಏಕಕಾಲದಲ್ಲಿ ರಷ್ಯಾ ಮೇಲೆ ನಿರ್ಬಂಧ ಹೇರಿ, ಪುಟಿನ್ ಯುದ್ಧ ದಾಹಕ್ಕೆ ಹಣ ಪೂರೈಕೆ!
ಯುರೋಪಿನ ಸಂಸ್ಥೆಗಳು ರಷ್ಯಾದಿಂದ ಹೊರಬರಲು ಈ ಮೊದಲು ಒಂದು ಆಯ್ಕೆಯಾಗಿದ್ದ 'ಎಕ್ಸಿಟ್ ಟ್ಯಾಕ್ಸ್' ಅನ್ನು ಈಗ ಕಡ್ಡಾಯವಾಗಿ ಪಾವತಿಸಬೇಕಾಗಿ ಬಂದಿದೆ. ಇದು ಯುರೋಪ್, ಮತ್ತು ಒಟ್ಟಾರೆಯಾಗಿ ಪಾಶ್ಚಾತ್ಯ ಜಗತ್ತಿನ ದ್ವಂದ್ವ ನೀತಿಯನ್ನು ಪ್ರದರ್ಶಿಸುತ್ತಿದೆ.
ಯುರೋಪಿನ (Europe) ಸಂಸ್ಥೆಗಳು ರಷ್ಯಾದಿಂದ (Russia) ಹೊರಬರಲು ಈ ಮೊದಲು ಒಂದು ಆಯ್ಕೆಯಾಗಿದ್ದ ‘ಎಕ್ಸಿಟ್ ಟ್ಯಾಕ್ಸ್’ (Exit Tax) ಅನ್ನು ಈಗ ಕಡ್ಡಾಯವಾಗಿ ಪಾವತಿಸಬೇಕಾಗಿ ಬಂದಿದೆ. ಇದು ಯುರೋಪ್, ಮತ್ತು ಒಟ್ಟಾರೆಯಾಗಿ ಪಾಶ್ಚಾತ್ಯ ಜಗತ್ತಿನ ದ್ವಂದ್ವ ನೀತಿಯನ್ನು ಪ್ರದರ್ಶಿಸುತ್ತಿದೆ. ರಷ್ಯಾದಿಂದ ದೂರಾಗುವುದಕ್ಕೆ ಯುರೋಪ್ ಹೆಚ್ಚಿನ ಬೆಲೆ ತೆರಬೇಕಾಗಿ ಬರುತ್ತದೆ. ಆದರೆ ಇದಕ್ಕೆ ಯುರೋಪ್ ಇನ್ನೂ ಸಿದ್ಧವಾಗಿಲ್ಲ. ಆದರೆ ಭಾರತದಂತಹ ರಾಷ್ಟ್ರಗಳು ರಷ್ಯಾದಿಂದ ದೂರಾಗಿ, ಆ ಬೆಲೆ ತೆರಲು ಮುಂದೆ ಬರಬೇಕು ಎಂದು ಅಪೇಕ್ಷಿಸುತ್ತಿದೆ. ಈ ಅಂಕಣದಲ್ಲಿ ನಾವು ಇತಿಮಿತಿಗಳೇ ಇಲ್ಲದ ಯುರೋಪಿನ ಬೂಟಾಟಿಕೆಗಳೆಡೆ ಗಮನ ಹರಿಸೋಣ. ಒಂದೆಡೆ ಯುರೋಪ್ ರಷ್ಯಾದ ಮೇಲೆ ನಿರ್ಬಂಧಗಳ ಮೇಲೆ ನಿರ್ಬಂಧಗಳನ್ನು ಹೇರುತ್ತಾ, ಜಗತ್ತಿಗೆ ಪ್ರಜಾಪ್ರಭುತ್ವದ ಪಾಠ ಹೇಳುತ್ತಿದೆ. ಇನ್ನೊಂದೆಡೆ, ಅದು ಪುಟಿನ್ ಅವರ ಯುದ್ಧದಾಹಕ್ಕೆ ಹಣ ಪೂರೈಸುತ್ತಿದೆ. ಐರೋಪ್ಯ ಒಕ್ಕೂಟ ಇಂದಿಗೂ ರಷ್ಯಾದೊಡನೆ ಪೂರ್ಣ ಪ್ರಮಾಣದಲ್ಲಿ ವ್ಯವಹಾರ ನಡೆಸುತ್ತಿದ್ದು, ರಷ್ಯಾದ ರಫ್ತುಗಳು ಇಂದಿಗೂ ಯುರೋಪ್‌ಗೆ ತಡೆಯಿಲ್ಲದೆ ಹರಿಯುತ್ತಲೇ ಇದ್ದು, ಅದರಲ್ಲಿ ಇಂಧನವೂ ಒಂದು ಅಂಗವಾಗಿತ್ತು.
