Taliban and Kashmir: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚುವ ಆತಂಕ

ಅಫ್ಘಾನಿಸ್ತಾನವು ತಾಲಿಬಾನಿಗಳ ಕೈವಶವಾದ ನಂತರ ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ, ಇಸ್ಲಾಂ ಪರ ಭಯೋತ್ಪಾದಕ ಸಂಘಟನೆಗಳಿಗೆ ಹೊಸ ಉತ್ಸಾಹ ಬಂದಿದೆ ಎಂದು ಹಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ

Taliban and Kashmir: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚುವ ಆತಂಕ
ಜಮ್ಮು ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿ
Ghanashyam D M | ಡಿ.ಎಂ.ಘನಶ್ಯಾಮ

|

Aug 17, 2021 | 6:53 PM

ಒಂದು ದೇಶವನ್ನು ಗೆಲ್ಲಲು ಬೇಕಾದ ಚಾಕಚಕ್ಯತೆ ಬೇರೆ, ಗೆದ್ದ ದೇಶದ ಜನರಿಗೆ ನೆಮ್ಮದಿ ಸಿಗುವಂತೆ ಆಡಳಿತ ನಡೆಸಲು ಬೇಕಾಗುವ ಕೌಶಲವೇ ಬೇರೆ. ದೇಶ ಗೆಲ್ಲಲು ಬೇಕಾಗುವ ಮಿಲಿಟರಿ ಚಾಕಚಕ್ಯತೆ, ಕ್ರೌರ್ಯ ದೇಶ ನಡೆಸುವ ಹಂತದಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಅಂಥ ಸಂದರ್ಭದಲ್ಲಿ ದೇಶ ಗೆಲ್ಲುವ ಹಂತದಲ್ಲಿ ಅತ್ಯಗತ್ಯವಾಗಿದ್ದ ಸಂಪನ್ಮೂಲಗಳು ಹೊರೆ ಎನಿಸಿಬಿಡುವ ಅಪಾಯವೂ ಉಂಟು. ಹೀಗಾದಾಗ ಹೆಚ್ಚುವರಿ ಸಂಪನ್ಮೂಲವನ್ನು ಬೇರೆಡೆಗೆ ನಿಯೋಜಿಸುವುದು ಜಾಣನಡೆ ಎನಿಸಿಕೊಳ್ಳುತ್ತದೆ.

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಗೆದ್ದ ನಂತರ ಭಾರತದ ಭದ್ರತೆಗೆ ಉಂಟಾಗಬಹುದಾದ ಆತಂಕದ ಬಗ್ಗೆ ಆಲೋಚಿಸುವಾಗ ಈ ಅಂಶ ಮುನ್ನೆಲೆಗೆ ಬರುತ್ತದೆ. ತಾಲಿಬಾಲ್​ ಸಂಘಟನೆ ರೂಪುಗೊಂಡಿದ್ದೇ ಅಫ್ಘಾನಿಸ್ತಾನವನ್ನು ವಿದೇಶಿಗರಿಂದ ಮುಕ್ತಿಗೊಳಿಸಿ, ಆಡಳಿತದ ಚುಕ್ಕಾಣಿ ಹಿಡಿಯಬೇಕೆಂದು. ಈ ಉದ್ದೇಶವನ್ನು ಅವರು ಎರಡು ಬಾರಿ ಈಡೇರಿಸಿಕೊಂಡಿದ್ದಾರೆ. ಅವರೊಳಗಿನ ಮಹತ್ವಾಕಾಂಕ್ಷೆಯು ಜಾಗೃತವಾದರೆ, ಪಾಕಿಸ್ತಾನದ ಕುಮ್ಮಕ್ಕು ಮತ್ತು ಚಿತಾವಣೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಹಜವಾಗಿಯೇ ಭಾರತದ ಭದ್ರತೆಗೆ ಗಂಡಾಂತರ ಒದಗಲಿದೆ.

ಅಫ್ಘಾನಿಸ್ತಾನವು ತಾಲಿಬಾನಿಗಳ ಕೈವಶವಾದ ನಂತರ ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ, ಇಸ್ಲಾಂ ಪರ ಭಯೋತ್ಪಾದಕ ಸಂಘಟನೆಗಳಿಗೆ ಹೊಸ ಉತ್ಸಾಹ ಬಂದಿದೆ ಎಂದು ಹಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕಾಶ್ಮೀರದ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವಿಶ್ಲೇಷಣೆಗಳೂ ಪರೋಕ್ಷವಾಗಿ ಇದನ್ನು ಸೂಚಿಸುತ್ತಿವೆ.

ಅಫ್ಘಾನಿಸ್ತಾನದ ಬೆಳವಣಿಗೆಗಳ ವಿಚಾರದಲ್ಲಿ ಪಾಕಿಸ್ತಾನದ ಸೇನೆ ಮತ್ತು ಐಎಸ್​ಐಗೆ ಇದೀಗ ಭಾರ ಇಳಿಸಿಕೊಂಡ ಭಾವ ಬಂದಿದೆ. ಅಲ್ಲಿ ಭಾರತದ ಪ್ರಭಾವ ಹೆಚ್ಚಾಗುವುದು ಪಾಕಿಸ್ತಾನಕ್ಕೆ ಸುತರಾಂ ಇಷ್ಟವಿರಲಿಲ್ಲ. ಇದೀಗ ಅಲ್ಲಿ ಅಧಿಕಾರಕ್ಕೆ ಬಂದಿರುವ ತಾಲಿಬಾನ್ ಆಡಳಿತವು ಪಾಕ್ ಸೇನೆಯ ತಾಳಕ್ಕೆ ತಕ್ಕಂತೆ ಕುಣಿಯುವ ಕಾರಣ ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನದ ವಿದ್ಯಮಾನಗಳಿಗೆ ಪಾಕಿಸ್ತಾನವು ಹೆಚ್ಚಿನ ಆರ್ಥಿಕ ಮತ್ತು ಮಾನವ ಸಂಪನ್ಮೂಲವನ್ನು ವಿನಿಯೋಗಿಸಬೇಕಾಗಿರುವುದಿಲ್ಲ. ಹೀಗಾಗಿ ಪಾಕ್ ಸೇನೆ ಮತ್ತು ಐಎಸ್​ಐ ತನ್ನ ಗಮನವನ್ನು ಸಂಪೂರ್ಣವಾಗಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳಿಗೆ ಕುಮ್ಮಕ್ಕು ನೀಡಲು ಮತ್ತು ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆ ಹೆಚ್ಚಿಸಲು ಕೇಂದ್ರೀಕರಿಸಲಿದೆ ಎಂಬ ಮಾತುಗಳು ಕೇಳಿಬಂದಿವೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರ ತರಬೇತಿ ಶಿಬಿರಗಳನ್ನು ಅಫ್ಘಾನಿಸ್ತಾನಕ್ಕೆ ಸ್ಥಳಾಂತರಿಸುವ ಯೋಜನೆಯನ್ನು ಪಾಕಿಸ್ತಾನ ಈ ಹಿಂದೆಯೇ ರೂಪಿಸಿತ್ತು. ಆದರೆ ಅನುಷ್ಠಾನಕ್ಕೆ ತರಲು ಆಗಿರಲಿಲ್ಲ. ಪ್ರತಿಸಲ ಅಂತರರಾಷ್ಟ್ರೀಯ ಪ್ರತಿನಿಧಿಗಳು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದಾಗಲೂ ಭಯೋತ್ಪಾದಕರ ತರಬೇತಿ ಶಿಬಿರಗಳ ಅಸ್ತಿತ್ವವನ್ನು ಮರೆಮಾಚುವ ಅನಿವಾರ್ಯತೆ ಪಾಕ್ ಆಡಳಿತಕ್ಕೆ ಎದುರಾಗುತ್ತಿತ್ತು. ಈ ತಲೆಬಿಸಿಯನ್ನು ಶಾಶ್ವತವಾಗಿ ನಿವಾರಿಸಿಕೊಳ್ಳಲು ಪಾಕಿಸ್ತಾನಕ್ಕೆ ಇದೀಗ ಅವಕಾಶ ಸಿಕ್ಕಿದೆ.

ಪಾಕ್ ಸೇರಿದಂತೆ ಭಾರತದ ಸುತ್ತಮುತ್ತಲ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತ ವಿರೋಧಿ ಭಯೋತ್ಪಾದಕ ಸಂಘಟನೆಗಳು ಅಫ್ಘಾನಿಸ್ತಾನದ ನೆಲದಲ್ಲಿ ಒಗ್ಗೂಡಬಹುದು ಎಂಬ ಆತಂಕವನ್ನೂ ಕೆಲ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ದೇಶ ಗೆದ್ದ ಖುಷಿಯಲ್ಲಿರುವ, ಗುಡ್ಡಗಾಡು ಯುದ್ಧದಲ್ಲಿ ಚೆನ್ನಾಗಿ ಪಳಗಿರುವ ತಾಲಿಬಾನ್ ಹೋರಾಟಗಾರರ ಪೈಕಿ ಕೆಲವರನ್ನು ಭಾರತಕ್ಕೆ ಕಳುಹಿಸುವಂತೆ ಐಎಸ್​ಐ ಸೂಚನೆ ನೀಡಬಹುದು ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇಲಾಖೆಯ ಮುಖ್ಯಸ್ಥ ಶೇಷ್ ಪಾಲ್ ವೈದ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಂತದಲ್ಲಿ ಭಾರತ ಅತ್ಯಂತ ಎಚ್ಚರಿಕೆಯಿಂದ ಮುಂದಿನ ಹೆಜ್ಜೆಗಳನ್ನು ಇರಿಸಬೇಕು ಎನ್ನುವುದು ಮತ್ತೋರ್ವ ಹಿರಿಯ ಪೊಲೀಸ್ ಅಧಿಕಾರಿಯ ಅಭಿಪ್ರಾಯ. ಈ ಮೊದಲು ಅಫ್ಘಾನಿಸ್ತಾನದಲ್ಲಿ ಭಾರತದ ಬಗ್ಗೆ ಸಹಾನುಭೂತಿ ಹೊಂದಿದ್ದ ಅಶ್ರಫ್ ಘನಿ ನೇತೃತ್ವದ ಸರ್ಕಾರ ಇತ್ತು. ಅದೀಗ ಪತನಗೊಂಡು, ಭಾರತದ ಬಗ್ಗೆ ಅವಹೇಳನಕಾರಿ ಅಭಿಪ್ರಾಯ ಹೊಂದಿರುವ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ದಕ್ಷಿಣ ಏಷ್ಯಾದಲ್ಲಿ ಭಾರತದ ಏಳ್ಗೆ ಸಹಿಸದ ಚೀನಾ ಮತ್ತು ಪಾಕಿಸ್ತಾನದೊಂದಿಗೆ ತಾಲಿಬಾನ್​ ಸೌಹಾರ್ದ ಸಂಬಂಧ ಸ್ಥಾಪಿಸಿಕೊಂಡಿರುವುದು ಗಮನಾರ್ಹ ಸಂಗತಿ. ಹೀಗಾಗಿ ತಾಲಿಬಾನ್ ಆಡಳಿತದ ವಿಚಾರದ ಬಗ್ಗೆ ಭಾರತ ಕೇವಲ ಕಟು ಧೋರಣೆ ಅನುಸರಿಸಿದರೆ ಸಾಲುವುದಿಲ್ಲ. ಯಾವುದಾದರೂ ಮಾರ್ಗದಿಂದ ಮಾತುಕತೆಯ ಹಾದಿ ಕಂಡುಕೊಳ್ಳಬೇಕಾಗುತ್ತದೆ.

ಕಾಶ್ಮೀರದಲ್ಲಿ ಭೂಗತ ಚಟುವಟಿಕೆಗಳನ್ನು ನಡೆಸುತ್ತಿದ್ದ ವಿದೇಶಿ ಇಸ್ಲಾಮಿ ಸಂಘಟನೆಗಳು ಕಳೆದ ಕೆಲ ವರ್ಷಗಳಿಂದೀಚೆಗೆ ಪ್ರಬಲವಾಗುತ್ತಿವೆ. ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದಿರುವ ತಾಲಿಬಾನಿಗಳು ತಮ್ಮ ಆಡಳಿತವನ್ನು ಖಿಲಾಫತ್ ಎಂದು ಘೋಷಿಸಿಕೊಂಡಿದೆ. ಈ ಘೋಷಣೆಗೆ ಇಸ್ಲಾಮ್ ಜಗತ್ತಿನಲ್ಲಿ ತನ್ನದೇ ಆದ ಅರ್ಥವಿದೆ. ಮುಂದಿನ ದಿನಗಳಲ್ಲಿ ಎಷ್ಟು ಸಾಧ್ಯವೋ ಅಷ್ಟೂ ವಿಸ್ತಾರಕ್ಕೆ ಖಿಲಾಫತ್ ವ್ಯಾಪ್ತಿ ವಿಸ್ತರಿಸುವ ಆಶಯ ಇರುವುದನ್ನು ತಾಲಿಬಾನ್ ನಾಯಕರು ಹಲವೆಡೆ ಹೇಳಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಜೈಷ್-ಎ-ಮೊಹಮದ್​ನಂಥ ಉಗ್ರಗಾಮಿ ಸಂಘಟನೆಗಳು ಈ ಅವಕಾಶವನ್ನು ತನ್ನ ಪರವಾಗಿ ಬಳಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ ಎಂದು ಕಾಶ್ಮೀರದ ಭಯೋತ್ಪಾದನಾ ನಿಗ್ರಹ ದಳದಲ್ಲಿ ಹತ್ತಾರು ವರ್ಷಗಳಿಂದ ಶ್ರಮಿಸಿರುವ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ 1996ರಿಂದ 2001ರ ಅವಧಿಯಲ್ಲಿ ತಾಲಿಬಾನ್ ಅಧಿಕಾರದಲ್ಲಿದ್ದಾಗ ಕಾಶ್ಮೀರ ಪ್ರವೇಶಿಸುತ್ತಿದ್ದ ವಿದೇಶಿ ಉಗ್ರರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿತ್ತು. 1999ರ ಕಾರ್ಗಿಲ್ ಯುದ್ಧ, 2001ರಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಕಟ್ಟಡದ ಮೇಲಿನ ದಾಳಿಯಲ್ಲಿಯೂ ವಿದೇಶಿಯರ ಕೈವಾಡವಿತ್ತು. ತಾಲಿಬಾನಿಗಳಿಗೆ ಅಧಿಕಾರವಿದ್ದಾಗ ಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚಾಗಿತ್ತು ಎಂದು ಅವರು ಪ್ರತಿಪಾದಿಸುತ್ತಾರೆ.

1980ರ ದಶಕದಲ್ಲಿ ಸೋವಿಯತ್ ಒಕ್ಕೂಟವು ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡ ನಂತರ ಕಾಶ್ಮೀರದಲ್ಲಿ ಭಾರತ ವಿರೋಧಿ ಚಟುವಟಿಕೆ ಹೆಚ್ಚಾಗಿತ್ತು. ‘ದೇವರದಯೆಯಿಂದ ಸೋವಿಯತ್ ಒಕ್ಕೂಟವನ್ನು ಸೋಲಿಸಿದ್ದೇವೆ’ ಎಂಬ ತಾಲಿಬಾನ್ ನಾಯಕರ ಹೇಳಿಕೆಗಳು ಭಾರತದಲ್ಲಿದ್ದ ಇಸ್ಲಾಮಿ ಭಯೋತ್ಪಾದಕರ ಹೋರಾಟದ ಕೆಚ್ಚು ಹೆಚ್ಚಿಸಿತ್ತು. ಇದೀಗ ಅಫ್ಘಾನಿಸ್ತಾನದಿಂದ ಅಮೆರಿಕ ಹಿಂದೆ ಸರಿದಿರುವ ಕಾರಣ ಮತ್ತೆ ಇಂಥದ್ದೇ ಉತ್ಸಾಹ ಕಾಶ್ಮೀರದಲ್ಲಿರುವ ಇಸ್ಲಾಮಿ ಭಯೋತ್ಪಾದಕರಿಗೆ ಬರುವ ಸಾಧ್ಯತೆಯಿದೆ ಎಂಬ ಮಾತು ಕಾಶ್ಮೀರದ ಪೊಲೀಸ್ ಅಧಿಕಾರಿಗಳ ವಲಯದಲ್ಲಿ ಕೇಳಿಬರುತ್ತಿದೆ.

‘ಅಫ್ಘಾನಿಸ್ತಾನದಲ್ಲಿ ಸೇನಾ ಚಟುವಟಿಕೆ ಒಂದು ಹಂತಕ್ಕೆ ಬಂದಿರುವ ಕಾರಣ ಪಾಕಿಸ್ತಾನವು ತನ್ನ ಗಮನವನ್ನು ಕಾಶ್ಮೀರದತ್ತ ಬದಲಿಸುವ ಸಾಧ್ಯತೆಯಿದೆ. ಕಾಶ್ಮೀರದಲ್ಲಿ ಪ್ರತ್ಯೇಕತಾವಾದವನ್ನು ಪ್ರತಿಪಾದಿಸುತ್ತಿರುವ ಹಲವಾರು ಜನರು ತಾಲಿಬಾನ್ ಹೋರಾಟಗಾರರು ಕಾಶ್ಮೀರಕ್ಕೆ ಬರಲಿ ಎಂದು ಒಳಗೊಳಗೇ ಹಾರೈಸುತ್ತಿದ್ದಾರೆ. ಅಫ್ಘಾನಿಸ್ತಾನದ ಬೆಳವಣಿಗೆಯು ಕಾಶ್ಮೀರದ ಭದ್ರತೆಗೆ ಆತಂಕ ತಂದೊಡ್ಡಿರುವುದು ಸತ್ಯ’ ಎಂದು ವಿಶ್ಲೇಷಿಸುತ್ತಾರೆ ಕಾಶ್ಮೀರ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ನೂರ್ ಅಹ್ಮದ್ ಬಾಬಾ. ಅವರ ಹೇಳಿಕೆಯನ್ನು ಡೆಕ್ಕನ್ ಹೆರಾಲ್ಡ್​ ಸುದ್ದಿತಾಣದ ಝುಲ್ಪೀಕರ್ ಮಜೀದ್ ವರದಿ ಮಾಡಿದ್ದಾರೆ.

‘ಅಫ್ಘಾನಿಸ್ತಾನದ ವಿದ್ಯಮಾನಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಂಭಾವ್ಯ ಸವಾಲುಗಳನ್ನು ನಿರ್ವಹಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಗಡಿ ಭದ್ರತಾ ಪಡೆಯ (ಬಿಎಸ್​ಎಫ್) ಪ್ರಧಾನ ನಿರ್ದೇಶಕ ಎಸ್​.ಎಸ್​.ದೆಸ್ವಾಲ್ ಹೇಳಿದ್ದಾರೆ. ‘ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ ಎನ್ನುವುದು ಆ ದೇಶದ ಆಂತರಿಕ ವಿಚಾರ. ಅಲ್ಲಿನ ಬೆಳವಣಿಗೆಗಳನ್ನು ನಾವು ಅತ್ಯಂತ ಹತ್ತಿರದಿಂದ ಗಮನಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಎಂಥದ್ದೇ ಪರಿಸ್ಥಿತಿ ಉದ್ಭವಿಸಿದರೂ ಅದನ್ನು ನಿರ್ವಹಿಸುವ ಸಾಮರ್ಥ್ಯ ಭಾರತದ ಭದ್ರತಾ ಪಡೆಗಳಿಗೆ ಇದೆ’ ಎಂದು ಅವರು ಜಮ್ಮು ವಲಯದ ಅಂತರರಾಷ್ಟ್ರೀಯ ಗಡಿ ಠಾಣೆ ಅಕ್ಟ್ರಾಯ್​ ಎಂಬಲ್ಲಿ ಹೇಳಿದ್ದರು.

(Taliban got Power in Afghanistan Security Threat to India especially Kashmir)

ಇದನ್ನೂ ಓದಿ: ತಾಲಿಬಾನ್ ವಶಕ್ಕೆ ಅಫ್ಘಾನಿಸ್ತಾನ, ಭಾರತದ ಭದ್ರತೆಗೆ ಹಲವು ಆತಂಕ

ಇದನ್ನೂ ಓದಿ: TV9 Kannada Digital Live: ಅಮೆರಿಕವೆಂಬ ವಿದೇಶಿ ಶಕ್ತಿಯನ್ನು ಓಡಿಸಿದ ತಾಲಿಬಾನಿಗಳದ್ದು ನಿಜವಾದ ದೇಶಭಕ್ತಿ; ಸುಧೀಂದ್ರ ಕುಲಕರ್ಣಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada