ಸಜ್ಜನ ರಾಜಕಾರಣಿ ಅನ್ನಿಸಿಕೊಂಡಿರುವ ‘ಸ್ಪೀಕರ್’ ರಮೇಶ್​ ಕುಮಾರ್​ ಅವರಿಗೇಕೆ ಈ ಮುಂಗೋಪ!?

TV9 Digital Desk

| Edited By: ಸಾಧು ಶ್ರೀನಾಥ್​

Updated on:Jul 29, 2022 | 8:01 PM

ರಮೇಶ್​ ಕುಮಾರ್ ಎಷ್ಟೇ ಪ್ರಬುದ್ದ ರಾಜಕಾರಣಿ ಎನಿಸಿಕೊಂಡರೂ​ ಆಗಾಗ ತಮ್ಮ ಹಳೆ ಚಾಳಿ ಮೂಲಕ ಜನರ ನಡುವೆ ಟೀಕೆಗೆ ಗುರಿಯಾಗುತ್ತಾರೆ. ಇದು ನಿಜಕ್ಕೂ ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗೆ, ಅವರ ವರ್ಚಸ್ಸಿಗೆ ಶೋಭೆ ತರುವಂತಹದ್ದಲ್ಲ ಎಂದು ಕೋಲಾರದ ಜನತೆ ಕೋಲಾರಮ್ಮನ ಸನ್ನಿಧಿಯಲ್ಲಿ ಬೇಸರದಿಂದಲೇ ಮಾತನಾಡಿಕೊಳ್ಳುತ್ತಿದ್ದಾರೆ.

ಸಜ್ಜನ ರಾಜಕಾರಣಿ ಅನ್ನಿಸಿಕೊಂಡಿರುವ 'ಸ್ಪೀಕರ್' ರಮೇಶ್​ ಕುಮಾರ್​ ಅವರಿಗೇಕೆ ಈ ಮುಂಗೋಪ!?
ಹಿರಿಯ ರಾಜಕಾರಣಿ, ಸಜ್ಜನ ಅನ್ನಿಸಿಕೊಂಡಿರುವ 'ಸ್ಪೀಕರ್' ರಮೇಶ್​ ಕುಮಾರ್​ ಅವರಿಗೇಕೆ ಈ ಮುಂಗೋಪ!?

ಅವರು ಕಳೆದ 45 ವರ್ಷಗಳಿಂದ ರಾಜಕೀಯ ಜೀವನದಲ್ಲಿರುವ ಹಿರಿಯ ರಾಜಕಾರಣಿ. ಆರು ಬಾರಿ ಶಾಸಕರಾಗಿ, ಎರಡು ಬಾರಿ ವಿಧಾನ ಸಭೆಯ ಸ್ಪೀಕರ್​ ಆಗಿ, ಆರೋಗ್ಯ ಸಚಿವರಾಗಿಯೂ ಕೆಲಸ ಮಾಡಿರುವ ಅವರನ್ನು ರಾಜ್ಯದ ಬುದ್ಧಿವಂತ ರಾಜಕಾರಣಿ, ಪ್ರಬುದ್ದ ರಾಜಕಾರಣಿ ಎಂದೆಲ್ಲಾ ಕರೆಯುವುದುಂಟು! ಆದರೆ ಅದೇ ರಾಜಕಾರಣಿ ಕೆಲ ವೇಳೆ ತಮ್ಮ ಕೆಳಮಟ್ಟದ ವರ್ತನೆಯಿಂದ ಜನರ ಮಧ್ಯೆ ಟೀಕೆಗೂ ಒಳಗಾಗುವ ಮೂಲಕ ಹಲವಾರು ಬಾರಿ ಸದ್ದು ಮಾಡಿದ್ದಾರೆ. ಆ ರಾಜಕಾರಣಿ ಬೇರೆ ಯಾರೂ ಅಲ್ಲ ಕೋಲಾರ ಜಿಲ್ಲೆ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಹಾಲಿ ಶಾಸಕ, 72 ವರ್ಷದ ಕಂದಂ ರಾಮಯ್ಯ ರಮೇಶ್​ ಕುಮಾರ್ (Kandam Ramaiah Ramesh Kumar). ಪ್ರೀತಿಯಿಂದ ಸ್ಥಳೀಯ ಭಾಷೆಯ ಸೊಗಡಿನಲ್ಲಿ ’ಸೀನಿವಾಸಪುರಮು ಐವಾರು’ ಅಂತ ಆಪ್ತವಾಗಿ ಕರೆಯಿಸಿಕೊಳ್ಳುವ ಸಜ್ಜನ ರಾಜಕಾರಣಿಯೇ. ಅಂದು ರಾಮಕೃಷ್ಣ ಹೆಗಡೆ ಹಾಗೂ ದೇವರಾಜ್ ಅರಸ್ ಅವರ ಸಾರಥ್ಯದಲ್ಲಿ ರಾಜ್ಯ ರಾಜಕಾರಣಕ್ಕೆ ಮೌಲ್ಯವರ್ಧನೆ ಮಾಡಲು ಯತ್ನಿಸಿದವರು.

