ಸಾಮಾನ್ಯವಾಗಿ ದೇವರು ಎಂದ ಕೂಡಲೇ ತಕ್ಷಣದಲ್ಲಿ ಬರುವಂತಹ ಶಬ್ದ ಮಡಿ. ಹಲವರು ಮಡಿ ಮಡಿ ಎಂದು ಟೀಕೆ ಮಾಡುವವರ ಸಂಖ್ಯೆ ಬೇಕಾದಷ್ಟಿದೆ. ಮಡಿ ಅಂದರೆ ನಿಶ್ಚಿತವಾಗಿ ಏನು ? ಮಡಿ ಅಂದರೆ ಇನ್ನೊಂದು ಅರ್ಥ ಶುದ್ಧ ,ಸ್ವಚ್ಛ. ಶ್ರೀ ದೇವರ ಪೂಜೆ ಸೇವಾ ಕಾರ್ಯದಲ್ಲಿ ಬಳಸುವಂತಹ ಪ್ರತಿ ವಸ್ತು ಸ್ವಚ್ಛವಾಗಿರಬೇಕು ಎನ್ನುವುದು ಈ ಹಿಂದಿನ ಒಂದು ಮಹತ್ವದ ಯೋಚನೆ.
ಈ ಕರೆಗೆ ಒಗೊಟ್ಟು ಹಲವರು ಈ ಮಹತ್ವದ ಕಾರ್ಯದಲ್ಲಿ ತೊಡಗಿದ್ದರೆ ಆದರೆ ಇದು ಫೋಟೋಗೆ ಮಾತ್ರ ಸೀಮಿತವಾಗದೆ ವಾಸ್ತವಿಕತೆಯಲ್ಲಿ ನಿರಂತರ ಈ ಸ್ವಚ್ಛತಾ ಅಭಿಯಾನ ಅವಶ್ಯಕತೆ ಇದೆ. ದೇವಾಲಯಗಳ ಹೊರ ಆವಾರ,ಒಳ ಆವಾರ, ಗರ್ಭಗುಡಿ, ದೇವರಿಗೂ ಉಪಯೋಗಿಸುವ ಪಾತ್ರೆಗಳು ಹಾಗೂ ವಿಶೇಷವಾಗಿ ತೈಲನಂದಾದೀಪ, ಕೆಲವು ಕಡೆಗಳಲ್ಲಿ ಶ್ರೀ ದೇವರ ಪ್ರೀತಿಯ ನೀಡುವಂತೆ ತೈಲ ಹಾಕುವ ಸ್ಥಳ, ಕರ್ಪೂರದ ಆರತಿಯಿಂದ ಉಂಟಾದಂತಹ ಕಪ್ಪು ಬಣ್ಣ, ತೆಂಗಿನಕಾಯಿ ನೀರು ಹೋಗುವ ಸ್ಥಳಗಳು, ದೇವರ ಪೂಜೆಗೆ ಬಳಸುವಂತಹ ಪಾತ್ರೆ ಪಗಡೆಗಳು, ಗೋಶಾಲೆ , ಆ ದೇವಸ್ಥಾನ, ಮಠ ಮಂದಿರದಲ್ಲಿ ದಾಸೋಹದ ವ್ಯವಸ್ಥೆ ಇದೆ ಎಂದಾದರೆ ಅದಕ್ಕೆ ಸಂಬಂಧಿತ ಎಲ್ಲಾ ಸ್ಥಳಗಳು ಖಂಡಿತವಾಗಿ ಸ್ವಚ್ಛತಾ ಅಭಿಯಾನದ ಅಡಿಯಲ್ಲಿ ಬರಬೇಕು.
