ಸಿಇಟಿ ಪರೀಕ್ಷೆ ಎದುರಲ್ಲಿ ಪಿಯು ಫಲಿತಾಂಶ – ಖಾಸಗಿ ಶಿಕ್ಷಣ ಲಾಬಿಗೆ ಮಣಿದ ಸರಕಾರ?

ಈಗಲೇ ಪಿಯು ಪರೀಕ್ಷೆ ಫಲಿತಾಂಶವನ್ನು ಘೋಷಣೆ ಮಾಡುವುದರಲ್ಲಿ ತಪ್ಪಿಲ್ಲ ಎಂದು ಮೇಲ್ನೋಟಕ್ಕೆ ಎನ್ನಿಸಿದರೂ, ಇದರ ಹಿಂದಿನ ಕುಟಿಲ ನೀತಿಯ ಅನಾವರಣ ಆದಾಗ, ಪಾಲಕರಿಗಷ್ಟೇ ಅಲ್ಲ ಸಾರ್ವಜನಿಕರಿಗೂ ಕೂಡ ಶಾಕ್ ಆಗುವುದರಲ್ಲಿ ಸಂಶಯವಿಲ್ಲ. ಹಾಗಾದರೆ ಏನದು? ಈ ನಡೆಯ ಹಿಂದಿನ ಹಕೀಕತ್ತೇನು? ಸರ್ಕಾರ ಖಾಸಗಿ ಶಿಕ್ಷಣ ಲಾಬಿಗೆ ಮಣಿಯಿತೇ?

ಸಿಇಟಿ ಪರೀಕ್ಷೆ ಎದುರಲ್ಲಿ ಪಿಯು ಫಲಿತಾಂಶ - ಖಾಸಗಿ ಶಿಕ್ಷಣ ಲಾಬಿಗೆ ಮಣಿದ ಸರಕಾರ?
ಸಿಇಟಿ ಪರೀಕ್ಷೆ ಹೊತ್ತಲ್ಲಿ ಪಿಯು ಫಲಿತಾಂಶ - ಖಾಸಗಿ ಲಾಬಿಗೆ ಮಣಿಯಿತೇ ಸರಕಾರ?

Updated on: Apr 08, 2025 | 4:26 PM

ಇದು ಯಾರ ನಿರ್ಣಯವೋ ಗೊತ್ತಿಲ್ಲ. ಸಿಇಟಿ ಪರೀಕ್ಷೆಯನ್ನು (CET Exam) ಮುಂದಿಟ್ಟುಕೊಂಡು, ಪಿಯು ಪರೀಕ್ಷೆ ಫಲಿತಾಂಶ (Second PUC Result 2025) ಪ್ರಕಟಿಸುವುದು ಅಮಾನವೀಯತೆಯ ಪರಾಕಾಷ್ಠೆ ಅಲ್ಲದೇ ಇನ್ನೇನು?

ಪಿಯು ಫಲಿತಾಂಶ ಈಗಲೇ ಬೇಕಿತ್ತಾ?

ಏಪ್ರಿಲ್ 16,17 ಮತ್ತು 18 ಕ್ಕೆ ಸಿಇಟಿ ಪರೀಕ್ಷೆ ನಡೆಯುವುದಿದೆ. ಅದಕ್ಕೆ ಮಕ್ಕಳು ಓದುತ್ತಿದ್ದಾರೆ. ಈ ಮಧ್ಯೆ ಪಿಯು ಪರೀಕ್ಷೆ ಬರೆದ ಮಕ್ಕಳ ಉತ್ತರ ಪತ್ರಿಕೆ ಮೌಲ್ಯಮಾಪನ ಮುಗಿದಿದೆ. ಇಂದು, ಏಪ್ರಿಲ್ 8 ರಂದು ಶಿಕ್ಷಣ ಸಚಿವರೇ ಮುಂದೆ ನಿಂತು ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದಾರೆ. ಕಳೆದ ತಿಂಗಳು ನಡೆದ ಪರೀಕ್ಷೆ ಮುಗಿದು, ಉತ್ತರ ಪತ್ರಿಕೆ ಮೌಲ್ಯಮಾಪನ ನಡೆದು, ಇಂದು ಫಲಿತಾಂಶ ಕೂಡ ಬಂತಲ್ಲ. ಈ ವೇಗ ನೋಡಿದಾಗ ಎಷ್ಟು ಸೂಪರ್ ಫಾಸ್ಟ್ ಆಗಿದೆ ನಮ್ಮ ವ್ಯವಸ್ಥೆ, ಮತ್ತು ಇಡೀ ಪಿಯು ಶಿಕ್ಷಣ ವ್ಯವಸ್ಥೆ ನಿರ್ವಹಿಸುತ್ತಿರುವ ತಂಡಕ್ಕೆ ಭೇಷ್ ಅನ್ನಬೇಕು ಅನ್ನಿಸುತ್ತೆ ಅಲ್ಲವೇ?