ಆದರೆ ಯಾವುದೋ ಮಾಯದಲ್ಲಿ ಇಂದು ಮತ್ತೊಮ್ಮೆ ತಮ್ಮ ಹಳೆಯ ಚಾಳಿ ತೋರಿಬಿಟ್ಟರು. ಜಿಲ್ಲಾ ಕಾಂಗ್ರೆಸ್​ ಸಭೆಯಲ್ಲಿ ಯುವ ಪತ್ರಕರ್ತರ ಮೇಲೆ ಹಲ್ಲೆ ಮಾಡುವ ಮೂಲಕ ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ. ಅಸಲಿಗೆ ಅವರದೆ ಪಕ್ಷದ ಒಳಜಗಳದ ಘಮಲು ಅಲ್ಲಿ ಢಾಳಾಗಿ ಹರಡಿದ್ದ ಸಮಯವದು. ಅವರವರೇ ಕೈ ಕೈ ಮಿಲಾಯಿಸಿದ್ದರು. ಇನ್ನು ಸಭೆಗೆ ಆಹ್ವಾನಿತರಾಗಿ ಹೋಗಿದ್ದ ಪತ್ರಕರ್ತ ಮಿತ್ರರು ಅದನ್ನು ಜನತೆಯ ಮುಂದಿಡುವ ಪ್ರಯತ್ನ ಮಾಡಿದ್ದರು. ಅಷ್ಟೇ… ಅಷ್ಟಕ್ಕೇ ಆ ಸಜ್ಜನ ರಾಜಕಾರಣಿ ನಿಯಂತ್ರಣ ಕಳೆದುಕೊಂಡು, ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ಪತ್ರಕರ್ತರ ಮೇಲೆ ಕೈ ಮಾಡಿಯೇಬಿಟ್ಟರು.

ರಮೇಶ್​ ಕುಮಾರ್ ಒಬ್ಬ​ ಪ್ರಬುದ್ದ ರಾಜಕಾರಣಿ ಅನ್ನೋದೇಕೆ…!

ಮಾಜಿ ಸ್ಪೀಕರ್​ ರಮೇಶ್​ ಕುಮಾರ್ ಕೋಲಾರ ಜಿಲ್ಲೆ ಶ್ರೀನಿವಾಸಪುರ ವಿಧಾನಸಭೆಯಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿರಿಯ ರಾಜಕಾರಣಿ. ಅವರು ತಮ್ಮ ಅನುಭವಕ್ಕೆ ತಕ್ಕಂತೆ ರಾಜ್ಯ ವಿಧಾನಸಭೆಯಲ್ಲಿ ಮಾತನಾಡುವ ವೇಳೆ ವಿಷಯದ ಮೇಲಿನ ಹಿಡಿತ, ವಿಷಯ ಮಂಡನೆ, ಆಳವಾದ ಜ್ಞಾನವನ್ನು ಗಮನಿಸಿರುವ ಯಾರಿಗೇ ಆಗಲಿ ಅವರೊಬ್ಬ ಪ್ರಬುದ್ದ ಹಾಗೂ ಹಿರಿಯ ರಾಜಕಾರಣಿ ಎಂದು ಅನ್ನಿಸದೇ ಇರದು. ಅದಕ್ಕೆ ತಕ್ಕಂತೆ ಎರಡು ಬಾರಿ ವಿಧಾನಸಭೆಯ ಅಧ್ಯಕ್ಷರಾಗಿ ಕೆಲಸ ಮಾಡಿ ಇಡೀ ದೇಶವೇ ತಮ್ಮತ್ತ ತಿರುಗಿ ನೋಡುವಂತೆ ಕೂಡಾ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಹಲವು ಬದಲಾವಣೆಗಳನ್ನು ತಂದವರು ಇದೇ ರಮೇಶ್​ ಕುಮಾರ್​. ಹೀಗೆ ಅವರು ಹಲವು ಉತ್ತಮ ಮಾದರೀಯ ಕೆಲಸಗಳ ಮೂಲಕ ಅವರೊಬ್ಬ ಉತ್ತಮ ರಾಜಕಾರಣಿ ಅಂತನ್ನಿಸಿಕೊಂಡಿರುವವರು. ಅದರಿಂದ ರಾಜ್ಯದಲ್ಲಿ, ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನ ಸಂಪಾದಿಸಿಕೊಂಡಿದ್ದಾರೆ.

ಪ್ರಬುದ್ದ ರಾಜಕಾರಣಿಯ ಸಣ್ಣ ವರ್ತನೆಗಳು..!

ಆದರೆ … ಹೀಗೆ ಸುಮಾರು 45 ವರ್ಷಗಳ ತಮ್ಮ ರಾಜಕಾರಣದಲ್ಲಿ ರಮೇಶ್​ ಕುಮಾರ್​ ಎಷ್ಟು ಪ್ರಬುದ್ದರಾಗಿ ವರ್ತಿಸಿದ್ದಾರೋ, ಕೆಲವು ವೇಳೆ ಅಷ್ಟೇ ಸಣ್ಣತನದ ವರ್ತನೆಗಳ ಮೂಲಕ ಟೀಕೆಗೆ ಗುರಿಯಾಗಿದ್ದಾರೆ. ಈ ಹಿಂದೆ ರಮೇಶ್​ ಕುಮಾರ್​ ಮೇಲೆ ಒಂದಲ್ಲ ಎರಡು ಕೊಲೆ ಆರೋಪಗಳು ಕೇಳಿಬಂದಿದ್ದವು. ಅಷ್ಟೇ ಅಲ್ಲದೆ ಸರ್ಕಾರದ ಅರಣ್ಯ ಭೂಮಿಗೆ ಒತ್ತುವರಿ ಬೇಲಿ ಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಅವರ ಮೇಲೆ ಕೇಳಿಬಂದಿವೆ. ಇಷ್ಟೆಲ್ಲಾ ಆರೋಪಗಳನ್ನು ಹೊತ್ತ ರಮೇಶ್​ ಕುಮಾರ್ ಅವರ ಬಗ್ಗೆ​ ರಾಜ್ಯದ ಹೆಮ್ಮೆಯ ಸುದ್ದಿವಾಹಿನಿ ಟಿವಿ9 ಸಂಸ್ಥೆಯು ಸಾದ್ಯಂತವಾಗಿ ಆವರ ಬಗ್ಗೆ ಸುದ್ದಿ ಪ್ರಸಾರ ಮಾಡಿತ್ತು… ಅಷ್ಟೇ! ಅದರಿಂದ ನಖ ಶಿಖಾಂತ ಉರಿದ ಇದೇ ರಮೇಶ್​ ಕುಮಾರ್​ ಟಿವಿ9 ಕಚೇರಿಗೆ ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಬಂದು ಗಲಾಟೆ ಮಾಡಿ, ತಮ್ಮ ದುರ್ವರ್ತನೆಯನ್ನು ರಾಜ್ಯ ಜನತೆಯ ಮುಂದಿಟ್ಟಿದ್ದರು.

ಕಳೆದ ವಿಧಾನಸಭೆ ಬೆಳಗಾವಿಯ ಅಧಿವೇಶನದಲ್ಲಿ ವಿಷಯವೊಂದರ ಕುರಿತು ಚರ್ಚೆ ಮಾಡುವ ವೇಳೆ ಮಹಿಳೆಯರು ತಮ್ಮ ಮೇಲೆ ಅತ್ಯಾಚಾರ ನಡೆದರೆ ಅದರಿಂದ ಬಿಡಿಸಿಕೊಳ್ಳಬೇಕು, ಸಾಧ್ಯವಾಗದಿದ್ದರೆ ಅದನ್ನು ಆಸ್ವಾದಿಸಬೇಕು ಎಂಬ ಬಾಯ್ತುಂಬಾ ನಗುನಗುತಾ ಕೀಳುಮಟ್ಟದ ಮಾತನ್ನಾಡಿ ಇಡೀ ರಾಜ್ಯ ಹಾಗೂ ದೇಶದ ಜನರ ಟೀಕೆಗೆ ಗುರಿಯಾಗಿದ್ದವರು ಇದೇ ರಮೇಶ್​ ಕುಮಾರ್​!

ಇನ್ನು ಒಂದು ವಾರದ ಹಿಂದಷ್ಟೇ ರಮೇಶ್​ ಕುಮಾರ್ ಸೋನಿಯಾಗಾಂಧಿ ಇ.ಡಿ. ವಿಚಾರಣೆ ಖಂಡಿಸಿ ಕಾಂಗ್ರೆಸ್ ಪಕ್ಷವು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುವ ವೇಳೆ ಆಕ್ರೋಶಭರಿತರಾಗಿ ಭಾಷಣ ಮಾಡುತ್ತಾ, ಗಾಂಧಿ ಕುಟುಂಬದ ಹೆಸರೇಳಿಕೊಂಡು ಎರಡು ಮೂರು ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೀರಿ. ಈಗ ಅವರಿಗೆ ಕಷ್ಟ ಬಂದಾಗ ಅವರ ಪರವಾಗಿ ಧ್ವನಿ ಎತ್ತಿ. ಇಲ್ಲದಿದ್ದರೆ ತಿನ್ನುವ ಅನ್ನದಲ್ಲಿ ಹುಳು ಬೀಳುತ್ತದೆ ಎಂಬ ನುಡಿಮುತ್ತುಗಳನ್ನು ಉದುರಿಸಿದ್ದರು! ಅದರಿಂದ ರಮೇಶ್​ ಕುಮಾರ್​ ನಿಜಕ್ಕೂ ಪೇಚಿಗೆ ಸಿಲುಕಿದರು. ನಂತರ ಅದನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ಮಾಡಿದರಾದರೂ ಬಿಟ್ಟ ಬಾಣ, ಆಡಿದ ಮಾತು ಶರವೇಗದಲ್ಲಿ ಜನಮನ ತಲುಪಿತ್ತು. ಕಾಂಗ್ರೆಸ್​ ಬಗ್ಗೆ ಒಂದು ಸ್ಪಷ್ಟ ಅಭಿಪ್ರಾಯ ಮೂಡಿಸಿಕೊಂಡಿದ್ದರು.