ಈಗಾಗಲೇ ಈ ಎಲ್ಲ ಸ್ವಚ್ಛತೆಗೆ ಸಿಬ್ಬಂದಿ ವರ್ಗದವರು ಖಂಡಿತವಾಗಿಯೂ ಪ್ರತಿ ದೇವಸ್ಥಾನದಲ್ಲಿ ಇದ್ದಾರೆ ಆದರೆ ಶ್ರೀರಾಮ ಜನ್ಮ ಭೂಮಿಯ ಸಂಪೂರ್ಣ ಇತಿಹಾಸದಲ್ಲಿ ಕರಸೇವೆ ಹೇಳುವ ವಿಷಯ ವಿಶೇಷ ಪ್ರಾಧಾನ್ಯತೆಯನ್ನು ಪಡೆದಿದೆ. ಪ್ರತಿ ದೇವಸ್ಥಾನದ ಸ್ವಚ್ಛತೆಗೆ ಒಂದು ಕರ ಸೇವಾ ಪಡೆ ಅವಶ್ಯಕತೆ ಇದೆ. ಅದರಲ್ಲಿ ಯುವಜನರ ಉಪಸ್ಥಿತಿ ಅವಶ್ಯ.ಅಂದರೆ ಈಗಿನ ಅಭಿಯಾನದ ಫೋಟೋ ಅಭಿಯಾನಕ್ಕೆ ಬರುವಂತಹ ಭಕ್ತರಲ್ಲ. ಸಂಪೂರ್ಣ ವರ್ಷವಿಡಿ ಆ ದೇವಸ್ಥಾನದ ಮೇಲ್ಕಂಡ ಸ್ಥಳಗಳ ಸ್ವಚ್ಛತೆಯನ್ನ ನಿರಂತರವಾಗಿ ಸೇವೆ ಮಾಡುವಂತಹ ಭಕ್ತರ ಕರೆಸೇವಾ ಪಡೆ. ಅಲ್ಲದೆ ಶ್ರೀರಾಮ ಜನ್ಮ ಭೂಮಿಯ ಪ್ರಾಣ ಪ್ರತಿಷ್ಠೆಯ ನೆನಪಿನಲ್ಲಿ ಪ್ರತಿ ವರ್ಷವೂ ಆ ದೇವಸ್ಥಾನಕ್ಕೆ ಭೇಟಿ ನೀಡುವಂತಹ ಎಲ್ಲ ಭಕ್ತರು ಸಂಕ್ರಾಂತಿಯಿಂದ ಜನವರಿ 22ರವರೆಗೆ ವಿಶೇಷ ಸ್ವಚ್ಛತಾ ಅಭಿಯಾನ ಮಾಡುವಂತಹ ಪರಂಪರೆ ರೂಡಿಯಲ್ಲಿ ಬರುವಂತೆ ಆಗಬೇಕು.
ಇನ್ನು ಹಲವು ದೇವಸ್ಥಾನಗಳಲ್ಲಿ ಉಪಯೋಗಿಸುವಂತಹ ತಾಮ್ರದ ಪಾತ್ರೆಗಳು ತಾಮ್ರದ ಬಣ್ಣದಲ್ಲಿ ಇರುವುದು ಅತಿ ಅವಶ್ಯಕ. ತಾಮ್ರದ ಪಾತ್ರೆಗಳು ತಾಮ್ರದ ಬಣ್ಣದಲ್ಲಿರದೆ ಕಪ್ಪು ಬಣ್ಣವಾಗಿದ್ದರೆ ಇದರಲ್ಲಿ ಸಂಗ್ರಹಿಸುವ ತೀರ್ಥ, ಪಂಚಾಮೃತ , ನೀರು ಇತರ ದ್ರವ ಪದಾರ್ಥಗಳು ತಾಮ್ರ ಹಾಗೂ ಇವುಗಳ ಮಧ್ಯ ರಾಸಾಯನಿಕ ಕ್ರಿಯೆ ನಡೆದು ಇದನ್ನು ಸ್ವೀಕರಿಸುವಂಥವರಿಗೆ ಕೆಲವು ಆರೋಗ್ಯದ ತೊಂದರೆಗಳು ಆಗುವ ಸಾಧ್ಯತೆ ಇರಬಹುದು ಈ ಕಾರಣಕ್ಕೆ ಶ್ರೀದೇವರ ಪೂಜಾ ಕಾರ್ಯದಲ್ಲಿ ಬಳಸುವಂತಹ ಪಾತ್ರಗಳು ಕೂಡ ಈ ಸ್ವಚ್ಛತಾ ಅಭಿಯಾನದ ಭಾಗವಾಗಬೇಕು ಎಂದು ಹಲವು ಭಕ್ತರ ವೈದ್ಯರ ಅಪೇಕ್ಷೆ. ನನ್ನ ಸ್ವಂತ ಅಭಿಪ್ರಾಯದಂತೆ ನೀರು ಸಂಗ್ರಹಿಸುವ ಪಾತ್ರೆ,ತೀರ್ಥ ನೀಡುವ ಪಾತ್ರೆ ತಾಮ್ರದ್ದು ಆಗಿರದೆ ಇತರ ಲೋಹದ್ದಾಗಿರಬೇಕು. ಬೆಳ್ಳಿಯದ್ದು ಆದರೆ ದೇವಸ್ಥಾನದ ಆಡಳಿತ ಮಂಡಳಿಗೂ ತೀರ್ಥ ನೀಡುವಂತಹ ಪುರೋಹಿತರಿಗೂ ಹಿರಿಮೆ, ಮತ್ತು ಗರಿಮೆ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.
ಬದಲಾವಣೆ ಜಗದ ನಿಯಮ ಹೇಳುವುದು ಶ್ರೀ ಕೃಷ್ಣ ಪರಮಾತ್ಮ ಹೇಳಿದಂತಹ ನುಡಿಯಾಗಿದೆ. ದೇವಸ್ಥಾನ ಮಠಮಾನ್ಯಗಳು ಇವೆಲ್ಲವುಗಳಲ್ಲಿ ಪುರೋಹಿತರ ಆರೋಗ್ಯ, ಭಕ್ತರ ಆರೋಗ್ಯ ಈ ದೃಷ್ಟಿಕೋನದಿಂದ ಹಲವಷ್ಟು ಬದಲಾವಣೆ ಮಾಡುವಂತಹ ಒಂದು ಯೋಚನೆ ಆಗಬೇಕಿದೆ. ಮೇಲ್ಕಂಡ ವಿಷಯಗಳನ್ನು ಸಕಾರಾತ್ಮಕವಾಗಿ ಯೋಚಿಸುವ ಅವಶ್ಯಕತೆ ಶ್ರೀರಾಮಲ್ಲಲ್ಲನ ಪ್ರತಿಷ್ಠಾಪನೆಯ ನಿಮಿತ್ತ ಧಾರ್ಮಿಕ ಸ್ಥಳಗಳ ಆಡಳಿತ ಮಂಡಳಿ, ಭಕ್ತರು ,ಪುರೋಹಿತ ವರ್ಗದವರು ದೇವಸ್ಥಾನದ ಸಿಬ್ಬಂದಿಗಳಿಗೆ ಇದೆ.
ಜಗಪ್ರಸಿದ್ಧ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಧ್ಯ ಭಾಗದಲ್ಲಿ ಇರುವಂತಹ ರುದ್ರಭೂಮಿ (ಸ್ಮಶಾನ) ವಿದ್ಯಾನಗರ ರುದ್ರಭೂಮಿಯಲ್ಲಿ ಸುಭಾಷ್ ಚಂದ್ರಬೊಸ ಕಾರ್ಯಪಡೆ ಎಂಬ ಒಂದು ಸಮಾನ ಮನಸ್ಕರ ಕಾರ್ಯಪಡೆ
ಈ ರುದ್ರ ಭೂಮಿಯ ಸ್ವಚ್ಛತಾ ಕಾರ್ಯವನ್ನು ಪ್ರತಿ ರವಿವಾರ ಸ್ವಯಂ ಪ್ರೇರಿತರಾಗಿ ಶ್ರಮ ಸೇವಾರೂಪದಲ್ಲಿ ಅಂದರೆ ಯಾವುದೇ ಅಪೇಕ್ಷೆ ಇಲ್ಲದೇ ಕೈಕೊಂಡು ಮಾದರಿಯಾಗಿರಿಸಿದ್ದಾರೆ. ರೀತಿಯ ಸ್ವಚ್ಛತೆ ಸ್ಮಶಾನದಲ್ಲಿ ಯಶಸ್ವಿಯಾಗಿ ಈ ಕಾರ್ಯಪಡೆ ಕೈಕೊಂಡಿದ್ದಾರೆ ಎಂದಾದ ಮೇಲೆ ದೇವಸ್ಥಾನಗಳಲ್ಲಿ ಈ ರೀತಿ ಕರಸೇವಕರ ಕಾರ್ಯಪಡೆ ಸುಲಭಸಾಧ್ಯ.
ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