‘ಸೇಫ್ ಸಿಟಿ ಯೋಜನೆ’: ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನದ ಸಹಾಯ ಪಡೆಯಲಿರುವ ಬೆಂಗಳೂರು ಪೊಲೀಸರು

ಬೆಂಗಳೂರು ಸೇಫ್ ಸಿಟಿ ಪ್ರಾಜೆಕ್ಟ್ ಯೋಜನೆಯ ಮೊದಲನೆಯ ಹಂತ ಪೂರ್ಣಗೊಂಡಿದೆ ಎಂದು ಹನಿವೆಲ್ ಆಟೋಮೇಶನ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಮಾರ್ಚ್ 28, 2023ರಂದು ಘೋಷಿಸಿದೆ.

'ಸೇಫ್ ಸಿಟಿ ಯೋಜನೆ': ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನದ ಸಹಾಯ ಪಡೆಯಲಿರುವ ಬೆಂಗಳೂರು ಪೊಲೀಸರು
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 31, 2023 | 7:54 PM

ಬೆಂಗಳೂರು: ಫೆಬ್ರವರಿ 6, 2023ರಂದು ಬೆಂಗಳೂರಿನಲ್ಲಿ (Bengaluru) ಓರ್ವ 23 ವರ್ಷದ ಯುವಕನನ್ನು ಪಾರ್ಟಿ ಒಂದರಲ್ಲಿ ಆತನ ಹಳೆಯ ಸಹಪಾಠಿ ವಿದ್ಯಾರ್ಥಿನಿ ಒಬ್ಬಳ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಆತನ 26 ವರ್ಷದ ಸ್ನೇಹಿತ ಇನ್ನೋರ್ವ ಹಳೆ ಸಹಪಾಠಿಯ ಮೇಲೆ ದೌರ್ಜನ್ಯ ಎಸಗಿ ಬಂಧಿತನಾಗಿದ್ದ. ಆ ಇಬ್ಬರು ಯುವತಿಯರೂ ಜಮ್ಮು ಕಾಶ್ಮೀರದವರಾದರೆ, 23 ವರ್ಷದ ಯುವಕ ಆಂಧ್ರ ಪ್ರದೇಶ ಮತ್ತು ಆತನ ಸ್ನೇಹಿತ ಬಿಹಾರದವರಾಗಿದ್ದರು. ಆಗಸ್ಟ್ 2021ರಲ್ಲಿ ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎನ್ಐಎ) ಅಧಿಕಾರಿಗಳು ಬಾಂಗ್ಲಾದೇಶದ ಒಂದು ತಂಡದ ಕೈವಾಡದಲ್ಲಿ ಮಾನವ ಕಳ್ಳ ಸಾಗಣೆಯ ಕುರಿತು ಬೆಂಗಳೂರಿನಲ್ಲಿ ಹುಡುಕಾಟ ನಡೆಸಿ, ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿತು. ತನಿಖಾ ತಂಡ ಬಾಂಗ್ಲಾದೇಶದ ಮಾನವ ಕಳ್ಳ ಸಾಗಾಣಿಕಾ ತಂಡಕ್ಕೆ ಕೃತಕ ದಾಖಲಾತಿಗಳನ್ನು ಸೃಷ್ಟಿಸಿ ಕೊಡುತ್ತಿದ್ದ ವ್ಯಕ್ತಿಗೆ ಸಂಬಂಧಿಸಿದ ಎರಡು ಕಡೆ ದಾಳಿ ನಡೆಸಿದ್ದರು.

