ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್​ನ ತ್ವರಿತ ಬೆಳವಣಿಗೆ ಮತಗಳಾಗಿ ಪರಿವರ್ತನೆಯಾಗಬಹುದೇ?

| Updated By: Ganapathi Sharma

Updated on: Jul 04, 2023 | 10:21 PM

ಜೈರಾಮ್ ರಮೇಶ್ ಮತ್ತು ಸುಪ್ರಿಯಾ ಶ್ರಿನೇತ್ ನೇತೃತ್ವದ ಕಾಂಗ್ರೆಸ್‌ನ ಹೊಸ ಸಾಮಾಜಿಕ ಮಾಧ್ಯಮ ತಂಡದ ಅಡಿಯಲ್ಲಿ, ಪಕ್ಷವು ಎಲ್ಲಾ ವೇದಿಕೆಗಳಲ್ಲಿ ತ್ವರಿತ ಪ್ರಗತಿಯನ್ನು ಸಾಧಿಸುತ್ತಿದೆ. ಕೇವಲ 10 ತಿಂಗಳಲ್ಲಿ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಶೇ 200 ರಿಂದ 1300 ರಷ್ಟು ಬೆಳವಣಿಗೆಯನ್ನು ಕಂಡಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್​ನ ತ್ವರಿತ ಬೆಳವಣಿಗೆ ಮತಗಳಾಗಿ ಪರಿವರ್ತನೆಯಾಗಬಹುದೇ?
ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್​ ಹ್ಯಾಂಡಲ್
Follow us on

2014ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (BJP) 285 ಸ್ಥಾನಗಳನ್ನು ಪಡೆದು ಸ್ವಂತ ಬಲದಿಂದ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ, ಆ ಪಕ್ಷವು ಸಾಮಾಜಿಕ ಮಾಧ್ಯಮಗಳಿಗೆ (Social Media) ನೀಡಿದ ಮನ್ನಣೆಗೆ ಹೆಚ್ಚು ಮಹತ್ವ ನೀಡಲಾಗಿತ್ತು. ಫೇಸ್‌ಬುಕ್, ಯುಟ್ಯೂಬ್ ಮತ್ತು ಟ್ವಿಟರ್‌ನಂತಹ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಉತ್ತಮ ಮತ್ತು ಸಮರ್ಪಕವಾದ ಬಳಕೆಯು ಕಾಂಗ್ರೆಸ್ ವಿರುದ್ಧದ ಬಿಜೆಪಿಯ ದೊಡ್ಡ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು.

ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ವಿಕಾಸ ಪುರುಷ ಎಂದು ಬಿಂಬಿಸಲು ಸಾಮಾಜಿಕ ಮಾಧ್ಯಮಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿತು. ಅವರು ಈಗಾಗಲೇ ತಮ್ಮ ಅಭಿವೃದ್ಧಿ ಮಾದರಿಯೊಂದಿಗೆ ಗುಜರಾತ್ ಅನ್ನು ಸಮೃದ್ಧಿಯತ್ತ ಕೊಂಡೊಯ್ದಿದ್ದಾರೆ ಎಂಬುದನ್ನು ಪರಿಣಾಮಕಾರಿಯಾಗಿ ಬಿಂಬಿಸಲಾಯಿತು. ಜತೆಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವರ್ಚಸ್ಸನ್ನು ಕುಂದಿಸಲು ಮತ್ತು ಅವರನ್ನು ಪಪ್ಪು ಅಥವಾ ಮಂದಬುದ್ಧಿಯ ವ್ಯಕ್ತಿಯೆಂದು ಬಿಂಬಿಸಲೂ ಸಾಮಾಜಿಕ ಮಾಧ್ಯಮ ಪರಿಣಾಮಕಾರಿಯಾಗಿ ಬಳಕೆಯಾಯಿತು. ಅವರ ಪ್ರಕಾರ, ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯೋಚಿತವೇ ಆಗಿದೆ. ಆದರೆ ಅದು 2014 ರಲ್ಲಿಯಷ್ಟೆ.