ಒಂದು ಕ್ಷಣ ನಿಂತು ಈ ಇಡೀ ವ್ಯವಸ್ಥೆ ಮತ್ತದರ ಪರಿಣಾಮದ ಬಗ್ಗೆ ವಿಮರ್ಶೆ ಮಾಡಿ. ಓರ್ವ ಬುದ್ದಿವಂತ ವಿದ್ಯಾರ್ಥಿ ಪಿಸಿಎಮ್ – ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತದಲ್ಲಿ 95 ಪ್ರತಿಶತ ಅಂಕ ಪಡೆಯುವ ನಿರೀಕ್ಷೆಯಲ್ಲಿದ್ದಾನೆ. ಆದರೆ, ಅವನ ಅಥವಾ ಅವಳ ನಿರೀಕ್ಷೆಗಿಂತ ಕಡಿಮೆ ಅಂಕ ಬಂತು ಎಂದಾದರೆ ಆ ಮಗುವಿನ ಉಮೇದು ಇಳಿಯುತ್ತೆ. ಆ ಮಗು ದಿಗಿಲು ಬಿದ್ದು ಸಿಇಟಿ ಪರೀಕ್ಷೆಯ ತಯಾರಿಯಲ್ಲಿ ಮುಗ್ಗರಿಸುವ ಸಾಧ್ಯತೆ ಜಾಸ್ತಿ ಇದೆ. ಇದು ಸಾಮಾನ್ಯರಿಗೂ ಅರ್ಥವಾಗುವ ಮನಃಶಾಸ್ತ್ರದ ಮಾತು. ಅದು ಕೊನೆಗೆ ಎಲ್ಲಿ ಪರ್ಯಾವಸಾನಗೊಳ್ಳುತ್ತೆ ಗೊತ್ತೆ? ಇನ್ನು ಹತ್ತೇ ದಿನಕ್ಕೆ ನಡೆಯುವ ಸಿಇಟಿ ಪರೀಕ್ಷೆಯಲ್ಲಿ ಕೂಡ ಎಡವಿ ತನ್ನ ಸಾಮರ್ಥ್ಯಕ್ಕನುಗುಣವಾಗಿ ಜ್ಞಾನ ಪ್ರದರ್ಶನ ಮಾಡದೇ, ಸಿಇಟಿ ರಾಂಕಿಂಗ್ ಪಟ್ಟಿಯಲ್ಲಿ ಕೆಳಗೆ ಬಂದು ಒಳ್ಳೇ ಕಾಲೇಜು ಸಿಗದೇ ಪರದಾಡಬೇಕಾದ ಸ್ಥಿತಿ ಆ ಮಗುವಿನದಾಗುತ್ತದೆ.

ಇದನ್ನೂ ಓದಿ
ದ್ವಿತೀಯ ಪಿಯು ಫಲಿತಾಂಶ: ಲಾರಿ ಡ್ರೈವರ್​ ಪುತ್ರಿ ಕರ್ನಾಟಕಕ್ಕೆ ಫಸ್ಟ್
ಸರ್ಕಾರೀ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಯತ್ನ: ಸಚಿವ
ಕರ್ನಾಟಕ ದ್ವಿತೀಯ ಪಿಯುಸಿ ಜಿಲ್ಲಾವಾರು ಫಲಿತಾಂಶ ಇಲ್ಲಿದೆ
ಯಾವೆಲ್ಲ ವೆಬ್ಸೈಟ್ ನಲ್ಲಿ ಫಲಿತಾಂಶ ಲಭ್ಯ? ರಿಸಲ್ಟ್ ನೋಡುವುದು ಹೇಗೆ?

ಬುದ್ಧಿವಂತ ಮಕ್ಕಳನ್ನು ಖೆಡ್ಡಾಕ್ಕೆ ಬೀಳಿಸಲು ಮಾಡಿದ ತಂತ್ರ?

ಇಲ್ಲಿದೆ ಇದರ ಹಿಂದಿನ ಕರಾಮತ್ತು. ಮಧ್ಯಮ ವರ್ಗದ ಮತ್ತು ಮೇಲ್ಮಧ್ಯಮ ವರ್ಗದ ಮಕ್ಕಳು ಎಡವುದಕ್ಕೆ ಹಾಕಿದ ಖೆಡ್ಡಾ ಇದು. ಇಂತಹ ಮಕ್ಕಳ ಎಡವುದನ್ನೇ ಕಾಯುತ್ತಿವೆ ಖಾಸಗೀ ಇಂಜಿನಿಯರಿಂಗ್ ಕಾಲೇಜುಗಳು. ಯಾವಾಗ ಇಂತಹ ಮಕ್ಕಳ ರಾಂಕಿಂಗ್ ಕೆಳಗೆ ಬರುತ್ತೋ, ಅದನ್ನೇ ಕಾಯುವ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಏಜೆಂಟರ ಮೂಲಕ ಇಂತಹ ಪಾಲಕರನ್ನು ಎಡತಾಕುತ್ತಾರೆ. ಅಥವಾ ತಮ್ಮ ಮಕ್ಕಳಿಗೆ ಒಳ್ಳೇ ಕಾಲೇಜಿನಲ್ಲಿ ಒಳ್ಳೇ ಕೋರ್ಸ್ ಸಿಗಲಿ ಎಂಬ ದೃಷ್ಟಿಯಿಂದ ಪಾಲಕರೇ ಖುದ್ದಾಗಿ ಇಂತಹ ಕಾಲೇಜುಗಳಿಗೆ ಭೇಟಿ ಕೊಡುತ್ತಾರೆ. ಮಕ್ಕಳ ಭವಿಷ್ಯದ ಬಗ್ಗೆ ತುಂಬಾ ಕನಸು ಹೊತ್ತ ತಂದೆ ತಾಯಂದಿರು, ಅವರ ಶಿಕ್ಷಣಕ್ಕೆಂದು ಕೂಡಿಸಿಟ್ಟ ಹಣ ನೀಡಿ ಬೇರೆ ದಾರಿ ಇಲ್ಲದೇ ಮ್ಯಾನೆಜ್ಮೆಂಟ್ ಕೋಟಾದಲ್ಲಿ ಕೇಳಿದಷ್ಟು ಕೊಟ್ಟು ಅವರಿಗೆ ಬೇಕಾದ ಬ್ರಾಂಚ್​ ಪಡೆಯುತ್ತಾರೆ.