2015ನೇ ಇಸವಿ: ಇದು ಬೆಂಗಳೂರಿನ ಪಾಲಿಗೆ ಕರಾಳ ಅವಧಿಯಾಗಿತ್ತು. ಒಂದು ಘಟನೆಯಲ್ಲಿ, ಕಾಲ್ ಸೆಂಟರ್‌ನಲ್ಲಿ ಉದ್ಯೋಗಿಯಾಗಿದ್ದ ಯುವತಿ ಓರ್ವಳನ್ನು ಚಾಕು ತೋರಿಸಿ ಬೆದರಿಸಿ, ಚಲಿಸುತ್ತಿದ್ದ ಮಿನಿ ಬಸ್‌ನಲ್ಲಿ ಹಲವು ಗಂಟೆಗಳ ಕಾಲ ಅತ್ಯಾಚಾರ ನಡೆಸಲಾಗಿತ್ತು. ಅದೇ ವರ್ಷ ಫೆಬ್ರವರಿ 5ರಂದು, ಪೊಲೀಸರು ಓರ್ವ ಸ್ಥಳೀಯ ಕಾರ್ಮಿಕನನ್ನು ಎಂಟು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದ ಆರೋಪದಡಿ ಬಂಧಿಸಿದ್ದರು. ಆ ಮಗುವಿನ ದೇಹ ಬಳಿಕ ಕಾರ್ ಶೆಡ್ಡಿನಲ್ಲಿ ಪತ್ತೆಯಾಗಿತ್ತು.

ಇಷ್ಟೆಲ್ಲ ಘಟನೆಗಳಾದರೂ, ಈಗ ಒಂದು ಶುಭ ಸಮಾಚಾರ ಸಿಕ್ಕಿದ್ದು, ಕೊನೆಗೂ ಬೆಂಗಳೂರು ಸೇಫ್ ಸಿಟಿ ಪ್ರಾಜೆಕ್ಟ್ ಯೋಜನೆಯ (Safe City Project) ಮೊದಲನೆಯ ಹಂತ ಪೂರ್ಣಗೊಂಡಿದೆ ಎಂದು ಹನಿವೆಲ್ ಆಟೋಮೇಶನ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಮಾರ್ಚ್ 28, 2023ರಂದು ಘೋಷಿಸಿದೆ. ಈ ಕ್ರಾಂತಿಕಾರಕ ಯೋಜನೆಯಲ್ಲಿ, ಫೇಷಿಯಲ್ ರೆಕಗ್ನಿಶನ್ ಟೆಕ್ನಾಲಜಿ (ಎಫ್ಆರ್‌ಟಿ) ತಂತ್ರಜ್ಞಾನ ಹೊಂದಿರುವ 7,000 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ಅವುಗಳಲ್ಲಿ 4,100 ಸಿಸಿಟಿವಿ ಕ್ಯಾಮರಾಗಳನ್ನು ಉದ್ದೇಶಿಸಿದ ಸ್ಥಳಗಳಲ್ಲಿ ಅಳವಡಿಸಲಾಗಿದೆ.

ಈ ಕಾರ್ಯವನ್ನು 2021ರಲ್ಲಿ ಗೃಹ ಸಚಿವಾಲಯ (ಎಂಎಚ್ಎ) ನೀಡಿದ ಆದೇಶದ ಅನ್ವಯ ಕೈಗೊಳ್ಳಲಾಗಿದ್ದು, ಇದಕ್ಕೆ ಆರ್ಥಿಕ ಇಲಾಖೆಯ ಹಣಕಾಸು ವ್ಯವಹಾರ ಇಲಾಖೆ ನಿರ್ವಹಿಸುವ ನಿರ್ಭಯಾ ನಿಧಿಯಡಿ ಹಣಕಾಸು ಪೂರೈಸಲಾಗಿತ್ತು. ಈ ನಿಧಿ ಹನಿವೆಲ್ ಸಂಸ್ಥೆಗೆ ಸುರಕ್ಷತೆಯ ಯೋಜನೆಯನ್ನು ಕೈಗೆತ್ತಿಕೊಳ್ಳಲು 496.67 ಕೋಟಿ ರೂಪಾಯಿಗಳನ್ನು ಪೂರೈಸಿತು. ಈ ಯೋಜನೆ ಬೆಂಗಳೂರು ನಗರದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಅದರಲ್ಲೂ ಬೆಂಗಳೂರಿನ 11 ಮಿಲಿಯನ್ ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರೇ ಇರುವುದರಿಂದ, ಅವರ ಸುರಕ್ಷತೆ ಆದ್ಯತೆಯ ವಿಚಾರವಾಗಿದೆ.

ಬೆಂಗಳೂರು ಪೊಲೀಸ್ ಕಮಿಷನರ್ ಆಗಿರುವ ಸಿ.ಎಚ್ ಪ್ರತಾಪ್ ರೆಡ್ಡಿಯವರು ಹನಿವೆಲ್ ಸಂಸ್ಥೆಯ ಅತ್ಯುತ್ಕೃಷ್ಟ ತಂತ್ರಜ್ಞಾನ ಬೆಂಗಳೂರಿನ ವಿವಿಧ ಪ್ರದೇಶಗಳ ಸುರಕ್ಷತೆಯನ್ನು ಪರಿಶೀಲಿಸುವ ಪೊಲೀಸರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

ಈ ತಂತ್ರಜ್ಞಾನ ಹೇಗೆ ಕಾರ್ಯ ನಿರ್ವಹಿಸುತ್ತದೆ?

ತಂತ್ರಜ್ಞಾನವನ್ನು ಬಳಸಿಕೊಂಡು ಓರ್ವ ವ್ಯಕ್ತಿಯ ಮುಖವನ್ನು ಗುರುತಿಸಲು, ವಿವಿಧ ಫೇಶಿಯಲ್ ಡೇಟಾ ಅಂಶಗಳನ್ನು ಕಲೆಹಾಕಲು ಅಲ್ಗಾರಿದಂಗಳನ್ನು ಬಳಸಲಾಗುತ್ತದೆ. ಈ ಅಂಶಗಳು ಮುಖದ ಡಿಜಿಟಲ್ ಸಿಗ್ನೇಚರ್ ಅನ್ನು ತಯಾರಿಸಲು ನೆರವಾಗುತ್ತವೆ. ಅದನ್ನು ಪೂರ್ವ ತಯಾರಿಸಿದ ಡೇಟಾಬೇಸ್ ಜೊತೆ ಹೋಲಿಸಿ, ಸಂಭಾವ್ಯ ಹೋಲಿಕೆಗಳಿಗೆ ಹುಡುಕಲಾಗುತ್ತದೆ.

ಸುರಕ್ಷತಾ ಕಾರಣಗಳಿಗಾಗಿ, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಕಚೇರಿಗಳು ಮತ್ತು ಮುಂಬೈ ಉಪನಗರದ ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ ಸೇರಿದಂತೆ ಇತರ ಸರ್ಕಾರಿ ಕಚೇರಿಗಳೂ ಎಫ್ಆರ್‌ಟಿಗಳನ್ನು ಅಳವಡಿಸಿಕೊಳ್ಳುತ್ತಿವೆ. ಸರ್ಕಾರಿ ಸಂಸ್ಥೆಗಳು, ಗುಪ್ತಚರ ಇಲಾಖೆಗಳು, ಹಾಗೂ ಬೆಂಗಳೂರಿನ ಪೊಲೀಸ್ ಪಡೆ ಈ ತಂತ್ರಜ್ಞಾನವನ್ನು ಬಳಸಿಕೊಳ್ಳತ್ತಿವೆ. ಇದು ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಹಾಗೂ ಬೆಂಗಳೂರಿನ ‘ನಮ್ಮ ಮೆಟ್ರೋ’ ಹಾಗೂ ರೈಲ್ವೇ ನಿಲ್ದಾಣಗಳಲ್ಲಿ ಜಾರಿಗೆ ಬಂದಿದೆ.

ಡಿಜಿಯಾತ್ರಾ ನೀತಿ

ಡಿಜಿ ಯಾತ್ರಾ ನೀತಿ ವಾಯು ಪ್ರಯಾಣಿಕರಿಗೆ ಕೆಐಎನಿಂದ ಯಾವುದೇ ಒತ್ತಡ ರಹಿತ ಪ್ರಯಾಣವನ್ನು ಒದಗಿಸುತ್ತದೆ. ಡಿಜಿಯಾತ್ರಾ ಐಡಿ ಪಡೆದುಕೊಳ್ಳಲು, ಪ್ರಯಾಣಿಕರು ಅವರ ಖಾಸಗಿ ವಿವರಗಳು, ಅಂದರೆ ಅವರ ಹೆಸರು, ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಅಧಿಕೃತ ಗುರುತಿನ ಪತ್ರಗಳನ್ನು ಒದಗಿಸಬೇಕಾಗುತ್ತದೆ. ಒಂದು ಬಾರಿ ಈ ಐಡಿ ಸಿದ್ಧವಾದ ಬಳಿಕ, ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಅವರ ಮೊದಲ ಪ್ರಯಾಣಕ್ಕೆ ಮೊದಲು ಅವರ ಗುರುತನ್ನು ಪರಿಶೀಲಿಸಬೇಕಾಗುತ್ತದೆ. ಅದು ಯಶಸ್ವಿಯಾದ ಬಳಿಕ ಅವರ ಮುಖದ ಬಯೋಮೆಟ್ರಿಕ್ ಮಾಹಿತಿ ಸಂಗ್ರಹವಾಗುತ್ತದೆ. ಈ ಬೆಳವಣಿಗೆ ವಿಮಾನ ನಿಲ್ದಾಣದ ರಕ್ಷಣೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ನಿರೀಕ್ಷೆಗಳಿವೆ.

ಬೆಂಗಳೂರು ಮೆಟ್ರೋ

ಮೇ 2022ರಲ್ಲಿ, ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್), ಬೆಂಗಳೂರು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಆಟೋಮ್ಯಾಟಿಕ್ ಫೇರ್ ಕಲೆಕ್ಷನ್ (ಎಎಫ್‌ಸಿ) ಗೇಟ್‌ಗಳ ಬಳಿ ಸ್ಮಾರ್ಟ್ ಕಾರ್ಡ್ ಹಾಗೂ ಟೋಕನ್‌ಗಳ ಬದಲಿಗೆ ಫೇಷಿಯಲ್ ರೆಕಗ್ನಿಶನ್ ಟೆಕ್ನಾಲಜಿ (ಎಫ್ಆರ್‌ಟಿ) ಅಳವಡಿಸಿಕೊಳ್ಳುವ ತನ್ನ ಉದ್ದೇಶವನ್ನು ವ್ಯಕ್ತಪಡಿಸಿತು. ಎರಡನೆಯ ಹಂತದ ಯೋಜನೆಯನ್ನು ಕಲ್ಕತ್ತಾ, ಪುಣೆ, ವಿಜಯವಾಡ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲಾಗುತ್ತದೆ.

ಕೋಲಾರ ಜಿಲ್ಲಾ ನ್ಯಾಯಾಲಯ

ಮಾರ್ಚ್ 8, 2022ರಂದು ಕೋಲಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಒಂದು ಗುತ್ತಿಗೆಗೆ ಆದೇಶ ನೀಡಿ, ಬಯೋಮೆಟ್ರಿಕ್ ಹಾಜರಾತಿಗಾಗಿ ಫೇಶಿಯಲ್ ರೆಕಗ್ನಿಶನ್ ತಂತ್ರಜ್ಞಾನದ ಬಳಕೆಗೆ ಆದೇಶಿಸಿತು.

ಕೆಎಸ್ಆರ್ ರೈಲ್ವೇ ನಿಲ್ದಾಣ

ಜನವರಿ 9, 2020ರಂದು, ನೈಋತ್ಯ ರೈಲ್ವೇ (ಎಸ್‌ಡಬ್ಲ್ಯುಆರ್) ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಬೆಂಗಳೂರು) ರೈಲ್ವೇ ನಿಲ್ದಾಣದಲ್ಲಿ ಫೇಶಿಯಲ್ ರೆಕಗ್ನಿಶನ್ ಸಾಫ್ಟ್‌ವೇರ್ ಅಳವಡಿಕೆಗೆ ಪೈಲಟ್ ಪ್ರಾಜೆಕ್ಟ್ ಅನ್ನು ಘೋಷಿಸಿತು. 2021ರಲ್ಲಿ ಕೆಎಸ್ಆರ್ ಎಫ್ಆರ್‌ಟಿ ಅಳವಡಿಸಿಕೊಂಡ ಭಾರತದ ಮೊದಲ ರೈಲ್ವೇ ನಿಲ್ದಾಣ ಎನಿಸಿಕೊಂಡಿತು. ಕೆಎಸ್ಆರ್ ಅತಿಹೆಚ್ಚು ಪ್ರಯಾಣಿಕರ ಸಂಖ್ಯೆ ಹೊಂದಿದ್ದ ಕಾರಣದಿಂದಲೇ ಅಧಿಕಾರಿಗಳು ಈ ಯೋಜನೆಗೆ ಇದನ್ನು ಆಯ್ಕೆ ಮಾಡಿದ್ದರು.