ಒಂಬತ್ತು ವರ್ಷಗಳ ನಂತರ ಈಗ ಎಲ್ಲವೂ ಬದಲಾಗಿದೆ. ವಾಸ್ತವದಲ್ಲಿ ಹೆಚ್ಚು ಬದಲಾಗಿದೆಯೋ ಇಲ್ಲವೋ, ಆದರೆ ಕನಿಷ್ಠ ಸಾಮಾಜಿಕ ಮಾಧ್ಯಮದ ವಿಚಾರದಲ್ಲಿ ಬದಲಾವಣೆ ಗಮನಿಸಬಹುದು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪರಿಣಾಮಕಾರಿಯಾಗಿ ನಿರೂಪಣೆ ಮಾಡುತ್ತಿರುವುದು ಕಾಂಗ್ರೆಸ್. 2022 ರ ಜೂನ್‌ನಲ್ಲಿ ಕಾಂಗ್ರೆಸ್‌ನಿಂದ ಹೊಸ ಸಾಮಾಜಿಕ ಮಾಧ್ಯಮ ತಂಡವನ್ನು ಸ್ಥಾಪಿಸುವುದರೊಂದಿಗೆ ಇದು ಪ್ರಾರಂಭವಾಯಿತು. ಸುಪ್ರಿಯಾ ಶ್ರಿನೇತ್ ಅವರು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಘಟಕದ ಅಧ್ಯಕ್ಷರಾಗಿ ಮತ್ತು ಮಾಜಿ ಸಚಿವ ಜೈರಾಮ್ ರಮೇಶ್ ಅವರು ಸಂವಹನದ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡರು. ನವದೆಹಲಿಯ 15 ಗುರುದ್ವಾರ ರಕಬ್ ಗಂಜ್ ರಸ್ತೆಯಲ್ಲಿರುವ ಅವರ ವಾರ್ ರೂಮ್‌ನಲ್ಲಿ ನೆಲೆಸಿರುವ ಸಾಮಾಜಿಕ ಮಾಧ್ಯಮ ತಂಡದೊಂದಿಗೆ ಇವರಿಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ. ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ಎಲ್ಲಾ ಯಶಸ್ಸಿನ ಶ್ರೇಯಕ್ಕೆ ಇಬ್ಬರೂ ಅರ್ಹರಾಗಿದ್ದಾರೆ.

ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ಬೆಳವಣಿಗೆಯನ್ನು ನೋಡೋಣ. 2022 ರ ಜುಲೈಯಲ್ಲಿ, ಪಕ್ಷವು 48 ದಶಲಕ್ಷ ಟ್ವಿಟರ್ ಇಂಪ್ರೆಶನ್‌ಗಳನ್ನು ಹೊಂದಿತ್ತು. ಈ ಅಂಕಿಅಂಶಗಳು 10 ತಿಂಗಳ ನಂತರ ಮೇ 2023 ರಲ್ಲಿ 165 ದಶಲಕ್ಷಕ್ಕೆ ಜಿಗಿಯಿತು. ಇದು ಶೇ 243ರ ಭಾರೀ ಬೆಳವಣಿಗೆಯಾಗಿದೆ.

ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ತಂಡದ ಸದಸ್ಯರೊಬ್ಬರು ಹೇಳುವ ಪ್ರಕಾರ, ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್ ಅನುಯಾಯಿಗಳ ಸಂಖ್ಯೆಯು ತ್ವರಿತ ಗತಿಯಲ್ಲಿ ಹೆಚ್ಚುತ್ತಿದೆ. ಇದು ಶೀಘ್ರದಲ್ಲೇ 10 ದಶಲಕ್ಷ ಆಗಲಿದೆ ಮತ್ತು ಇದು ಬಿಜೆಪಿಯ 20 ದಶಲಕ್ಷ ಅನುಯಾಯಿಗಳ ಪೈಕಿ ಅರ್ಧದಷ್ಟು ಇದ್ದರೂ, ಇದು ಬಿಜೆಪಿಗಿಂತ ಹೆಚ್ಚು ಲೈಕ್ಸ್ ಮತ್ತು ರಿಟ್ವೀಟ್‌ಗಳನ್ನು ಪಡೆಯುತ್ತಿದೆ. ವಾಸ್ತವ ಏನೆಂಬುದು ಸಾರ್ವಜನಿಕ ಡೊಮೇನ್‌ನಲ್ಲಿದ್ದು https://socialblade.com ಇಲ್ಲಿ ಪರಿಶೀಲಿಸಬಹುದು.

ಯುಟ್ಯೂಬ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮುಂತಾದ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾಂಗ್ರೆಸ್ ಬೆಳವಣಿಗೆಯನ್ನು ಕಾಣುತ್ತಿದೆ. ಉದಾಹರಣೆಗೆ, ಯುಟ್ಯೂಬ್‌ನಲ್ಲಿ ಅನುಯಾಯಿಗಳ ಸಂಖ್ಯೆ 2022 ರ ಜುಲೈಯಲ್ಲಿ 21 ದಶಲಕ್ಷ ಇದ್ದುದು 2023 ರ ಮೇ ವೇಳೆಗೆ 51 ದಶಲಕ್ಷಕ್ಕೆ ಹೆಚ್ಚಳಗೊಂಡಿದೆ ಎಂದು ಪಕ್ಷ ಹೇಳಿಕೊಂಡಿದೆ.