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ, ಉಕ್ರೇನಿನ ವಿದೇಶಾಂಗ ಸಚಿವರು ಭಾರತ ರಷ್ಯಾದಿಂದ ಇಂಧನ ಖರೀದಿಸುವುದು ನೈತಿಕವಾಗಿ ತಪ್ಪು ಎಂದು ಕರೆದು, “ನಮ್ಮ ಸಂಕಷ್ಟದ ಪರಿಸ್ಥಿತಿಯಲ್ಲಿ ನೀವು ಲಾಭ ಮಾಡಿಕೊಳ್ಳುತ್ತೀರಿ ಎಂದರೆ, ನಮ್ಮೆಡೆಗೆ ನಿಮ್ಮ ಸಹಾಯ ಬರುವುದನ್ನು ನಾವು ಎದುರು ನೋಡುತ್ತೇವೆ” ಎಂದಿದ್ದರು. ಯುರೋಪಿನ ಮಾಜಿ ಹಿರಿಯ ರಾಯಭಾರಿಯೊಬ್ಬರು ಭಾರತಕ್ಕೆ ತನ್ನ ಸಂದೇಶ ಕಳುಹಿಸಿ, “ಭಾರತ ಉಕ್ರೇನ್ ವಿಚಾರದಲ್ಲಿ ತಟಸ್ಥವಾಗಿರುವುದು ಸರಿಯಲ್ಲ. ಭಾರತದ ನಿರ್ಧಾರದಿಂದ ಐರೋಪ್ಯ ಒಕ್ಕೂಟ ಅಸಮಾಧಾನಗೊಂಡಿದೆ” ಎಂದಿದ್ದರು.
ಅಂಕಿ ಅಂಶಗಳು ಸುಳ್ಳಾಡುವುದಿಲ್ಲ
ಯುರೋಪ್ ಇಷ್ಟೆಲ್ಲ ಮಾತನಾಡಿದರೂ, ರಷ್ಯಾದೊಡನೆ ಯುರೋಪಿನ ವ್ಯವಹಾರಗಳು ಅಬಾಧಿತವಾಗಿ ಮುಂದುವರಿದಿವೆ. ಯುದ್ಧ ಆರಂಭವಾದ ಮಾರ್ಚ್ 2022ರಿಂದ, ಮಾರ್ಚ್ 2023ರ ತನಕ ಯುರೋಪಿಗೆ ರಫ್ತಾದ ರಷ್ಯನ್ ಸರಕುಗಳು ಬೇರೆಯದೇ ಕಥೆ ಹೇಳುತ್ತವೆ. ಯುದ್ಧ ನಡೆಯುತ್ತಿದ್ದರೂ, ಐರೋಪ್ಯ ಒಕ್ಕೂಟ 186 ಬಿಲಿಯನ್ ಡಾಲರ್ ಮೌಲ್ಯದ ರಷ್ಯನ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ಅದರಲ್ಲಿ ನೈಸರ್ಗಿಕ ಅನಿಲದ ಮೌಲ್ಯವೇ ಅಪಾರವಾಗಿತ್ತು.