ಈಗ ರೈಲ್ವೇ ನಿಲ್ದಾಣದಲ್ಲಿ 2.4 ಕೋಟಿ ರೂಪಾಯಿ ವೆಚ್ಚದಲ್ಲಿ 157 ಕೃತಕ ಬುದ್ಧಿಮತ್ತೆ ಸಾಮರ್ಥ್ಯ ಹೊಂದಿರುವ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮರಾಗಳು ವ್ಯಕ್ತಿಗಳನ್ನು ಮಾಸ್ಕ್ ಹಾಕಿಕೊಂಡಿದ್ದರೂ ಗುರುತಿಸಬಲ್ಲವು. ಈ ವ್ಯವಸ್ಥೆಯನ್ನು ಅಳವಡಿಸಿದ 90 ದಿನಗಳ ಒಳಗಾಗಿ, ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ 47 ವ್ಯಕ್ತಿಗಳನ್ನು ರೈಲ್ವೇ ನಿಲ್ದಾಣದ ಆಸುಪಾಸಿನಲ್ಲಿ ಗುರುತಿಸಲಾಯಿತು. ಈ ವ್ಯವಸ್ಥೆಯನ್ನು, ಕಾಣೆಯಾಗಿರುವ ಮಕ್ಕಳನ್ನು ಹುಡುಕಲು, ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಯಲು ನೆರವಾಗಲಿದೆ.

ಅಂಕಿ – ಅಂಶಗಳು

  •  ಈ ಯೋಜನೆಗೆ ಬೆಂಗಳೂರು ಪೊಲೀಸ್ ಹಾಗೂ ಗೃಹ ಇಲಾಖೆ ಜಂಟಿಯಾಗಿ 60:40 ಅನುಪಾತದಲ್ಲಿ ಹೂಡಿಕೆ ಮಾಡಿವೆ. ಈ ಯೋಜನೆ ಇನ್ನಷ್ಟು ಕ್ಯಾಮರಾಗಳನ್ನು ನಗರದಲ್ಲಿ ಅಳವಡಿಸುವ ಗುರಿಯನ್ನು ಹೊಂದಿದೆ. ಈಗ ಬೆಂಗಳೂರಿನಲ್ಲಿ 2 ಲಕ್ಷ ಸಿಸಿಟಿವಿ ಕ್ಯಾಮರಾಗಳಿದ್ದು, ಫೇಶಿಯಲ್ ರೆಕಗ್ನಿಶನ್ ಬೆಂಬಲಿಸುವ, 4ಕೆ ಗುಣಮಟ್ಟದ 100 ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ.
  • ಸಾರ್ವಜನಿಕ ಸ್ಥಳಗಳಲ್ಲಿ ಹಲವು ‘ಸೇಫ್ಟಿ ಐಲ್ಯಾಂಡ್’ ಎಂಬ ಸುರಕ್ಷಿತ ಸ್ಥಳಗಳನ್ನು ನಿರ್ಮಿಸಿ, ಅವುಗಳನ್ನು ಸತತವಾಗಿ ವಿಚಕ್ಷಣೆ ನಡೆಸಲಾಗುತ್ತದೆ. ಅವುಗಳಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಲು ತುರ್ತು ಕರೆ ವ್ಯವಸ್ಥೆಯೂ ಲಭ್ಯವಿರುತ್ತದೆ.
  • ಯೋಜನೆಯ ಜಾರಿಯ ಆರಂಭಿಕ ಹಂತದಲ್ಲಿ, ಉದ್ದೇಶಿಸಲಾಗಿದ್ದ 50ರಲ್ಲಿ 30 ಸೇಫ್ಟಿ ಐಲ್ಯಾಂಡ್‌ಗಳನ್ನು ಸ್ಥಾಪಿಸಲಾಗಿದೆ. ಯೋಜಿಸಲಾಗಿದ್ದ 10 ಡ್ರೋನ್‌ಗಳಲ್ಲಿ 8 ಈಗಾಗಲೇ ಕಾರ್ಯಾಚರಿಸುತ್ತಿವೆ. ಬೆಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳು ಈಗಾಗಲೇ 560 ದೇಹದಲ್ಲಿ ಅಳವಡಿಸಿಕೊಳ್ಳಬಹುದಾದ ಕ್ಯಾಮರಾಗಳಲ್ಲಿ 400 ಕ್ಯಾಮರಾಗಳನ್ನು ಬಳಸಿಕೊಳ್ಳುತ್ತಿದ್ದಾರೆ.
  • ಎಫ್ಆರ್‌ಎಸ್ ತಾನು ಗಮನಿಸುವ ಮುಖಗಳನ್ನು ತನ್ನಲ್ಲಿರುವ ಡೇಟಾಬೇಸ್ ಜೊತೆ ಹೋಲಿಸಿ ನೋಡುವ ಸಾಮರ್ಥ್ಯ ಹೊಂದಿದ್ದು, ಆ ವ್ಯಕ್ತಿಗಳ ಈ ಹಿಂದಿನ ಮಾಹಿತಿಯನ್ನೂ ಕಲೆಹಾಕಬಲ್ಲದು. ಎಫ್ಆರ್‌ಎಸ್ ‘ಕಪ್ಪು ಪಟ್ಟಿಯಲ್ಲಿರುವ ವ್ಯಕ್ತಿ’ ಗಳನ್ನು ಗುರುತಿಸಿದಾಗ ಅಥವಾ ಈಗಾಗಲೇ ಹುಡುಕಾಡುತ್ತಿದ್ದ ವ್ಯಕ್ತಿ ಮರಳಿ ಕಾಣಿಸಿಕೊಂಡಾಗ ಸೂಚನೆ ನೀಡುತ್ತದೆ. ಅದರೊಡನೆ, ಮುಖ ಚಹರೆಗಳ ಆಧಾರದಲ್ಲಿ ಕ್ಷಣ ಕ್ಷಣದ ಹುಡುಕಾಟ ನಡೆಸುತ್ತದೆ.

ಆದರೆ ಈ ತಂತ್ರಜ್ಞಾನದಲ್ಲೂ ಹಲವು ನೈತಿಕ ಅಂಶಗಳು ಒಳಗೊಂಡಿವೆ. ಪ್ರಸ್ತುತ ಇರುವ ಎಫ್ಆರ್‌ಟಿ ವ್ಯವಸ್ಥೆ ಅಷ್ಟೊಂದು ನಿಖರವಾಗಿಲ್ಲ. ಇದು ವ್ಯಕ್ತಿಗಳನ್ನು ಗುರುತಿಸುವಲ್ಲಿ ತಪ್ಪಾಗುವ ಸಾಧ್ಯತೆಗಳೂ ಇವೆ. ಆ ರೀತಿಯಲ್ಲಿ ತಂತ್ರಜ್ಞಾನ ಖಾಸಗಿತನ ಮತ್ತು ವಾಕ್ ಸ್ವಾತಂತ್ರ್ಯ ಸೇರಿದಂತೆ ಜನರ ಮಾನವ ಹಕ್ಕುಗಳ ಉಲ್ಲಂಘನೆ ನಡೆಸಬಲ್ಲದು. ಈ ರೀತಿ ಒಂದಷ್ಟು ನಕಾರಾತ್ಮಕ ಅಂಶಗಳ ಹೊರತಾಗಿಯೂ, ಫೇಶಿಯಲ್ ರೆಕಗ್ನಿಶನ್ ದಿನೇ ದಿನೇ ಹೆಚ್ಚು ಬಳಕೆಗೆ ಬರುತ್ತಿದೆ. ವಿವಿಧ ರೀತಿಯಲ್ಲಿ ಸರ್ಕಾರದ ಯೋಜನೆಗಳು ಇದಕ್ಕೆ ಬೆಂಬಲ ನೀಡುತ್ತಿವೆ ಎಂದು ಇಂಟರ್ನೆಟ್ ಫ್ರೀಡಮ್ ಫೌಂಡೇಶನ್ (ಐಎಫ್ಎಫ್) ವರದಿ ತಿಳಿಸುತ್ತದೆ.

ವಿಶೇಷ ಲೇಖನ: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Published On - 7:16 pm, Fri, 31 March 23

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?