ಇನ್‌ಸ್ಟಾಗ್ರಾಮ್​​ನಲ್ಲಿ 2022 ರ ಜುಲೈಯಲ್ಲಿ 1.25 ದಶಲಕ್ಷ ಇದ್ದ ಅನುಯಾಯಿಗಳ ಸಂಖ್ಯೆ 2023 ರ ಮೇ ತಿಂಗಳಲ್ಲಿ 20 ದಶಲಕ್ಷಕ್ಕೆ ಹೆಚ್ಚಳಗೊಂಡಿದೆ. ಇದು ಶೇಕಡಾ 1290 ರ ಬೆಳವಣಿಗೆಯಾಗಿದೆ. ಫೇಸ್‌ಬುಕ್‌ನಲ್ಲಿ ಕೂಡ ಪಕ್ಷದ ಫಾಲೋವರ್ಸ್​​ಗಳ ಸಂಖ್ಯೆ ಹೆಚ್ಚಾಗಿದೆ. ಜುಲೈ 2023 ರಲ್ಲಿ 13 ದಶಲಕ್ಷ ಫಾಲೋವರ್ಸ್​​ ಇದ್ದುದು, ಈ ವರ್ಷದ ಮೇ ವೇಳೆಗೆ ಸುಮಾರು 16 ದಶಲಕ್ಷಕ್ಕೆ ಹೆಚ್ಚಳಗೊಂಡಿದೆ.

ಇದನ್ನೂ ಓದಿ: ಸಚಿವ ಸಂಪುಟ ಮೇಜರ್ ಸರ್ಜರಿಗೆ ಮೋದಿ ತಯಾರಿ: ಕರ್ನಾಟಕದವರು ಯಾರು ಔಟ್? ಯಾರು ಇನ್?

ಈ ಬೆಳವಣಿಗೆಗೆ ಕಾಂಗ್ರೆಸ್ ಹಲವು ಕಾರಣಗಳನ್ನು ಹೇಳುತ್ತಿದೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಭಾರೀ ಆಕರ್ಷಣೆಯನ್ನು ಗಳಿಸಿತು ಮತ್ತು ಇದು ಪಕ್ಷದ ವಿವಿಧ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿಯೂ ಗೋಚರಿಸಿತು. ಆದರೆ, ಯಾತ್ರೆ ಮುಗಿದ ನಂತರವೂ ಆ ವೇಗವನ್ನು ಉಳಿಸಿಕೊಳ್ಳಲು ಸಾಧ್ಯವಾಗಿರುವುದರ ಶ್ರೇಯಸ್ಸು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ತಂಡಕ್ಕೆ ಸಲ್ಲುತ್ತದೆ.

ಸುಪ್ರಿಯಾ ಶ್ರಿನೇತ್ ಅವರ ‘ಆಕ್ರಮಣಕಾರಿ ತಂತ್ರ’ ವರ್ಚುವಲ್ ವೇದಿಕೆಯಲ್ಲಿ ಕಾಂಗ್ರೆಸ್ ಉದಯಕ್ಕೆ ಮತ್ತೊಂದು ಪ್ರಮುಖ ಅಂಶವಾಗಿದೆ. ಅವರು ರಾಜಕೀಯ ಘಟನೆಗಳು ಮತ್ತು ಅವುಗಳ ಪರಿಣಾಮಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾರೆ. ಪಕ್ಷ ಅಥವಾ ನಮ್ಮ ನಾಯಕರ ವಿರುದ್ಧ ಬಿಜೆಪಿಯು ಸಾಮಾಜಿಕ ಮಾಧ್ಯಮದಲ್ಲಿ ಹರಡುವ ಯಾವುದೇ ಸುಳ್ಳು ಮತ್ತು ಬೊಗಳೆಗಳನ್ನು ಅವರು ತ್ವರಿತವಾಗಿ ನಿರ್ವಹಿಸುತ್ತಾರೆ. ಈ ಹಿಂದೆ ನಾವು ಅವರ ಸುಳ್ಳುಗಳನ್ನು ನಿರ್ಲಕ್ಷಿಸುತ್ತಿದ್ದೆವು. ಆದರೆ, ಈಗ ಹಾಗಿಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪಕ್ಷದ ಬೆಳವಣಿಗೆಯು ವಾಸ್ತವವಾಗಿಯೂ ಪಕ್ಷವು ಬೆಳವಣಿಗೆ ಹೊಂದುತ್ತಿರುವುದನ್ನು ಸೂಚಿಸುತ್ತದೆ. ಬಿಜೆಪಿ ಸುಳ್ಳು ಮತ್ತು ದ್ವೇಷವನ್ನು ಹರಡುತ್ತದೆ ಎಂದು ಈ ದೇಶದ ಜನರು ಅಂತಿಮವಾಗಿ ಅರಿತುಕೊಂಡಿದ್ದಾರೆ. ಬಿಜೆಪಿಯ ನಿಜಮುಖ ಅನಾವರಣಗೊಂಡಿದ್ದು, ಜನರು ಈಗ ಮತ್ತೆ ಕಾಂಗ್ರೆಸ್‌ನತ್ತ ವಾಲುತ್ತಿದ್ದಾರೆ. ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪಕ್ಷವು ಉತ್ತಮವಾಗಿ ಕಾರ್ಯನಿರ್ವಹಿಸಲು ಇದು ದೊಡ್ಡ ಕಾರಣವಾಗಿದೆ ಕಾಂಗ್ರೆಸ್ ನಾಯಕ ಮತ್ತು ಮಾಜಿ ವಕ್ತಾರ ರಶೀದ್ ಅಲ್ವಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬಂಡಾಯ ನಂತರ 3 ನಾಯಕರನ್ನು ಉಚ್ಚಾಟಿಸಿದ ಎನ್‌ಸಿಪಿ; ಸಂಸದ ಸ್ಥಾನದಿಂದ ಪ್ರಫುಲ್ ಪಟೇಲ್​​ನ್ನು ಅನರ್ಹಗೊಳಿಸಲು ಒತ್ತಾಯ

ಏತನ್ಮಧ್ಯೆ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾಂಗ್ರೆಸ್‌ನ ಪ್ರತಿಪಾದನೆಗಳು ಅಥವಾ ಆ ಪಕ್ಷದ ಸಂಖ್ಯಾಬಲದ ಬಗ್ಗೆ ಬಿಜೆಪಿ ಮೈಮರೆತಿಲ್ಲ. ಪಕ್ಷದ ದೆಹಲಿ ವಕ್ತಾರ ಹರೀಶ್ ಖುರಾನಾ ಅವರ ಪ್ರಕಾರ, ಕಾಂಗ್ರೆಸ್ ಎಲ್ಲಾ ರೀತಿಯ ಗಿಮಿಕ್‌ಗಳಲ್ಲಿ ತೊಡಗಬಹುದು. ಆದರೆ, ಅವರ ಹೇಳಿಕೆಗಳು ವಿಶ್ವಾಸಾರ್ಹವಲ್ಲ. ಕಾಂಗ್ರೆಸ್​ ಪಕ್ಷವು ಸಾಮಾಜಿಕ ಮಾಧ್ಯಮಗಳಲ್ಲಿ ಲೈಕ್​ಗಳು ಮತ್ತು ಫಾಲೋವರ್ಸ್​ಗಳನ್ನು ಖರೀದಿ ಮಾಡುತ್ತಿದೆ. ಆದರೆ, ಬಿಜೆಪಿ ಹಾಗಲ್ಲ. ಬಿಜೆಪಿಯ ಬೆಳವಣಿಗೆ ವಾಸ್ತವ ಮತ್ತು ನೈಜವಾಗಿದೆ. ಅದಲ್ಲದೆ, ಸಾಮಾಜಿಕ ಮಾಧ್ಯಮಗಳು ಪಕ್ಷದ ಇತರ ಎಲ್ಲ ವೇದಿಕೆಗಳಲ್ಲಿ ಒಂದಾಗಿದೆ. ನಾವು ಮನೆ-ಮನೆಗೆ ಪ್ರಚಾರ ಮತ್ತು ತಳಮಟ್ಟದಲ್ಲಿ ಕೆಲಸ ಮಾಡುವುದನ್ನು ನಂಬುತ್ತೇವೆ. ಅದಕ್ಕಾಗಿಯೇ ನಾವು 303 ಸಂಸದರನ್ನು ಹೊಂದಿದ್ದೇವೆ ಎಂದು ಖುರಾನಾ ಹೇಳಿದ್ದಾರೆ.

– ಸಂದೀಪ್ ಯಾದವ್

ಇನ್ನಷ್ಟು ವಿಶ್ಲೇಷಣೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