ಇದನ್ನೂ ಓದಿ: ದ್ವಿತೀಯ ಪಿಯು ಫಲಿತಾಂಶ: ಲಾರಿ ಡ್ರೈವರ್​ ಪುತ್ರಿ ಕರ್ನಾಟಕಕ್ಕೆ ಫಸ್ಟ್

ಈಗ ಹಿಂತಿರುಗಿ ನೋಡಿ. ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಸರಕಾರಿ ವ್ಯವಸ್ಥೆ ಮಣಿದರೆ ಏನಾಗುತ್ತದೆ? ಪಿಯೂ ಪರೀಕ್ಷೆಯ ಫಲಿತಾಂಶ ಮೊದಲೇ ಪ್ರಕಟಿಸಿದ್ದು ತಪ್ಪು ಎನ್ನಿಸುವುದಿಲ್ಲ. ಅಥವಾ ಇದರ ಹಿಂದಿರುವ ಕರಾಳ ಕೈಗಳ ಬಗ್ಗೆ ಎಲ್ಲಿಯೂ ಸಾಕ್ಷ್ಯ ಸಿಗುವುದೇ ಇಲ್ಲ. ಅಥವಾ ಈ ಬಗ್ಗೆ ಕೇಳಿದರೆ, ಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳು ತಮ್ಮದೇ ಆದ ಒಂದು ತರ್ಕ ನೀಡಬಹುದು. ತಾವು ಯಾಕೆ ಪಿಯು ಫಲಿತಾಂಶ ಬೇಗ ಕೊಟ್ಟಿದ್ದೇವೆ ಎಂದು. ಆದರೆ ವಾಸ್ತವದಲ್ಲಿ ನಡೆಯುತ್ತಿರುವುದೇನು? ಓದುತ್ತಿರುವ ಮಕ್ಕಳು, ಪಾಲಕರು ಮತ್ತು ಇನ್ನೂ ಅಲ್ಪ ಸ್ವಲ್ಪ ಮೌಲ್ಯವಿಟ್ಟುಕೊಂಡಿರುವ ಸರಕಾರಿ ಅಧಿಕಾರಿಗಳು ನೀಡುವ ಮಾಹಿತಿಯನ್ನು ಬಗೆದಾಗ ಇಂತಹ ದುಷ್ಟ ಕೂಟದ ಕುಟಿಲ ನೀತಿ ನಮ್ಮ ಕಣ್ಮುಂದೆ ತೆರೆದುಕೊಳ್ಳುತ್ತದೆ ಮತ್ತು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವುದನ್ನು ನೋಡಿಯೂ ಅದನ್ನು ನಿಲ್ಲಿಸಲಾಗಲಿಲ್ಲ ಎಂಬ ಹತಾಶೆ ನಮ್ಮದಾಗುತ್ತದೆ. ಮಂತ್ರಿ ಮಧು ಬಂಗಾರಪ್ಪ ಅವರ ಗಮನಕ್ಕೆ ಈ ವಿಚಾರ ಬಂದಿಲ್ಲದೇ ಇರಬಹುದು. ರೀತಿ ಮೊನ್ನೆ ಮೊನ್ನೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ತೆಗೆದುಕೊಂಡಿರುವ ಪ್ರಾಮಾಣಿಕ ಐಎಎಸ್​ ಅಧಿಕಾರಿ ರಶ್ಮಿ ಮಹೇಶ್ ಅವರ ಗಮನಕ್ಕೆ ಕೂಡ ಈ ವಿಚಾರ ಬಂದಿಲ್ಲದೇ ಇರಬಹುದು. ಆದರೆ, ಈಗ ಆಗಿರುವ ಅನಾಹುತದ ಹೊಣೆ ಯಾರು ಹೊರುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ಇನ್ನಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:33 pm, Tue, 8 April 25