ಇದನ್ನೂ ಓದಿ: ‘ಸೇಫ್ ಸಿಟಿ ಯೋಜನೆ’: ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನದ ಸಹಾಯ ಪಡೆಯಲಿರುವ ಬೆಂಗಳೂರು ಪೊಲೀಸರು
ಈಗಾಗಲೇ ಯುರೋಪ್ ಹತ್ತು ಸುತ್ತಿಗೂ ಹೆಚ್ಚು ನಿರ್ಬಂಧಗಳನ್ನು ಹೇರಿದ್ದರೂ, ಯಾವ ರಾಷ್ಟ್ರವೂ ರಷ್ಯಾದಿಂದ ತೈಲ ಖರೀದಿಗೆ ನಿರ್ಬಂಧ ಹೇರಿಲ್ಲ. ಯುರೋಪ್ ರಷ್ಯಾದ ಲಿಕ್ವಿಡ್ ನ್ಯಾಚುರಲ್ ಗ್ಯಾಸ್ (ಎಲ್ಎನ್‌ಜಿ) ಗೆ ನಿರ್ಬಂಧ ಹೇರದಿರುವುದು ಮಾತ್ರವಲ್ಲದೆ, 2022ರಲ್ಲಿ ಯುದ್ಧ ಆರಂಭವಾದ ಬಳಿಕ ಹೆಚ್ಚು ಹೆಚ್ಚು ಎಲ್ಎನ್‌ಜಿ ಖರೀದಿಸುತ್ತಿದೆ. 2021ರಲ್ಲಿ ಐರೋಪ್ಯ ಒಕ್ಕೂಟ 16 ಬಿಲಿಯನ್ ಕ್ಯೂಬಿಕ್ ಮೀಟರ್ ರಷ್ಯಾದ ಅನಿಲ ಆಮದು ಮಾಡಿಕೊಂಡಿದ್ದರೆ, 2022ರಲ್ಲಿ ಅದು 22 ಬಿಲಿಯನ್ ಕ್ಯೂಬಿಕ್ ಮೀಟರ್‌ಗೆ ಹೆಚ್ಚಾಗಿತ್ತು. ಅದು 37%ಕ್ಕೂ ಹೆಚ್ಚಾಗಿತ್ತು.
ಯುರೋಪ್ ರಷ್ಯಾದ ಇಂಧನ ಆಮದು ಮಾಡಿಕೊಳ್ಳುತ್ತಿರುವುದು ಕಥೆಯ ಒಂದು ಭಾಗವಷ್ಟೇ. ಯುರೋಪ್ ರಷ್ಯಾದಿಂದ ನ್ಯೂಕ್ಲಿಯರ್ ಪೂರೈಕೆಯನ್ನೂ ಆಮದು ಮಾಡಿಕೊಳ್ಳುತ್ತಿದೆ. ಯುರೋಪಿಗೆ ಅನುಕೂಲವಾಗುವಂತೆ, ಅವುಗಳ ಮೇಲೆ ಯಾವ ನಿರ್ಬಂಧಗಳನ್ನೂ ಹೇರಿರಲಿಲ್ಲ. ಆದರೆ ಈ ನ್ಯೂಕ್ಲಿಯರ್ ಆಮದಿಗೂ, ನ್ಯೂಕ್ಲಿಯರ್ ಆಯುಧಗಳಿಗೂ ಯಾವುದೇ ಸಂಬಂಧವಿಲ್ಲ. ಪುಷ್ಟೀಕರಿಸಿದ ಯುರೇನಿಯಂನಂತಹ ಈ ಉತ್ಪನ್ನಗಳು ಅಣು ವಿದ್ಯುತ್ ಉತ್ಪಾದನೆಗೆ ನೆರವಾಗುತ್ತವೆ. ಕಳೆದ ವರ್ಷ ಐರೋಪ್ಯ ಒಕ್ಕೂಟ 814 ಮಿಲಿಯನ್ ಡಾಲರ್ ಮೌಲ್ಯದ ನ್ಯೂಕ್ಲಿಯರ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿತ್ತು.
ವಜ್ರಗಳೂ ಶಾಶ್ವತವೇ?
2022ರಲ್ಲಿ ಐರೋಪ್ಯ ಒಕ್ಕೂಟ ರಷ್ಯಾದಿಂದ 1.52 ಬಿಲಿಯನ್ ಮೌಲ್ಯದ ವಜ್ರಗಳನ್ನು ಖರೀದಿಸಿತು. ಇದು 2021ರ ಖರೀದಿ ಮೌಲ್ಯಕ್ಕಿಂತ 40% ಹೆಚ್ಚಾಗಿತ್ತು. ಈ ರೀತಿ ಐರೋಪ್ಯ ಒಕ್ಕೂಟ ರಷ್ಯಾದ ಮೇಲೆ ಡಾಲರ್ ಸುರಿಮಳೆಗೈದು ಅದನ್ನು ಶಿಕ್ಷಿಸುತ್ತಿದೆ. ಅಲ್ ರೋಸಾ ಎಂಬ ರಷ್ಯಾದ ಗಣಿಗಾರಿಕಾ ದೈತ್ಯ ಸಂಸ್ಥೆ, ರಷ್ಯಾ ಸರ್ಕಾರಿ ಸ್ವಾಮ್ಯದ ಅಣು ವಿದ್ಯುತ್ ಸಂಸ್ಥೆ ರೋಸಾಟೊಮ್, ರಷ್ಯಾದ ಸರ್ಕಾರಿ ಸ್ವಾಮ್ಯದ ನೈಸರ್ಗಿಕ ಅನಿಲ ಸಂಸ್ಥೆಯಾದ ಗ್ಯಾಸ್‌ಪ್ರೋಮ್‌ನ ಹಣಕಾಸು ಅಂಗ ಗ್ಯಾಜ಼್‌ಪ್ರೊಮ್ ಬ್ಯಾಂಕ್ ಸೇರಿದಂತೆ ರಷ್ಯಾದ ಪ್ರಮುಖ ಕಂಪನಿಗಳನ್ನು ಈ ನಿರ್ಬಂಧಗಳಿಂದ ಹೊರಗಿಡಲಾಗಿದೆ.
ಯುರೋಪಿನ ನಿರ್ಬಂಧಗಳ ನೈಜತೆ ಎಂದರೆ, ಯುರೋಪ್ ಕೇವಲ ಸುಲಭವಾದ ಗುರಿಗಳ ಮೇಲೆ ಮಾತ್ರವೇ ತನ್ನ ನಿರ್ಬಂಧಗಳನ್ನು ಹೇರುತ್ತದೆ. ಆದರೆ ಅದು ಯಾವ ಕಾರಣಕ್ಕೂ ತನ್ನ ಮೇಲೆ ರಾಜಕೀಯ ಪರಿಣಾಮ ಬೀರಬಹುದೆಂದು ರಷ್ಯಾದಿಂದ ಇಂಧನ ಆಮದಿನ ಮೇಲೆ ನಿರ್ಬಂಧ ಹೇರುವುದಿಲ್ಲ. ಇತ್ತೀಚೆಗೆ ಯುರೋಪಿನ ನಾಯಕರೊಬ್ಬರು ಅದನ್ನು ಒಪ್ಪಿಕೊಂಡಿದ್ದೂ ಇದೆ. ಪೋಲೆಂಡ್ ಪ್ರಧಾನಿ ಈ ಕುರಿತು ಮಾತನಾಡಿ, “ಐರೋಪ್ಯ ಒಕ್ಕೂಟದ ಹೆಸರಿನಲ್ಲಿ ನಾವು ಅಪಾರ ಪ್ರಮಾಣದಲ್ಲಿ ರಷ್ಯಾದ ತೈಲ, ರಷ್ಯಾದ ಅನಿಲವನ್ನು ಖರೀದಿಸುತ್ತಿದ್ದೇವೆ. ಈ ಮೂಲಕ ರಷ್ಯಾ ಅಧ್ಯಕ್ಷ ಪುಟಿನ್ ಯುರೋಪಿನ ರಾಷ್ಟ್ರಗಳಿಂದ ಹಣ ಪಡೆದುಕೊಳ್ಳುತ್ತಿದ್ದಾರೆ. ಈ ಹಣವನ್ನು ಅವರು ತನ್ನ ದುರಾಕ್ರಮಣಗಳಿಗೆ ಬಳಸಿಕೊಳ್ಳುತ್ತಾರೆ” ಎಂದಿದ್ದರು.
ಇದು ಕೇವಲ ರಷ್ಯಾದಿಂದ ಆಮದಿಗೆ ಮಾತ್ರವೇ ಸೀಮಿತವಾಗಿಲ್ಲ. ವಾಸ್ತವವಾಗಿ ಐರೋಪ್ಯ ಸಂಸ್ಥೆಗಳು ರಷ್ಯಾದಿಂದ ಹೊರಬರುವ ಮೊದಲು, ರಷ್ಯಾಗೆ ‘ಎಕ್ಸಿಟ್ ಫೀ’ ಹೆಸರಿನಲ್ಲಿ ಹಣ ತೆರುತ್ತಿವೆ. ರಷ್ಯಾ ಒಂದು ನೂತನ ಕಾನೂನು ಜಾರಿಗೆ ತಂದಿದ್ದು, ಅದರ ಪ್ರಕಾರ ಯಾವುದಾದರೂ ಸಂಸ್ಥೆ ರಷ್ಯಾದಿಂದ ಹೊರ ಹೋಗಬೇಕಾದರೆ ಅದು ರಷ್ಯಾದ ಬಜೆಟ್‌ಗೆ ಒಂದಷ್ಟು ಮೊತ್ತವನ್ನು ನೀಡಲೇಬೇಕಾಗುತ್ತದೆ.
ಈ ಕಾರಣದಿಂದ ರಷ್ಯಾದಿಂದ ಹೊರಬರುವ ಸಂಸ್ಥೆಗಳು ರಷ್ಯಾದಲ್ಲಿ ತಮ್ಮ ವ್ಯಾಪಾರದಿಂದ ಬಂದ ಆದಾಯದ 10% ಮೊತ್ತವನ್ನು ರಷ್ಯಾಗೆ ಕಾಣಿಕೆಯಾಗಿ ನೀಡಬೇಕಾಗುತ್ತದೆ. ಈ ಮೊದಲು ಇಂತಹ ದೇಣಿಗೆ ಕೇವಲ ಆಯ್ಕೆಯಾಗಿತ್ತು. ಆದರೆ ರಷ್ಯಾ ಈಗ ಇದನ್ನು ಕಡ್ಡಾಯಗೊಳಿಸಿದೆ. ಆದರೆ ಈ ನಿಯಮಗಳು ಬದಲಾಗುವ ಮೊದಲೇ, ಹಲವು ಕಂಪನಿಗಳು ರಷ್ಯಾದಿಂದ ಹೊರನಡೆಯಲು ಉತ್ಸುಕವಾಗಿ, ಸ್ವಯಂಪ್ರೇರಿತವಾಗಿ ರಷ್ಯಾಗೆ ಹಣ ಪಾವತಿಸಿದ್ದವು. ಇದು ಕೇವಲ ಯುರೋಪ್ ಮತ್ತು ಒಟ್ಟಾರೆಯಾಗಿ ಪಾಶ್ಚಾತ್ಯ ರಾಷ್ಟ್ರಗಳ ದ್ವಿಮುಖ ನೀತಿ, ದ್ವಂದ್ವಗಳಿಗೆ ಉದಾಹರಣೆಗಳಷ್ಟೇ. ರಷ್ಯಾದಿಂದ ಸಂಪೂರ್ಣವಾಗಿ ದೂರಾಗಬೇಕಾದರೆ ಐರೋಪ್ಯ ರಾಷ್ಟ್ರಗಳು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಅದಕ್ಕೆ ಸಿದ್ಧವಿಲ್ಲದ ಯುರೋಪ್, ಭಾರತದಂತಹ ರಾಷ್ಟ್ರಗಳು ಅದನ್ನು ಪಾವತಿಸಬೇಕೆಂದು ನಿರೀಕ್ಷಿಸುತ್ತಿದೆ.