ಯುವ ಪತ್ರಕರ್ತರ ಮೇಲೆ ಹಲ್ಲೆ ಮಾಡಿ ಮತ್ತೆ ಟೀಕೆಗೆ ಗುರಿಯಾದ ರಮೇಶ್​ ಕುಮಾರ್​..!

ಹೀಗೆ ರಮೇಶ್​ ಕುಮಾರ್​ ಆಗಾಗ ಇಂಥ ಹಲವು ವಿವಾದಗಳನ್ನು ತಾವೇ ತಮ್ಮ ಮೈಮೇಲೆ ಎಳೆದುಕೊಂಡು ವಿವಾದಗಳ ಸುಳಿಯಲ್ಲಿ ಪತರಗುಟ್ಟುತ್ತಾರೆ. ಬೆಂಗಳೂರಿನ ಘಟನೆ ನಡೆದು ಇನ್ನೂ ಒಂದು ವಾರ ಕಳೆದಿಲ್ಲ, ಹೀಗಿರುವಾಗಲೇ ಕೋಲಾರದ ಕಾಂಗ್ರೆಸ್​ ಕಚೇರಿಯಲ್ಲಿ ನಡೆದ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬ ಹಾಗೂ 75ನೇ ಸ್ವತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್​​ನ ಎರಡು ಗುಂಪುಗಳಾಗಿ… ರಮೇಶ್​ ಕುಮಾರ್ ಬಣ​ ಹಾಗೂ ಕೆಹೆ​ಚ್​ ಮುನಿಯಪ್ಪ ಬಣಗಳ ನಡುವೆ ಗಲಾಟೆ ಮಾಡಿಕೊಂಡವು. ಅದನ್ನು ಯಥಾವತ್ತು ರಾಜ್ಯದ ಜನತೆಯ ಮುಂದಿಡಲು ಮುಂದಾದಾಗ.. ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಇಬ್ಬರು ಯುವ ಪತ್ರಕರ್ತರ ಮೇಲೆ ಕೈ ಮುಂದು ಮಾಡಿ ಹಲ್ಲೆ ಮಾಡಿ ತಮ್ಮ ಸಣ್ಣ ವರ್ತನೆಯನ್ನು ಢಾಳಾಗಿ ಪ್ರದರ್ಶನಕ್ಕಿಟ್ಟಿದ್ದಾರೆ.

ಒಟ್ಟಾರೆ ರಮೇಶ್​ ಕುಮಾರ್ ಎಷ್ಟೇ ಪ್ರಬುದ್ದ, ಬುದ್ದಿವಂತ ರಾಜಕಾರಣಿ, ಜ್ಞಾನವಂತ ಎನಿಸಿಕೊಂಡರೂ​ ಆಗಾಗ ತಮ್ಮ ಹಳೆ ಚಾಳಿ ಮೂಲಕ ಜನರ ನಡುವೆ ಟೀಕೆಗೆ ಗುರಿಯಾಗುತ್ತಿದ್ದಾರೆ. ಇದು ನಿಜಕ್ಕೂ ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಯೊಬ್ಬರಿಗೆ ಹಾಗೂ ಅವರ ವರ್ಚಸ್ಸಿಗೆ ಶೋಭೆ ತರುವಂತಹದ್ದಲ್ಲ ಎಂದು ಕೋಲಾರದ ಜನತೆ ಕೋಲಾರಮ್ಮನ ಸನ್ನಿಧಿಯಲ್ಲಿ ಬೇಸರದಿಂದಲೇ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅದು ರಮೇಶ್ ಕುಮಾರ್​ ಕಿವಿಗೆ ಬೀಳಬೇಕು, ಅವರಲ್ಲಿ ಮಾರ್ಪಾಡು ತರಬೇಕು ಅಷ್ಟೆ. ​​

– ರಾಜೇಂದ್ರ ಸಿಂಹ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada